ಮುಸ್ಲಿಂ ದ್ವೇಷದ ವಿರುದ್ಧ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಪತ್ರ ಬರೆದಿದ್ದ ಪ್ರತಿಧ್ವನಿಯ ಹಿರಿಯ ಲೇಖಕ ನಾ ದಿವಾಕರ, ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ (ಕುಂವೀ), ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ 61 ಚಿಂತಕರಿಗೆ ಜೀವ ಬೆದರಿಕೆ ಹಾಕಲಾಗಿದೆ.
ಎರಡು ಪುಟಗಳ ಪತ್ರ ಬರೆದಿರುವ ಹೆಸರು ಮತ್ತು ವಿಳಾಸವಿಲ್ಲದ ‘ಸಹಿಷ್ಣು ಹಿಂದೂ’ ಹೆಸರಿನಲ್ಲಿ, “61+ ಸಾಹಿತಿಗಳು, ಸಿದ್ದರಾಮಯ್ಯ, ಕುಮಾರಸ್ವಾಮಿ ಎಲ್ಲರೂ ಸರ್ವನಾಶದ ಹಾದಿಯಲ್ಲಿ ಇದ್ದೀರಿ, ನಿಮ್ಮೆಲ್ಲರ ಸಾವು ಹತ್ತಿರವಿದೆ. ಅದು ಯಾವ ರೂಪದಲ್ಲಾದರೂ ಬರಬಹುದು. ಅದಕ್ಕಾಗಿ ಸಿದ್ಧರಾಗಿ. ದೇಶದ್ರೋಹಿ ಬುದ್ಧಿಜೀವಿಗಳೇ ಕುಂ.ವೀರಭದ್ರಪ್ಪ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಕುಮಾರಸ್ವಾಮಿ ಅವರೇ ಸಿದ್ಧರಾಗಿ, ಸಿದ್ಧರಾಗಿ. ನಿಮ್ಮ ನಿಮ್ಮ ಮನೆಯಲ್ಲಿ ನಿಮ್ಮ ಅಂತಿಮ ಶವಸಂಸ್ಕಾರಕ್ಕೆ ಸಿದ್ಧತೆ ಮಾಡಿಕೊಳ್ಳಲು ಹೇಳಿ’ ಎಂದು ಬೆದರಿಕೆ ಹಾಕಲಾಗಿದೆ.
“ಹಿಜಾಬ್ ಪರವಾಗಿ, ಮುಸ್ಲಿಮರ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ನೀವುಗಳು 61 ಸಾಹಿತಿಗಳು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಕುರಿತು…” ಎಂದು ಜೀವ ಬೆದರಿಕೆಗೆ ಕಾರಣ ನೀಡಲಾಗಿದೆ.
ಪತ್ರದ ಚಿತ್ರ ಇಲ್ಲಿದೆ –
ಈ ಕುರಿತು ಕೆಲವು ಚಿಂತಕರು ‘ಪ್ರತಿಧ್ವನಿ.ಕಾಂ’ಗೆ ಪ್ರತಿಕ್ರಿಯೆ ನೀಡಿದ್ದಾರೆ:
ಚಿಂತಕ ಬಿ.ಶ್ರೀಪಾದ್ ಭಟ್ ಮಾತನಾಡಿ, ಮತಿಗೆಟ್ಟ ಅರ್ಥಹೀನ ಸರ್ಕಾರ ಇದು, ಕಂಡಕಂಡವರೆಲ್ಲ ಬಂದು ಕೋಮು ದ್ವೇಷ ಹರಡುವ ಹೇಳಿಕೆ ನೀಡುತಿದ್ದಾರೆ. “ಕಳೆದ ಹಲವು ದಿನಗಳಿಂದ ನಾವು ಇವರಿಗೆ ಪ್ರತಿರೋಧವನ್ನು ತೋರುತ್ತಿಲ್ಲ. ಶಿವಮೊಗ್ಗದಲ್ಲಿ ಗಲಭೆಯಾದಾಗ ಪ್ರತಿಪಕ್ಷಗಳು, ಪ್ರಗತಿಪರ ಸಂಘಟನೆಗಳು ಬೀದಿ ಬೀದಿಗೆ ಬಾವುಟ ಹಿಡಿದು ಹೋಗಬೇಕಿತ್ತು. ಕುವೆಂಪು ಅವರು ಹೇಳಿದಂತೆ ನಮ್ಮದು ಸರ್ವಜನಾಂಗ ಶಾಂತಿಯ ತೋಟ ಎಂಬ ಸಂದೇಶವನ್ನು ಸಾರಬೇಕಿತ್ತು. ಯಾರೂ ಬರದಿದ್ದಾಗ ಜನ ಭಯಗೊಂಡಿದ್ದಾರೆ. ಈ ವಿರೋಧ ಪಕ್ಷಗಳು ಈ ಕುರಿತು ಮಾತಾಡಲು ವಿಲ್ ಪವರ್ ಕೂಡ ಇಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರತಿಧ್ವನಿ ಹಿರಿಯ ಬರಹಗಾರರು ಮತ್ತು ಚಿಂತಕ ನಾ.ದಿವಾಕರ ಮಾತನಾಡಿ, ಇದು ಯಾವುದೇ ಸಂಘಟನೆ ಮಾಡಿರೋದಲ್ಲ ಅನ್ನಿಸುತ್ತದೆ ಆದರೆ ಬೆಂಗಳೂರು 5 ಶಾಲೆಗಳಿಗೆ ಬಾಂಬ್ ಹಾಕ್ತಿವಿ ಅಂತ ಸುದ್ದಿ ಬಂದ ತಕ್ಷಣ ಸರ್ಕಾರ ತಕ್ಷಣವೇ ಕಾರ್ಯಪ್ರವೃತ್ತರಗಿ ಹೇಗೆ ಕ್ರಮಕ್ಕೆ ಮುಂದಾಗಿದೇಯೊ ಅದೇ ರೀತಿ ಈ ಘಟನೆಯನ್ನು ಪರಿಗಣಿಸಿ ತನಿಖೆಗೆ ಮುಂದಾಗಬೇಕು. ಇಂತಹ ಘಟನೆಗಳು ಆದಾಗ ಮತ್ತು ಸಮಾಜದಲ್ಲಿ ಕೋಮುದ್ವೇಷ, ಕೊಲೆ ಬೆದರಿಕೆ ಬಂದಾಗ ಎಲ್ಲಾ ರಾಜಕೀಯ ಪಕ್ಷಗಳು ಪಕ್ಷಭೇದ ಮರೆತು ಸರ್ಕಾರದ ಮೇಲೆ ಒತ್ತಡ ತರಬೇಕು. ಬೆದರಿಕೆಗೆಲ್ಲ ಈಗ ಯಾರೂ ಎದರಲ್ಲ ಗೌರಿ ಲಂಕೇಶ್ ಕೊಲೆ ಮಾಡಿದ ನಂತರ ಬರಿಯೊದು ನಿಲ್ಲಿಸಿದ್ದೇವೆಯೇ? ಇಲ್ಲ, ಇನ್ನು ಹೆಚ್ಚು ಬರೆಯುತ್ತಲೇ ಇದ್ದೇವೆ ಆದರೆ ಸರ್ಕಾರ ಎಲ್ಲಾ ಪಕ್ಷಗಳ ಒಳಗೊಂಡು ಸಭೆ ನಡೆಸಿ ಸಮಾಜದಲ್ಲಿ ಆಗುತ್ತಿರುವ ಈ ಸಮಸ್ಯೆಯನ್ನು ಬಗೆಯರಿಸಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಹೇಳಿದ್ದಾರೆ.
ಚಿಂತಕರು ಮತ್ತು ರಂಗಕರ್ಮಿ ಸಿ.ಬಸವಲಿಂಗಯ್ಯ ಅವರು ಮಾತನಾಡಿ, ಈ ಸರ್ಕಾರ ಭಾವನಾತ್ಮ ವಿಷಯವನ್ನು ಮುಂದೆ ತಂದು ರಾಜಕೀಯ ಮಾಡುತ್ತಿದೆ. ನಿಜಕ್ಕೂ ಇದು ಸಂವಿಧಾನ ವಿರೋಧಿ ನಡೆಗಳು. ಸರ್ಕಾರಗಳು ಸಂವಿಧಾನ ಬದ್ದವಾಗಿ ಪ್ರಮಾಣ ಮಾಡಿ ಬರುವಾಗ, ಈ ದೇಶದ ಜನರ ಸ್ಥಾನ-ಮಾನ, ಸಮಾನ ಹಕ್ಕು ಕಾಪಾಡುವುದಾಗಿ ಹೇಳಿರ್ತಾರೆ ಆದರೆ ಇವರು ಮಾಡುತ್ತಿರುವುದಾದರೂ ಏನು? ಹಿಜಾಬ್ ವಿಷಯ ತೆಗೆದು ಸಾವಿರಾರು ಹೆಣ್ಣು ಮಕ್ಕಳ ವಿದ್ಯೆಯನ್ನು ಕಸಿದುಕೊಂಡ್ರು. ವ್ಯಾಪಾರದಲ್ಲಿ ಮುಸ್ಲಿಂ ಇರಬಾರದು ಎಂದು ತಕರಾರು ತೆಗೆದರು. ಈಗ ಕೊಲೆ ಬೆದರಿಕೆ ಹಾಕುತಿದ್ದಾರೆ, ನಾವು ಪ್ರಜಾಪ್ರಭುತ್ವ ದೇಶದಲ್ಲಿದ್ದೇವೊ? ಅಥಾವ ಯಾವ ದೇಶದಲ್ಲಿದ್ದೇವೆ ಎಂಬ ಪ್ರಶ್ನೆ ಕಾಡತೊಡಗಿದೆ. ಈ ದೇಶದಲ್ಲಿ ರಾಮನ ಹೆಸರಲ್ಲೂ ರಾಜಕೀಯ ನಡೆಯುತ್ತಿದೆ ರಾಮನನ್ನು ಯಾರಾದರೂ ಇವರಿಗೆ ಗುತ್ತಿಗೆ ಕೊಟ್ಟಿದ್ದಾರೆಯೇ? ಅವರಿಗೂ ರಾಮ ಬೇಕು ನಮಗೂ ರಾಮ ಬೇಕು ಅವರು ಜೈ ಶ್ರೀರಾಮ್ ಎಂದರೆ ನಾವು ಸೀತಾರಾಮ್ ಎನ್ನುತ್ತೇವೆ. ಧರ್ಮ ಅಂದರೇ, ದೇಶ ಅಂದರೇ ಬರೀ ಮಣ್ಣಲ್ಲ ಭೂಪಟವಲ್ಲ, ಜನ, ನಾಡು ನುಡಿ ಎಲ್ಲವೂ ಸೇರಿ ದೇಶ ಧರ್ಮ ಅಂದರೇ ಸತ್ಯ ಪ್ರೀತಿ ಇದನ್ನು ಹೇಳಿದರೆ ಗೊಲ್ಲುತ್ತೇವೆ ಎಂದರೇ ಹೇಗೆ. ನಾವು ಪ್ರತಿರೋಧವನ್ನು ನಿಲ್ಲಿಸೋದಿಲ್ಲ ಇದು ನಮ್ಮ ಸಂವಿಧಾನಿಕ ಹಕ್ಕು. ಈತರದ ಬೆದರಿಕೆಯನ್ನು ಸರ್ಕಾರ ಗಂಭೀತವಾಗಿ ಗಮನಿಸಬೇಕು ಎಂದು ಹೇಳಿದ್ದಾರೆ.
ಕೊಲೆ ಬೆದರಿಕೆ ಪತ್ರದ ಬಗ್ಗೆ ಮಾಹಿತಿ ನೀಡಿರುವ ಹಿರಿಯ ಸಾಹಿತಿ ಕುಂ.ವೀರಭದ್ರಪ್ಪ, ‘ನನಗೆ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯಿಂದ ಕೊಲೆ ಬೆದರಿಕೆ ಪತ್ರ ಬಂದಿದೆ, ಹೆಸರು ವಿಳಾಸ ಇಲ್ಲದ ಹೇಡಿ ಬರೆದಿರುವ ಪತ್ರ ಇದು. ಇದರಲ್ಲಿ ಮಾಜಿ ಮುಖ್ಯಮಂತ್ರಿಗಳಿಬ್ಬರ ಹೆಸರುಗಳೂ ಇವೆ, ನೀವು ಓದಿ’ ಎಂದು ತಿಳಿಸಿದ್ದಾರೆ. ಪತ್ರದಲ್ಲಿ ‘ಹಿಜಾಬ್, ಮುಸ್ಲಿಮರ ಪರವಾಗಿ, ಭಗವದ್ಗೀತೆ ವಿರುದ್ಧವಾಗಿ ನೀವುಗಳು 61ಕ್ಕೂ ಹೆಚ್ಚು ಮಂದಿ ಸಾಹಿತಿಗಳು ರಾಜ್ಯ ಸರಕಾರಕ್ಕೆ ಪತ್ರ ಬರೆದ ಕುರಿತು’ ಎಂದು ಜೀವ ಬೆದರಿಕೆಗೆ ಕಾರಣ ನೀಡಲಾಗಿದೆ.
‘ಈ ಸಂಬಂಧ ಕೂಡಲೇ ಪ್ರಕರಣ ದಾಖಲಿಸಿಕೊಂಡು ಪತ್ರ ಎಲ್ಲಿಂದ ಬಂದಿದೆ ಮತ್ತು ಯಾವ ಉದ್ದೇಶಕ್ಕಾಗಿ ಪತ್ರ ಬರೆಯಲಾಗಿದೆ ಎಂಬ ಬಗ್ಗೆ ಕೂಲಂಕಷ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು. ಕೋಮು ಸಾಮರಸ್ಯ ಕಾಪಾಡುವ ಉದ್ದೇಶಕ್ಕಾಗಿ ಬಹಿರಂಗ ಹೇಳಿಕೆ ನೀಡುವ ಸಾಹಿತಿಗಳು ಹಾಗೂ ಮಾಜಿ ಸಿಎಂಗಳ ಕೊಲೆ ಬೆದರಿಕೆ ಹಾಕುವ ದುಷ್ಟ ಶಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂಬ ಆಗ್ರಹ ಸಾಹಿತಿಗಳ ವಲಯದಿಂದ ಕೇಳಿಬಂದಿದೆ.
ಸಿಎಂ ಬರೆದ ಪತ್ರದಲ್ಲಿಏನಿತ್ತು?
ಎಸೆಸೆಲ್ಸಿ ಪರೀಕ್ಷೆಯ ಹಿಂದಿನ ದಿನ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು ವಸ್ತ್ರ ಸಂಹಿತೆಯನ್ನು ವಿಧಿಸಿ ಏಕಾಏಕಿ ಹೊರಡಿಸಿದ ಅವೈಜ್ಞಾನಿಕ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕು ಎಂಬ ವಿಷಯ ಒಳಗೊಂಡಂತೆ ಕೋಮು ಸಾಮರಸ್ಯಕ್ಕೆ ಆಗ್ರಹಿಸಿ 61 ಜನ ಚಿಂತಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದರು.
ಶೈಕ್ಷಣಿಕ ವರ್ಷಾಂತ್ಯದಲ್ಲಿ ಅನಗತ್ಯವಾಗಿ ಎದ್ದ ಶಿರವಸ್ತ್ರ ವಿವಾದದಿಂದ ತೊಂದರೆಗೊಳಗಾದ ಮುಸ್ಲಿಂ ಹೆಣ್ಣು ಮಕ್ಕಳಿಗೆ ಸಾಂವಿಧಾನಿಕ ಶಿಕ್ಷಣದ ಹಕ್ಕನ್ನು ನಿರಾಕರಿಸದೇ ಸಮವಸ್ತ್ರ ಭಾಗವಾಗಿ ಶಿರವಸ್ತ್ರ ಧರಿಸಿ ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಬೇಕು. ಇದು ಮಕ್ಕಳ ಭವಿಷ್ಯದ ಪ್ರಶ್ನೆಯಾಗಿದ್ದು, ಅದಕ್ಕೆ ಅಗತ್ಯವಾದ ಸೂಚನೆಯನ್ನು ಅಧಿಕೃತವಾಗಿ ಸರಕಾರವು ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಿದ್ದರು.
ರಾಜ್ಯದ ವಿವಿಧ ಕಡೆಗಳಲ್ಲಿ ನಡೆಯುತ್ತಿರುವ ಜಾತ್ರೆಗಳಲ್ಲಿ ಧರ್ಮ ಭೇದವಿಲ್ಲದೇ ಈ ಮೊದಲು ನಡೆಯುತ್ತಿದ್ದ ಸಾಮರಸ್ಯ ಪರಂಪರೆಯ ಚಟುವಟಿಕೆಗಳು ವ್ಯಾಪಾರ ವಹಿವಾಟುಗಳಿಗೆ ಅವಕಾಶ ನೀಡಬೇಕು. ದುರುದ್ದೇಶಪೂರ್ವಕವಾಗಿ ಅದನ್ನು ಹಾಳುಗೆಡಹುತ್ತಿರುವವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದರು.
ಧರ್ಮ ಮತ್ತು ಮತಾಂಧತೆಯ ಅಮಲೇರಿಸಿಕೊಂಡು ಶಾಂತಿ ನೆಮ್ಮದಿಗೆ ಭಂಗ ತರುತ್ತಿರುವವರ ಮೇಲೆ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕು. ಭಗವದ್ಗೀತೆಯನ್ನು ಪ್ರಸ್ತಾಪವನ್ನು ಕೈಬಿಡಬೇಕು. ಕನ್ನಡ ನೆಲದ ಸಾಮರಸ್ಯ ಪರಂಪರೆಗೆ ಯಾವುದೇ ಕುತ್ತು ಬಾರದಂತೆ ಸರಕಾರವು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದರು.
ಪತ್ರ ಬರೆದು ಸಹಿ ಹಾಕಿದ ಸಾಹಿತಿಗಳ ಹೆಸರು ಇಲ್ಲಿದೆ :
ಡಾ.ಕೆ.ಮರುಳಸಿದ್ದಪ್ಪ, ಡಾ.ವಿಜಯಾ, ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಬೊಳುವಾರು ಮಹಮದ್ ಕುಂಞಿ, ಡಾ.ಪುರುಷೋತ್ತಮ ಬಿಳಿಮಲೆ, ಪ್ರೊ.ರಾಜೇಂದ್ರ ಚೆನ್ನಿ, ಡಾ.ಬಂಜಗೆರೆ ಜಯಪ್ರಕಾಶ್, ಬಿ.ಸುರೇಶ್, ಕೆ.ನೀಲಾ, ಡಾ.ರಹಮತ್ ತರೀಕೆರೆ, ಚಿದಂಬರ ರಾವ್ ಜಂಬೆ, ಡಾ.ವಸುಂಧರಾ ಭೂಪತಿ, ಕೆ.ಎಸ್.ವಿಮಲಾ, ಡಾ.ಎನ್.ಗಾಯತ್ರಿ, ಡಾ.ಜಿ.ರಾಮಕೃಷ್ಣ, ಅಚ್ಯುತ, ವಾಸುದೇವ ಉಚ್ಚಿಲ, ಟಿ.ಸುರೇಂದ್ರ ರಾವ್, ಎಸ್.ದೇವೇಂದ್ರ ಗೌಡ, ಬಿ.ಐಳಿಗೆರ, ಜೆ.ಸಿ.ಶಶಿಧರ್, ಡಾ.ಕಾಶಿನಾಥ್ ಅಂಬಲಗಿ, ಡಾ.ಪ್ರಭು ಖಾನಾಪುರೆ, ಎನ್.ಕೆ.ವಸಂತ್ ರಾಜ್, ಯಶವಂತ ಮರೋಳಿ, ಡಾ.ಕೆ. ಷರೀಫಾ, ಡಾ.ಹೇಮಾ ಪಟ್ಟಣ ಶೆಟ್ಟಿ, ಡಾ.ಸಿದ್ದಲಿಂಗ ಪಟ್ಟಣಶೆಟ್ಟಿ, ಡಾ.ಚಂದ್ರ ಪೂಜಾರಿ, ಪ್ರೊ.ನರೇಂದ್ರ ನಾಯಕ್, ಪ್ರೊ.ಕೆ.ಫಣಿರಾಜ್, ಡಾ.ಇಂದಿರಾ ಹೆಗಡೆ, ಪ್ರೊ.ರಾಜೇಂದ್ರ ಉಡುಪ, ಪ್ರೊ.ಮಾಧವಿ ಭಂಡಾರಿ, ಪ್ರೊ.ಪಟ್ಟಾಭಿರಾಮ ಸೋಮಯಾಜಿ, ಕೆ.ರಾಘವ, ಅಮೃತಾ ಅತ್ರಾಡಿ, ಕೆ.ಸದಾಶಿವ ಮಾಸ್ಟ್ರು, ಪ್ರೊ.ಭೂಮಿಗೌಡ, ಎಂ.ದೇವದಾಸ, ಎಸ್.ವೈ.ಗುರುಶಾಂತ್, ವೆಂಕಟೇಶ್ ಪ್ರಸಾದ್, ಚಂದ್ರಹಾಸ ಉಲ್ಲಾಳ್, ಐ.ಕೆ.ಬೋಳವಾರ್, ಮನೋಜ ವಾಮಂಜೂರ್, ಪ್ರಭಾಕರ್ ಕಾಪಿಕಾಡ್, ಟಿ.ಆರ್.ಭಟ್, ಶ್ಯಾಮಸುಂದರ ರಾವ್, ನಾ.ದಿವಾಕರ್, ಕಲೀಂ, ಸಿ.ಬಸವಲಿಂಗಯ್ಯ, ಎಲ್.ಜಗನ್ನಾಥ್, ಕೆ.ಎಸ್.ಲಕ್ಷ್ಮಿ, ಬಿ.ಎಂ.ಹನೀಫ್, ನಾಗೇಶ್ ಕಲ್ಲೂರ, ಸುಷ್ಮಾ, ಡಾ.ಕಾಳೇಗೌಡ ನಾಗವಾರ, ಕೋದಂಡ ರಾಮ್, ಮಾವಳ್ಳಿ ಶಂಕರ್, ಯಮುನಾ ಗಾಂವ್ಕರ್, ಬಿ.ಶ್ರೀಪಾದ್ ಭಟ್.