ರಾಜ್ಯದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಸಂಕಷ್ಟಕ್ಕೆ ಸಿಲುಕಿದ್ದಾರಾ ಅನ್ನೋ ಅನುಮಾನ ಶುರುವಾಗಿದೆ. ಹುಲಿ ಉಗುರು ಪೆಂಡೆಂಟ್ ಹಾಕಿದ್ದ ಕಾರಣಕ್ಕೆ ಬಿಗ್‌ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಬಂಧಿಸಿ, ಜೈಲಿಗೆ ಕಳುಹಿಸಿದ ಬಳಿಕ ಸಂಕಷ್ಟ ಎದುರಾಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಬಿಗ್‌ಬಾಸ್ ಮನೆಯಲ್ಲಿದ್ದ ಸಂತೋಷ್‌ನನ್ನು ಏಕಾಏಕಿ ಅರೆಸ್ಟ್ ಮಾಡಿ ಕಳುಹಿಸಿದ ಅಧಿಕಾರಿಗಳು ಆತುರ ಬೇರೆಯವರ ವಿಚಾರದಲ್ಲಿ ಯಾಕಿಲ್ಲ..? ಅನ್ನೋ ಪ್ರಶ್ನೆ ಎದುರಾಗಿದೆ. ನಟರಾದ ದರ್ಶನ್, ಜಗ್ಗೇಶ್, ನಿಖಿಲ್, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಮನೆಯಲ್ಲಿ ದಾಳಿ ಮಾಡಿ ಪೆಂಡೆಂಟ್ ವಶಕ್ಕೆ ಪಡೆಯಲಾಗಿದೆ. ಆದರೆ ಯಾರನ್ನೂ ಬಂಧಿಸುವ ಕೆಲಸ ಮಾಡಲಿಲ್ಲ. ಆದರೆ ಸಂತೋಷ್‌ನನ್ನು ಮಾತ್ರ ಬಂಧಿಸಿದ್ದು ಯಾಕೆ..? ಏನಿದರ ಹಿಂದಿನ ದುರುದ್ದೇಶ ಅನ್ನೋದು ಸಾಮಾಜಿಕ ಜಾಲತಾಣದಲ್ಲಿ ಬಹು ಚರ್ಚಿತ ವಿಚಾರ.
2ನೇ ದಿನವೂ ಹಲವರ ಮನೆ ಮೇಲೆ ದಾಳಿ, ಪೆಂಡೆಂಟ್ ವಶ..
ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಕೂಡ ಹುಲಿ ಉಗುರು ಇರುವ ಪೆಂಡೆಂಟ್ ಹಾಕಿದ್ದರು ಎನ್ನುವುದು ಜಾಲತಾಣದಲ್ಲಿ ಚರ್ಚೆ ಆಗ್ತಿದ್ದ ಹಾಗೆ ಅಧಿಕಾರಿಗಳು ರೇಡ್ ಮಾಡಿ ಪೆಂಡೆಂಟ್ ವಶಕ್ಕೆ ಪಡೆದಿದ್ದಾರೆ. ಮಾಜಿ ರೌಡಿ ಜೇಡರಹಳ್ಳಿ ಕೃಷ್ಣಪ್ಪ ಅವರ ರಾಜರಾಜೇಶ್ವರಿ ನಗರನಿವಾಸಕ್ಕೂ ಭೇಟಿ ನೀಡಿದ್ದ ಅರಣ್ಯ ಅಧಿಕಾರಿಗಳು ಪರಿಶೀಲನೆಗೆ ಮುಂದಾಗಿದ್ದಾರೆ. ಆದರೆ ಮನೆಯಲ್ಲಿ ಯಾರು ಇಲ್ಲದ ಕಾರಣಕ್ಕೆ ವಾಪಸ್ ಆಗಿದ್ದಾರೆ. ಇನ್ನು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನಿಗೂ ಹುಲಿ ಉಗುರು ಸಂಕಷ್ಟ ಎದುರಾಗಿದೆ. ಕಾಂಗ್ರೆಸ್ ಯುವ ಮುಖಂಡ ಆಗಿರುವ ಮೃಣಾಲ್ ಹೆಬ್ಬಾಳ್ಕರ್ ಕೂಡ ಹುಲಿ ಉಗುರಿನ ಪೆಂಡೆಂಟ್ ಹಾಕಿರುವ ಫೋಟೋ ವೈರಲ್ ಆಗಿದೆ. ಮದುವೆ ಸಮಾರಂಭ ಸೇರಿದಂತೆ ಹಲವು ಕಡೆಗಳಲ್ಲಿರುವ ಪೋಟೊಗಳು ವೈರಲ್ ಆಗಿವೆ. ಬೆಳಗಾವಿಯ ಅರಣ್ಯ ಇಲಾಖೆ ಅಧಿಕಾರಿಗಳು ಮೌನಕ್ಕೆ ಬಗ್ಗೆ ಜನಾಕ್ರೋಶ ವ್ಯಕ್ತವಾಗ್ತಿದೆ.
ಬಡ ಅರ್ಚಕರನ್ನು ಬಂಧಿಸಿ ಜೈಲಿಗಟ್ಟಿದ ಅಧಿಕಾರಿಗಳು..!
ಚಿಕ್ಕಮಗಳೂರಿನಲ್ಲಿ ಹುಲಿ ಉಗುರಿನ ಪೆಂಡೆಂಟ್ ಹಾಕಿದ್ದ ಆರೋಪದ ಮೇಲೆ ಇಬ್ಬರು ಅರ್ಚಕರನ್ನು ಬಾಳೆಹೊನ್ನೂರು ಅರಣ್ಯ ವಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಇತಿಹಾಸ ಪ್ರಸಿದ್ಧ ಮಾರ್ಕಂಡೇಶ್ವರ ದೇಗುಲದ ಅರ್ಚಕರಾದ ಕೃಷ್ಣಾನಂದ ಹೊಳ್ಳ ಹಾಗು ನಾಗೇಂದ್ರ ಜೋಯಿಸ್ ಬಂಧಿತರು. ಬಂಧಿತರಿಂದ ಮೂರು ಹುಲಿ ಉಗುರು ವಶಕ್ಕೆ ಪಡೆಯಲಾಗಿದ್ದು, ಇಬ್ಬರು ಅರ್ಚಕರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರು ಮಾಡಲಾಗಿತ್ತು. ಕೋರ್ಟ್ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆದರೆ ಚಿಕ್ಕಮಗಳೂರು ಜಿಲ್ಲಾ ಅರಣ್ಯ ಇಲಾಖೆ ಉಪ ವಲಯ ಅರಣ್ಯಾಧಿಕಾರಿಗೂ ಹುಲಿ ಉಗುರಿನ ಉರುಳು ಸುತ್ತಿಕೊಂಡಿದೆ. ಹುಲಿ ಉಗುರು ಧರಿಸಿದ್ದಾರೆ, ಸೂಕ್ತ ಕ್ರಮ ಕೈಗೊಳ್ಳಿ ಅಂತ ಕಳಸದ DRFO ದರ್ಶನ್ ವಿರುದ್ಧ ಅರೆನೂರು ಗ್ರಾಮದ ಸುಪ್ರೀತ್, ಅಬ್ದುಲ್ ಎಂಬುವವರು ದೂರು ನೀಡಿದ್ದಾರೆ. ಆದರೂ ಇಲ್ಲೀವರೆಗೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ.

ಅರಣ್ಯ ಇಲಾಖೆಗೆ ಪ್ರಚಾರದ ಹುಚ್ಚೋ..? ರಾಜಕೀಯ ಸೇಡೋ..?
ಸ್ವತಃ ಅರಣ್ಯ ಇಲಾಖೆ ಒಂದೊಂದು ಕೇಸ್‌ನಲ್ಲಿ ಒಂದೊಂದು ರೀತಿ ನಡೆದುಕೊಂಡಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ. ನಟ ಜಗ್ಗೇಶ್ ನನ್ನದು ಹುಲಿ ಉಗುರು ಅಂತಾ ಹೇಳಿಕೆ ಕೊಟ್ಟರೂ ಅದು ಹಳೇ ಉಗುರು ಎಂದಿದ್ದಾರೆ ಅಧಿಕಾರಿಗಳು. ಇನ್ನು 100 ವರ್ಷ ಹುಲಿ ಚರ್ಮವನ್ನು ಯಾರಾದರೂ ಅಕ್ರಮವಾಗಿ ಇಟ್ಟುಕೊಂಡಿದ್ದರೆ ಅಧಿಕಾರಿಗಳು ಇದೇ ರೀತಿ ಹಳೆಯ ಚರ್ಮ ಅಂತಾ ಸುಮ್ಮನಾಗ್ತಾರಾ..? ಅನ್ನೋ ಪ್ರಶ್ನೆಗೆ ಅಧಿಕಾರಿಗಳೇ ಉತ್ತರ ಕೊಡಬೇಕಿದೆ. ಅರಣ್ಯ ಸಚಿವ ಈಶ್ವರ ಖಂಡ್ರೆ, ತಾರತಮ್ಯದ ಮಾತೇ ಇಲ್ಲ ಎಲ್ಲರ ವಿಚಾರದಲ್ಲೂ ಒಂದೇ ರೀತಿ ಕಾನೂನು ಕ್ರಮ ಎಂದಿದ್ದಾರೆ. ಆದರೂ ಅಧಿಕಾರಿಗಳು ಒಂದೊಂದು ಕೇಸ್‌ನಲ್ಲಿ ಬೆಣ್ಣೆ ಸುಣ್ಣ ಎನ್ನುವಂತೆ ಮಾಡಿದ್ದಾರೆ ಎನ್ನುವುದು ಜಗಜ್ಜಾಹೀರು ಆಗಿದೆ. ಬಿಗ್‌ಬಾಸ್ ಸ್ಪರ್ಧಿಯನ್ನು ಬಂಧನ ಮಾಡಿದ್ರೆ ದೊಡ್ಡ ಸುದ್ದಿಯಾಗುತ್ತೆ, ಪ್ರಚಾರ ಸಿಗುತ್ತೆ ಅನ್ನೋ ಕಾರಣಕ್ಕೆ ಬಂಧನ ಮಾಡಿದ್ದಾರೋ..? ಅಥವಾ ರಾಜಕೀಯ ಕುಮ್ಮಕ್ಕು ಏನಾದ್ರು ಇದೆಯಾ ಅನ್ನೋದನ್ನು ಅರಣ್ಯ ಇಲಾಖೆ ಅಧಿಕಾರಿಗಳು ರಾಜ್ಯದ ಜನರ ಎದುರು ಹೇಳಬೇಕಿದೆ. ಇಲ್ಲದಿದ್ರೆ ಸಮರ್ಥನೆ ಮಾಡಿಕೊಳ್ಳಲು ಒದ್ದಾಡುತ್ತಿರುವ ಸರ್ಕಾರ, ಮತ್ತಷ್ಟು ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ದಟ್ಟವಾಗಿದೆ.
ಕೃಷ್ಣಮಣಿ