ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಅಧ್ಯಾಯ ಬರೆಯಲು ಸಜ್ಜಾಗಿರುವ ರಿಯಲಾಯನ್ಸ್ ಜಿಯೋ ಮುಂದಿನ ಕೆಲ ವರ್ಷಗಳಲ್ಲಿ ಭಾರಿ ಪ್ರಮಾಣದ ಸ್ಯಾಟಲೈಟ್ ಇಂಟರ್ನೆಟ್ ಸೇವೆಯನ್ನು ಆರಂಭಿಸಲು ಯೋಜನೆ ರೂಪಿಸಿದೆ. ಲೋ-ಅರ್ಥ್ ಆರ್ಬಿಟ್ (LEO) ಉಪಗ್ರಹಗಳ ಮೂಲಕ ದೇಶದ ಮೂಲೆಮೂಲೆಗೂ ವೇಗದ ಇಂಟರ್ನೆಟ್ ಸಂಪರ್ಕ ಒದಗಿಸುವ ಗುರಿಯನ್ನು ಕಂಪನಿ ಹೊಂದಿದೆ.ಮಾಹಿತಿಯ ಪ್ರಕಾರ, ಜಿಯೋ ಮುಂದಿನ 2 ರಿಂದ 3 ವರ್ಷಗಳಲ್ಲಿ ಸುಮಾರು 1,600ಕ್ಕೂ ಹೆಚ್ಚು LEO ಉಪಗ್ರಹಗಳನ್ನು ಬಾಹ್ಯಾಕಾಶಕ್ಕೆ ಉಡಾವಣೆ ಮಾಡಲು ಸಿದ್ಧತೆ ನಡೆಸಿದೆ. ಭೂಮಿಯಿಂದ ಸುಮಾರು 650 ಕಿಲೋಮೀಟರ್ ಎತ್ತರದಲ್ಲಿ ಕಾರ್ಯನಿರ್ವಹಿಸುವ ಈ ಉಪಗ್ರಹಗಳು ವೇಗದ ಇಂಟರ್ನೆಟ್ ಹಾಗೂ ಕಡಿಮೆ ಲೇಟೆನ್ಸಿ ಸೇವೆಯನ್ನು ಒದಗಿಸಲಿವೆ.

ಈ ಯೋಜನೆಯ ಪ್ರಮುಖ ಆಕರ್ಷಣೆ ಎಂದರೆ ‘ಡೈರೆಕ್ಟ್-ಟು-ಡಿವೈಸ್’ ತಂತ್ರಜ್ಞಾನ. ಇದರ ಮೂಲಕ ಮೊಬೈಲ್ ಟವರ್ ಅಥವಾ ಸಾಂಪ್ರದಾಯಿಕ ನೆಟ್‌ವರ್ಕ್ ಇಲ್ಲದ ಪ್ರದೇಶಗಳಲ್ಲಿಯೂ ಸ್ಮಾರ್ಟ್‌ಫೋನ್‌ಗಳು ನೇರವಾಗಿ ಉಪಗ್ರಹದೊಂದಿಗೆ ಸಂಪರ್ಕ ಸಾಧಿಸಬಹುದು. ಹೀಗಾಗಿ ಬೆಟ್ಟಗುಡ್ಡ, ಕಾಡು ಪ್ರದೇಶ, ದೂರದ ಹಳ್ಳಿಗಳು ಹಾಗೂ ದ್ವೀಪಗಳಲ್ಲಿಯೂ ಇಂಟರ್ನೆಟ್ ಮತ್ತು ಕರೆ ಸೇವೆ ಲಭ್ಯವಾಗುವ ಸಾಧ್ಯತೆ ಇದೆ.ಜಿಯೋನ ಈ ಮಹತ್ವಾಕಾಂಕ್ಷಿ ಯೋಜನೆ ಜಾಗತಿಕ ಸ್ಯಾಟಲೈಟ್ ಇಂಟರ್ನೆಟ್ ಮಾರುಕಟ್ಟೆಯಲ್ಲೂ ಚರ್ಚೆಗೆ ಕಾರಣವಾಗಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ SpaceXನ Starlink, ಅಮೇಜಾನ Project Kuiper ಹಾಗೂ Eutelsat OneWebಗೆ ಭಾರತೀಯ ಮಾರುಕಟ್ಟೆಯಲ್ಲಿ ಪೈಪೋಟಿ ನೀಡುವ ನಿರೀಕ್ಷೆಯಿದೆ.
ಸ್ಯಾಟಲೈಟ್ ಬ್ರಾಡ್‌ಬ್ಯಾಂಡ್ ಸೇವೆಗಳು ಗ್ರಾಮೀಣ ಪ್ರದೇಶಗಳು, ಹಡಗುಗಳು, ವಿಮಾನಗಳು ಹಾಗೂ ವಿಪತ್ತು ಪೀಡಿತ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಇದೇ ಹಿನ್ನೆಲೆಯಲ್ಲಿ ಜಿಯೋ ತನ್ನ ಡಿಜಿಟಲ್ ವಿಸ್ತರಣೆಯ ಭಾಗವಾಗಿ ಈ ಕ್ಷೇತ್ರಕ್ಕೆ ಭಾರೀ ಹೂಡಿಕೆ ಮಾಡಲು ಮುಂದಾಗಿದೆ.

ಫೈಬರ್ ಕೇಬಲ್ ಸಂಪರ್ಕ ತಲುಪದ ಭಾರತದ ಕಟ್ಟಕಡೆಯ ಹಳ್ಳಿಗಳಿಗೂ ಹೈ-ಸ್ಪೀಡ್ ಇಂಟರ್ನೆಟ್ ತಲುಪಿಸುವುದು ಈ ಯೋಜನೆಯ ಪ್ರಮುಖ ಗುರಿಯಾಗಿದೆ. ಜೊತೆಗೆ ಪ್ರಕೃತಿ ವಿಕೋಪಗಳ ಸಂದರ್ಭದಲ್ಲೂ ಸಂಪರ್ಕ ವ್ಯವಸ್ಥೆಯನ್ನು ನಿರಂತರವಾಗಿ ಕಾಪಾಡುವಲ್ಲಿ ಸ್ಯಾಟಲೈಟ್ ನೆಟ್‌ವರ್ಕ್ ಮಹತ್ವದ ಪಾತ್ರ ವಹಿಸುವ ನಿರೀಕ್ಷೆಯಿದೆ.ಈ ಯೋಜನೆ ಯಶಸ್ವಿಯಾದರೆ, ಭಾರತದಲ್ಲಿ 5G ಮತ್ತು ಫೈಬರ್ ಸೇವೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸಿ ದೇಶದ ಡಿಜಿಟಲ್ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗೆ ಕಾರಣವಾಗಲಿದೆ.






