2019ರಲ್ಲಿ ಕೇಂದ್ರ ಸರ್ಕಾರವು ಪರಿಶಿಷ್ಟ ವರ್ಗ ಹಾಗೂ ಪರಿಶಿಷ್ಟ ಪಂಗಡದ (ದೌರ್ಜನ್ಯ ತಡೆ) ತಿದ್ದುಪಡಿ ಕಾಯ್ದೆಯು ಸಾಂವಿಧಾನಿಕ ಮಾನ್ಯತೆಯನ್ನು ಹೊಂದಿದೆ ಎಂದು ಸುಪ್ರಿಂ ಕೋರ್ಟ್ ಇಂದು ಮಹತ್ತರವಾದ ಆದೇಶವನ್ನು ನೀಡಿದೆ. SC/STಗಳ ಮೇಲೆ ನಡೆಯುವ ದೌರ್ಜನ್ಯವನ್ನು ತೆಡೆಗಟ್ಟುವ ಸಲುವಾಗಿ ಜಾರಿಯಲ್ಲಿರುವ ಕಾಯ್ದೆಗೆ 2018ರಲ್ಲಿ ಸುಪ್ರಿಂ ಕೋರ್ಟ್ ಕೆಲವು ನಿರ್ದೇಶನಗಳನ್ನು ನೀಡಿತ್ತು. ಈ ನಿರ್ದೇಶನಗಳ ವಿರುದ್ದ ಮಂಡಿಸಲಾದ ತಿದ್ದುಪಡಿಯನ್ನು ಈಗ ಸುಪ್ರಿಂ ಕೋರ್ಟ್ ಎತ್ತಿ ಹಿಡಿದಿದೆ.
2018ರಲ್ಲಿ ಡಾ. ಸುಭಾಷ್ ಕಾಶಿನಾಥ್ ಮಹಾಜನ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ಕೇಸ್‌ನ ತೀರ್ಪಿನಲ್ಲಿ ಸರ್ವೋಚ್ಚ ನ್ಯಾಯಾಲಯವು SC/ST ದೌರ್ಜನ್ಯ ತಡೆಗಟ್ಟುವ ಕಾಯ್ದೆಯಡಿಲ್ಲಿ ಕೇಸು ದಾಖಲಿಸುವ ಮೊದಲು ಕೆಲವು ನಿರ್ದೇಶನವನ್ನು ಪಾಲಿಸುವಂತೆ ಸೂಚಿಸಿತ್ತು. ಯಾವುದೇ ಪ್ರಕರಣದ FIR ದಾಖಲಿಸುವ ಮೊದಲು ಡಿವೈಎಸ್‌ಪಿ ಅಥವಾ ಅದಕ್ಕೆ ಸಮಾನಾಂತರವಾಗಿ ಹುದ್ದೆಯನ್ನು ಹೊಂದಿರುವ ಅಧಿಕಾರಿಗಳು ಆ ಪ್ರಕರಣದ ಪಾಥಮಿಕ ತನಿಖೆಯನ್ನು ಏಳು ದಿನಗಳ ಒಳಗೆ ಪೂರ್ಣಗೊಳಿಸಬೇಕು ಹಾಗೂ ಆ ಪ್ರಕರಣದ ತನಿಖಾಧಿಕಾರಿಯಾದವರು, ಪ್ರಕರಣಕ್ಕೆ ಸಂಬಂಧಪಟ್ಟವರನ್ನು ಬಂಧಿಸುವ ಮೊದಲು ಪೊಲೀಸ್ ವರಿಷ್ಟಾಧಿಕಾರಿಯವರ ಬಳಿ ಅನುಮತಿಯನ್ನು ಪಡೆಯಬೇಕು ಎಂದು ಸುಪ್ರಿಂ ಕೋರ್ಟ್ ಸೂಚಿಸಿತ್ತು.
ಈ ತೀರ್ಪಿನಿಂದ, FIR ದಾಖಲಾಗುವುದು ವಿಳಂಬವಾಗುತ್ತದೆ, ಹಾಗೂ ಡಿವೈಎಸ್‌ಪಿ ಅಥವಾ ಅವರಿಗೆ ಸಮಾನಾಂತರವಾದ ಹುದ್ದೆಯನ್ನು ಹೊಂದಿರುವ ಅಧಿಕಾರಿಗಳ ಸಂಖ್ಯೆ ಕಡಿಮೆ ಇರುವುದರಿಂದ ಒಂದು ವಾರದ ಒಳಗೆ ಪ್ರಾಥಮಿಕ ತನಿಖೆಯನ್ನು ಮಾಡುವುದು ಕೂಡಾ ಕಷ್ಟ ಸಾಧ್ಯ ಎಂಬ ಆಧಾರದ ಮೇಲೆ ಕೇಂದ್ರ ಸರ್ಕಾರವು ಕಾಯ್ದೆಗೆ ತಿದ್ದುಪಡಿಯನ್ನು ತಂದಿತ್ತು. ಈ ತಿದ್ದುಪಡಿಯು ಸಂಸತ್ತಿನಲ್ಲಿ ಅಂಗೀಕಾರವಾಗಿತ್ತು ಕೂಡ.
ಈ ತಿದ್ದುಪಡಿಯ ಸಾಂವಿಧಾನಿಕ ಮಾನ್ಯತೆಯನ್ನು ಪ್ರಶ್ನಿಸಿ ವಕೀಲ ಪ್ರಥ್ವಿರಾಜ್ ಚೌಹಾಣ್ ಅವರು ಸುಪ್ರಿಂ ಮೆಟ್ಟಿಲೇರಿದ್ದರು. ಜಸ್ಟೀಸ್ ಅರುಣ್ ಮಿಶ್ರಾ, ಜಸ್ಟೀಸ್ ವಿನೀತ್ ಸರಣ್, ಜಸ್ಟೀಸ್ ರವೀಂದ್ರ ಭಟ್ ಅವರಿದ್ದ ಸುಪ್ರಿಂ ಕೋರ್ಟ್ ಪೀಠವು ಈ ಮಹತ್ತರವಾದ ತೀರ್ಪನ್ನು ಇಂದು ಪ್ರಕಟಿಸಿದೆ.
ಎಸ್‌ಸಿ/ಎಸ್‌ಟಿ ಕಾಯ್ದೆಯಲ್ಲಾದ ತಿದ್ದುಪಡಿಯೇನು?
SC/STಯವರ ಮೇಲಾಗುವ ದೌರ್ಜನ್ಯವನ್ನು ತಡೆಯುಲು ಇರುವಂತಹ ಕಾಯ್ದೆಗೆ ಸಂಸತ್ತಿನಲ್ಲಿ ಸೆಕ್ಷನ್ 18A ಅನ್ನು ಸೇರಿಸಲಾಗಿತ್ತು. ಇದರ ಪ್ರಕಾರ FIR ದಾಖಲಿಸಲು ಯಾವುದೇ ಪ್ರಾಥಮಿಕ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು. ಮತ್ತು ಪ್ರಕರಣಕ್ಕೆ ಸಂಬಂಧಿಸಿದ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ಬಂಧಿಸಲು ತನಿಖಾಧಿಕಾರಿಯು ಮೇಲಧಿಕಾರಿಗಳ ಅನುಮತಿಯನ್ನು ಪಡೆಯುವ ಅಗತ್ಯವಿಲ್ಲವೆಂದು ತಿದ್ದುಪಡಿಯನ್ನು ಸೇರಿಸಲಾಗಿತ್ತು.
ಪ್ರಮುಖವಾಗಿ, CrPC (Code of Criminal Procedure, 1973) ನ ಕಲಂ 438 (ನಿರೀಕ್ಷಣಾ ಜಾಮೀನು/Anticipatory bail) ಎಸ್/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ದಾಖಲಾಗುವ ಪ್ರಕರಣಗಳಿಗೆ ಅನ್ವಯವಾಗುವುದಿಲ್ಲ ಎಂದು ತಿದ್ದುಪಡಿಯು ಹೇಳುತ್ತದೆ.
ಈ ತಿದ್ದುಪಡಿಯಿಂದ SC/STಯೇತರರ ವಿರುದ್ದ ಸುಳ್ಳು ಕೇಸು ದಾಖಲಾಗುವ ಸನ್ನಿವೇಷಗಳು ಎದುರಾಗುವ ಅಪಾಯವಿದೆ ಎಂಬುದು ಅರ್ಜಿದಾರರ ಪರ ವಾದವಾಗಿತ್ತು. ಇನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB)ಯ 2015ರ ವರದಿಯ ಪ್ರಕಾರ ದೇಶದಲ್ಲಿ ಪರಿಶಿಷ್ಟ ವರ್ಗದವರ ವಿರುದ್ದ ದೌರ್ಜನ್ಯ ಎಸಗಲಾಗಿದೆ ಎಂದು 1,40,340 ಪ್ರಕರಣಗಳು ದಾಖಲಾಗಿದ್ದವು. ಇವುಗಳಲ್ಲಿ 17,012 ಪ್ರಕರಣಗಳ ವಿಚಾರಣೆ 2015ರಲ್ಲೇ ಮುಗಿದಿದ್ದು 4,702 ಪ್ರಕರಣಗಳಲ್ಲಿ ಮಾತ್ರ ಅಪರಾಧ ಸಾಬೀತಾಗಿರುವುದಾಗಿ NCRB ವರದಿ ನೀಡಿದೆ. ಉಳಿದ ೧೨,೩೧೦ ಪ್ರಕರಣಗಳನ್ನು ವಜಾಗೊಳಿಸಲಾಗಿದೆ ಅಥವಾ ಅರೋಪಿಯನ್ನು ನಿರಪರಾಧಿಯೆಂದು ಘೋಷಿಸಿ ತೀರ್ಪು ನೀಡಲಾಗಿದೆ. ಇಲ್ಲಿ ಅಪರಾಧ ಸಾಬೀತಾಗಿರುವ ಪ್ರಮಾಣ ಶೇಕಡಾ 27.6ರಷ್ಟು ಮಾತ್ರ.
ಇನ್ನು ಪರಿಶಿಷ್ಟ ಪಂಗಡದವರ ವಿರುದ್ದ ದೌರ್ಜನ್ಯ ಎಸಗಿದ ಆರೋಪದಲ್ಲಿ 3,03,605 ಪ್ರಕರಣಗಳನ್ನು ದಾಖಲಿಸಲಾಗಿತ್ತು. ಇವುಗಳಲ್ಲಿ ಕೇವಲ 9,656 ವ್ಯಕ್ತಿಗಳ ಮೇಲಿನ ಅಪರಾಧ ಸಾಬೀತಾಗಿ ಶಿಕ್ಷೆಯನ್ನು ಪ್ರಕಟಿಸಲಾಗಿತ್ತು. 25,385 ಜನರನ್ನು ನಿರ್ದೋಷಿಗಳು ಎಂದು ನ್ಯಾಯಾಲಯ ಘೋಷಿಸಿತ್ತು. ಇಲ್ಲಿಯೂ ಕೇವಲ ಶೇಕಡಾ 25ರಷ್ಟು ಪ್ರಕರಣಗಳಲ್ಲಿ ಮಾತ್ರ ಶಿಕ್ಷೆ ಪ್ರಕಟವಾಗಿದೆ.
ಹೀಗಿರುವಾಗ, ಈ ಎಸ್‌ಟಿ/ಎಸ್‌ಸಿ ದೌರ್ಜನ್ಯ ತಡೆ ತಿದ್ದುಪಡಿ ಕಾಯ್ದೆಯ ಅಡಿಯಲ್ಲಿ ನಕಲಿ ಪ್ರಕರಣಗಳನ್ನು ಕೂಡಾ ದಾಖಲಿಸುವ ಸಾಧ್ಯತೆಗಳು ಕೂಡ ಇವೆ ಎಂಬ ಅಂಶವನ್ನು ಅಲ್ಲಗೆಳೆಯಲಾಗುವುದಿಲ್ಲ. ಇದರಿಂದ, ಅಮಾಯಕರು ಕೂಡಾ ತೊಂದರೆ ಅನುಭವಿಸಬೇಕಾಗಬಹುದು ಹಾಗೂ ಸುಖಾಸುಮ್ಮನೆ ಕೋರ್ಟಿನ ಸಮಯ ಕೂಡಾ ವ್ಯರ್ಥವಾಗುತ್ತದೆ. ಈಗಾಗಲೇ ಪ್ರತಿ ವರ್ಷ ಬಹಳಷ್ಟು ಕೇಸುಗಳು ವಿಲೇವಾರಿಯಾಗದೇ ಉಳಿದುಕೊಳ್ಳುತ್ತಿವೆ. ಹಾಗಾಗಿ, ಕನಿಷ್ಟ ಪಕ್ಷ ತನಿಖಾಧಿಕಾರಿಯಾದವರು ಪ್ರಕರಣ ದಾಖಲಿಸುವ ಮೊದಲು ಮೇಲ್ನೋಟಕ್ಕಾದರೂ ಅದರ ಕುರಿತಾಗಿ ವಿಚಾರಣೆ ಕೈಗೊಳ್ಳುವ ಅಗತ್ಯವಿದೆ. ಸರ್ಕಾರವೂ ಈ ತಿದ್ದುಪಡಿಯನ್ನು ಮರುಪರಿಶೀಲಿಸುವ ಅಗತ್ಯತೆ ಇದೆ.