ಪಾಕಿಸ್ತಾನದ ಸಿನಿಮಾ ನಟರು, ಗಾಯಕರು, ಸಂಗೀತಗಾರರು, ಗೀತರಚನೆಕಾರರು ಮತ್ತು ತಂತ್ರಜ್ಞರು ಸೇರಿದಂತೆ ಪಾಕಿಸ್ತಾನಿ ಕಲಾವಿದರೊಂದಿಗೆ ಭಾರತೀಯರು ಮತ್ತು ಸಂಸ್ಥೆಗಳು ಯಾವುದೇ ರೀತಿಯ ಒಡನಾಟದಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಎಸ್‌ವಿಎನ್ ಭಟ್ಟಿ ಮತ್ತು ಸಂಜೀವ್ ಖನ್ನಾ ಅವರನ್ನೊಳಗೊಂಡ ನ್ಯಾಯಮೂರ್ತಿಗಳ ಪೀಠವು, ಬಾಂಬೆ ಹೈಕೋರ್ಟ್‌ನ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ಹೇಳಿದೆ.
ಅರ್ಜಿದಾರ ಫೈಜ್ ಅನ್ವರ್ ಖುರೇಶಿ ಅವರು ಸಲ್ಲಿಸಿದ್ದ ಅರ್ಜಿಯನ್ನು ಬಾಂಬೆ ಹೈಕೋರ್ಟ್ ತಿರಸ್ಕರಿಸಿತ್ತು. ಸಾಂಸ್ಕೃತಿಕ ಸೌಹಾರ್ದ, ಒಗ್ಗಟ್ಟು ಮತ್ತು ಶಾಂತಿ ಸ್ಥಾಪಿಸುವ ಪ್ರಯತ್ನಕ್ಕೆ ಹಿನ್ನೆಡೆ ಉಂಟುಮಾಡುವಂಥ ಪ್ರಯತ್ನ ಇದಾಗಿರುವ ಕಾರಣ ಈ ಅರ್ಜಿಗೆ ಯಾವುದೇ ಮಹತ್ವ ಇಲ್ಲ ಎಂದು ಹೈಕೋರ್ಟ್ ಹೇಳಿತ್ತು.
‘ಆದೇಶ ಹೊರಡಿಸುವ ವೇಳೆ ಅರ್ಜಿದಾರರ ಕುರಿತು ಹೈಕೋರ್ಟ್ ಮಾಡಿದ್ದ ಟೀಕೆಗಳನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಜೊತೆಗೆ, ಕಲಾವಿದರ ಮೇಲೆ ನಿಷೇಧ ಹೇರುವುಂತೆ ನೀವು ಒತ್ತಾಯಿಸುವಂತಿಲ್ಲ. ಇದು ಸಂಕುಚಿತ ಮನೋಭಾವ’ ಎಂದೂ ನ್ಯಾಯಪೀಠ ಹೇಳಿದೆ.
ಪಾಕಿಸ್ತಾನದ ಸಿನಿಮಾ ನಟರು, ಗಾಯಕರು, ಸಂಗೀತಗಾರರು, ಗೀತರಚನೆಕಾರರು ಮತ್ತು ತಂತ್ರಜ್ಞರು ಸೇರಿದಂತೆ ಪಾಕಿಸ್ತಾನಿ ಕಲಾವಿದರೊಂದಿಗೆ ಭಾರತೀಯರು ಮತ್ತು ಸಂಸ್ಥೆಗಳು ಯಾವುದೇ ರೀತಿಯ ಒಡನಾಟದಲ್ಲಿ ತೊಡಗುವುದನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ಬಾಂಬೆ ಹೈಕೋರ್ಟ್ ಗೆ ಫೈಜ್ ಅನ್ವರ್ ಖುರೇಶಿ ಎಂಬುವವರು ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್, ಅರ್ಜಿದಾರರು ಕೋರಿರುವ ಮನವಿಯಲ್ಲಿ ಶಾಂತಿ, ಏಕತೆ ಮತ್ತು ಸಾಂಸ್ಕೃತಿಕ ಸೌಹಾರ್ದತೆಯನ್ನು ಉತ್ತೇಜಿಸುವಲ್ಲಿ ಹಿನ್ನಡೆಯಾಗಿದೆ. ಅರ್ಜಿಯನ್ನು ಪರಿಗಣಿಸುವ ಯಾವುದೇ ಅರ್ಹತೆ ಇದರಲ್ಲಿ ಇಲ್ಲ ಎಂದು ಬಾಂಬೆ ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿದೆ. “ದೇಶಪ್ರೇಮಿಯಾಗಲು ನೆರೆಹೊರೆಯವರೊಂದಿಗೆ ದ್ವೇಷ ಸಾಧಿಸುವ ಅಗತ್ಯವಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.

ಸಂಗೀತ, ಕಲೆ, ಕ್ರೀಡೆ, ನೃತ್ಯ, ಸಂಸ್ಕೃತಿ ಹೀಗೆ ಹಲವು ಕ್ಷೇತ್ರಗಳು ರಾಷ್ಟ್ರೀಯತೆ ಮತ್ತು ರಾಷ್ಟ್ರಗಳಿಗಿಂತ ಮಿಗಿಲಾದ ಚಟುವಟಿಕೆಗಳು. ಇದೆಲ್ಲವೂ ದೇಶ ದೇಶಗಳ ನಡುವೆ ಏಕತೆ, ಸೌಹಾರ್ದತೆ ಮತ್ತು ಶಾಂತಿಯನ್ನು ತರುತ್ತವೆ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಹೈಕೋರ್ಟ್ನ ಈ ಒಂದು ಆದೇಶವನ್ನು ಸುಪ್ರೀಂ ಕೋರ್ಟ್ ಕೂಡ ಎತ್ತಿ ಹಿಡಿದು ಸಲ್ಲಿಸಿದ್ದ ನಿಷೇಧ ಅರ್ಜಿಯನ್ನು ತಿರಸ್ಕರಿಸಿದೆ.