ಬಳ್ಳಾರಿ : 30 ಮಕ್ಕಳು ಪ್ರಯಾಣಿಸುತ್ತಿದ್ದ ಶಾಲಾ ವಾಹನದಲ್ಲಿ ಅಗ್ನಿ ಆಕಸ್ಮಿಕ ಸಂಭವಿಸಿದ ಘಟನೆಯು ಬಳ್ಳಾರಿಯ ಸಿರಗುಪ್ಪ ಹಾಗೂ ತೆಕ್ಕಲಕೋಟೆ ನಡುವೆ ನಡೆದಿದೆ. ಕೂದಲೆಳೆ ಅಂತರದಲ್ಲಿ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಬೆಂಕಿಯ ತೀವ್ರತೆಗೆ ಶಾಲಾ ವಾಹನ ಸಂಪೂರ್ಣ ಸುಟ್ಟು ಕರಕಲಾಗಿದೆ.

ಸಿರಗುಪ್ಪ ಪಟ್ಟಣದಲ್ಲಿರುವ ವಿಶ್ವಜ್ಯೋತಿ ಶಿಕ್ಷಣ ಸಂಸ್ಥೆಗೆ ಸೇರಿದ ಬಸ್ ಇದಾಗಿದೆ. ವಿದ್ಯಾರ್ಥಿಗಳಿಗೆ ಇಂದು ಪರೀಕ್ಷೆ ಇದ್ದರಿಂದ ಪರೀಕ್ಷೆ ಮುಕ್ತಾಯದ ಬಳಿಕ ವಿದ್ಯಾರ್ಥಿಗಳು ಬಸ್ನಲ್ಲಿ ಪ್ರಯಾಣಿಸುತ್ತಿದ್ದರು.ಬಸ್ಗೆ ಬೆಂಕಿ ತಗುಲುತ್ತಿದೆ ಎಂಬುದನ್ನು ಅರಿತ ಚಾಲಕ ಮಕ್ಕಳನ್ನು ಕೂಡಲೇ ಬಸ್ನಿಂದ ಕೆಳಗಳಿಸಿ ಸಮಯಪ್ರಜ್ಞೆ ತೋರಿದ್ದಾರೆ.
ಎಲ್ಲಾ ಮಕ್ಕಳನ್ನು ಶಾಲೆಯ ಇನ್ನೊಂದು ವಾಹನದ ಮೂಲಕ ಮನೆಗೆ ಸುರಕ್ಷಿತವಾಗಿ ಕಳುಹಿಸಲಾಗಿದೆ. ಸ್ಥಳಕ್ಕೆ ಸ್ಥಳೀಯ ಠಾಣೆ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಅಗ್ನಿಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.











