ವರುಷಗಳ ಹಿಂದೆ ರಮಣ್ ಸಿಂಗ್ ಛತ್ತೀಸ್ಗಢದ ಮುಖ್ಯಮಂತ್ರಿಯಾಗಿದ್ದಾಗ, ನಕ್ಸಲೀಯರನ್ನು ಎದುರಿಸಲು ‘ಸಲ್ವಾ ಜುಡುಂ’ ಎನ್ನುವ ಕ್ವಾಸಿ, ಖಾಸಗಿ ಭದ್ರತಾ ಪಡೆಗಳನ್ನು ಹುಟ್ಟು ಹಾಕಿದರು. ಬಿಜೆಪಿ ಸರಕಾರವಾದರೂ, ಅಲ್ಲಿನ ಎಲ್ಲಾ ವಿರೋಧ ಪಕ್ಷಗಳೂ ಇದನ್ನು ಬೆಂಬಲಿಸಿದವು. ಕಾಂಗ್ರೇಸ್ನ ಮಹೇಂದ್ರ ಕರ್ಮಾರವರು ಸಲ್ವಾ ಜುಡುಂ ಹುಟ್ಟುಹಾಕುವುದರಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಊರ ಸಾಮಾನ್ಯ ಜನರ ಪಡೆ ಇದು. ಇವರಿಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟು, ಅವರ ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಕೊಟ್ಟು ನಕ್ಸಲೀಯರನ್ನು ಎದುರಿಸಲು ರಚಿಸಿದ ಖಾಸಗಿ ಪೋಲೀಸ್ ಇಲಾಖೆ ಇದು. ಆರಂಭದಲ್ಲಿ ಎಲ್ಲವೂ ಸುಸೂತ್ರವಾಗಿ ನಡೆಯಿತು. ಆದರೆ ದಿನಗಳೆದಂತೆ ನಕ್ಸಲೀಯರಿಗಿಂತಾ ಸಲ್ವಾ ಜುಡುಂ ಸದಸ್ಯರ ಹಾವಳಿ ಹೆಚ್ಚಾಯಿತು. ಕೈಯಲ್ಲಿ ಶಸ್ತ್ರಾಸ್ತ್ರಗಳನ್ನು ಹಿಡಿದುಕೊಂಡು ಯುವಕರು ಹಳ್ಳಿಹಳ್ಳಿಗಳಲ್ಲಿ ದಾಂಧಲೆ ಎಬ್ಬಿಸತೊಡಗಿದರು. ಜನರನ್ನು ಬೆದರಿಸಿ ಸುಲಿಗೆ ಮಾಡಲಾರಂಭಿಸಿದರು. ನಕ್ಸಲರೆಂದು ತಮಗಾಗದವರನ್ನು ಕೊಲ್ಲತೊಡಗಿದರು. ಅದರ ಜೊತೆಗೆ ಕೇವಲ ಸ್ವಲ್ಪ ದಿನಗಳ ತರಬೇತಿ ಪಡೆದ ಯುವಕರು ಕೆಲವೆಡೆ ನಕ್ಸಲೀಯರ ಕೈಗೆ ಸುಲಭ ಬಲಿಯಾದರು.
2005-2007 ರ ನಡುವೆ ಸಲ್ವಾ ಜುಡುಂ ಏನಿಲ್ಲವೆಂದರು 600 ಹಳ್ಳಿಗಳನ್ನು ಸುಟ್ಟು, ಸುಮಾರು 30000 ಜನರು ತಮ್ಮ ಮನೆ, ಆಸ್ತಿಯನ್ನು ಕಳೆದು ನಿರಾಶ್ರಿತರನ್ನಾಗಿ ಮಾಡಿಯೆಂದು ಛತ್ತೀಸ್ಗಢದ ಸರ್ಕಾರಿ ವರದಿಗಳೇ ಹೇಳುತ್ತಿವೆ. ಒಂದೆಡೆ ನಕ್ಸಲೀಯರ ಕಾಟ, ಇನ್ನೊಂದೆಡೆ ಸಲ್ವಾ ಜುಡುಂ ಪಡೆಗಲ ಕಾಟ. ಇವರಿಬ್ಬರ ನಡುವೆ ಸಿಲುಕಿ ನಲುಗಿದ ಸುಮಾರು 1.5 ಲಕ್ಷ ಜನರು ಆಂಧ್ರ ಹಾಗೂ ಇತರೆಡೆ ವಲಸೆ ಹೋದರು. ಸಲ್ವಾ ಜುಡುಂ, ನಕ್ಸಲೀಯರು, ಭದ್ರತಾ ಪಡೆಗಳ ದಾಳಿಯಲ್ಲಿ ಐದಾರು ವರುಷಗಳಲ್ಲಿ 800 ನಕ್ಸಲೀಯರು, ಪೋಲೀಸರು ಹಾಗೂ ಸಾಮಾನ್ಯ ಜನರು ಕೊಲ್ಲಲ್ಪಟ್ಟರೆಂದು ಸುಪ್ರೀಂ ಕೋರ್ಟಿಗೆ ಸಲ್ಲಿಸಲಾದ ವರದಿಯೊಂದು ಹೇಳಿತು.
ಕೊನೆಗೆ ಸಲ್ವಾ ಜುಡುಂ ಅನ್ನು ಜುಲೈ 5, 2011 ರಂದು ಸುಪ್ರೀಂ ಕೋರ್ಟು ಅಸಾಂವಿಧಾನಿಕ ಎಂದು ಘೋಷಿಸಿ, ಅದನ್ನು ವಿಸರ್ಜಿಸುವಂತೆ ಛತ್ತೀಸ್ಗಢದ ಸರ್ಕಾರಕ್ಕೆ ಆದೇಶಿಸಿತು. ಸಲ್ವಾ ಜುಡುಂನ ಸದಸ್ಯರಿಗೆ ಕೊಟ್ಟ ಶಸ್ತ್ರಾಸ್ತ್ರಗಳನ್ನು ವಾಪಾಸ್ ಪಡೆಯುವಂತೆಯೂ ಸೂಚಿಸಿತು. ಆದರೆ ಶಸ್ತ್ರಾಸ್ತ್ರ ಪಡೆದುಕೊಂಡ ಅನೇಕ ಸಲ್ವಾ ಜುಡುಂ ಸದಸ್ಯರ ಕೈಯಿಂದ ಶಸ್ತ್ರಾಸ್ತ್ರಗಳು ಎಂದೂ ವಾಪಾಸ್ ಬರಲೇ ಇಲ್ಲ. ಕೊನೆಗೆ ಸಲ್ವಾ ಜುಡುಂನ ಕಾರ್ಯಾಚರಣೆಗಳಲ್ಲಿ ಪ್ರಮುಖ ಪಾತ್ರ ವಹಿಸಿದ ಮಹೇಂದ್ರ ಕರ್ಮಾರನ್ನು, ಇತರ ಕಾಂಗ್ರೇಸ್ ನಾಯಕರೊಂದಿಗೆ ನಕ್ಸಲೀಯರು 2013 ಕೊಂದರು. ಕಾಂಗ್ರೇಸ್ ನಾಯಕರು ಅಂದು ನಕ್ಸಲೀಯರ ಕೈಯಲ್ಲಿ ಸಿಲುಕಲು ಸಲ್ವಾ ಜುಡುಂನ ಮಾಜಿ ಸದಸ್ಯರ ಕೈವಾಡವಿತ್ತು ಎನ್ನುವುದು ಇವತ್ತಿಗೂ ಹಲವರ ವಾದ.
ಈ ಕಾನೂನುಬಾಹೀರ ಹಾಗೂ ಅಸಾಂವಿಧಾನಿಕ ಸಲ್ವಾ ಜುಡುಂ ಬಗ್ಗೆ ಯಾಕೆ ಬರೆಯಬೇಕಾಯಿತೆಂದ್ರೆ ನಿನ್ನೆ ಕೇಂದ್ರ ಸರಕಾರ ಘೋಷಿಸಿರುವ ‘ಅಗ್ನಿಪಥ್’ ಭದ್ರತಾ ಪಡೆಗಳ ಯೋಜನೆ ಈ ಸಲ್ವಾ ಜುಡುಂ ಅನ್ನು ಬಹಳಷ್ಟು ಹೋಲುತ್ತದೆ. ಸಲ್ವಾ ಜುಡುಂ ನಂತೆ ಇಲ್ಲೂ ಸಾಮಾನ್ಯ ಯುವಕರನ್ನು ಸೇರಿಸಿ, ಅವರಿಗೆ ಶಸ್ತ್ರಾಸ್ತ್ರ ತರಬೇತಿ ಕೊಟ್ಟು, ಅವರ ಕೈಯಲ್ಲಿ ಶಸ್ತ್ರಾಸ್ತ್ರ ಕೊಟ್ಟು, ಅವರನ್ನು ಸೈನಿಕರೆಂದು ಕಾರ್ಯಾಚರಣೆಗೆ ಬಿಡಲಾಗುವುದು. ಇವರು ಪೂರ್ಣ ಪ್ರಮಾಣದಲ್ಲಿ ಭಾರತೀಯ ಸೇನೆಯ ಸದಸ್ಯರೂ ಅಲ್ಲ ಇತ್ತ ಕಡೆ ಸಾಮಾನ್ಯ ನಾಗರಿಕರೂ ಅಲ್ಲ. ನಿಜ ಹೇಳಬೇಕೆಂದರೆ ಶಸ್ತ್ರಾಸ್ತ್ರ ತರಬೇತಿ ಪಡೆದು, ಶಸ್ತ್ರಾಸ್ತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ತಿರುಗಾಡುವ ಮಂದಿ ಇವರು. ಇವರ ಸೇವಾ ಅವಧಿ ಕೇವಲ ನಾಲ್ಕು ವರುಷ. ಹಾಗಾಗಿ ಪ್ರತೀ ವರುಷ ಈ ಅರೆ-ಭದ್ರತಾ ಪಡೆಯ 75% ಮಂದಿ ಸೇವೆಯಿಂದ ನಿವೃತ್ತರಾಗಲಿದ್ದಾರೆ. ಇನ್ನೊಂದು ಮಾತಲ್ಲಿ ಹೇಳುವುದಾದರೆ ಪ್ರತೀ ವರುಷ ಸುಮಾರು 35000 ಮಂದಿ ಶಸ್ತ್ರಾಸ್ತ್ರ ತರಬೇತಿ ಪಡೆದ, trained-to-kill ಯುವಕರು ನಿರುದ್ಯೋಗಿಗಳಾಗಲಿದ್ದಾರೆ. ಇವರಿಗೆ ತಕ್ಷಣಕ್ಕೆ ಬೇರೆ ಉದ್ಯೊಗ ಸಿಗದೇ ಇದ್ದರೆ ಅಥವಾ ಅವರದ್ದೇ ಆದ ಇತರ ಕಾರಣಗಳ ಕಾರಣಕ್ಕೆ, ವ್ಯಯಕ್ತಿಕ ದ್ವೇಷ, ಧಾರ್ಮಿಕ ದ್ವೇಷದ ಕಾರಣಕ್ಕೆ ಇಂಥ ಶಸ್ತ್ರಾಸ್ತ್ರ ತರಬೇತಿ ಪಡೆದ ಯುವಕರು ಏನೆಲ್ಲಾ ಮಾಡಿಯಾರು ಎಂದು ಎಣಿಸಿದರೆ ಒಮ್ಮೆ ಮೈ ನಡುಗುತ್ತದೆ. ಅನೇಕ ನಿವೃತ್ತ ಸೇನಾಧಿಕಾರಿಗಳು, ಸೈನಿಕರು ಇದನ್ನೇ ಹೇಳಿದ್ದಾರೆ. ಆದರೆ ಎಂದಿನಂತೆ ಯಾರಿಗೂ ಕ್ಯಾರೇ ಅನ್ನದ ಸರಕಾರ ಈ ಯೋಜನೆಯನ್ನು ಬಹಳ ದೊಡ್ಡ, ಮಹತ್ವಾಕಾಂಕ್ಷಿ ಯೋಜನೆ ಎಂದು ಬಿಂಬಿಸುತ್ತಿದೆ. ಅದಕ್ಕೆ ಅವರ ಬಿಸ್ಕತ್ತು ತಿನ್ನುವ ಮಾಧ್ಯಮಗಳು ಬೆಂಬಲ ಕೊಡುತ್ತಿವೆ.
ಅಂದಹಾಗೆ ಈ ಅಗ್ನಿಪಥ್ ಯೋಜನೆಗೆ ಕಾರಣ? ಪ್ರತೀವರುಷ ಭಾರತೀಯ ಸೈನಿಕರ ಸಂಬಳ, ಭತ್ತೆ, ಅವರ ಪಿಂಚಣಿ ಎಂದು ಸರಕಾರದ ಬೊಕ್ಕಸಕ್ಕೆ ದೊಡ್ಡ ಪೆಟ್ಟು ಬೀಳುತ್ತಿದೆಯಂತೆ. ಅದನ್ನು ತಪ್ಪಿಸಲು ಈ short-term ಪ್ಲ್ಯಾನ್. ಅಂದರೆ ಸೈನಿಕರಿಗೆ ಏನು ಕೊಡಬೇಕೋ, ಅವರಿಗೆ ಅವರ ಸೇವಾವಧಿಗೆ ಏನು ಸಿಗಬೇಕೋ ಅದನ್ನು ತಪ್ಪಿಸಲು, ಇಂಥದೊಂದು ಯೋಜನೆ. ಇದು ಈ ಸರ್ಕಾರಕ್ಕೆ ಸೈನಿಕರು ಹಾಗೂ ಸೇನೆಯ ಬಗ್ಗೆ ಇರುವ ಕಾಳಜಿ. ರಾಜ್ಯ ಸರಕಾರವೇ ಹುಟ್ಟು ಹಾಕಿದ ಸಲ್ವಾ ಜುಡುಂ ಮುಂದೊಂದು ದಿನ ಕಾನೂನುಬಾಹಿರ ಹಾಗೂ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟು ಘೋಷಿಸಬೇಕಾಯಿತು. ಈಗ ಈ ಅಗ್ನಿಪಥ್ ಹಾಗೂ ಅಗ್ನಿವೀರರನ್ನು ಅದೇಗೆ ಸಾಂವಿಧಾನಿಕಗೊಳಿಸುತ್ತಾರೆಂದು ನೋಡಬೇಕು.
ಒಟ್ಟಾರೆಯಾಗಿ ಸೈನಿಕರ ಹಾಗೂ ಸೇನೆಯ ಮೇಲೆ ಖರ್ಚಾಗುತ್ತಿರುವ ದುಡ್ಡುಳಿಸಲು, ಒಕ್ಕೂಟ ಸರ್ಕಾರ ಪ್ರತೀ ವರುಷ 46000 ಯುವಕರಿಗೆ ಸೇನಾ ತರಬೇತಿ ಕೊಟ್ಟು, ಹೀಗೆ ಶಸ್ತ್ರಾಸ್ತ್ರ ತರಬೇತಿ ಪಡೆದ, 35000 trained-to-kill ಯುವಕರನ್ನು ಪ್ರತೀ ವರುಷ ನಿರುದ್ಯೋಗಿಗಳನ್ನಾಗಿ ಮಾಡಲಿದೆ. ಒಂದು ನಾಗರಿಕ ಸಮಾಜ ಇದನ್ನು ಯಾವ ನೆಲೆಯಲ್ಲಿ ಒಪ್ಪಿಕೊಂಡರೂ, ಇದೊಂದು ಬಹಳ ಅಪಾಯಕಾರಿ ನಡೆಯಾಗಲಿದೆ. ಇದು ಭಾರತೀಯ ನಾಗರಿಕ ಸೇವೆಗೆ lateral entry ಮಾಡಿ ಅಧಿಕಾರಿಗಳನ್ನು ನೇಮಿಸಿದಂತೆ, ಭಾರತೀಯ ಸೇನೆಗೆ lateral entry ಮೂಲಕ ತಮಗೆ ಬೇಕಾದವರನ್ನು ನೇಮಿಸುವ ಯೋಜನೆ. ಈಗಾಗಲೇ ಧಾರ್ಮಿಕವಾದವನ್ನು ನೆತ್ತಿಗೇರಿಸಿಕೊಂಡಿರುವ ಯುವಕರು ಇದನ್ನು ಸೇರಿ ಶಸ್ತ್ರಾಸ್ತ್ರ ತರಬೇತಿ ಪಡೆದು ನಾಲ್ಕು ವರುಷಗಳಲ್ಲಿ ಬೀದಿಗಿಳಿದಾಗ ಅವರೇನು ಮಾಡಬಲ್ಲರೆಂದು ಒಮ್ಮೆ ಯೋಚಿಸಿ.
ಅಮೇರಿಕಾದಲ್ಲಿ ಬೇಕಾಬಿಟ್ಟಿಯಾಗಿ ಶಸ್ತ್ರಾಸ್ತ್ರ ಲೈಸೆನ್ಸ್ ವಿತರಿಸಿ, ಯಾರೂ ಹಾಗೂ ಎಲ್ಲರೂ ಶಸ್ತ್ರಾಸ್ತ್ರ ಖರೀದಿಸಲು ಅನುವು ಮಾಡಿಕೊಟ್ಟು ಏನಾಗಿದೆಯೆಂದು ನಾವು ದಿನನಿತ್ಯ ನೋಡುತ್ತಿದ್ದೇವೆ. ಆದರೂ ಪಾಠ ಕಲಿತಂತಿಲ್ಲ. We are not just inviting danger but are feeding and nourishing danger!