ನವದೆಹಲಿ: ರಷ್ಯಾ ಅಧ್ಯಕ್ಷ ವಾಗ್ಲಿಮಿರ್ ಪುಟಿನ್ ಡಿ.4ರಂದು ನವದೆಹಲಿಗೆ ಭೇಟಿ ನೀಡಲಿದ್ದಾರೆ. ಎರಡು ದಿನಗಳ ಈ ಭೇಟಿಯ ಹಿನ್ನಲೆ ರಾಷ್ಟ್ರ ರಾಜಧಾನಿಯಲ್ಲಿ ಭದ್ರತಾ ಪಡೆಗಳು ಹೈ ಅಲರ್ಟ್ ಆಗಿವೆ.
ಈಗಾಗಲೇ ಪುಟಿನ್ ಭಾರತ ಪ್ರವಾಸದ ವೇಳಾಪಟ್ಟಿಯನ್ನು ತಯಾರಿಸಲಾಗಿದೆ. ಆದರೆ, ಪ್ರವಾಸದ ವೇಳೆ ಪುಟಿನ್ ಎಲ್ಲಿ ತಂಗಲಿದ್ದಾರೆ ಎನ್ನುವ ಮಾಹಿತಿಯನ್ನು ಭದ್ರತಾ ಉದ್ದೇಶದಿಂದ ಬಿಡುಗಡೆಗೊಳಿಸಿಲ್ಲ. ಸದ್ಯ ವಿವಿಧ ಭದ್ರತಾ ಪಡೆಗಳು ನವದೆಹಲಿಯ ಪ್ರಮುಖ ಸ್ಥಳಗಳಲ್ಲಿ
ರಕ್ಷಣಾ ವ್ಯವಸ್ಥೆಯನ್ನು ಪರಿಶೀಲಿಸಿವೆ.
ಪುಟಿನ್ ಭಾರತದಲ್ಲಿ ಇರುವ ತನಕ ಅವರ ಪ್ರತಿಯೊಂದು ಚಲನವಲನವನ್ನು ದೆಹಲಿ ಪೊಲೀಸ್, ಕೇಂದ್ರ ಭದ್ರತಾ ಪಡೆಗಳು, ಭಯೋತ್ಪಾದಕ ನಿಗ್ರಹದಳ, ರಷ್ಯಾದ ಅಧಿಕಾರಿಗಳು ಸೇರಿದಂತೆ ವಿವಿಧ ಭದ್ರತಾ ಪಡೆಗಳು ನೋಡಿಕೊಳ್ಳಲಿವೆ. ಟ್ರಾಫಿಕ್ನಿಂದ ನೈರ್ಮಲೀಕರಣದವರೆಗೆ ಎಲ್ಲಾ ವಿಷಯಗಳಲ್ಲೂ ನಿಗವಹಿಸಲಾಗಿದೆ.
ಇನ್ನು ಪುಟಿನ್ ಭೇಟಿಗೂ ಮುನ್ನ ರಷ್ಯಾದ 50 ಮಂದಿ ಅಧಿಕಾರಿಗಳು ದೆಹಲಿಗೆ ಆಗಮಿಸಲಿದ್ದು, ಭದ್ರತಾ ವ್ಯವಸ್ಥೆಯನು ಪುನರ್ ಪರಿಶೀಲನೆ ಮಾಡಲಿದ್ದಾರೆ.
ಪುಟಿನ್ ಮತ್ತು ಮೋದಿ 23ನೇ ಭಾರತ – ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲಿದ್ದು, 2021ರ ಬಳಿಕ ಮೊದಲ ಬಾರಿಗೆ ಪುಟಿನ್ ಭಾರತಕ್ಕೆ ಭೇಟಿ ನೀಡುತ್ತಿದ್ದಾರೆ. ಹೀಗಾಗಿ ಈ ಸಭೆ ವಿಶೇಷವಾಗಿದೆ.
ಪುಟಿನ್ ಭೇಟಿಯು ರಕ್ಷಣೆ, ಇಂಧನ, ಬಾಹ್ಯಾಕಾಶ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಭಾರತ-ರಷ್ಯಾ ಸಂಬಂಧಗಳನ್ನು ಬಲಪಡಿಸುವ ನಿರೀಕ್ಷೆಯಿದೆ.












