ಪೆಗಾಸಸ್ ತಂತ್ರಾಂಶ ಗೂಢಚಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ಹಿನ್ನಡೆಯಾಗಿದ್ದು, ಪ್ರಕರಣದ ತನಿಖೆಗಾಗಿ ಸುಪ್ರೀಂ ಕೋರ್ಟ್ ಮೂವರು ತಜ್ಞರನ್ನೊಳಗೊಂಡ ಸಮಿತಿ ರಚಿಸಿದೆ. ಸುಪ್ರೀಂಕೋರ್ಟ್ ನಿವೃತ್ತ ನ್ಯಾ. ಆರ್ ವಿ ರವೀಂದ್ರನ್ ನೇತೃತ್ವದ ಸಮಿತಿ ತನಿಖೆ ನಡೆಸಲಿದೆ.
ಸಮಿತಿ ರಚಿಸುವ ಮನವಿಗೆ ಒಪ್ಪಿಗೆ ಕೊಟ್ಟಿದ್ದೇವೆ. ಸ್ವತಂತ್ರ ಸದಸ್ಯರನ್ನು ಆಯ್ಕೆ ಮಾಡುವುದು ದೊಡ್ಡ ಸವಾಲು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ.
ಪೆಗಾಸಸ್ ವಿಚಾರದಲ್ಲಿ ಕೇಂದ್ರ ಸರ್ಕಾರದಿಂದ ಯಾವುದೇ ನಿರ್ದಿಷ್ಟ ನಿರಾಕರಣೆ ಇಲ್ಲ. ಹೀಗಾಗಿ ಅರ್ಜಿದಾರರ ಪ್ರಾಥಮಿಕ ಹಂತದ ಸಲ್ಲಿಕೆಗಳನ್ನು ಒಪ್ಪಿಕೊಳ್ಳುವುದನ್ನು ಬಿಟ್ಟು ಬೇರೆ ದಾರಿಯಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಮಾಜಿ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ಮುಖ್ಯಸ್ಥರಾಗಿರುವ ತನಿಖಾ ಸಮಿತಿಯ ಇತರೆ ಸದಸ್ಯರಾಗಿ ಅಲೋಕ್ ಜೋಶಿ ಮತ್ತು ಸಂದೀಪ್ ಒಬೆರಾಯ್ ಅವರನ್ನು ನೇಮಕ ಮಾಡಲಾಗಿದೆ. ಈ ಸಮಿತಿಯ ಕಾರ್ಯವನ್ನು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆ ಮಾಡುತ್ತದೆ.
ರಾಜಕೀಯ ಚರ್ಚೆಗೆ ಹೋಗದೇ ಮೌಲ್ಯ ಎತ್ತಿ ಹಿಡಿಯಲು ಶ್ರಮಪಡಬೇಕು. ಪ್ರತಿಯೊಬ್ಬ ಭಾರತೀಯನಿಗೂ ಖಾಸಗಿತನದ ರಕ್ಷಣೆ ನೀಡಬೇಕು. ನಾವು ಮಾಹಿತಿಯ ಯುಗದಲ್ಲಿ ಬದುಕುತ್ತಿದ್ದೇವೆ. ಕೆಲ ಅರ್ಜಿಗಳು ಕೇಂದ್ರ ಸರ್ಕಾರದ ನಿಷ್ಕ್ರಿಯತೆ ಬಗ್ಗೆ ಪ್ರಸ್ತಾಪಿಸಿವೆ. ಈ ತೀರ್ಪಿನಲ್ಲಿ ನಾವು ಖಾಸಗಿತನದ ಹಕ್ಕಿನ ಬಗ್ಗೆ ಚರ್ಚಿಸಿದ್ದೇವೆ. ಇದು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಭಾರಿ ಪರಿಣಾಮ ಬೀರುತ್ತೆ. ಶಾಸನದ ಮಾನ್ಯತೆ ಇಲ್ಲದೇ ಖಾಸಗಿತನದ ಹಕ್ಕಿನಲ್ಲಿ ಮೂಗುತೂರಿಸುವಿಕೆಗೆ ಅವಕಾಶವಿಲ್ಲ. ಖಾಸಗಿತನದ ಹಕ್ಕು ಅನ್ನು ಅತಿಕ್ರಮಿಸುವ ಮೂಲಕ ಮಾಧ್ಯಮ ಸ್ವಾತಂತ್ರ್ಯವನ್ನು ಕಡೆಗಣಿಸಲಾಗಲ್ಲ. ಖಾಸಗಿತನದ ಹಕ್ಕಿನಲ್ಲಿ ಮೂಗು ತೂರಿಸಲು ಮಸೂದೆ ಪಾಸ್ ಆಗಬೇಕು. ಸಾಂವಿಧಾನಿಕ ಅಗತ್ಯದ ಪರೀಕ್ಷೆ ಪಾಸ್ ಆಗಬೇಕು ಎಂದು ಸುಪ್ರೀಂಕೋರ್ಟ್ ಸಿಜೆ ನೇತೃತ್ವದ ಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟವಾಗಿ ಅಭಿಪ್ರಾಯಪಟ್ಟಿದೆ.
ಪೆಗಾಸಸ್ ತಂತ್ರಾಂಶ ಬಳಸಿ ಗೂಢಚಾರಿಕೆ ಪ್ರಕರಣದಲ್ಲಿ ಕಾನೂನು ಎತ್ತಿ ಹಿಡಿಯುವುದೇ ನಮ್ಮ ಉದ್ದೇಶ ಎಂದು ಸಾರಿರುವ ಸುಪ್ರೀಂ ಕೋರ್ಟ್ ಈ ಪ್ರಕರಣ ಆಧುನಿಕ ತಂತ್ರಜ್ಞಾನ ಬಳಕೆಗೆ ಸಂಬಂಧಿಸಿದೆ. ಆಧುನಿಕ ತಂತ್ರಜ್ಞಾನ ಬಳಕೆ ಬಗ್ಗೆ ‘ಸುಪ್ರೀಂ’ ಪರಿಶೀಲಿಸಿದೆ. ಸಾಂವಿಧಾನಿಕ ಮೌಲ್ಯ ಎತ್ತಿ ಹಿಡಿಯಲು ನಮ್ಮ ಶ್ರಮ ಎಂದು ಸಿಜೆಐ ರಮಣ ಹೇಳಿದ್ದಾರೆ.
ಏನಿದು ಪೆಗಾಸಸ್?
ಇಸ್ರೇಲ್ ಮೂಲದ ಸ್ಪೈ ವೇರ್ ಪೆಗಾಸಸ್ ಬಳಸಿ ಭಾರತದ 40ಕ್ಕೂ ಹೆಚ್ಚು ಪತ್ರಕರ್ತರ, ರಾಜಕಾರಣಿಗಳ ಮೊಬೈಲ್ ಫೋನ್ ಗಳನ್ನು ಹ್ಯಾಕ್ ಮಾಡಲಾಗಿದೆ, ಹಾಗೂ ಜಗತ್ತಿನಾದ್ಯಂತ ಇದೇ ರೀತಿ ಹಲವಾರು ಫೋನ್ಗಳನ್ನು ಹ್ಯಾಕ್ ಮಾಡಲಾಗಿದೆ ಎನ್ನುವುದು 16 ಅಂತಾರಾಷ್ಟ್ರೀಯ ಮಾಧ್ಯಮಗಳು ನಡೆಸಿದ ಕಾರ್ಯಾಚರಣೆಯಲ್ಲಿ ಬಹಿರಂಗವಾಗಿತ್ತು. ಈ ತಂಡದಲ್ಲಿ ಭಾರತದ ದಿ ವೈರ್ ಕೂಡಾ ಜೊತೆಯಾಗಿತ್ತು.
ಜಾಗತಿಕವಾಗಿ 40 ದೇಶಗಳಲ್ಲಿ 60 ಗುಪ್ತಚರ, ಮಿಲಿಟರಿ ಮತ್ತು ಕಾನೂನು ಸಂಸ್ಥೆಗಳು NSO ಸೇವೆ ಪಡೆಯುತ್ತಿದ್ದು, ಯಾವ ಯಾವ ದೇಶಗಳು ಮತ್ತು ಗುಪ್ತಚರ ಇಲಾಖೆಗಳು ಈ ಸಂಸ್ಥೆಯ ಗ್ರಾಹಕರಾಗಿದ್ದಾರೆ ಎನ್ನುವುದು ಬಹಿರಂಗವಾಗಿಲ್ಲ. ತನ್ನ ಗ್ರಾಹಕರ ಗೌಪ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಹೆಚ್ಚಿನ ವಿವರಗಳನ್ನು ಇಸ್ರೇಲ್ ಸಂಸ್ಥೆ ಬಿಟ್ಟುಕೊಟ್ಟಿಲ್ಲ. ಈ ಸಂಸ್ಥೆಯಿಂದ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವೂ ಗ್ರಾಹಕರಾಗಿರಬೇಕೆಂಬ ಅನುಮಾನಗಳು ವ್ಯಕ್ತವಾಗಿದ್ದು, ಸರ್ಕಾರದ ನೀತಿಗಳನ್ನು ಪ್ರಶ್ನಿಸುವ, ವಿರೋಧಿಸುವ ವ್ಯಕ್ತಿಗಳ ಫೋನ್ ಹ್ಯಾಕ್ ಆಗಿರುವುದು ಈ ಅನುಮಾನಗಳಿಗೆ ಇನ್ನಷ್ಟು ಪುಷ್ಟಿ ನೀಡಿದಂತಾಗಿತ್ತು.