• Home
  • About Us
  • ಕರ್ನಾಟಕ
Tuesday, October 14, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ

ಸಂಸ್ಕೃತಿ ವಾಹಕ ಮಹಿಳೆಯೇ ಶೋಷಿತಳೂ ಹೌದು! : ನಾ ದಿವಾಕರ ಅವರ ಬರಹ

Any Mind by Any Mind
December 26, 2023
in ಅಂಕಣ, ಅಭಿಮತ
0
ಸಂಸ್ಕೃತಿ ವಾಹಕ ಮಹಿಳೆಯೇ ಶೋಷಿತಳೂ ಹೌದು! : ನಾ ದಿವಾಕರ ಅವರ ಬರಹ
Share on WhatsAppShare on FacebookShare on Telegram

ADVERTISEMENT

ಒಲಂಪಿಕ್‌ ಪದಕ ವಿಜೇತ ಕುಸ್ತಿಪಟು ಸಾಕ್ಷೀ ಮಲ್ಲಿಕ್‌ ಪತ್ರಿಕಾಗೋಷ್ಠಿಯೊಂದರಲ್ಲಿ ತಮ್ಮ ಬೂಟುಗಳನ್ನು ಕಳಚಿಟ್ಟು ಕಂಬನಿ ಮಿಡಿದ ದೃಶ್ಯ ಇಡೀ ದೇಶವನ್ನು, ಅಂದರೆ ಸಾಮಾಜಿಕಪ್ರಜ್ಞೆ ಜೀವಂತವಾಗಿರುವ ಭಾರತವನ್ನು ಮಾತ್ರ , ಆತ್ಮಾವಲೋಕನಕ್ಕೆ ದೂಡಿದೆ ಎನ್ನಬಹುದು. ಕಳೆದ ಒಂದು ವರ್ಷದಿಂದ ಭಾರತೀಯ ಮಹಿಳಾ ಕುಸ್ತಿಪಟುಗಳು ತಮ್ಮ ಮೇಲೆ ನಡೆದಿರುವ ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಲೇ ಇದ್ದು, ಈವರೆಗೂ ಅಂತಿಮ ನ್ಯಾಯದ ಛಾಯೆಯೂ ಸುಳಿಯದಿರುವುದನ್ನು ಗಮನಿಸಿದಾಗ, ಸಾಕ್ಷೀ ಮಲ್ಲಿಕ್‌ ಅವರ ಈ ಪ್ರತಿರೋಧ ಮತ್ತಷ್ಟು ಕಾವು ಪಡೆದುಕೊಳ್ಳುತ್ತದೆ. ಲೈಂಗಿಕ ದೌರ್ಜನ್ಯಗಳ ಆರೋಪ ಹೊತ್ತಿರುವ ಬಿಜೆಪಿ ಸಂಸದ ಹಾಗೂ ಭಾರತೀಯ ಕುಸ್ತಿ ಫೆಡರೇಷನ್‌ನ ಮಾಜಿ ಅಧ್ಯಕ್ಷ ಬ್ರಿಜ್‌ ಭೂಷಣ್‌ ಶರಣ್‌ ಸಿಂಗ್‌ ಅವರ ಆಪ್ತ ಸಂಜಯ್‌ ಸಿಂಗ್‌ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದನ್ನು ವಿರೋಧಿಸಿ ಸಾಕ್ಷೀ ಮಲ್ಲಿಕ್‌ ಕ್ರೀಡೆಯಿಂದಲೇ ನಿವೃತ್ತಿ ಘೋಷಿಸಿ, ಬೂಟುಗಳನ್ನು ಕಳಚಿಡುವ ಮೂಲಕ ತಮ್ಮ ಯಾತನೆಯನ್ನು ಪ್ರಕಟಪಡಿಸಿದ್ದಾರೆ.

ಒಂದು ವರ್ಷದ ಕಾಲ ನಡೆದ ಐತಿಹಾಸಿಕ ರೈತ ಮುಷ್ಕರದ ಸಂದರ್ಭದಲ್ಲಿ ರೈತ ನಾಯಕನ ಕಂಬನಿ ಸರ್ಕಾರವನ್ನು ನಿದ್ರಾವಸ್ಥೆಯಿಂದ ಜಾಗೃತಗೊಳಿಸಿದಂತೆಯೇ ಸಾಕ್ಷೀ ಮಲಿಕ್‌ ಅವರ ಕಂಬನಿಯೂ ಎಚ್ಚರಿಸಿದೆ. ಕೇಂದ್ರ ಸರ್ಕಾರ ತ್ವರಿತ ಕ್ರಮ ಕೈಗೊಂಡು ಒಕ್ಕೂಟವನ್ನೇ ಅಮಾನ್ಯಗೊಳಿಸಿದೆ. ಆದರೆ ಮಹಿಳಾ ಕುಸ್ತಿ ಪಟುಗಳ ಹೋರಾಟ ಇರುವುದು ಫೆಡರೇಷನ್‌ ವಿರುದ್ಧ ಅಲ್ಲ, ಅದನ್ನು ನಿರ್ವಹಿಸುತ್ತಿದ್ದ ಪ್ರಭಾವಿ ವ್ಯಕ್ತಿಯ ವಿರುದ್ಧ. ಆರೋಪಿ ಸ್ಥಾನದಲ್ಲಿ ನಿಂತಿರುವ ಬ್ರಿಜ್‌ ಭೂಷಣ್‌ ವಿರುದ್ಧ ಬಿಜೆಪಿ ಯಾವುದೇ ಶಿಸ್ತು ಕ್ರಮ ಜರುಗಿಸಿಲ್ಲ. ಚೆಂಡು ನ್ಯಾಯಾಂಗದ ಅಂಗಳದಲ್ಲಿರುವುದರಿಂದ, ನೊಂದ ಮಹಿಳಾ ಕುಸ್ತಿಪಟುಗಳು ನ್ಯಾಯ ದೇವತೆ ಕಣ್ತೆರೆಯುವುದರ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಪ್ರಶ್ನೆ ಇರುವುದು ಒಬ್ಬ ಸಾಕ್ಷೀ ಮಲ್ಲಿಕ್‌ ಅಥವಾ ಒಬ್ಬ ಬ್ರಿಜ್‌ ಭೂಷಣ್‌ ಅಲ್ಲ. ಸಾಕ್ಷೀ ಮಲ್ಲಿಕ್‌ ಕಳಚಿಟ್ಟ ಬೂಟುಗಳು ಹಾಗೂ ಆಕೆ ಸುರಿಸಿದ ಕಂಬನಿಯ ಹಿಂದೆ ಲಕ್ಷಾಂತರ ನೊಂದ ಹೆಣ್ಣುಮಕ್ಕಳ ಆಂತರಿಕ ವೇದನೆ-ಆತ್ಮ ನಿವೇದನೆ ಇರುವುದನ್ನು ಭಾರತೀಯ ಸಮಾಜ ಗುರುತಿಸಬೇಕಿದೆ.

ಪ್ರಾತಿನಿಧ್ಯ ಮತ್ತು ಲಿಂಗ ಸೂಕ್ಷ್ಮತೆ

ಮಹಿಳೆಯರಿಗೆ ರಾಜಕೀಯ ಪ್ರಾತಿನಿಧ್ಯ ನೀಡುವ ಮೂಲಕ ತಮ್ಮ ಮಹಿಳಾ ಪರ ಅಥವಾ ಲಿಂಗ ಸೂಕ್ಷ್ಮತೆಯ ಸಕಾರಾತ್ಮಕ ಮುಖವನ್ನು ತೋರಿಸುವ ರಾಜಕೀಯ ಪಕ್ಷಗಳಿಗೆ ಲಿಂಗ ಸೂಕ್ಷ್ಮತೆ-ಸಂವೇದನೆಯ ಮೂಲ ಸತ್ವ ಇರುವುದು ನಮ್ಮ ಸಮಾಜದ ನಡವಳಿಕೆಗಳಲ್ಲಿ, ಸಾಂಸ್ಕೃತಿಕ ಆಚರಣೆಗಳಲ್ಲಿ, ಧಾರ್ಮಿಕ ಅನುಸರಣೆಗಳಲ್ಲಿ ಎನ್ನುವ ವಾಸ್ತವ ಇನ್ನೂ ಅರ್ಥವಾಗದಿರುವುದು ದುರಂತ. ನಿತ್ಯ ಜೀವನದಲ್ಲಿ ಮಹಿಳೆ ಅನುಭವಿಸುವ ಈ ಆಚರಣಾತ್ಮಕ ನಡವಳಿಕೆಗಳಲ್ಲೇ, ಸಾಂಪ್ರದಾಯಿಕವಾಗಿ ವಿಧಿಸಲ್ಪಡುವ ಕಟ್ಟುಪಾಡುಗಳಲ್ಲೇ ಲಿಂಗ ಸೂಕ್ಷ್ಮತೆ ಇಲ್ಲದಿರುವುದನ್ನು ಗಮನಿಸದೆ ಹೋದರೆ, ಸಬಲೀಕರಣ-ಸಮಾನತೆ ಮುಂತಾದ ಸುಂದರ ಪದಗಳು ಕೇವಲ ಅಲಂಕಾರಿಕವಾಗುತ್ತವೆ. ಅಥವಾ Peripheral ಎನಿಸಿಕೊಳ್ಳುತ್ತವೆ. ಸಾಕ್ಷೀ ಮಲ್ಲಿಕ್‌ ಪ್ರಸಂಗಕ್ಕೆ ಮಹಿಳಾ ರಾಜಕಾರಣಿಗಳು ಮೂಕ ಪ್ರೇಕ್ಷಕರಂತಿರುವುದು, ಬಿಲ್ಕಿಸ್‌ ಬಾನೋ ಪ್ರಕರಣದ ಮೌನ ಸಮ್ಮತಿಯಂತೆಯೇ ಕಾಣುತ್ತದೆ.. ಕುಸ್ತಿ ಫೆಡರೇಷನ್‌ ಅಮಾನ್ಯಗೊಳಿಸುವ ನಿರ್ಧಾರ ಕೈಗೊಳ್ಳುವ ಸರ್ಕಾರಕ್ಕೆ, ನೊಂದು ಕಣ್ಣೀರಿಟ್ಟ ಹೆಣ್ಣು ಮಗಳಿಗೆ ಸಾಂತ್ವನ ಹೇಳುವಷ್ಟು ವ್ಯವಧಾನವೂ ಇಲ್ಲದಿರುವುದು, ನಮ್ಮನ್ನಾಳುತ್ತಿರುವ ಪಿತೃಪ್ರಧಾನ ವ್ಯವಸ್ಥೆಯ ಮನಸ್ಥಿತಿಯನ್ನು ತೋರುತ್ತದೆ. ಕೇಂದ್ರದಲ್ಲಿ ಎರಡು ಪ್ರಮುಖ ಸಚಿವ ಖಾತೆಗಳನ್ನು ಅಲಂಕರಿಸಿರುವ ಮಹಿಳಾ ಸಂಸದರಿಗೆ ಈ ಹೆಣ್ಣು ಮಗಳ ಆತ್ಮನಿವೇದನೆ ತಟ್ಟದಿರುವುದಕ್ಕೆ ಕಾರಣ ಅವರನ್ನು ಆವರಿಸಿರುವ ಅಧಿಕಾರ ರಾಜಕಾರಣದ ಪುರುಷಾಧಿಪತ್ಯದ ರಕ್ಷಣಾ ಕವಚಗಳು.

ಈ ನಡುವೆಯೇ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಿಜಾಬ್‌ ನಿಷೇಧವನ್ನು ಹಿಂಪಡೆಯಲು ಸರ್ಕಾರ ಆಲೋಚನೆ ಮಾಡುತ್ತಿರುವುದಾಗಿ ಹೇಳಿರುವುದು, ಹಿಜಾಬ್‌ ವಿವಾದವನ್ನು ಮತ್ತೊಮ್ಮೆ ರಾಜಕೀಯ ಮೇಲಾಟದ ವಸ್ತುವನ್ನಾಗಿ ಮಾಡಿದೆ. ವಾಸ್ತವದಲ್ಲಿ ಮುಸ್ಲಿಂ ಮಹಿಳೆಯರು ಧರಿಸುವ ಹಿಜಾಬ್‌ ಮಹಿಳಾ ಸಮಸ್ಯೆಯಲ್ಲ. ಬದಲಾಗಿ ಅದು ಪುರುಷ ಸಮಾಜವು ನಿರ್ದೇಶಿಸುವ ಮತೀಯವಾದ, ಮತಾಂಧತೆ ಹಾಗೂ ಅನ್ಯಮತ ದ್ವೇಷ ರಾಜಕಾರಣದ ಸಮಸ್ಯೆ. ಶಾಲಾ ಕಾಲೇಜಿಗೆ ಹೋಗುವ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್‌ ಧರಿಸುವುದು ಶೈಕ್ಷಣಿಕ ಸಮಸ್ಯೆಯೂ ಅಲ್ಲ. ಅದು ಬಾಹ್ಯ ಸಮಾಜ ತನ್ನ ಸ್ವಾರ್ಥಕ್ಕಾಗಿ ಸೃಷ್ಟಿಸಿದಂತಹ ಸಮಸ್ಯೆ. ವಿದ್ಯಾರ್ಜನೆಗಾಗಿ ಬರುವ ಮಕ್ಕಳು ಅವರ ಜನ್ಮ ಜಾತಕಗಳನ್ನು ಮರೆತು, ಮತನಿರಪೇಕ್ಷತೆಯಿಂದ, ಧಾರ್ಮಿಕ ಕಟ್ಟಳೆಗಳನ್ನು ಮೀರಿ, ಪರಸ್ಪರ ಅರಿತುಕೊಳ್ಳುವ ಪ್ರಕ್ರಿಯೆಯಲ್ಲಿ, ಎಲ್ಲರೊಡನೊಂದಾಗಿ ಕಲಿಕೆಯಲ್ಲಿ ತೊಡಗುವುದು ಸಹಜವೂ, ಅಪೇಕ್ಷಣೀಯವೂ ಹೌದು. ಆದರೆ ಆ ಮಕ್ಕಳ ಮನಸ್ಸುಗಳಲ್ಲೂ ಧರ್ಮದ ಅಮಲು ತುಂಬುವ ಒಂದು ಪ್ರಕ್ರಿಯೆಯಾಗಿ ಹಿಜಾಬ್‌ ವಿವಾದವನ್ನು ಕಾಣಬಹುದು.

ಬದಲಾದ ಭಾರತದಲ್ಲಿ ಮತಶ್ರದ್ಧೆ ಹಾಗೂ ಧಾರ್ಮಿಕ ನಂಬಿಕೆಗಳು ರಾಜಕೀಯ ಆಯಾಮ ಪಡೆದುಕೊಂಡಿರುವುದರಿಂದ ನಿರ್ದಿಷ್ಟ ಧರ್ಮಗಳನ್ನು ಬಿಂಬಿಸುವಂತಹ ಚಿಹ್ನೆಗಳು, ಲಾಂಛನಗಳು ಹಾಗೂ ಸಂಕೇತಗಳು ಪ್ರಾಥಮಿಕ ಹಂತದಿಂದಲೇ ಶಾಲಾ ವಲಯಗಳನ್ನೂ ಪ್ರವೇಶಿಸಿವೆ. ಆದರೆ ಈ ಧಾರ್ಮಿಕ ಅನುಸರಣೆಯ ಅಭಿವ್ಯಕ್ತಿಗೆ ಬಳಸಲಾಗುವ ಚಿಹ್ನೆಗಳನ್ನು ಹೆಣ್ಣುಮಕ್ಕಳಲ್ಲಿ ಮಾತ್ರವೇ ಗುರುತಿಸುವ ಮೂಲಕ ಪಿತೃಪ್ರಧಾನ ವ್ಯವಸ್ಥೆ, ಬಾಹ್ಯ ಸಮಾಜದಲ್ಲಿ ಕಾಣುವಂತೆಯೇ, ಮಹಿಳಾ ಸಂಕುಲವನ್ನು ಸಂಸ್ಕೃತಿ ವಾಹಕರನ್ನಾಗಿ, ಧರ್ಮ ರಕ್ಷಕರನ್ನಾಗಿ ಕಾಣಲು ಬಯಸುತ್ತದೆ. ಶಾಲೆ ಕಾಲೇಜುಗಳಲ್ಲಿ ಬಾಲಕರು ಧರಿಸುವ ಧಾರ್ಮಿಕ ಸಂಕೇತಗಳಿಗಿಂತಲೂ ಹೆಣ್ಣುಮಕ್ಕಳು ಧರಿಸುವ ಲಾಂಛನಗಳು ಹೊರ ಸಮಾಜದ ಧರ್ಮನಿಷ್ಠರನ್ನು, ಸಂಸ್ಕೃತಿ ರಕ್ಷಕರನ್ನು ಕಾಡುವುದು ಇದನ್ನೇ ಸೂಚಿಸುವಂತಿದೆ.

ಪಿತೃಪ್ರಧಾನತೆಯ ವ್ಯಾಪಕತೆ

ಪಿತೃಪ್ರಧಾನ ಧೋರಣೆ ಹೇಗೆ ಸ್ಥಾಪಿತ ಮತಾಚರಣೆ ಹಾಗೂ ಧಾರ್ಮಿಕ ನಂಬಿಕೆ-ನಡವಳಿಕೆಗಳನ್ನು ನಿರ್ದೇಶಿಸುತ್ತದೆ ಎನ್ನುವುದಕ್ಕೆ ಹಿಜಾಬ್‌ ವಿವಾದ ಒಂದು ನಿದರ್ಶನವಾದರೆ, ಮತ್ತೊಂದು ಬದಿಯಲ್ಲಿ ಹೆಣ್ಣು ಮಕ್ಕಳು ಧರಿಸುವ ಆಧುನಿಕ/ಪಾಶ್ಚಿಮಾತ್ಯ ಉಡುಪುಗಳೂ ಸಹ ಮೂಲಭೂತವಾದಿಗಳ ಕೆಂಗಣ್ಣಿಗೆ ಗುರಿಯಾಗುವುದು ಮತ್ತೊಂದು ಆಯಾಮ. ಮೂಲತಃ ಹಿಜಾಬ್‌ ವಿವಾದ ಸೃಷ್ಟಿಯಾದದ್ದು ಶಾಲೆ ಕಾಲೇಜು ಅಂಗಳದಲ್ಲಿ ಅಲ್ಲ. ಬಾಹ್ಯ ಸಮಾಜದಲ್ಲಿ. ಕರಾವಳಿ ಕರ್ನಾಟಕದ ಕೋಮುವಾದೀಕರಣ ಹಾಗೂ ಮತದ್ವೇಷ ರಾಜಕಾರಣದ ಒಂದು ಭಾಗವಾಗಿ ಶಾಲೆಯ ಆವರಣವನ್ನು ಪ್ರವೇಶಿಸಿದ ಸಾಂಸ್ಕೃತಿಕ ರಾಜಕೀಯಕ್ಕೆ ಒಂದು ಪ್ರಬಲ ವಿಭಜಕ ಅಸ್ತ್ರವಾಗಿ ಕಂಡಿದ್ದು ಹೆಣ್ಣುಮಕ್ಕಳು ಧರಿಸುವ ಉಡುಪು. ಶೈಕ್ಷಣಿಕ ವಲಯವನ್ನು ಪ್ರತಿನಿಧಿಸುವವರಲ್ಲಿ ಇರಲೇಬೇಕಾದ ಮಾನವ ಪ್ರೇಮ, ಸಹಬಾಳ್ವೆಯ ಧೋರಣೆ ಹಾಗೂ ಲಿಂಗ ಸೂಕ್ಷ್ಮತೆಗಳನ್ನು ಇಲ್ಲವಾಗಿಸುವ ಮತಾಂಧತೆ ಅಥವಾ ಮತೀಯ ಭಾವನೆಗಳು ವಿದ್ಯಾರ್ಜನೆಯಲ್ಲಿರುವ ಮಕ್ಕಳಲ್ಲೂ ಮತೀಯ ಭಾವನೆಗಳನ್ನು ಸೃಷ್ಟಿಸುವ ಒಂದು ರಾಜಕೀಯ ಪ್ರಕ್ರಿಯೆಗೆ ಬಲಿಯಾದದ್ದು ಶಿಕ್ಷಣದಿಂದಲೇ ವಂಚಿತರಾದ ಸಾವಿರಾರು ಮುಸ್ಲಿಂ ಹೆಣ್ಣುಮಕ್ಕಳು.

ಮುಸ್ಲಿಂ ಸಮುದಾಯದ ಧಾರ್ಮಿಕ ನಾಯಕರಿಗೆ ಶಾಲೆ ಕಾಲೇಜಿಗೆ ಹೋಗುವ ತಮ್ಮ ಹೆಣ್ಣುಮಕ್ಕಳು ಹಿಜಾಬ್‌ ಧರಿಸುವುದು ಧರ್ಮ ಅಥವಾ ಸಂಸ್ಕೃತಿ ರಕ್ಷಣೆಯ ಒಂದು ಭಾಗವಾಗಿ ಕಾಣುತ್ತದೆ. ಆದರೆ ಕೆಲವೇ ವರ್ಷಗಳ ಹಿಂದೆ ಇದೇ ಹೆಣ್ಣುಮಕ್ಕಳು ಹಿಜಾಬ್‌ ಧರಿಸದೆಯೇ ತಮ್ಮ ವಿದ್ಯಾರ್ಜನೆಯನ್ನು ಪೂರೈಸುತ್ತಿದ್ದುದು ಗಮನಕ್ಕೆ ಬರುವುದಿಲ್ಲ. ಆಧುನಿಕ ಮೆಟ್ರೋಪಾಲಿಟನ್‌ ಸಂಸ್ಕೃತಿಯಲ್ಲಿರುವ ಹಿತವಲಯದ, ಮೇಲ್ದಪದರದ ಹೆಣ್ಣುಮಕ್ಕಳು ಹಿಜಾಬ್‌ ಇಲ್ಲದೆಯೇ ಸಾರ್ವಜನಿಕ ಬದುಕಿನಲ್ಲಿ ಒಂದಾಗಿರುವುದನ್ನೂ ಗಮನಿಸಲಾಗುವುದಿಲ್ಲ. ವ್ಯಕ್ತಿ ಸ್ವಾತಂತ್ರ್ಯವೂ ಸಹ ಸಾಮಾಜಿಕ-ಆರ್ಥಿಕ ಅಂತಸ್ತಿನ ಶ್ರೇಣೀಕರಣಕ್ಕೊಳಗಾಗಿ ಭಿನ್ನವಾಗಿರುತ್ತದೆ ಎನ್ನಲು ಇದೊಂದು ನಿದರ್ಶನ. ಆದರೆ ಈ ಸಂಸ್ಕೃತಿ ರಕ್ಷಣೆಯ ನೊಗಭಾರ ಹೊತ್ತು ಶಿಕ್ಷಣದಿಂದಲೇ ವಂಚಿತರಾದ ಸಾವಿರಾರು ಬಡಮುಸ್ಲಿಂ ಹೆಣ್ಣುಮಕ್ಕಳ ಬದುಕಿಗೆ ಯಾರು ಜವಾಬ್ದಾರರು ? ಇದು ಸಂಕೀರ್ಣ ಪ್ರಶ್ನೆಯಾದರೂ ಉತ್ತರ ಶೋಧಿಸಲೇಬೇಕಿದೆ.

ಮತ್ತೊಂದೆಡೆ ಶಾಲಾ ಸಮವಸ್ತ್ರದಲ್ಲಿ ತಾರತಮ್ಯವನ್ನು ವಿರೋಧಿಸುವ ಮೂಲಕ ಸಮಾನತೆಯನ್ನು ಕಾಣಬಯಸುವ ಹಿಂದೂ ಮೂಲಭೂತವಾದಿಗಳಿಗೆ ಸಾಕ್ಷೀ ಮಲ್ಲಿಕ್‌ ಸುರಿಸಿದ ಒಂದೆರಡು ಹನಿ ಕಂಬನಿಯ ಹಿಂದೆ ಅಡಗಿದ್ದ ತಾರತಮ್ಯ, ದೌರ್ಜನ್ಯಗಳು ಏಕೆ ಕಾಣಲಿಲ್ಲ ? ರಾಜಸ್ಥಾನದ ಭವಾರಿ ದೇವಿಯಿಂದ ಸಾಕ್ಷೀ ಮಲ್ಲಿಕ್‌ವರೆಗೆ ಕಾಣಬಹುದಾದ ಒಂದು ಸಮಾನ ಎಳೆ ಎಂದರೆ ದೌರ್ಜನ್ಯ-ಅತ್ಯಾಚಾರ-ತಾರತಮ್ಯಕ್ಕೊಳಗಾದ ಮಹಿಳೆ, ಹಿಂದೂ ಆಗಿರಲಿ, ಮುಸ್ಲಿಂ ಆಗಿರಲೀ, ಅವಳು ತನ್ನ ಮತದ ಸೋಂಕನ್ನು, ಧಾರ್ಮಿಕ ಅಸ್ಮಿತೆಯನ್ನು ಕಳೆದುಕೊಳ್ಳುತ್ತಾಳೆ. ಬಿಲ್ಕಿಸ್‌ ಬಾನೋ ಎಂಬ ಮುಸ್ಲಿಂ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಅಪರಾಧಿಗಳನ್ನು ಸಮ್ಮಾನಿಸುವ ಸಮಾಜವೇ, ಭವಾರಿ ದೇವಿ ಎಂಬ ಅಸಹಾಯಕ ಮಹಿಳೆಯ ಮೇಲೆ ಅತ್ಯಾಚಾರ ನಡೆಸಿದ ವ್ಯಕ್ತಿಗಳನ್ನೂ ಮೌನವಾಗಿ ಸಮ್ಮಾನಿಸುತ್ತದೆ. ಇದೇ ಸಮಾಜವೇ ಸಾಕ್ಷೀ ಮಲ್ಲಿಕ್‌ ಮತ್ತು ಆಕೆಯ ಸಹವರ್ತಿಗಳ ಮೇಲೆ ನಡೆದ ದೌರ್ಜನ್ಯವನ್ನೂ ಮೌನವಾಗಿ ಸಹಿಸಿಕೊಳ್ಳುತ್ತದೆ.

ಹೆಣ್ತನದ ಘನತೆ ಮತ್ತು ಸಂಸ್ಕೃತಿ ರಕ್ಷಣೆ

ಮಣಿಪುರದಿಂದ ಬೆಳಗಾವಿಯವರೆಗೆ ಮಹಿಳೆಯ ಘನತೆಯ ಮೇಲೆ ನಡೆಯುವ ಅಮಾನುಷ ಹಲ್ಲೆ ಹಾಗೂ ಪ್ರಹಾರಗಳನ್ನು, ಬೆತ್ತಲೆಗೊಳಿಸುವ ಪಾಶವೀ ಕೃತ್ಯಗಳನ್ನು, ಸಾಮೂಹಿಕ ಅತ್ಯಾಚಾರಗಳನ್ನು ಪ್ರಶ್ನಿಸುವ ವಿವೇಚನೆಯನ್ನೂ ಅಧಿಕಾರ ರಾಜಕಾರಣ ಕಸಿದುಕೊಳ್ಳುತ್ತದೆ ಎನ್ನುವುದನ್ನು ಬಿಜೆಪಿ ಮಹಿಳಾ ಸಂಸದರ ವರ್ತನೆಯಲ್ಲಿ ಕಾಣಬಹುದು. ಇಂತಹ ಹೀನ ಕೃತ್ಯಗಳನ್ನೂ ಸಾಪೇಕ್ಷಗೊಳಿಸಿ ಕೇವಲ ಕಾನೂನು ಸುವ್ಯವಸ್ಥೆಯ ಸಮಸ್ಯೆಯನ್ನಾಗಿ ಕಾಣುವ ಪ್ರವೃತ್ತಿಯನ್ನು ರಾಜಕೀಯವಾಗಿಯೇ ಪ್ರಶ್ನಿಸಬೇಕಿದೆ. ಕುಸ್ತಿ ಪಟುಗಳ ಹೋರಾಟದ ಸಮಯದಲ್ಲಿ ನೊಂದ ಹೆಣ್ಣುಮಕ್ಕಳಿಗೆ ಸಾಂತ್ವನ ಹೇಳುವುದಿರಲಿ, ತಮ್ಮದೇ ಸರ್ಕಾರದ ಆವರಣದಲ್ಲಿ ಸಣ್ಣ ಪ್ರತಿರೋಧವನ್ನೂ ತೋರಲಾರದಷ್ಟು ಮಟ್ಟಿಗೆ ಮಹಿಳಾ ಸಂಸದರನ್ನು ಅಸಹಾಯಕರನ್ನಾಗಿ ಮಾಡುವುದು ಪಿತೃಪ್ರಧಾನತೆಯ ಪ್ರಾಬಲ್ಯದ ಸಂಕೇತವಲ್ಲವೇ ? ಇಂದು ಬ್ರಿಜ್‌ ಭೂಷಣ್‌ ಅವರಂತಹ ಆರೋಪಿಗಳನ್ನು ರಕ್ಷಿಸುತ್ತಿರುವುದೂ , ಬಿಲ್ಕಿಸ್‌ ಬಾನೋ ಅಪರಾಧಿಗಳನ್ನು ಸಮ್ಮಾನಿಸುತ್ತಿರುವುದೂ ಇದೇ ಪುರುಷಾಧಿಪತ್ಯದ ರಾಜಕಾರಣವೇ ಎನ್ನುವುದು ನಿಸ್ಸಂಶಯ.

ಈ ದ್ವಂದ್ವಗಳ ನಡುವೆಯೇ ಮಹಿಳಾ ದೌರ್ಜನ್ಯಗಳತ್ತ ಸಮಾಜ ಗಮನಹರಿಸಬೇಕಿದೆ. ಎಲ್ಲ ಮತಗಳಲ್ಲೂ, ಎಲ್ಲ ಧಾರ್ಮಿಕ ನೆಲೆಗಳಲ್ಲೂ ಮಹಿಳೆಯನ್ನು ಅತ್ಯಂತ ಗೌರವದಿಂದ ಕಾಣಲಾಗುತ್ತದೆ. ಆದರೆ ಈ ಗೌರವದೊಂದಿಗೆ ಪ್ರತಿಯೊಬ್ಬ ಮಹಿಳೆಯ ಹೆಗಲಿಗೂ ಸಂಸ್ಕೃತಿ ರಕ್ಷಣೆ-ಧರ್ಮ ರಕ್ಷಣೆಯ ನೊಗಭಾರವನ್ನೂ ಹೊರಿಸಲಾಗಿರುತ್ತದೆ. ಆಕೆ ಧರಿಸುವ ಉಡುಪು, ಸಾರ್ವಜನಿಕ ನಡವಳಿಕೆ, ಚಲನವಲನ ಇವೆಲ್ಲವೂ ಸಾಂವಿಧಾನಿಕವಾಗಿ ವ್ಯಕ್ತಿಗತ ಹಕ್ಕುಗಳೇ ಆಗಿದ್ದರೂ, ಮಹಿಳೆಗೆ ಸ್ವಯಂ ನಿರ್ಧಾರದ ಹಕ್ಕನ್ನು ಕಸಿದುಕೊಳ್ಳಲು ಧಾರ್ಮಿಕ ನೇತಾರರು, ಸಂಪ್ರದಾಯವಾದಿಗಳು ಹಾಗೂ ಇವರನ್ನು ಮೆರೆಸುವ ಸಾಂಸ್ಥಿಕ ನೆಲೆಗಳು ಪ್ರಯತ್ನಿಸುತ್ತಲೇ ಇರುತ್ತವೆ. ಈ ಪ್ರಯತ್ನದ ನಡುವೆಯೇ ಮಹಿಳೆ ಸಾರ್ವತ್ರಿಕವಾಗಿ ಧರ್ಮ ರಕ್ಷಕಳಾಗಿ, ಸಂಸ್ಕೃತಿ ರಕ್ಷಕಳಾಗಿ ಕಾಣಲ್ಪಡುತ್ತಾಳೆ. ಮತ್ತೊಂದು ಬದಿಯಲ್ಲಿ ಇದೇ ಧಾರ್ಮಿಕ ನಂಬಿಕೆ-ಕಟ್ಟುಪಾಡುಗಳೇ ಮಹಿಳಾ ಸಮೂಹವನ್ನು ವಸ್ತ್ರ ಸಂಹಿತೆಯ ಮೂಲಕ, ಸಾಂಪ್ರದಾಯಿಕ ಆಚರಣೆಗಳ ಮೂಲಕ ಸಂಕೋಲೆಗಳಲ್ಲಿ ಬಂಧಿಸುತ್ತವೆ.

ಭಾರತದ ಜಾತಿ ಶ್ರೇಣಿಯ ಸಮಾಜದಲ್ಲಿ ಪಿತೃಪ್ರಧಾನತೆ ಹಾಗೂ ಪ್ರಾಚೀನ ಊಳಿಗಮಾನ್ಯ ವ್ಯವಸ್ಥೆಯ ಪಳೆಯುಳಿಕೆಗಳು, ನವ ಉದಾರವಾದ ಸೃಷ್ಟಿಸುವ ಆರ್ಥಿಕ ಯಜಮಾನಿಕೆಯೊಂದಿಗೆ ಸೇರಿ ತನ್ನ ಪ್ರಾಬಲ್ಯ ಹಾಗೂ ಪಾರಮ್ಯವನ್ನು ಸಾಧಿಸಿರುವುದರಿಂದಲೇ ಮಹಿಳಾ ಸಮೂಹ ಎದುರಿಸುವ ಸಾಮಾಜಿಕ-ಸಾಂಸ್ಕೃತಿಕ ಸಮಸ್ಯೆಗಳು ಸಾರ್ವತ್ರೀಕರಣಕ್ಕೊಳಗಾಗುವುದಿಲ್ಲ. ಬದಲಾಗಿ ಜಾತಿ ನಿರ್ದಿಷ್ಟ, ಮತ ನಿರ್ದಿಷ್ಟ ಅಥವಾ ಪ್ರಾದೇಶಿಕ ಚೌಕಟ್ಟುಗಳಲ್ಲಿ ನಿಷ್ಕರ್ಷೆಗೊಳಗಾಗುತ್ತವೆ. ಈ ಅಸೂಕ್ಷ್ಮತೆ ಗಾಢವಾಗಿರುವುದರಿಂದಲೇ ಹೆಣ್ಣು ಭ್ರೂಣ ಹತ್ಯೆ ಅಥವಾ ಹೆಣ್ಣು ಶಿಶು ಹತ್ಯೆ ಸಾರ್ವಜನಿಕ ಸಂಕಥನದಲ್ಲಿ ಒಂದು ಸಾಮಾಜಿಕ ಪಿಡುಗು ಅಥವಾ ವ್ಯಸನ ಎಂದು ಕಂಡುಬರುವುದಿಲ್ಲ. ಲಕ್ಷಾಂತರ ಹೆಣ್ಣು ಭ್ರೂಣಗಳು-ಶಿಶುಗಳು ಸದ್ದಿಲ್ಲದೆ ಕಣ್ಮರೆಯಾಗುತ್ತಿರುವುದಕ್ಕೆ ಕಣ್ಮುಚ್ಚಿ ಕುಳಿತಿರುವ ಸಮಾಜವೇ, 2022ರಲ್ಲಿ ದೌರ್ಜನ್ಯಕ್ಕೊಳಗಾದ ನಾಲ್ಕೂವರೆ ಲಕ್ಷ ಹೆಣ್ಣುಮಕ್ಕಳ ಆತ್ಮನಿವೇದನೆಗೂ ಕಿವುಡಾಗಿ ಕುಳಿತಿರುತ್ತದೆ. ಸಾಕ್ಷೀ ಮಲ್ಲಿಕ್‌ ಈ ಲಕ್ಷಾಂತರ ಹೆಣ್ಣು ಮಕ್ಕಳ ಪೈಕಿ ಒಬ್ಬರು.

ಆದರೆ ಆಕೆ ತನ್ನ ಬೂಟು ಕಳಚಿಟ್ಟು ಮಿಡಿದ ಒಂದೆರಡು ಹನಿ ಕಣ್ಣೀರು ಈ ನಾಲ್ಕೂವರೆ ಲಕ್ಷ ನೊಂದ ಹೆಣ್ಣುಮಕ್ಕಳನ್ನೂ ಪ್ರತಿನಿಧಿಸುತ್ತದೆ. ಹಿಜಾಬ್‌ ಕಾರಣದಿಂದ ಶಿಕ್ಷಣ ವಂಚಿತರಾದ ಮುಸ್ಲಿಂ ಹೆಣ್ಣುಮಕ್ಕಳು, ಮುರುಘಾ ಮಠದಲ್ಲಿ ಯಾತನೆ ಅನುಭವಿಸಿದ ಬಾಲಿಕೆಯರು, ಮಣಿಪುರದಲ್ಲಿ ಬೆಂದ ಅಮಾಯಕ ಮಹಿಳೆಯರು, ದಿನನಿತ್ಯ ಅತ್ಯಾಚಾರಕ್ಕೊಳಗಾಗುತ್ತಿರುವ ಸಾವಿರಾರು ಅಮಾಯಕ ಅಪ್ರಾಪ್ತ/ವಯಸ್ಕ ಮಹಿಳೆಯರು ಮತ್ತು ಬಹುಮುಖ್ಯವಾಗಿ ಭೂಮಿಯನ್ನೇ ಸ್ಪರ್ಶಿಸಲಾಗದ ಸಾವಿರಾರು ಹೆಣ್ಣು ಭ್ರೂಣಗಳು ಇವೆಲ್ಲವೂ ಸಹ ಆ ಕಂಬನಿ ಹನಿಗಳಲ್ಲಿ ನಮಗೆ ಕಾಣುವಂತಾದರೆ ನಮ್ಮನ್ನು ನಾವು ನಾಗರಿಕತೆಯ ಪ್ರತಿನಿಧಿಗಳು ಎಂದು ಬೆನ್ನುತಟ್ಟಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ಲಿಂಗ ಸೂಕ್ಷ್ಮತೆ-ಸ್ತ್ರೀ ಸಂವೇದನೆ, ಸಮಾನತೆ, ಸಬಲೀಕರಣ ಇವೆಲ್ಲವೂ ಕೇವಲ ಅಲಂಕಾರಿಕ ಪದಗಳಾಗಿಯೇ ಉಳಿದುಬಿಡುತ್ತವೆ. ಧರ್ಮ- ಸಂಸ್ಕೃತಿ ರಕ್ಷಣೆಯ ನೊಗಭಾರವನ್ನು ಮಹಿಳೆಯರ ಹೆಗಲಿಗೆ ಹೊರಿಸುವ ಮತೀಯ ಮೂಲಭೂತವಾದಿಗಳಿಗೆ ಅರ್ಥವಾಗದ ಈ ಸೂಕ್ಷ್ಮ ವಿದ್ಯಾವಂತ, ಸುಶಿಕ್ಷಿತ, ನಗರೀಕರಣಗೊಂಡ, ನಾಗರಿಕತೆಯನ್ನು ಹೊದ್ದುಕೊಂಡಿರುವ ಸಮಾಜಕ್ಕಾದರೂ ಅರ್ಥವಾದರೆ ನಮ್ಮ ನಾಗರಿಕತೆಯೂ ಸಾರ್ಥಕವಾಗುತ್ತದೆ.
-೦-೦-೦-

Tags: BJPBrij Bhushan SinghCongress PartyHIJABKarnatakaSakshi Mallikಎಚ್ ಡಿ ಕುಮಾರಸ್ವಾಮಿಕೋವಿಡ್-19ನರೇಂದ್ರ ಮೋದಿಬಿ ಎಸ್ ಯಡಿಯೂರಪ್ಪಬಿಜೆಪಿಸಿದ್ದರಾಮಯ್ಯ
Previous Post

ರಾಜ್ಯದಲ್ಲಿ ಒಟ್ಟು 34 JN.1 ಸೋಂಕಿತ ಪ್ರಕರಣ; ನಾಳೆ ಸಂಪುಟ ಉಪ ಸಮಿತಿ ಸಭೆ – ಸಚಿವ ದಿನೇಶ್ ಗುಂಡೂರಾವ್

Next Post

ಆದಾಯ ಮೀರಿ ಆಸ್ತಿ ಗಳಿಕೆ : ಸಚಿವನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

Related Posts

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
0

ಜ್ವರ ಹಾಗೂ ಯೂರಿನ್ ಸೋಂಕಿನಿಂದ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದ ಮಾಜಿ ಪ್ರಧಾನಿ ಹೆಚ್​ ಡಿ ದೇವೇಗೌಡ್ರು ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಮುಂದಿನ ಕೆಲವು ದಿನಗಳ...

Read moreDetails

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

October 13, 2025

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

October 13, 2025

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

October 13, 2025
Next Post
ಆದಾಯ ಮೀರಿ ಆಸ್ತಿ ಗಳಿಕೆ : ಸಚಿವನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

ಆದಾಯ ಮೀರಿ ಆಸ್ತಿ ಗಳಿಕೆ : ಸಚಿವನಿಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್!

Please login to join discussion

Recent News

Top Story

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

by ಪ್ರತಿಧ್ವನಿ
October 13, 2025
Top Story

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

by ಪ್ರತಿಧ್ವನಿ
October 13, 2025
Top Story

Sunil Kumar: ಇಂದಿರಾ ಗಾಂಧಿಗೂ ಹೆದರಿಲ್ಲ, ನೆಹರೂ ಮುಂದೆನೂ ಮಂಡಿಯೂರಿಲ್ಲ, ಪ್ರಿಯಾಂಕ್ ಖರ್ಗೆ ಯಾರು?

by ಪ್ರತಿಧ್ವನಿ
October 13, 2025
Top Story

Siddaramaiah: ತಮಿಳುನಾಡಿನಲ್ಲಿ ಕೈಗೊಂಡಂತೆ ಆರ್‌ಎಸ್‌ಎಸ್‌ ವಿರುದ್ಧ ರಾಜ್ಯದಲ್ಲಿ ಕ್ರಮ..!!

by ಪ್ರತಿಧ್ವನಿ
October 13, 2025
Top Story

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಯಾದ ಮಾಜಿ ಐಎಎಸ್‌ ಅಧಿಕಾರಿ ಕಣ್ಣನ್‌ ಗೋಪಿನಾಥನ್..

by ಪ್ರತಿಧ್ವನಿ
October 13, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

HD Devegowda: ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಯಲ್ಲಿ ಬುಕ್ ಓದುತ್ತ ಕುಳಿತ ದೇವೇಗೌಡ್ರು..!!

October 13, 2025

Priyank Kharge: ಉತ್ತಮ ಗುಣಮಟ್ಟದ ನೀರು ಬಳಕೆ ಹಾಗೂ ಸಂಶೋಧನಗೆ ಉತ್ಕೃಷ್ಟತಾ ಕೇಂದ್ರ ಸ್ಥಾಪನೆ..!!

October 13, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada