ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಪ್ಯಾನ್ ಇಂಡಿಯಾ ಚಿತ್ರ ಕ್ರಾಂತಿ ಚಿತ್ರವು ಈಗಾಗಲೇ ಟೈಟಲ್, ಟೀಸರ್ ಹಾಗೂ ಹಾಡುಗಳ ಮೂಲಕ ಸಾಕಷ್ಟು ಸದ್ದು ಮಾಡುತ್ತಿದೆ.
ಇನ್ನು ಭಾನುವಾರ ಹೊಸಪೇಟೆಯಲಿ ಚಿತ್ರದ ಬೊಂಬೆ ಹಾಡು ಬಿಡುಗಡೆ ಸಮಾರಂಭವನ್ನ ಚಿತ್ರತಂಡ ಹಮ್ಮಿಕೊಳ್ಳಲಾಗಿತ್ತು ಸಮಾರಂಭದ ವೇಳೆ ಅಪ್ಪು ಅಭಿಮಾನಿಗಳು ದರ್ಶನ್ ವಿರುದ್ದ ಆಕ್ರೋಶವನ್ನ ಹೊರಹಾಕಿದ್ದರು ಈ ವೇಳೆ ಕಿಡಿಗೇಡಿಯೋರ್ವ ದರ್ಶನ್ ಮೇಲೆ ಚಪ್ಪಲಿ ಎಸೆದು ವಿಕೃತಿ ಮೆರೆದಿದ್ದಾನೆ. ಇನ್ನು ಈ ಘಟನೆ ಸಾಕಷ್ಟು ಖಂಡನೆ ವ್ಯಕ್ತವಾಗುತ್ತಿದ್ದು ಸ್ಯಾಂಡಲ್ವುಡ್ ಸಿನಿ ಮಂದಿ ದಾಸನ ಬೆನ್ನಿಗೆ ನಿಂತಿದ್ದಾರೆ.
ಒಬ್ಬ ಲೈಟ್ ಬಾಯ್ ನಿಂದ ಇಲ್ಲೀ ತನಕ ಬೆಳೆದು ಬಂದಿರೋ ಹಾದಿ ಅದೆಷ್ಟೋ ಮನಸುಗಳಿಗೆ ಸ್ಪೂರ್ತಿ. ಯಾರಿಗೂ ಗೊತ್ತಾಗದ ರೀತಿ ಮಾಡಿರುವ ಅದೆಷ್ಟೋ ದಾನ ಧರ್ಮಗಳು, ಮೂಕ ಪ್ರಾಣಿಗಳ ಮೇಲಿರುವ ಪ್ರೀತಿ, ರೈತರ ಮೇಲಿನ ಪ್ರೀತಿ, ತನ್ನ ಜೀವನದ ಯಾವುದೇ ಹಂತದಲ್ಲೂ ಕನ್ನಡದ ಬಗ್ಗೆ ಇರುವ ಗೌರವವನ್ನು ಬಿಟ್ಟು ಕೊಡದ ವ್ಯಕ್ತಿ. ನಡೆದ ಘಟನೆ, ಆದ ಅಗೌರವ ಅಪಾರವಾದ ನೋವು ತಂದಿದೆ. ಇದು ಖಂಡನೀಯ ಕೇಡು ತಾಕದ ಮನುಜನ ಹಿಂದೆ ನಾವೆಂದಿಗೂ ಇರುತ್ತೇವೆ ಎಂದು ನಿರ್ಮಾಪಕ ಉಪಾತಿ ಶ್ರೀನಿವಾಸ್ ಘಟನೆಯನ್ನು ಖಂಡಿಸಿದ್ದಾರೆ.

ಹೊಸಪೇಟೆಯಲ್ಲಿ ನಡೆದ ಅಹಿತಕರ ಘಟನೆ ಅಕ್ಷರಶಃ ಖಂಡನೀಯ ರಾಜನಿಗೆ ಇಡೀ ರಾಜ್ಯವೇ ಬಲವಾಗಿರುವಾಗ ಇದೆಲ್ಲ ತೃಣ ನಿಮ್ಮ ಜೊತೆ ನಾವಿದ್ದೇವೆ ಸರ್ ನೀವು ಬಲವಂತ ಕೆಂಡದಿಂದ ಎದ್ದು ಬಂದು ಮಹಾಗ್ನಿಯಾಗಲು ಇಲ್ಲಿ ನಿಮ್ಮ ಅಭಿಮಾನಿಗಳ ಸೈನ್ಯವೇ ನಿಮ್ಮ ಬಲವಾಗಿದೆ ಎಂದು ಗಾಯಕ ಹೇಮಂತ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಬಿರುಗಾಳಿ ಎದುರು ನಗುವಂತ ದೀಪ ನೋವನ್ನು ಮರೆಸೋ ಮಗುವಂತ ರೂಪ.. ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ಎಂದು ನಿರ್ದೇಶಕ ತುರಣ್ ಸುಧೀರ್ ಬರೆದುಕೊಂಡಿದ್ದಾರೆ.
ನಿಮಗೆ ಚಪ್ಪಲಿ ಎಸೆದು ಅವಮಾನ ಮಾಡಿದವರು ಯಾರೇ ಆಗಿರಲಿ, ಅವರಿಗೆ ತಕ್ಕ ಶಿಕ್ಷೆ ಆಗಲೇಬೇಕು. ಭಾಯಿಜಾನ್ ನಿಮ್ಮೊಂದಿಗೆ ನಾವಿದ್ದೇವೆ ಎಂದು ನಟ ನೆನಪಿರಲಿ ಪ್ರೇಮ್ ಘಟನೆಯನ್ನು ಖಂಡಿಸಿ ಟ್ವೀಟ್ ಮಾಡಿದ್ದಾರೆ.
ಒಬ್ಬ ಅಭಿಮಾನಿಯಾಗಿ , ನಿಜಕ್ಕೂ ಹೊಸಪೇಟೆಯ ಘಟನೆ ತುಂಬಾ ನೋವುಂಟು ಮಾಡಿದೆ ನಿಮ್ಮೊಂದಿಗೆ ನಾವಿದ್ದೇವೆ ಎಂದು ನಟಿ ಪ್ರಣೀತಾ ಟ್ವೀಟ್ ಮಾಡಿದ್ದಾರೆ.
ನಟ ಧನ್ವೀರ ಡಿ ಬಾಸ್ ಜೊತೆಗಿರುವ ಫೋಟೋ ಒಂದನ್ನು ಪೋಸ್ಟ್ ಮಾಡಿ ಘಟನೆಯನ್ನು ಖಂಡಿಸಿದ್ದಾರೆ.

ಇದು ಇಡೀ ಚಿತ್ರರಂಗವೇ ತಲೆ ತಗ್ಗಿಸುವಂತ ಸುದ್ದಿ. ಅಂತಹ ಕೃತ್ಯ ಮಾಡಿದವನು ಮತ್ತೊಬ್ಬರ ಅಭಿಮಾನಿಯೆಂಬ ಮಾತಿರಲಿ, ಕನಿಷ್ಟ ಮನುಷ್ಯನೂ ಆಗಿರಲಾರ. ಎಲ್ಲರನ್ನೂ ಪ್ರೀತಿಸುವ ಗುಣ ಎಲ್ಲರಲ್ಲಿಯೂ ಇರುವುದಿಲ್ಲ ನಿಜ, ಆದರೆ ಯಾರನ್ನಾದರೂ ದ್ವೇಷಿಸುವ ಮುನ್ನ ನಾವೆಷ್ಟು ಸರಿ ಇದ್ದೇವೆ ಎಂಬುದನ್ನ ಯೋಚಿಸಬೇಕಾಗುತ್ತದೆ.
ಇದನ್ನೆಲ್ಲಾ ಸಹಿಸಿ ಮತ್ತಷ್ಟು ಗಟ್ಟಿಯಾಗುವ ಶಕ್ತಿ ದರ್ಶನ್ ಸರ್ ಗೆ ಖಂಡಿತಾ ಇದೆ. ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳ ಶ್ರೀರಕ್ಷೆ ಇದೆ. ಅವರ ಅಭಿಮಾನಿಗಳಲ್ಲೊಬ್ಬನಾಗಿ ನಾನು ಅವರೊಂದಿಗಿದ್ದೇನೆ. ಇಂತಹವು ಕನ್ನಡ ನೆಲದಲ್ಲಿ ಮರುಕಳಿಸದಿರಲಿ ಎಂದು ಬೇಡಿಕೊಳ್ಳುತ್ತೇನೆ ಎಂದು ಕಾಮಿಡಿ ಕಿಲಾಡಿ ಖ್ಯಾತಿಯ ಶಿವರಾಜ್.ಕೆ.ಆರ್.ಪೇಟೆ ಬರೆದುಕೊಂಡಿದ್ದಾರೆ.

ಒಬ್ಬ ಲೈಟ್ ಬಾಯ್ ನಿಂದ ಇಲ್ಲೀ ತನಕ ಬೆಳೆದು ಬಂದಿರೋ ಹಾದಿ ಅದೆಷ್ಟೋ ಮನಸುಗಳಿಗೆ ಸ್ಪೂರ್ತಿ. ಯಾರಿಗೂ ಗೊತ್ತಾಗದ ರೀತಿ ಮಾಡಿರುವ ಅದೆಷ್ಟೋ ದಾನ ಧರ್ಮಗಳು, ಮೂಕ ಪ್ರಾಣಿಗಳ ಮೇಲಿರುವ ಪ್ರೀತಿ, ರೈತರ ಮೇಲಿನ ಪ್ರೀತಿ, ತನ್ನ ಜೀವನದ ಯಾವುದೇ ಹಂತದಲ್ಲೂ ಕನ್ನಡದ ಬಗ್ಗೆ ಇರುವ ಗೌರವವನ್ನು ಬಿಟ್ಟು ಕೊಡದ ವ್ಯಕ್ತಿ. ನಡೆದ ಘಟನೆ, ಆದ ಅಗೌರವ ಅಪಾರವಾದ ನೋವು ತಂದಿದೆ. ಇದು ಖಂಡನೀಯ. ಎಲ್ಲರೂ ಮೊದಲು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ರೈತ ಮುಖಂಡ ದರ್ಶನ್ ಪುಟ್ಟಣ್ಣಯ್ಯ ಘಟನೆಯನ್ನು ಖಂಡಿಸಿ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.






