ಮಾಧ್ಯಮಗಳ ಎದುರು ಕ್ಷಮೆ ಕೇಳಿದ್ರಾ ತೂಗುದೀಪ ದರ್ಶನ್..?
ಮಾಧ್ಯಮಗಳಿಗೆ ಹಿಗ್ಗಾಮುಗ್ಗಾ ಬೈದಿದ್ದ ನಟ ದರ್ಶನ್, ಕೆಟ್ಟ ಕೆಟ್ಟ ಪದಗಳನ್ನು ಬಳಸಿದ್ರು ಅನ್ನೋ ಕಾರಣಕ್ಕೆ ಮಾಧ್ಯಮಗಳಲ್ಲಿ ದರ್ಶನ್ ತೂಗುದೀಪ ಅವರ ಬಗ್ಗೆ ಯಾವುದೇ ಸುದ್ದಿಯನ್ನು ಮಾಡದೆ ನಿರ್ಬಂಧ ವಿಧಿಸಲಾಗಿತ್ತು. ಅಂತಿಮವಾಗಿ ಸೋಷಿಯಲ್ ಮೀಡಿಯಾ ಬಳಸಿಕೊಂಡೇ ನಾನು ನನ್ನ ಸಿನಿಮಾ ಪ್ರಚಾರ ಮಾಡ್ತೇನೆ. ಟಿವಿಯವರು ನನಗೆ ಬೇಕಿಲ್ಲ ಎಂದು ಬಹಿರಂಗವಾಗಿಯೇ ಹೇಳಿದ್ದರು. ಪದೇ ಪದೇ ಟಿವಿ ಮೀಡಿಯಾ ಟಾರ್ಗೆಟ್ ಮಾಡಿ ಮಾತನಾಡುತ್ತಲೇ ಇದ್ದರು. ಇದೀಗ ನಟ ದರ್ಶನ್ ಟಿವಿ ಮಾಧ್ಯಮಗಳ ಎದುರು ಮಂಡಿಯೂರಿದ್ರಾ ಅನ್ನೋ ಅನುಮಾನ ಕಾಡುತ್ತಿದೆ. ಮಾಧ್ಯಮ ಕಚೇರಿಗಳಿಗೆ ಪತ್ರವೊಂದು ಬಂದಿದ್ದು, ಈ ಹಿಂದೆ ನಡೆದ ಘಟನೆಗಳಿಗೆ ವಿಷಾಧ ವ್ಯಕ್ತಪಡಿಸುತ್ತೇನೆ. ಇನ್ಮುಂದೆ ಎಲ್ಲರೂ ಒಟ್ಟಾಗಿ ಹೋಗೋಣ ಎಂದು ಬರೆದಿದೆ.

ದರ್ಶನ್ ಬರೆದ ಪತ್ರದ ಸಾರಾಂಶವೇನು..?
75 ವರ್ಷಗಳ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಅಳಿಸಲಾಗದ ಕೆಲವು ವ್ಯಕ್ತಿಗಳು ಮತ್ತು ಕೆಲವು ಹೆಸರುಗಳು ಮಾತ್ರ ಚರಿತ್ರೆಯಲ್ಲಿ ಉಳಿದಿರುತ್ತವೆ. ಆ ಸಾಲಿನಲ್ಲಿ ಡಾ. ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ತೂಗುದೀಪ ಶ್ರೀನಿವಾಸ್, ಬಾಲಕೃಷ್ಣ, ದಿನೇಶ್, ಇವರ ಸಮಕಾಲೀನ ದಿಗ್ಗಜರುಗಳನ್ನು ಕರ್ನಾಟಕದ ಜನರು ಮಚ್ಚಿಕೊಂಡು ಮೆರೆಸಿದರು ಒಪ್ಪುವ ಮಾಧ್ಯಮಗಳು ಮತ್ತು ದೃಶ್ಯ ಮಾಧ್ಯಮಗಳು ಪ್ರೋತ್ಸಾಹಿಸಿರುತ್ತೀರಿ. ಈ ಸಾಲಿನಲ್ಲಿ ಇದ್ದಂತಹ ಕನ್ನಡ ಚಿತ್ರರಂಗ ಮರೆಯಲಾಗದಂತಹ ನಟ ತೂಗುದೀಪ ಶ್ರೀನಿವಾಸ್ ರವರ ಕುಟುಂಬದಿಂದ ಬಂದಂತಹ ಸಣ್ಣ ಕುಡಿ ನಾನು ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದಾಗ ನನ್ನನ್ನು ಆಶೀರ್ವದಿಸಿ ಪ್ರೋತ್ಸಾಹಿಸಿ ಹಲವಾರು ಬಾರಿ ನಾನು ಮಾಡಿರುವ ಪಾತ್ರಗಳ ಬಗ್ಗೆ ವಿಶ್ಲೇಷಣೆ ಮಾಡಿ, ನನ್ನ ಪಾತ್ರದಲ್ಲಿರುವ ತಪ್ಪುಗಳನ್ನು ತಿದ್ದಿ ಹೇಳಿರುವಿರಿ. ನಾನು ಸಹ ಮುಂದಿನ ದಿನಗಳಲ್ಲಿ ಮಾಡಿರುವಂತ ಚಿತ್ರಗಳಲ್ಲಿ ನನ್ನ ಪಾತ್ರಗಳಲ್ಲಿ ಬರುವ ತಪ್ಪುಗಳ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಚಿತ್ರಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಅದೇ ರೀತಿಯಲ್ಲಿ ನಿಜ ಜೀವನದಲ್ಲಿ ಸಹ ಯಾವುದೋ ಒಂದು ಗಳಿಗೆಯಲ್ಲಿ, ಕೆಲವು ಆಚಾತುರ್ಯದಿಂದ ಮಾತನಾಡಿರುತ್ತೇನೆ. ಮಾಧ್ಯಮ ಸಹೋದರರಿಗೆ-ಸಹೋದರಿಯರಿಗೆ ನೋವು ಉಂಟಾಗಿರುವುದರಿಂದ ಅದನ್ನು ನಾನು ವಿಷಾದಿಸುತ್ತೇನೆ. ಜೀವನವೆಂಬುದು ಬಹಳ ಆಮೂಲ್ಯ ಹಾಗೂ ತುಂಬಾ ಚಿಕ್ಕದ್ದು, ಈ ಚಿಕ್ಕ ಸಮಯದಲ್ಲಿ ನಗು ನಗುತಾ ಬಾಳೋಣ. ನನ್ನ ಈ ಭಾವನೆಯನ್ನು ನನ್ನ ಎಲ್ಲಾ ಮಿತ್ರರು ಹಾಗೂ ಅಭಿಮಾನಿಗಳು ಅರ್ಥ ಮಾಡಿಕೊಂಡು ಗೌರವಿಸಬೇಕು ಎಂದು ಮನವಿ ಮಾಡಿದ್ದಾರೆ.

ತಡವಾಯ್ತು.. ಆದರೂ ವಿಶಾಲ ಹೃದಯ ಪ್ರದರ್ಶನ..
ನಟ ದರ್ಶನ್ ಮಾತ್ರವಲ್ಲ ಸಾಕಷ್ಟು ಜನರು ಕೋಪದಲ್ಲಿ ಮಾತನಾಡುವುದು ಸಹಜ. ಆದರೆ ಆಗುವ ತಪ್ಪುಗಳನ್ನು ಅರಿವಾದ ಕೂಡಲೇ ತಿದ್ದಿಕೊಂಡು ಕ್ಷಮೆಯಾಚನೆ ಮಾಡಿದರೆ ಎಲ್ಲವೂ ಸರಿಹೋಗುತ್ತವೆ. ಆದರೆ ದರ್ಶನ್ಗೆ ಹಿತೈಷಿಗಳು ಎನಿಸಿಕೊಂಡರು ಹಾದಿ ತಪ್ಪಿಸಿದರೋ ಏನೋ..? ದರ್ಶನ್ ಟಿಆರ್ಪಿಗಾಗಿ ನನ್ನ ಹಿಂದೆ ಬರುತ್ತಿರಿ. ನನ್ನ ಸುದ್ದಿಗಳನ್ನು ಬಿಟ್ಟರೆ ನಿಮಗೆ ಗತಿ ಇಲ್ಲ ಎನ್ನುವ ರೀತಿ ಮಾತನಾಡಿ ಉರಿಯುವ ಬೆಂಕಿಗೆ ತುಪ್ಪ ಸುರಿಯುವಂತೆ ಮಾಡಿದ್ದರು. ಆದರೆ ಇದೀಗ ತಪ್ಪಿನ ಅರಿವಾಗಿ ತಿದ್ದಿಕೊಂಡಿದ್ದಾರೆ ಎನ್ನಲಾಗ್ತಿದೆ. ದರ್ಶನ್ ತಪ್ಪನ್ನು ತಿದ್ದಿಕೊಳ್ಳುವುದು ತಡವಾಯ್ತು. ಆದರೂ ತಪ್ಪನ್ನು ತಿದ್ದಿಕೊಂಡು ಮುಂದೆ ಸಾಗಬೇಕಾದ ಅನಿವಾರ್ಯತೆ ಇದೆ. ಇದೀಗ ತಪ್ಪನ್ನು ತಿದ್ದಿಗೊಂಡಿದ್ದಾರೆ.

ಮಾಧ್ಯಮಗಳು ದರ್ಶನ್ ಕ್ಷಮೆಯನ್ನು ಮನ್ನಿಸ್ತಾರಾ..?
ದೃಶ್ಯ ಮಾಧ್ಯಮಗಳ ಬಗ್ಗೆ ದರ್ಶನ್ ಮಾತನಾಡಿದ್ದು ಸರಿ ಎಂದು ಹೇಳಲಾಗುವುದಿಲ್ಲ. ಆದರೆ ಕೆಲವೊಮ್ಮೆ ಈ ರೀತಿ ಆಗುತ್ತದೆ. ಎಲ್ಲವನ್ನು ಹಿಂದಕ್ಕೆ ತಳ್ಳಿ ಮುಂದೆ ಸಾಗಬೇಕಾದ ಅನಿವಾರ್ಯತೆ ದರ್ಶನ್ಗೆ ಮಾತ್ರವಲ್ಲ ಎಲ್ಲರಿಗೂ ಇರುತ್ತದೆ. ಅದೇ ರೀತಿ ದೃಶ್ಯ ಮಾಧ್ಯಮಗಳು ದರ್ಶನ್ ಪತ್ರವನ್ನು ಮನ್ನಿಸಬೇಕಿದೆ. ಮುಂದಿನ ದಿನಗಳಲ್ಲಿ ದರ್ಶನ್ರನ್ನು ಕೂಡ ಎಲ್ಲರಂತೆ ಪರಿಗಣಿಸಿ ಸುದ್ದಿ ಮಾಡುವುದು ಉತ್ತಮ. ಕ್ಯಾಮರಾ ಮುಂದೆ ಬಂದು ಕ್ಷಮಾಪಣೆ ಕೇಳಬೇಕು ಎಂದು ಹಠ ಹಿಡಿಯುತ್ತಾರೋ..? ಅಥವಾ ಪತ್ರ ಕ್ಷಮೆಯನ್ನೇ ಒಪ್ಪಿಕೊಳ್ತಾರೋ ಅನ್ನೋ ಕುತೂಹಲ ಉಂಟಾಗಿದೆ.
