ಹಳೇ ಮೈಸೂರು ಭಾಗ ಅದರಲ್ಲೂ ಮಂಡ್ಯದಲ್ಲಿ ಕೇಸರಿ ಬಾವುಟ ಹಾರಿಸಲು ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಇಂದು ಮಂಡ್ಯ ಜಿಲ್ಲೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬೃಹತ್ ಮಹಿಳಾ ಸಮಾವೇಶ ಹಮ್ಮಿಕೊಂಡಿದ್ದು,. ಬೆಳಗ್ಗೆ 11 ಗಂಟೆಗೆ ಸಮಾವೇಶ ಆರಂಭವಾಗಲಿದೆ. ಸಮಾವೇಶಕ್ಕೆ 25 ಸಾವಿರಕ್ಕೂ ಅಧಿಕ ಮಹಿಳೆಯರು ಸೇರುವ ನಿರೀಕ್ಷೆ ಇದೆ. ಜೆಡಿಎಸ್ ಕಾಂಗ್ರೆಸ್ ಕೋಟೆಯನ್ನು ಛಿದ್ರ ಮಾಡಲು ಯುವ ಸಮಾವೇಶಕ್ಕೆ ಬಿಜೆಪಿ ಚಾಲನೆ ನೀಡಿದೆ. ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್, ಶೋಭಾ ಕರಂದ್ಲಾಜೆ, ಬಿ.ವೈ ವಿಜಯೇಂದ್ರ, ಸಚಿವ ನಾರಾಯಣಗೌಡ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಅಮಿತ್ ಷಾ ಅಣತಿಯಂತೆ ಮಂಡ್ಯದಲ್ಲಿ ಸಮಾವೇಶ ಮಾಡುತ್ತಿದ್ದು, ಮುಂದಿನ ದಿನಗಳಲ್ಲಿ ಮತ್ತೆ ಅಮಿತ್ ಷಾ ಸಮಾವೇಶ ನಡೆಸುವ ಸಾಧ್ಯತೆಯಿದೆ.
ಮಂಡ್ಯ ಸಮಾವೇಶಕ್ಕೂ ಮುನ್ನ ಬಿಜೆಪಿ ಸರ್ಕಾರದ ಬಂಪರ್..!
ಜೆಡಿಎಸ್ ಭದ್ರ ಕೋಟೆ ಛಿದ್ರ ಮಾಡಲು ಬಿಜೆಪಿ ಸಕಲ ತಯಾರಿ ಮಾಡಿಕೊಳ್ತಿದ್ದು, ಮಂಡ್ಯ ಜಿಲ್ಲೆಗೆ ಬರೋಬ್ಬರಿ ₹800 ಕೋಟಿ ಮೌಲ್ಯದ ಯೋಜನೆ ಘೋಷಣೆ ಮಾಡಿದೆ. ಜಲಜೀವನ್ ಮಿಷನ್ ಯೋಜನೆ ಹೆಸರಲ್ಲಿ ರಾಜ್ಯ ಸಚಿವ ಸಂಪುಟ ಬರೋಬ್ಬರಿ 800 ಕೋಟಿ ಘೋಷಣೆ ಮಾಡಿದೆ. ಆದರೆ ಮಂಡ್ಯ ಸೇರಿದಂತೆ ನಾಗಮಂಗಲದಲ್ಲಿ ಕೇಸರಿ ಕೋಟೆ ನಿರ್ಮಾಣ ಮಾಡಲು ಸಾಧ್ಯವೇ ಎನ್ನುವ ಪ್ರಶ್ನೆ ಬಿಜೆಪಿ ವಲಯದಲ್ಲೇ ಚರ್ಚೆ ಆಗುತ್ತಿದೆ. ಈಗಾಗಲೇ ಮಂಡ್ಯ ಜಿಲ್ಲಾ ಉಸ್ತುವಾರಿ ಸ್ಥಾನ ಖಾಲಿ ಉಳಿದುಕೊಂಡಿದ್ದು, ಆ ಸ್ಥಾನಕ್ಕೆ ಯಾರನ್ನು ನೇಮಿಸುವುದು ಅನ್ನೋ ಚಿಂತೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಳುಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಎರಡೂ ಪಕ್ಷಗಳಿಗೂ ಠಕ್ಕರ್ ಕೊಡುವ ನಾಯಕ ಯಾರು ಅನ್ನೋ ಬಗ್ಗೆ ಮುಖ್ಯಮಂತ್ರಿ ತಲಾಶ್ ಮಾಡುತ್ತಿದ್ದಾರೆ.
ಅಶ್ವತ್ಥ ನಾರಾಯಣಗೆ ಸಿಗುತ್ತಾ ಮಂಡ್ಯದ ಹೊಣೆ..!?
ಮಂಡ್ಯ ಜಿಲ್ಲೆಯವರೇ ಆಗಿರುವ ನಾರಾಯಣಗೌಡ ಈಗಾಗಲೇ ಕಾಂಗ್ರೆಸ್ ಕಟಡೆಗೆ ಮುಖ ಮಾಡಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಇದರ ನಡುವೆ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾಗಿ ಕೆಲಸ ಮಾಡುತ್ತಿದ್ದಾರೆ. ಅದರತ ಜೊತೆಗೆ ಮಂಡ್ಯ ಉಸ್ತುವಾರಿ ವಹಿಸಿಕೊಳ್ಳಲು ನಾರಾಯಣಗೌಡ ನಿರಾಕರಿಸಿದ್ದಾರೆ ಎನ್ನಲಾಗಿದೆ. ಇನ್ನು ಈ ಮೊದಲು ಉಸ್ತುವಾರಿ ಸಚಿವರಾಗಿದ್ದ ಗೋಪಾಲಯ್ಯ ಅವರಿಂದ ಕಸಿದುಕೊಂಡು ಆರ್ ಅಶೋಕ್ಗೆ ವಹಿಸದಲಾಗಿತ್ತು. ಆರ್ ಅಶೋಕ್ಗೆ ಮಂಡ್ಯ ಕಾರ್ಯಕರ್ತರೇ ವಿರೋಧ ವ್ಯಕ್ತಪಡಿಸಿ ಗೋ ಬ್ಯಾಕ್ ಅಶೋಕ್ ಅನ್ನೋ ಘೋಷ ವಾಕ್ಯ ಕೂಗಿದ್ರು. ಆ ಬಳಿಕ ಅಶೋಕ್ ಉಸ್ತುವಾರಿಯಿಂದ ಹಿಂದೆ ಸರಿದಿದ್ರು. ಜೊತೆಗೆ ಗೋಪಾಲಯ್ಯ ಕೂಡ ಮತ್ತೆ ಉಸ್ತುವಾರಿ ವಹಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎನ್ನಲಾಗಿದೆ. ಇದೀಗ ಅನಿವಾರ್ಯವಾಗಿ ಹೊಣೆ ಅಶ್ವತ್ಥ ನಾರಾಯಣ ಕಡೆಗೆ ಹೋಗುವಂತಿದೆ.
ಮಂಡ್ಯ ಉಸ್ತುವಾರಿ ನಾಯಕರಿಗೆ ಸಖತ್ ಟೆನ್ಷನ್..!
ಮಂಡ್ಯ ಜಿಲ್ಲೆ ಜೆಡಿಎಸ್’ನ ಭದ್ರಕೋಟೆ ಅನ್ನೋದ್ರಲ್ಲಿ ಎರಡು ಮಾತಿಲ್ಲ. ಆದರೆ ಇಲ್ಲಿ ಜೆಡಿಎಸ್’ಗೆ ಸರಿಸಮಾನವಾಗಿ ಎದುರಾಳಿ ಅಂದ್ರೆ ಅದು ಕಾಂಗ್ರೆಸ್ ಮಾತ್ರ. ಅದನ್ನು ಬಿಟ್ಟರೆ ಬಿಜೆಪಿ ಠೇವಣಿ ಮತಗಳನ್ನು ಪಡೆದುಕೊಳ್ಳೋದು ಕೂಡ ಕಷ್ಟ ಸಾಧ್ಯವೇ ಸರಿ. ಪರಿಸ್ಥಿತಿ ಹೀಗಿರುವಾಗ ಅಶ್ವತ್ಥ ನಾರಾಯಣ ಸೇರಿದಂತೆ ಯಾವುದೇ ಸಚಿವರು ಉಸ್ತುವಾರಿ ವಹಿಸಿಕೊಂಡರೂ ಕಿಂಚಿತ್ತೂ ಬದಲಾವಣೆ ಸಾಧ್ಯವಿಲ್ಲ. ಇನ್ನು ಮಲ್ಲೇಶ್ವರಂ ಆಸಕರಾಗಿರುವ ಅಶ್ವತ್ಥ ನಾರಾಯಣ ಈಗಾಗಲೇ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಇದ್ದುಕೊಂಡು ಜೆಡಿಎಸ್ ಹಾಗು ಕಾಂಗ್ರೆಸ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಇನ್ನು ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನವೂ ಅಶ್ವತ್ಥ ನಾರಾಯಣ ಹೆಗಲು ಏರಿದ್ರೆ ಮತ್ತಷ್ಟು ವಾಕ್ಸಮರಗಳಿಗೆ ಕಾರಣ ಆಗುತ್ತದೆ. ಈಗಾಗಲೇ ಮಂಡ್ಯದಲ್ಲಿ ವಿವಾದದ ಕಿಚ್ಚು ಹಚ್ಚಿದ್ದ ಆಶ್ವತ್ಥ ನಾರಾಯಣ, ಟಿಪ್ಪುವನ್ನು ಹೊಡೆದು ಹಾಕಿದಂತೆ ಸಿದ್ದರಾಮಯ್ಯನನ್ನು ಹೊಡೆದು ಹಾಕಬೇಕು ಎಂದಿದ್ದರು. ಈ ರೀತಿಯ ಹೇಳಿಕೆಗಳು ಬಿಜೆಪಿಗೆ ರಾಜಕೀಯವಾಗಿ ದುಬಾರಿ ಆಗುವ ಭಯ ಕೂಡ ಬಿಜೆಪಿಯನ್ನು ಕಾಡುತ್ತಿದೆ.