ಕರ್ನಾಟಕದ ಶಾಲಾ ಪಠ್ಯದಲ್ಲಿ ಭಗವದ್ಗೀತೆಯನ್ನು ಅಳವಡಿಸುವ ನಿರ್ಧಾರವು ಕರೋನಾ ವೈರಸ್ಗಿಂತಲೂ ಮಾರಕ ಎಂದು ಶಾಸಕ ತನ್ವೀರ್ ಸೇಠ್ ಕಿಡಿ ಕಾರಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂತಹ ನಿರ್ಧಾರಗಳಿಂದ ಮಕ್ಕಳು ಶೈಕ್ಷಣಿಕವಾಗಿ ಕುಂಠಿತರಾಗುತ್ತಾರೆ. ಚುನಾವಣೆ ವೇಳೆ ರಾಜಕೀಯ ಮಾಡುವುದು ಸರಿ. ಆದರೆ, ಅಧಿಕಾರಕ್ಕೆ ಬಂದ ಮೇಲೆ ಜಾತ್ಯಾತೀತವಾಗಿ ನಡೆದುಕೊಳ್ಳುಬೇಕು ಎಂದು ಹೇಳಿದ್ದಾರೆ.
ಸರ್ಕಾರಗಳು ಶಿಕ್ಷಣವನ್ನು ಬಿಟ್ಟು ಅನ್ಯ ವಿಚಾರಗಳ ಬಗ್ಗೆ ಗಮನಹರಿಸಬಾರದು. ಈಗಾಗಲೇ ಕರೋನಾದಿಂದ ಎರಡು ವರ್ಷ ಮಕ್ಕಳಿಗೆ ಶಿಕ್ಷಣ ಸಿಕ್ಕಿಲ್ಲ. ಶಾಲೆಯಲ್ಲಿ ಸಮಾನತೆ ಕಾಪಾಡಿಕೊಳ್ಳಬೇಕು. ನ್ಯಾಯಾಲಯದ ತೀರ್ಪು ಸಹ ಸ್ಪಷ್ಟವಾಗಿ ಇದನ್ನೇ ಹೇಳಿದೆ ಎಂದು ಹೇಳಿದ್ದಾರೆ.
“ರಾಜ್ಯದಲ್ಲಿ ಹಿಜಾಬ್ ವಿವಾದ ವಿಚಾರವಾಗಿ ಪರೀಕ್ಷೆಯಿಂದ ಹಲವು ವಿದ್ಯಾರ್ಥಿಗಳು ವಂಚಿತರಾಗಿದ್ದಾರೆ. ವೈಯಕ್ತಿಕ ಕಾರಣಗಳಿಗೆ ಪರೀಕ್ಷೆ ತಪ್ಪಿಸಿಕೊಂಡರೆ ಪರೀಕ್ಷೆ ಕೊಡಲು ಸಾಧ್ಯವಿಲ್ಲ. ಆದರೆ ಈ ವಿಚಾರವೇ ಬೇರೆ. ಹೀಗಾಗಿ ಸರ್ಕಾರ ಇದರ ಬಗ್ಗೆ ನಿರ್ಧಾರ ಕೈಗೊಳ್ಳಬೇಕು” ಎಂದು ಹೇಳಿದ್ದಾರೆ.