ಪೌರಾಡಳಿತ ಇಲಾಖೆಯಿಂದ ನಗರೋತ್ಥಾನ ಯೋಜನೆಯಡಿ ಕಲಘಟಗಿ ಪಟ್ಟಣ ಪಂಚಾಯತ ಕಟ್ಟಡ ಹಾಗೂ ಗ್ರಂಥಾಲಯ ನಿರ್ಮಾಣಕ್ಕೆ ನಗರದಲ್ಲಿ ಮೀಸಲಿರುವ ಜಾಗದಲ್ಲಿ ಅನಧಿಕೃತವಾಗಿ ಗುಡಿಸಲು ನಿರ್ಮಿಸಿಕೊಂಡು ವಾಸಿಸುತ್ತಿದ್ದ ಅಲೆಮಾರಿ ಜನಾಂಗದವರಿಗೆ ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್ ಎಸ್ ಲಾಡ್ ಅವರು ಭರವಸೆ ನೀಡಿದರು.

ಅಲೆಮಾರಿ ಜನಾಂಗದವರು ವಾಸಿಸುತ್ತಿದ್ದ ಸ್ಥಳ ಒತ್ತುವರಿಯನ್ನು ಪಟ್ಟಣ ಪಂಚಾಯತ ಅಧಿಕಾರಿಗಳು ಇತ್ತೀಚೆಗೆ ತೆರವುಗೊಳಿಸಿದ್ದರು. ಈ ಕುರಿತು ಸಂತ್ರಸ್ತರಿಂದ ಸಚಿವ ಸಂತೋಷ ಲಾಡ ಅವರು, ಕಲಘಟಗಿ ಪಟ್ಟಣದಲ್ಲಿ ಮನವಿ ಸ್ವೀಕರಿಸಿ, ಮಾತನಾಡಿದರು.
ಈಗಾಗಲೇ ಹಲವು ಬಾರಿ ಅಲೆಮಾರಿ ಕುಟುಂಬಗಳಿಗೆ ಶಾಶ್ವತ ಮನೆ ಹೊಂದಲು ಪಟ್ಟಣ ಪಂಚಾಯತಗೆ ಮನವಿ ಸಲ್ಲಿಸಲು ಸೂಚಿಸಲಾಗಿತ್ತು. ಅದರೆ ಯಾರು ಸಹ ಇಲ್ಲಿವರೆಗೆ ಮನೆ ಕೇಳಿ ಅರ್ಜಿ ಸಲ್ಲಿಸಿಲ್ಲ. ಪಟ್ಟಣದ ಖಾಲಿ ಇರುವ ಜಾಗೆಗಳಲ್ಲಿ ಈ ರೀತಿ ಗುಡಿಸಲು ಹಾಕಿ ಇರುವುದು ತಪ್ಪು. ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ, ಸರಕಾರಿ ಕಟ್ಟಡಗಳಿಗೆ ಮೀಸಲಿಟ್ಟಿ ಸ್ಥಳ ಒತ್ತುವರಿ, ಅನಧಿಕೃತ ಬಳಕೆ ಮಾಡಿದರೆ ಸಂಬಂಧಿಸಿದ ಅಧಿಕಾರಿಗಳು ಕ್ರಮ ವಹಿಸುತ್ತಾರೆ ಎಂದರು.

ಅನಧಿಕೃತವಾಗಿ ಶೆಡ್ ನಿರ್ಮಿಸಿದ್ದ, ತೆರವುಗೊಳಿಸಿದ ಕುಟುಂಬಗಳಿಗೆ ಗಾಂಧಿನಗರ ಹಾಗೂ ಇತರ ಸ್ಥಳಗಳಲ್ಲಿ ತಾತ್ಕಾಲಿಕ ಆಶ್ರಯ ಕಲ್ಪಿಸಲಾಗಿದೆ. ಅಲೆಮಾರಿ ಜನಾಂಗದ ಬಾಧಿತ 13 ಕುಟುಂಬಗಳ ವಾಸಸ್ಥಳ ಹಾಗೂ ಇತರ ಅಧಿಕೃತ ದಾಖಲೆಗಳನ್ನು ಪಡೆದುಕೊಂಡು, ಸ್ಥಾನಿಕ ಚೌಕಸಿ ಮಾಡಿಕೊಂಡು ಪಟ್ಟಣ ಪಂಚಾಯತ ಆಡಳಿತಮಂಡಳಿ ಸಭೆಯಲ್ಲಿ ಅನುಮೋದಿಸಿ, ನಿವೇಶನ ನೀಡಲು ತಕ್ಷಣ ಕ್ರಮ ವಹಿಸಲು ಪಟ್ಟಣ ಪಂಚಾಯತ ಮುಖ್ಯಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಸಚಿವರು ತಿಳಿಸಿದರು.

ಅಲೆಮಾರಿ ಕುಟುಂಬಗಳು ಈಗ ತಾತ್ಕಾಲಿಕವಾಗಿ ನೆಲೆಸಿರುವ ಸ್ಥಳಗಳಿಂದ ಒಕ್ಕಲೆಬ್ಬಿಸದಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದ ಸಚಿವರು, ಅರ್ಹರಿಗೆ ಅದಷ್ಟು ಬೇಗ ನಿವೇಶನ ನೀಡಲು ಕ್ರಮವಹಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ದಿವ್ಯ ಪ್ರಭು, ಜಿಲ್ಲಾ ನಗರಾಭಿವೃದ್ಧಿಕೋಶದ ಯೋಜನಾ ನಿರ್ದೇಶಕ ಅಜೀಜ್ ದೇಸಾಯಿ, ತಹಸಿಲ್ದಾರ ಬಸವರಾಜ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಚಂದ್ರಶೇಖರ. ಬಿ. ಹಾಗೂ ಇತರರು ಇದ್ದರು