ಮಾಲೆಗಾಂವ್ ಸ್ಪೋಟದ ಪ್ರಮುಖ ಆರೋಪಿ, ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರು ಪ್ರಚೋದನಕಾರಿ ಭಾಷಣ ಮಾಡಿ ಮತ್ತೆ ವಿವಾದ ಸೃಷ್ಟಿಸಿದ್ದಾರೆ. ಶಿವಮೊಗ್ಗದ NES ಗ್ರೌಂಡ್ ಲ್ಲಿ ನಡೆದ ಕರ್ನಾಟಕ ದಕ್ಷಿಣ ಪ್ರಾಂತ್ಯ ಹಿಂದೂ ಜಾಗರಣ ವೇದಿಕೆ ತ್ರೈ ವಾರ್ಷಿಕ ಸಮಾವೇಶದಲ್ಲಿ ಮಾತನಾಡಿದ ಸಂಸದೆ, ಶಿವಮೊಗ್ಗದಲ್ಲಿ ವೀರ ಶಿವಮೂರ್ತಿ, ಬಿಜೆಪಿ ಕಾರ್ಯಕರ್ತ ವಿಶ್ವನಾಥ ಶೆಟ್ಟಿ, ಗೋವಿಂದ್ ರಾಜ್, ಭಜರಂಗದಳ ಗೋಕುಲ್ ಇವರನ್ನು ಹತ್ಯೆಗೆಯಲಾಯಿತು, ಹಿಂದೂ ಹರ್ಷನ ಹತ್ಯೆಗ್ಗೈದು ಹೆಚ್ಚು ದಿನ ಆಗಲಿಲ್ಲ, ರುದ್ರೇಶ್, ಪ್ರವೀಣ್ ನೆಟ್ಟಾರ್, ಕುಟ್ಟಪ್ಪ, ಸೌಮ್ಯ ಭಟ್ ಮೊದಲಾದವರ ಹತ್ಯೆ ಮಾಡಲಾಗಿದೆ. ನಾವು ಪ್ರಾಣತ್ಯಾಗಕ್ಕೂ ಸಿದ್ಧ ಪ್ರಾಣ ತೆಗೆಯುವುದಕ್ಕೂ ಸಿದ್ಧ ಎಂದು ಭಾಷಣ ಮಾಡಿದ್ದಾರೆ.
ಮೊಘಲರ ಕಾಲದಲ್ಲಿ ವೀರ ಶಿವಾಜಿ ಸೇರಿದಂತೆ ಹಲವರು ವೀರಗತಿ ಪಡೆದಿದ್ದರು. ತಾವು ಎಲ್ಲೇ ಇದ್ದರೂ ತಮ್ಮ ಗುರುತನ್ನು ಉಳಿಸಿಕೊಳ್ಳಬೇಕು. ನಮ್ಮ ಜನ್ಮ ಭೂಮಿ ಸ್ವರ್ಗಕ್ಕೆ ಸಮಾನ, ಇದರ ಋಣವನ್ನು ನಾವು ತೀರಿಸಲೇಬೇಕು, ಸತ್ಯ ಧರ್ಮದ ಮೇಲೆ ನಡೆಯುವವರು, ವಿರೋಧಿಗಳಿಗೆ ಪ್ರತಿಕ್ರಿಯೆ ಕೊಡಬೇಕಾಗಿದೆ ಎಂದು ಅವರು ಹೇಳಿದ್ದಾರೆ.
“ಈಗ ಸಾಯುವ ಕಾಲ ಸಾಯಿಸುವ ಕಾಲ. ನನ್ನ ಈ ರೀತಿ ಹೇಳಿಕೆ ಕೊಟ್ಟರೆ ಬಿಜೆಪಿ ಸಂಸದೆ ಎಂದು ಕರೆಯುತ್ತಾರೆ, ನಾನು ಹಿಂದುತ್ವದ ಕಾರಣದಿಂದಲೇ ಬಿಜೆಪಿ ಸಂಸದೆಯಾಗಿದ್ದೇನೆ,ನನ್ನನ್ನು ಸಾಯಿಸಲು ಬಹಳಷ್ಟು ಬೆದರಿಕೆಗಳು ಬರುತ್ತದೆ. ನಾನು ಅವರಿಗೆ ಎದುರಿಗೆ ಬನ್ನಿ ಎಂದು ಸವಾಲು ಒಡ್ಡುತ್ತೇನೆ, ನಾರಿ ಶಕ್ತಿ ಹೇಗಿರುತ್ತದೆ, ಸನಾತನ ಶಕ್ತಿ ಹೇಗಿರುತ್ತೆ ಎಂದು ತೋರಿಸುತ್ತೇನೆ, ರಾಜಕೀಯ ಇರುತ್ತೆ ಹೋಗುತ್ತೆ ಆದರೆ ಸನ್ಯಾಸತ್ವ ಹಾಗಲ್ಲ,” ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.

“ಕಾಶ್ಮೀರ ಬಿಟ್ಟು ಕೊಡಿ ಎನ್ನುತ್ತಾರೆ. ಅದು ಕೇವಲ ತುಂಡುಭೂಮಿಯಲ್ಲ ಭಾರತಮಾತೆಯ ಶಿರ, ಅದನ್ನು ಯಾರಿಗೂ ಕೊಡಲು ಸಾಧ್ಯವಿಲ್ಲ. ನನ್ನ ದೇಹ, ರಕ್ತದ ಕಣ ಎಲ್ಲವೂ ಭಾರತ ಮಾತೆ ಇದ್ದಾಳೆ.” ಎಂದು ಅವರು ಹೇಳಿದ್ದಾರೆ. ಈ ನಡುವೆ, ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಅವರು, “ಜನಿವಾರ, ಧೋತಿ ಧರಿಸಿದರೆ ಹಿಂದೂ ಆಗೋದಿಲ್ಲ” ಎಂದು ಕುಟುಕಿದ್ದಾರೆ.
ನರೇಂದ್ರ ಮೋದಿ ಸುಮ್ಮನೆ ಪ್ರಧಾನಿ ಆಗಲಿಲ್ಲ ಅವರ ತನುಮನದಲ್ಲಿ ದೇಶಕ್ಕೆ ಅರ್ಪಣೆ ಇದೆ. ಪ್ರಪಂಚದ ದೊಡ್ಡ ದೊಡ್ಡ ದೇಶಗಳಲ್ಲಿ ಭಾರತದ ಧ್ವಜ ಹಿಡಿದರೆ ಸುರಕ್ಷಿತರಾಗುತ್ತೇವೆ.ಹಿಂದೂಗೆ ಅಪಮಾನ ಮಾಡುವುದನ್ನು ಕಾಂಗ್ರೆಸ್ ಬಿಡಬೇಕು, ಹಿಂದು ಈಗ ಜಾಗೃತನಾಗಿದ್ದಾನೆ. ಹಿಂದೂ ಉಗ್ರಗಾಮಿ ಆಗಿದ್ದರೆ ದೇಶ ಸುರಕ್ಷಿತವಾಗಿ ಇರುತ್ತಿರಲಿಲ್ಲ. ಅತಿಥಿ ದೇವೋಭವ ಎಂದು ರೋಹಿಂಗ್ಯಾಗಳನ್ನು ಭಾರತದಲ್ಲಿ ಬಿಟ್ಟುಕೊಂಡು ಅವರೀಗ ಉಗ್ರ ಚಟುವಟಿಕೆ ನಡೆಸುತ್ತಿದ್ದಾರೆ.ಲವ್ ಜಿಹಾದ್ ಮಾಡುವವರಿಗೆ ಲವ್ ಜಿಹಾದ್ ಮೂಲಕ ಉತ್ತರ ಕೊಡಿ . ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿ ಸಿದ್ಧವಾಗಿಡಿ ಎಂದು ಪ್ರಜ್ಞಾ ಸಿಂಗ್ ಹೇಳಿದ್ದಾರೆ.
ಯಾವಾಗ ಸಮಯ ಬರುತ್ತೋ ಗೊತ್ತಿಲ್ಲ ಆತ್ಮ ರಕ್ಷಣೆಗಾಗಿ ನಾವು ದಾಳಿ ಮಾಡಬೇಕಾಗುತ್ತದೆ.ಹರ್ಷ ಹಿಂದೂ ಸೇರಿದಂತೆ ಹಲವರ ಮೇಲೆ ನಡೆದ ದಾಳಿ ನಮ್ಮ ಮೇಲೂ ಆಗಬಹುದು.ಹೆಣ್ಣು ಮಕ್ಕಳನ್ನು ನಡೆದಾಡುವ ಆಟಂ ಬಾಂಬುಗಳಂತೆ ಸಿದ್ಧಪಡಿಸಬೇಕು. ಹೆಣ್ಣು ಮಕ್ಕಳ ಮರ್ಯಾದೆಗೆ ಧಕ್ಕೆ ಬಂದರೆ ತಿರುಗಿ ಬೀಳಬೇಕಿದೆ. ನಮ್ಮ ಹೆಣ್ಣುಮಕ್ಕಳನ್ನು ಲವ್ ಜಿಹಾದ್ ನಲ್ಲಿ ಬೀಳದಂತೆ ನೋಡಿಕೊಳ್ಳಬೇಕು. ನಾವು ಕೂಡ ಪಕ್ಷಿ ಸಂಕುಲದಂತೆ ನಮ್ಮ ಕುಟುಂಬದ ನಮ್ಮ ಪ್ರದೇಶದ ಹಾಗೆ ದೇಶದ ರಕ್ಷಣೆಗೆ ಸಿದ್ದರಾಗಬೇಕು ಎಂದು ಸಿಂಗ್ ಕರೆ ನೀಡಿದ್ದಾರೆ.

ಮನೆಯಲ್ಲಿ ಆಯುಧ ಇಟ್ಟುಕೊಳ್ಳುವುದು ಕಾನೂನುಬಾಹಿರ ಇರಬಹುದು. ಆದರೆ ಆತ್ಮರಕ್ಷಣೆಗಾಗಿ ಆಯುಧಗಳನ್ನು ಇಟ್ಟುಕೊಳ್ಳುವುದು ತಪ್ಪಲ್ಲ. ಅಗತ್ಯ ಬಿದ್ದರೆ ಆಯುಧಗಳಿಗೆ ಪರವಾನಿಗೆ ಇಟ್ಟುಕೊಳ್ಳಿ. ಧರ್ಮದ ಪಕ್ಷದಲ್ಲಿದ್ದರೆ ಯಾವುದಕ್ಕೂ ಹೆದರಬೇಕಾಗಿಲ್ಲ ಈ ಕಾರಣಕ್ಕಾಗಿ 9 ವರ್ಷಗಳ ಕಾಲ ಹಾಸಿಗೆಯಲ್ಲಿ ಇದ್ದವಳು ನಿಮ್ಮ ಮುಂದೆ ನಿಂತಿದ್ದೇನೆ ಎಂದು ಅವರು ಹೇಳಿದ್ದಾರೆ.
ಸಿಎಎ ವಿರುದ್ಧ ಪ್ರತಿಭಟನೆ ಬೇಕಿರಲಿಲ್ಲ ಆದರೂ ಪ್ರತಿಭಟನೆ ನಡೆಸಿದರು. ಕಾಮನ್ ಸಿವಿಲ್ ಕೋಡ್ ಬೇಕು,. ಜನಸಂಖ್ಯಾ ನಿಯಂತ್ರಣ ದೇಶದಲ್ಲಿ ಆಗಬೇಕಿದೆ. ಹಿಂದೂ ರಾಷ್ಟ್ರ ಆದರೆ ದೇಶದ ಜನತೆ ಸುಖವಾಗಿರುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಸಮಾವೇಶ ಮುಗಿದ ಬಳಿಕ ಸೀಗೆಹಟ್ಟಿಯಲ್ಲಿರುವ ಹರ್ಷ ಮನೆಗೆ ಭೇಟಿ ನೀಡಿದ ಠಾಕೂರ್, ಹರ್ಷಾ ತಂದೆ-ತಾಯಿ ಹಾಗೂ ಸಂಬಂಧಿಕರನ್ನ ಭೇಟಿಯಾದರು.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಟಂಬದೊಂದಿಗೆ ನಾವಿದ್ದೇವೆ. ಹಿಂದುತ್ವ, ಧರ್ಮ, ದೇಶಕ್ಕೆ ಬಲಿದಾನವಾಗಿದೆ. ಅಧರ್ಮಿಯರು ಆತನನ್ನ ಕೊಂದಿದ್ದಾರೆ. ಅವರು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಎಷ್ಟು ಬಲಿದಾನವಾಗುತ್ತದೆಯೋ ಅಷ್ಟು ಹಿಂದೂ ಜಾಗೃತರಾಗುತ್ತಾರೆ. ಹಿಂದೂ ಯುವಕರ ಮನೋಬಲ ಕಡಿಮೆಯಾಗಬಾರದು. ಆ ಕಾರಣಕ್ಕಾಗಿ ಇಲ್ಲಿಗೆ ಭೇಟಿ ನೀಡಿದ್ದೇನೆ. ಹರ್ಷಾನ ಅಪ್ಪ, ಅಮ್ಮ, ಸಂಬಂಧಿಕರು ಅನಾಥರಲ್ಲ. ಇಡೀ ದೇಶ ಕುಟುಂಬದೊಂದಿಗೆ ಇದೆ. ಅವರ ಮನೋಬಲ ಕುಗ್ಗೋದಕ್ಕೆ ಬಿಡೋದಿಲ್ಲ. ಕಾನೂನಿನಲ್ಲಿ ಬದಲಾವಣೆ ಆಗ್ತಾ ಇದೆ. ಯುಪಿಎ ಕಾಯ್ದೆ ತುಂಬಾ ಕಠಿಣವಾಗುತ್ತಿದೆ. ಗೃಹ ಸಚಿವ ಅಮಿತ್ ಶಾ ಈ ನಿಟ್ಟಿನಲ್ಲಿ ಪರಿಶ್ರಮ ಹಾಕುತ್ತಿದ್ದಾರೆ. ದತ್ತಪೀಠಕ್ಕೆ ಭೇಟಿ ನೀಡುತ್ತಿದ್ದೇನೆ, ಇದು ನನ್ನ ಸೌಭಾಗ್ಯ. ನಾನು ಸಂನ್ಯಾಸಿನಿ, ದತ್ತ, ಶಂಕರಾಚಾರ್ಯರ ಆಶೀರ್ವಾದ ಬೇಕು. ದತ್ತ ವಿವಾದ ನಿರ್ವಿವಾದ ಆಗುತ್ತೆ, ಅಯೋಧ್ಯೆಯಂತೆ ಇಲ್ಲೂ ಆಗುತ್ತೆ ಎಂದು ಅವರು ಹೇಳಿದ್ದಾರೆ.