ಚಾಮರಾಜ ನಗರದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕನ್ನಡ ವಿರೋಧಿ ಧೋರಣೆಗೆ ಹಾಗೂ ಹಿಂದಿ ಹೇರಿಕೆಯ ವಿರುದ್ಧ ಕನ್ನಡ ಸಂಘಟನೆಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸ್ಟೇಟ್ಬ್ಯಾಂಕ್ ಆಫ್ ಇಂಡಿಯಾ ಈ ಹಿಂದೆ ಬ್ಯಾಂಕಿನ ಪಾಸ್ ಬುಕ್ ಮುಖಪುಟದಲ್ಲಿ ಮೊದಲ ಸಾಲಿನಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಕನ್ನಡದಲ್ಲಿ ಮುದ್ರಿಸಲಾಗಿತ್ತು. ಆದರೆ ಇತ್ತೀಚೆಗೆ ಕನ್ನಡದಲ್ಲಿದ್ದ ಈ ಬರಹವನ್ನು ತೆಗೆದುಹಾಕಿ, ಕೇವಲ ಹಿಂದಿ ಮತ್ತು ಇಂಗ್ಲಿಷ್ ಮಾತ್ರ ಉಳಿಸಿಕೊಂಡಿರುವುದು ಕನ್ನಡಿಗರಿಂದ ಕೆಂಗಣ್ಣಿಗೆ ಗುರಿಯಾಗಿದೆ.
ಮೊದಲೇ ಬ್ಯಾಂಕುಗಳಲ್ಲಿ ಅನ್ಯರಾಜ್ಯ ಮೆನೇಜರುಗಳ ಉಢಾಫೆ ವರ್ತನೆಯಿಂದ ರಾಷ್ಟ್ರೀಕೃತ ಬ್ಯಾಂಕುಗಳ ಕಡೆಗೆ ಅನಾಸಕ್ತಿ ತೋರುತ್ತಿರುವ ಸ್ಥಳೀಯರಿಗೆ ಬ್ಯಾಂಕುಗಳು ಹಿಂದಿ ಹೇರಿಕೆ ಮಾಡುತ್ತಿರುವುದು ಇನ್ನಷ್ಟು ರೊಚ್ಚಿಗೆಬ್ಬಿಸುತ್ತಿದೆ.

1968 ರಲ್ಲಿ ಕೇಂದ್ರ ಸರ್ಕಾರ ತಂದಿರುವ ತ್ರಿಭಾಷಾ ಸೂತ್ರದಂತೆ ಹಿಂದಿ ಮಾತನಾಡದ ರಾಜ್ಯಗಳಲ್ಲೂ ಹಿಂದಿ ಕಲಿಕೆ ಕಡ್ಡಾಯವಾಗಿದ್ದು, ಪ್ರಾದೇಶಿಕ ಭಾಷೆಯೊಂದಿಗೆ ಹಿಂದಿಯನ್ನೂ ಕಲಿಸಬೇಕೆಂದು ಆದೇಶಿಸಲಾಗಿತ್ತು. ಆದರೆ ಈಗ ಪ್ರಾದೇಶಿಕ ಭಾಷೆಯನ್ನು ಮೂಲೆಗುಂಪಾಗಿಸಿ ಹಿಂದಿ ಹೇರಿಕೆ ಮಾಡಲಾಗಿದೆ ಎಂದು ಕನ್ನಡ ಪರ ಸಂಘಟನೆಯ ಆಕ್ರೋಶಕ್ಕೆ ತುತ್ತಾಗಿದೆ.
ಬ್ಯಾಂಕ್ ಪಾಸ್‌ಬುಕ್ಕಿನಿಂದ ಕನ್ನಡ ಕೈ ಬಿಟ್ಟಿರುವ ಬ್ಯಾಂಕಿನ ನಡೆಯನ್ನು ಕನ್ನಡ ಸಾಹಿತ್ಯ ಪರಿಷತ್ತು ಖಂಡಿಸಿದೆ. ಬ್ಯಾಂಕ್ಗಳು ಕನ್ನಡದಲ್ಲೇ ವ್ಯವಹರಿಸಬೇಕು ಇಲ್ಲದಿದ್ದರೆ ಬ್ಯಾಂಕ್ ಎದುರು ಪ್ರತಿಭಟನೆ ಹಮ್ಮಿಕೊಳ್ಳಬೇಕಾದೀತು ಎಂದು ಮನು ಬಳಿಗಾರ್ ಎಚ್ಚರಿಸಿದ್ದಾರೆ.