
ಬೆಂಗಳೂರು: ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟು ಹಾಕಿರುವ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಗೃಹ ಸಚಿವ ಜಿ.ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಸದಾಶಿವ ನಗರ ನಿವಾಸದಲ್ಲಿ ಮಾತನಾಡಿದ ಪರಮೇಶ್ವರ್, ಸತೀಶ್ ಜಾರಕಿಹೊಳಿ ಸೈದ್ಧಾಂತಿಕ ದಾರಿಯಲ್ಲಿ ಹೋಗ್ತಾರೆ. ಹೀಗಾಗಿ ಯತೀಂದ್ರ ಸತೀಶ್ ಬಗ್ಗೆ ಸೈದ್ಧಾಂತಿಕವಾಗಿ ಹೇಳಿದ್ದಾರೆ ಅಷ್ಟೇ ಎಂದಿದ್ದಾರೆ. ಈ ಹಿಂದೆ ಅಹಿಂದ ಸಂಘಟನೆ ಪ್ರಾರಂಭಿಸಿದಾಗ ಸತೀಶ್ ಕೂಡ ಬಹಳ ಪ್ರಮುಖ ಪಾತ್ರ ವಹಿಸಿದ್ದರು.ಆ ಹಿನ್ನೆಲೆಯಲ್ಲಿ ಯತೀಂದ್ರ ಮಾತಾಡಿದ್ದಾರೆ. ಅದರಲ್ಲೇನು ತಪ್ಪಿಲ್ಲ ಎಂದು ಯತೀಂದ್ರ ಸಿದ್ದರಾಮಯ್ಯ ಮಾತನ್ನ ಸಮರ್ಥಿಸಿಕೊಂಡಿದ್ದಾರೆ.
ಇನ್ನು ಯತೀಂದ್ರ ಸಿದ್ದರಾಮಯ್ಯ ಮಾತಾಡಿದ್ದು ಲೀಡರ್ ಶಿಫ್ ಬಗ್ಗೆ ಅಲ್ಲ, ಪಕ್ಷದ ಬದ್ದತೆ ಮತ್ತು ಸಾಮಾಜಿಕ ಬದ್ದತೆಯಿಂದ ಎಂದು ಪರಮೇಶ್ವರ ಹೇಳಿಕೆ ನೀಡಿದ್ದಾರೆ. ಅಲ್ಲದೆ ಸ್ವಾಭಾವಿಕವಾಗಿ ಅಹಿಂದ ವರ್ಗ ಸಂಘಟನೆಯಲ್ಲಿ ಇದ್ದಿದ್ದರಿಂದ ಅವರಿಗೆ ಆ ಬದ್ದತೆ ಇದೆ ಎಂಬ ಅರ್ಥದಲ್ಲಿ ಯತೀಂದ್ರ ಮಾತಾಡಿದ್ದಾರೆ ಎಂದು ಕೂಡ ಹೇಳಿದ್ದಾರೆ.
ನಿನ್ನೆ ಬೆಳಗಾವಿಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ ಪುತ್ರ ಯತೀಂದ್ರ ಸಿದ್ದರಾಮಯ್ಯ, ಸಿದ್ದರಾಮಯ್ಯ ರಾಜಕೀಯ ಸಂಧ್ಯಾ ಕಾಲದಲ್ಲಿದ್ದಾರೆ. ಇಂತಹ ಸಮಯದಲ್ಲಿ ಪ್ರಗತಿಪರ ಚಿಂತನೆ ಹೊಂದಿರುವವರಿಗೆ, ಸೈದ್ಯಾಂತಿಕವಾಗಿ ಮಾರ್ಗದರ್ಶನ ನೀಡಲು ಒಬ್ಬ ನಾಯಕನ ಅಗತ್ಯವಿದೆ. ಸತೀಶ್ ಜಾರಕಿಹೊಳಿ ಈ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದು, ಕಾಂಗ್ರೆಸ್ ಸಿದ್ಧಾಂತದಲ್ಲಿ ನಂಬಿಕೆ ಉಳ್ಳ ನಾಯಕರಿಗೆ ಮತ್ತು ಯುವಕರಿಗೆ ಸತೀಶ್ ಜಾರಕಿಹೊಳಿ ಮಾದರಿ ಎಂದು ಹೇಳಿದ್ದರು.

ಯತೀಂದ್ರ ಸಿದ್ದರಾಮಯ್ಯನವರ ಈ ಮಾತು ನವೆಂಬರ್ ಕ್ರಾಂತಿ ಎಂಬ ರಾಜಕೀಯ ಚರ್ಚೆಗೆ ಮತ್ತಷ್ಟು ಪುಷ್ಟಿ ನೀಡಿದ್ದಲ್ಲದೆ, ಸಿದ್ದರಾಮಯ್ಯ ಉತ್ತರಾಧಿಕಾರಿ ಸತೀಶ್ ಜಾರಕಿಹೊಳೆನಾ..? ಎಂಬ ಚರ್ಚೆಗೂ ಕಾರಣವಾಗಿತ್ತು.
