ಅಂದಾಜು ಎರಡು ವರ್ಷಗಳಿಂದ ಶಾಲೆಯಿಂದ ದೂರ ಉಳಿದಿದ್ದ ಚಿಣ್ಣರಿಗೆ ಇದೀಗ ಶಾಲೆಗೆ ಹೋಗುವ ಅವಕಾಶ ಸಿಕ್ಕಿದೆ. ಅಕ್ಟೋಬರ್ 25ರಿಂದ ಪ್ರಾಥಮಿಕ ಶಾಲೆ ಆರಂಭಗೊಳ್ಳಲಿದೆ ಅಂತ ಶಿಕ್ಷಣ ಸಚಿವ ಬಿಸಿ ನಾಗೇಶ್ ಹೇಳಿದ್ದಾರೆ. ಆದರೆ ಸಿಎಂ ಒಪ್ಪಿಗೆಗಾಗಿ ಕಾಯುತ್ತಿದ್ದೇವೆ ಎಂದು ಅಧಿಕೃತವಾಗಿ ಆದೇಶವನ್ನು ಕಾಯ್ದಿರಿಸಿದ್ದಾರೆ.
ಕೊರೊನಾ ಮಕ್ಕಳ ಶಿಕ್ಷಣವನ್ನು ಕಸಿದುಕೊಂಡಿತ್ತು. ಆನ್ ಲೈನ್ ಶಿಕ್ಷಣ ಒದಗಿಸಿದರೂ ಅದೆಷ್ಟೋ ಮಕ್ಕಳಿಗೆ ಶಿಕ್ಷಣ ತಲುಪುತ್ತಿರಲಿಲ್ಲ. ಕೊರೋನಾ ಮೂರನೇ ಅಲೆ ಆತಂಕದಿಂದ ಪ್ರೈಮರಿ ಸ್ಕೂಲ್ ಕ್ಲೋಸ್ ಆಗಿತ್ತು. ಆದರೆ ಕೊರೊನಾ ಇಳಿಕೆಯಾದ ಬೆನ್ನಲ್ಲೇ ಪ್ರಾಥಮಿಕ ಶಾಲೆಗಳ ಓಪನ್ ಗೆ ಶಿಕ್ಷಣ ಇಲಾಖೆ ಎಲ್ಲಾ ರೀತಿಯ ಸಿದ್ಧತೆ ನಡೆಸಿದ್ದು, ಅಕ್ಟೋಬರ್ 21ರಿಂದ ಚಿಣ್ಣರ ಚಿಲಿಪಿಲಿ ಶುರುವಾಗಲಿದೆ. ಕೊರೊನಾ ಮೂರನೇ ಅಲೆ ಆತಂಕದ ನಡುವೆಯೂ ಈಗಾಗಲೇ ಸೆಪ್ಟೆಂಬರ್ 23 ರಿಂದ 9,10 ಮತ್ತು ಪಿಯುಸಿ ತರಗತಿ ಹಾಗೂ ಅಕ್ಟೋಬರ್ 6 ರಿಂದ 6, 7 ಮತ್ತು 8ನೇ ತರಗತಿಳನ್ನ ಸರ್ಕಾರ ಓಪನ್ ಮಾಡಿದೆ. ಇದೀಗ 1 ರಿಂದ 5ನೇ ತರಗತಿವರೆಗೆ ಶಾಲೆ ತೆರೆಯುವಂತೆ ಸಾಕಷ್ಟು ಒತ್ತಡ ಬಂದ ಕಾರಣದಿಂದ ಪ್ರೈಮರಿ ಸ್ಕೂಲ್ ತೆರೆಯಲು ಸರ್ಕಾರ ನಿರ್ಧಾರ ಮಾಡಿದೆ.

ಈ ಬಗ್ಗೆ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಶಿಕ್ಷಣ ಸಚಿವ ಬಿಸಿ ನಾಗೇಶ್, ತಾಂತ್ರಿಕ ಸಲಹಾ ಸಮಿತಿ ತಮ್ಮ ನಿರ್ಧಾರವನ್ನು ಮತ್ತು ಅಭಿಪ್ರಾಯವನ್ನು ಶಿಕ್ಷಣ ಇಲಾಖೆಗೆ ನೀಡಿದೆ. ಅದನ್ನು ಆಧರಿಸಿಕೊಂಡೇ ಶಾಲೆ ಆರಂಭಿಸುವ ನಿರ್ಧಾರಕ್ಕೆ ಬಂದಿದ್ದೇವೆ. ಆದರೆ ಈ ಬಗ್ಗೆ ಮುಖ್ಯಮಂತ್ರಿ ಬೊಮ್ಮಾಯಿ ಜೊತೆಗೂ ಚರ್ಚೆ ಮಾಡಿ ಅಧಿಕೃತವಾಗಿ ಘೋಷಣೆ ಮಾಡಲಿದ್ದೇವೆ. ಆದರೆ ಬಹುತೇಕ 25ರಂದೇ 1 ರಿಂದ 5ರ ವರೆಗಿನ ತರಗತಿಗಳು ಆರಂಭಗೊಳ್ಳಲಿವೆ ಎಂದರು.
25ರಿಂದ ಶಾಲೆ ಆರಂಭವಾದರೂ ಪೂರ್ಣಾವಧಿಯಾಗಿ ತರಗತಿ ನಡೆಯುವುದಿಲ್ಲ. ಕಳೆದ ಸುಮಾರು 2 ವರ್ಷದಿಂದ ಮಕ್ಕಳು ಶಾಲೆಯಿಂದ ದೂರ ಇದ್ದಾರೆ. ಹೀಗಾಗಿ ಏಕಾಏಕಿಯಾಗಿ ಶಾಲೆಗೆ ಬಂದು ದಿನವಿಡೀ ಕೂರುವುದು ಮಕ್ಕಳಿಗೆ ಕಷ್ಟವಾಗಬಹುದು. ಹೀಗಾಗಿ ಆರಂಭದಲ್ಲಿ ಮಕ್ಕಳಿಗೆ ಅರ್ಧ ದಿನ ಅಂದರೆ ಮಧ್ಯಾಹ್ನದ ವರೆಗೆ ಮಾತ್ರ ತರಗತಿ ಇರಲಿದೆ. ಆ ಬಳಿಕ ಮಕ್ಕಳು ಕ್ರಮೇಣವಾಗಿ ಶಾಲೆಯ ವಾತಾವರಣಕ್ಕೆ ಹೊಂದಿಕೊಂಡ ಬಳಿಕ ಪೂರ್ಣಾವಧಿಯಾಗಿ ತರಗತಿಗಳು ನಡೆಯಲಿದೆ. ಇದರ ಜೊತೆಗೆ ಇದೇ 25ರಿಂದ ಬಿಸಿಯೂಟದ ಯೋಜನೆಯನ್ನೂ ಶಿಕ್ಷಣ ಇಲಾಖೆ ಜಾರಿ ಮಾಡುತ್ತಿದೆ. ಅಲ್ಲದೆ ಪ್ರಾಥಮಿಕ ಶಾಲೆ ಆರಂಭಕ್ಕೆಂದೇ ವಿಶೇಷ ಮಾರ್ಗಸೂಚಿಯನ್ನೂ ಶಿಕ್ಷಣ ಬಿಡುಗಡೆ ಮಾಡುವ ಅಗತ್ಯವಿದೆ.

ಶಿಕ್ಷಣ ಇಲಾಖಾಗಿದೆ ಪೋಷಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಸವಾಲು!
ಶಾಲೆ ಆರಂಭಿಸಿ ಮಕ್ಕಳನ್ನು ಶಾಲೆ ಕರೆ ತಂದರೆ ಮಾತ್ರ ಸಾಲದು. ಮಕ್ಕಳ ಪೋಷಕರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಸವಾಲು ಸದ್ಯ ಶಿಕ್ಷಣ ಇಲಾಖೆಯ ಮುಂದಿದೆ. ಈ ಹಿಂದೆ ಹೈ ಸ್ಕೂಲ್ ಅಥವಾ ಅದಕ್ಕೂ ಮೇಲ್ಪಟ್ಟ ತರಗತಿಯನ್ನು ಆರಂಭಿಸದಾಗ ಮಕ್ಕಳು ಶಾಲೆ ಬರಲು ಸಿದ್ಧರಿದ್ದರೂ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕಿದ್ದರು. ಹೀಗಾಗಿ ಈ ಬಾರಿಯೂ ಅದೇ ಮಾದರಿಯ ಗೊಂದಲಗಳು ಆಗದಂತೆ ಸ್ಪಷ್ಟವಾದ ಹಾಗೂ ಪೋಷಕರಿಗೆ ವಿಶ್ವಾಸಾರ್ಹ ಗೈಡ್ ಲೈನ್ಸ್ ರೂಪಿಸುವ ಅಗತ್ಯವಿದೆ. ಒಟ್ಟಾರೆ 25 ರಿಂದ 1 ರಿಂದ 5ನೇ ತರಗತಿ ವರೆಗಿನ ಪ್ರಾಥಮಿಕ ಶಾಲೆ ಆರಂಭಿಸಲು ಸರ್ವ ಸನ್ನದ್ಧವಾಗಿದೆ. ಇನ್ನು ಈ ಬಗ್ಗೆ ಅಧಿಕೃತ ಘೋಷಣೆ ಮಾತ್ರ ಬಾಕಿ ಇದೆ.







