ಮೊನ್ನೆ ಕೊನೆಗೊಂಡ ಹಾವೇರಿಯ ಕನ್ನಡ ಸಾಹಿತ್ಯ ಸಮ್ಮೇಳನ ಕನ್ನಡದ ಅಸ್ಮಿತೆಯ ಸಮ್ಮೇಳನವಾಗಿರದೆ ಅದೊಂದು ಬಲಪಂಥೀಯ ಹಿಂದುತ್ವ ಹಾಗು ಬ್ರಾಲ್ಮಣ್ಯದ ಸಮಾವೇಷವಾಗಿತ್ತು. ಉದ್ದಕ್ಕೂ ಅನೇಕ ವಿವಾದಾತ್ಮಕ ನಿರ್ಧಾರ ಹಾಗು ನಿಲುವುಗಳಿಂದ ಪರಿಷತ್ತಿನ ಅಧ್ಯಕ್ಷ ಮಹೇಶ್ ಜೋಷಿ ತಾನೊಬ್ಬ ದಪ್ಪ ಚರ್ಮಯುಳ್ಳ ಮನುಷ್ಯ ಎಂದು ನಿರೂಪಿಸಿದ್ದೆ ಹೆಚ್ಚು. ಇನ್ನೂ ಸಮ್ಮೇಳನದ ಅಧ್ಯಕ್ಷರಾದವರು ತಮ್ಮ ಬಾಲೀಶ ಭಾಷೆಯಲ್ಲಿ ಮೋದಿ ಕುರಿತು ಒಂದು ಕವಿತೆ ಬರೆದು ಹಿಂದೊಮ್ಮೆ ನಗೆಗೀಡಾಗಿದ್ದನ್ನು ಸ್ಮರಿಸಬಹುದು. ಸಮ್ಮೇಳನದ ಪ್ರತಿಯೊಂದು ಗೋಷ್ಠಿಗಳಲ್ಲಿ ವಿಷಯ ಮಂಡನೆ ಮಾಡಿದ ಬಹುತೇಕ ಪಂಡಿತೋತ್ತಮರು ತಮ್ಮ ತಲೆಯಲ್ಲಿ ಕೋಮುವಾದದ ವಿಷ ತುಂಬಿಕೊಂಡವರೆ ಆಗಿದ್ದರು. ಒಟ್ಟಾರೆ ಕನ್ನಡದ ಬಾವುಟ ಹಾರಿಸಬೇಕಾದ ಸಮ್ಮೇಳನ ಹಿಂದುತ್ವ ಮತ್ತು ಬ್ರಾಹ್ಮಣ್ಯವನ್ನು ವೈಭವೀಕರಿಸಿತು ಎನ್ನುವುದರಲ್ಲಿ ಎರಡು ಮಾತಿಲ್ಲ.
ಕನ್ನಡ ಸಾಹಿತ್ಯಕ್ಕಷ್ಟೆ ಅಲ್ಲದೆ ವಿಶ್ವ ಸಾಹಿತ್ಯಕ್ಕೆ ವಚನ ರಾಹಿತ್ಯ ಕೊಟ್ಟ ಕೊಡುಗೆ ಜಗತ್ತಿನ ಮತ್ತೊಂದು ಸಾಹಿತ್ಯ ಕೊಟ್ಟಿಲ್ಲ ಎನ್ನುವುದು ಸಾರ್ವತ್ರಿಕ ಅಭಿಪ್ರಾಯ. ಆದರೆ ಕೋಮುವಾದಿಗಳ ಮುಖಂಡತ್ವದಲ್ಲಿ ಜರುಗಿದ ಸಮ್ಮೇಳನದಲ್ಲಿ ‘ಧರ್ಮದ ಹುಟ್ಟು ˌ ಬೆಳವಣಿಗೆ ಮತ್ತು ವಚನ ಪರಂಪರೆ’ ಎನ್ನುವ ವಿಷದ ಮೇಲಿನ ವಿಚಾರ ಗೋಷ್ಠಿಯಲ್ಲಿ ಭಾಗವಹಿಸಿದ ವಿದ್ವಾಂಸರಂತೂ ಅಪ್ಪಟ ಹಿಂದುತ್ವದ ವಿದ್ವಂಸಕರೆ ಆಗಿದ್ದರು. ಅವರಲ್ಲಿ ಯಾರೊಬ್ಬರಿಗೂ ವಚನ ಸಾಹಿತ್ಯದ ಮೂಲ ಆಶಯಗಳು ಲವಲೇಶವೂ ತಿಳಿದಿರಲಿಲ್ಲ. ಅಷ್ಟೇ ಅಲ್ಲದೆ ಅವರೆಲ್ಲರು ವೈದಿಕ ವ್ಯವಸ್ಥೆಯ ವಿರುದ್ದ ತೊಡೆತಟ್ಟಿ ಹುಟ್ಟಿದ ವಚನ ಚಳುವಳಿಯನ್ನು ಹಿಂದೂ ಧರ್ಮದ ಸುಧಾರಣೆಯ ಚಳುವಳಿ ಎಂಬ ಸುಳ್ಳಿನ ಪ್ರತಿಪಾದಿಕರಾಗಿದ್ದರು. ಶರಣರ ವಚನಗಳನ್ನು ಹಿಂದುತ್ವ ಅಥವಾ ವೈದಿಕತೆಯ ಮೂಸೆಯಲ್ಲಿ ವಿಮರ್ಶಿಸಲು ಹಿಂದುತ್ವವಾದಿ ಗುಂಪುಗಳಿಂದ ಸೂಪಾರಿ ಪಡೆದವಳಂತೆ ವರ್ತಿಸುವ ವೀಣಾ ಬನ್ನಂಜೆ ಎನ್ನುವ ವೈದಿಕ ಧರ್ಮದ ಪೂರ್ಣಾವಧಿ ಪ್ರಚಾರಕಿಯಂತೂ ಇಡೀ ವಚನ ಚಳುವಳಿಯ ಮೂಲ ಆಶಯವನ್ನೆ ವಿಕೃತಗೊಳಿಸುತ್ತಿರುವುದನ್ನು ನಾವು ನೋಡಿದ್ದೇವೆ. ಸಂಗಮೇಶ ಸೌದತ್ತಿಮಠ ಎನ್ನುವ ಇನ್ನೊಬ್ಬ ವೀರಶೈವ ಆರಾಧ್ಯ ಲಿಂಗಿ ಬ್ರಾಹ್ಮಣ ಪಂಡಿತ ತಾಂತ್ರಿಕವಾಗಿ ವಚನಧರ್ಮದ ಲಿಂಗಸಂಸ್ಕಾರಿ ಆಗಿದ್ದೂ ತನ್ನ ಪೂರ್ವಜರ ಬ್ರಾಹ್ಮಣ್ಯದ ಕತ್ತಲೆಯಿಂದ ಹೊರಬಂದಿರದ ವ್ಯಕ್ತಿ.
ಈಗ್ಗೆ ಎರಡು ವರ್ಷಗಳ ಹಿಂದೆ ಬಸವ ಜಯಂತಿಯ ಸಂದರ್ಭದಲ್ಲಿ ಈ ಸೌದತ್ತಿಮಠ ಬಸವಣ್ಣ ಎಂದರೆ ಎತ್ತು ಎಂಬ ಶಿರ್ಷಿಕೆಯುಳ್ಳ ಅಂಕಣ ಬರೆದು ಬಸವಣ್ಣನವರ ಬಗ್ಗೆ ತನಗಿರುವ ಮತ್ಸರ ಮತ್ತು ಅಜ್ಞಾನವನ್ನು ಒಟ್ಟೊಟ್ಟಿಗೆ ಪ್ರದರ್ಶಿಸಿದ್ದನ್ನು ನಾಡು ಕಂಡಿದೆ. ಬೌದ್ದ ಧರ್ಮದಲ್ಲಿ ಮಹಾಯಾನ ಮುಟ್ಟುಹಾಕಿದ ಬ್ರಾಹ್ಮಣ ನಾಗಾರ್ಜುನನಂತೆ ಅವೈದಿಕ ಲಿಂಗಾಯತ ಧರ್ಮದಲ್ಲಿ ವೀರಶೈವವೆಂದ ವೈದಿಕತೆ ಹುಟ್ಟುಹಾಕಿದ್ದು ಆಂಧ್ರಮೂಲದ ಆರಾಧ್ಯ ಬ್ರಾಹ್ಮಣರು. ಬಸವಾದಿ ಶಿವಶರಣರ ಮೂಲ ಆಶಯಗಳನ್ನು ಹಿನ್ನೆಲೆಗೆ ಸರಿಸಿ ಮುಗ್ಧ ಲಿಂಗಾಯತ ಸಮಾಜದ ಮೇಲೆ ಯಜಮಾನಿಕೆ ಸ್ಥಾಪಿಸಿದವರು ಈ ವೀರಶೈವ ಪರಾವಲಂಬಿ ಪುರೋಹಿತಶಾಹಿಗಳು. ಕನ್ನಡ ಸಾಹಿತ್ಯ ಪರಿಷತ್ತು ಬಲಪಂಥೀಯ ಕೋಮುವಾದಿಯ ಕಪಿ ಮುಷ್ಟಿಯಲ್ಲಿ ಸಿಕ್ಕಮೇಲೆ ಈ ಸಮ್ಮೇಳನಗ ಹಿಂದುತ್ವದ ಅಪಾಯಕಾರಿ ಸಿದ್ಧಾಂತಗಳು ಮತ್ತು ಬ್ರಾಹ್ಮಣ್ಯದ ವೈಭವೀಕರಣದ ವೇದಿಕೆಯಾಗಿ ಮಾರ್ಪಟ್ಟಿದ್ದು ದುರಂತದ ಸಂಗತಿ. ಗೋಷ್ಟಿಯಲ್ಲಿ ಈ ಸೌದತ್ತಿಮಠ ಎತ್ತಿದ ಹಲವಾರು ಪ್ರಶ್ನೆಗಳು ಮತ್ತು ಮಂಡಿಸಿದ ವಿತಂಡವಾದವನ್ನು ನಾವು ಸೂಕ್ಷ್ಮವಾಗಿ ಗಮನಿಸಿ ವಿಮರ್ಶಿಸಬೇಕಿದೆ.
೧. “ವಚನಕಾರರು ವೇದ ವಿರೋಧಿಗಳು ಎನ್ನುವುದು ಸುಳ್ಳು”
ಇಡೀ ಶರಣ ಧರ್ಮವು ಭಾರತೀಯ ಉಳಿದ ಯಾವುದೇ ಧರ್ಮಗಳಿಗಿಂತ ಉಗ್ರಮಟ್ಟದಲ್ಲಿ ವೈದಿಕ ಧರ್ಮದ ವೇದ-ಶಾಸ್ತ್ರ ˌ ಆಗಮˌ ಪುರಾಣಗಳನ್ನು ದಿಕ್ಕರಿಸಿರುವುದಕ್ಕೆ ಈಗ ಲಭ್ಯವಿರುವ ವಿವಿಧ ಶರಣರ ೨೨ ಸಾವಿರ ವಚನಗಳ ಪೈಕಿ ಕನಿಷ್ಠ ೩೩೬ ವಚನಗಳು ಸಾಕ್ಷಿಯಾಗಿವೆ. ಈ ಎಲ್ಲಾ ವಚನಗಳನ್ನು ನಾಡಿನ ಹಿರಿಯ ಸಾಹಿತಿ ಎಸ್ ಜಿ ಸಿದ್ಧರಾಮಯ್ಯನವರು “ಕ್ರಾಂತಿಯ ಹೆಜ್ಜೆ” ಎನ್ನುವ ಸಾಣೇಹಳ್ಳಿಯ ಪಂಡಿತಾರಾಧ್ಯ ಶ್ರೀಗಳು ಪ್ರಕಾಶಿಸಿದ ತಮ್ಮ ಸಂಪಾದನಾ ಗ್ರಂಥದಲ್ಲಿ ವಿವರಿಸಿದ್ದಾರೆ. ಹಿಂದುತ್ವವಾದಿ ಸಂಗಮೇಶ್ ಸೌದತ್ತಿಮಠ ಅವರು ಈ ಕುರಿತು ತಮಗಿರುವ ಅಜ್ಞಾನವನ್ನು ಹೋಗಲಾಡಿಸಿಕೊಳ್ಳಲು ‘ಕ್ರಾಂತಿಯ ಹೆಜ್ಜೆಗಳು’ ಗ್ರಂಥವನ್ನು ಓದಿಕೊಳ್ಳಬೇಕು.
೨. “ಬಸವಣ್ಣನವರು ಹಿಂದೂ ಧರ್ಮಕ್ಕೆ ಪರ್ಯಾಯವಾಗಿ ಹೊಸ ಧರ್ಮ ಹುಟ್ಟುಹಾಕಲಿಲ್ಲ.”
ಇದು ಸಾಮಾನ್ಯವಾಗಿ ಪುರೋಹಿತಶಾಹಿಗಳು ಮಾಮೂಲಾಗಿ ಮತ್ತು ಅಷ್ಟೆ ಭಯ ಹಾಗು ದಿಗಿಲಿನಿಂದ ಹೇಳುವ ಮಾತು. ಪುರೋಹಿತಶಾಹಿಗಳ ಜಂಘಾಬಲವನ್ನು ಅಲುಗಾಡಿಸಿದ ವಚನ ಚಳುವಳಿ ಕುರಿತು ವೈದಿಕರು ಮತ್ತು ಆಗಮಿಕ ವೀರಶೈವ ಆರಾಧ್ಯ ಬ್ರಾಹ್ಮಣರಿಗೆ ಭಯ ಹಾಗು ಮತ್ಸರವಿರುವುದು ಸಹಜ. ಎರಡು ದಶಕಗಳ ಹಿಂದೆ ಶರಣ ಜಂಗಮರುˌ ನಾಡಿನ ಹಿರಿಯ ಸಮಾಜವಾದಿಗಳುˌ ಮತ್ತು ಮಾಜಿ ಶಾಸಕರಾಗಿದ್ದ ಲಿಂಗೈಕ್ಯ ನೀಲಗಂಗಯ್ಯಾ ಪೂಜಾರ್ ಅವರು “ಹಿಂದುತ್ವಕ್ಕೆ ಪ್ರತಿಧ್ವಂದ್ವಿಯಾಗಿ ಉದಿಸಿದ ಲಿಂಗಾಯತ ಧರ್ಮ” ಎನ್ನುವ ಮೌಲಿಕ ಗ್ರಂಥವನ್ನು ರಚಿಸಿದ್ದಾರೆ. ಈ ಗ್ರಂಥದಲ್ಲಿ ಹಿಂದೂ ಎನ್ನುವುದು ಪ್ರಾಚೀನ ಬ್ರಾಹ್ಮಣ ಧರ್ಮದ ಅಧುನಿಕ ಪಾರಿಭಾಷೆ ಎನ್ನುವ ಪೂಜಾರ್ ಅವರು ಬ್ರಾಹ್ಮಣ ಮತ್ತು ವೀರಶೈವ ಪಂಚಾಚಾರ್ಯರ ಹಲವಾರು ಬೂಟಾಟಿಕೆಗಳನ್ನು ಎಳೆಎಳೆಯಾಗಿ ಈ ಗ್ರಂಥದಲ್ಲಿ ಬಿಚ್ಚಿದ್ದಾರೆ. ಸೌದತ್ತಿಮಠ ತಮಗಿರುವ ಅಜ್ಞಾನವನ್ನು ಸರಿಪಡಿಸಿಕೊಳ್ಳಲು ಈ ಮೌಲಿಕ ಗ್ರಂಥವನ್ನು ಚೆನ್ನಾಗಿ ಓದಿಕೊಳ್ಳಬೇಕು.
೩. “ಕೆಲವರಿಗೆ ಹಿಂದೂ ಧರ್ಮ ಟೀಕಿಸುವ ಚಾಳಿಯಿದೆ”
ಸಾಹಿತ್ಯ ಸಮ್ಮೇಳನ ಸಾಹಿತ್ಯದ ವಿಷಯಗಳ ಮೇಲೆ ವಿಚಾರ ಮಂಥನ ಮಾಡಬೇಕು. ವಚನ ಚಳುವಳಿ ವೈದಿಕ ವ್ಯವಸ್ಥೆಯ ಕರಾಳತೆಯನ್ನು ವಿರೊಧಿಸಿ ಈ ಮಣ್ಣಿನಲ್ಲಿ ಲಿಂಗಾಯತವೆಂಬ ಜೀವನ್ಮುಖಿ ವಿಚಾರ ಪರಂಪರೆಯನ್ನು ಹುಟ್ಟುಹಾಕಿದೆ. ಸಮ್ಮೇಳನದಲ್ಲಿ ಸಾಹಿತ್ಯದ ವಿಷಯದ ಮೇಲೆ ಚರ್ಚೆ ಮಾಡುವದು ಬಿಟ್ಟು ಸೌದತ್ತಿಮಠರಂತ ಅಜ್ಞಾನಿಗಳುˌ ಅವಿವೇಕಿಗಳು ಧರ್ಮದ ವಿಷಯವನ್ನು ಚರ್ಚಿಸಿದ್ದು ಮತ್ತು ಹಿಂದೂ ಧರ್ಮದ ವಕ್ತಾರನಂತೆ ವರ್ತಿಸಿದ್ದು ನಾಚಿಕೆಗೇಡಿನ ಸಂಗತಿ. ಇನ್ನೊಂದು ವಿಚಿತ್ರ ಮತ್ತು ವಿಪರ್ಯಾಸದ ಸಂಗತಿ ಎಂದರೆ ಈ ಸೌದತ್ತಿಮಠ ಜೀವನದುದ್ದಕ್ಕೂ ಪ್ರತಿಪಾದಿಸಿಕೊಂಡು ಬಂದದ್ದು ತನ್ನದು ವೀರಶೈವ ಧರ್ಮ ಎಂದು. ಆ ಕಾಲ್ಪನಿಕ ವೀರಶೈವ ಧರ್ಮವನ್ನು ನಿಸರ್ಗಕ್ಕೆ ವಿರೋಧವಾಗಿ ಯುಗಯುಗಗಳಲ್ಲಿ ಜನಿಸಿದರೆನ್ನಲಾಗುವ ಐದು ಜನ ಅಯೋನಿಜˌ ಲಿಂಗೋದ್ಭವ ಆಚಾರ್ಯರು ಸ್ಥಾಪಿಸಿದ್ದಾರೆ ಎನ್ನಲಾಗುತ್ತದೆ. ಸಮ್ಮೇಳನದ ವೇದಿಕೆಯಲ್ಲಿ ತಾನು ಬ್ರಾಹ್ಮಣ ಯಜಮಾನಿಕೆಯ ಹಿಂದೂ ಧರ್ಮದ ವಕ್ತಾರನಂತೆ ವರ್ತಿಸಿರುವ ಈ ಸೌದತ್ತಿಮಠ ತಾನು ಪಂಚಾಚಾರ್ಯರ ಯಜಮಾನಿಕೆಯ ವೀರಶೈವ ಧರ್ಮಕ್ಕೆ ಸೇರಿದ್ದೊ ಅಥವಾ ಬ್ರಾಹ್ಮಣರ ಯಜಮಾನಿಕೆಯ ಹಿಂದೂ ಧರ್ಮಕ್ಕೆ ಸೇರಿದ್ದೊ ಎನ್ನುವ ಬಗ್ಗೆ ಗೊಂದಲಕ್ಕೆ ಒಳಗಾಗಿದ್ದನ್ನು ನಾವೆಲ್ಲ ಗಮನಿಸಬೇಕಿದೆ. ಆದರೆ ಸೌದತ್ತಿಮಠ ಮತ್ತು ಅವರಂತೆ ಮಾತನಾಡುವ ವೀರಶೈವವಾದಿಗಳು ಬಸವಣ್ಣನವರು ಸ್ಥಾಪಿಸಿದ ಅವೈದಿಕ ಲಿಂಗಾಯತ ಧರ್ಮಕ್ಕೆ ಮತಾಂತರ ಹೊಂದಿದವರಾಗಿದ್ದು ಇವರು ಅರ್ಧ ಲಿಂಗಾಯತರು ಎನ್ನುವುದಂತೂ ಸತ್ಯ.
ಕೊನೆಯ ಮಾತು:
ಬಸವಣ್ಣನವರು ಹಿಂದೂ ಧರ್ಮ ತೊರೆದು ಜೀವನ್ಮುಖಿ ಅವೈದಿಕ ಲಿಂಗಾಯತ ಧರ್ಮ ಸ್ಥಾಪಿಸಿಲ್ಲ ಮತ್ತು ಅವರು ಕೇವಲ ಹಿಂದೂ ಧರ್ಮದ ಸುಧಾರಕರು ಎನ್ನುವುದಾದಲ್ಲಿ ಬಸವಣ್ಣನವರ ಧರ್ಮ ಸುಧಾರಣೆಯನ್ನು ಸಹಿಸದೆ ಕಲ್ಯಾಣದಲ್ಲಿ ಸನಾತನಿಗಳು ಮತ್ತು ಆಗಮಿಕ ಶೈವ ಕರ್ಮಟರು ಬಸವಾದಿ ಶಿವಶರಣರ ಹತ್ಯೆ ಮಾಡಿಸಿ ಅವರು ಬರೆದ ವಚನಗಳನ್ನು ಸುಟ್ಟಿದ್ದೇಕೆ?
೨. ಬಸವಣ್ಣನವರು ಬ್ರಾಹ್ಮಣ ಧರ್ಮವನ್ನು ಎಡಗಾಲಿನಲ್ಲಿ ಒದ್ದು ˌ ಅದರ ಧಾರ್ಮಿಕ ಸಂಸ್ಕಾರದ ಲಾಂಛನವಾದ ಜನಿವಾರವನ್ನು ಕಿತ್ತೆಸೆದು ವೈದಿಕ ವ್ಯವಸ್ಥೆಯನ್ನು ದಿಕ್ಕರಿಸಿ ಹೊರಬಂದಿದ್ದೇಕೆ?
ಈ ಪ್ರಶ್ನೆಗಳಿಗೆ ವೀರಶೈವ ಆರಾಧ್ಯ ಆಗಮಿಕರಲ್ಲಾಗಲಿ ಅವರಿಗೆ ಕುಮ್ಮಕ್ಕು ನೀಡುತ್ತಿರುವ ವೈದಿಕರಲ್ಲಾಗಲಿ ವಿತಂಡವಾದದ ಹೊರತು ಸೂಕ್ತ ಉತ್ತರಗಳಿಲ್ಲ. ಇವರು ಬಸವಾನುಯಾಯಿಗಳೊಂದಿಗೆ ಯಾವುದೆ ತಾರ್ಕಿಕ ಚರ್ಚೆ ಮಾಡಲಾರರು ಮತ್ತು ಅದಕ್ಕೆ ಅಗತ್ಯವಿರುವ ಐತಿಹಾಸಿಕ ಆಧಾರಗಳನ್ನು ಒದಗಿಸಲಾರರು. ಸಾಹಿತ್ಯದ ಗಂಧಗಾಳಿˌ ಹಿನ್ನೆಲೆ ಯಾವೊಂದನ್ನು ಹೊಂದಿರದ ಅಜ್ಞಾನಿಗಳುˌ ಅವಿವೇಕಿಗಳು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದರೆ ಏನಾಗಬೇಕೆ ಅದೆ ಇಂದು ಘಟಿಸುತ್ತಿದೆ. ಸಾಹಿತ್ಯ ಪರಿಷತ್ತಿ ಚುನಾವಣೆಯಲ್ಲಿ ಧರ್ಮದ ಉನ್ಮಾದದಲ್ಲಿ ಮತ ಚಲಾಯಿಸಿದ ಪ್ರಜ್ಞಾಹೀನ ಮತದಾರರು ಅಜ್ಞಾನದಿಂದ ನಾವು ಇದೆಲ್ಲವನ್ನು ನೋಡುವಂತಾಗಿದೆ.