ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಕಾಲದಲ್ಲಿ ಬಡ್ಡಿದರ ಏರಿಕೆ ಮಾಡಿ ಹಣಕಾಸು ಮಾರುಕಟ್ಟೆಗೆ ಅಚ್ಚರಿ ನೀಡುತ್ತಿದ್ದಂತೆ, ಆರ್ಬಿಐ ಕೂಡಾ ಅಚ್ಚರಿಗಳನ್ನು ಎದುರಿಸುತ್ತಿದೆ.
ಮೊದಲನೆಯಾದಾಗಿ, ಬಡ್ಡಿದರ ಏರಿಕೆ ಮಾಡುತ್ತಿದ್ದಂತೆ ಷೇರು ಪೇಟೆ ತೀವ್ರವಾಗಿ ಕುಸಿಯುತ್ತಿದೆ. ಬಡ್ಡಿ ಏರಿಸಿದ ದಿನ ಕುಸಿಯಲಾರಂಭಿಸಿದ್ದು ಚೇತರಿಸಿಕೊಂಡೇ ಇಲ್ಲ. ಸೋಮವಾರ ದಿನದ ವಹಿವಾಟಿನಲ್ಲಿ 900 ಅಂಶಗಳಷ್ಟು ಕುಸಿತ ದಾಖಲಿಸಿದೆ. ನಾಲ್ಕು ದಿನಗಳ ಒಟ್ಟಾರೆ ಕುಸಿತವು 3000 ಅಂಶಗಳಷ್ಟಾಗಿದೆ.
ಎಲ್ಲಕ್ಕಿಂತ ದೊಡ್ಡ ಅಚ್ಚರಿ ಎಂದರೆ ಡಾಲರ್ ವಿರುದ್ಧ ರೂಪಾಯಿ ತೀವ್ರವಾಗಿ ಕುಸಿದಿದೆ. ಸೋಮವಾರದ ಕರೆನ್ಸಿ ವಹಿವಾಟಿನ ವೇಳೆ ಪ್ರತಿ ಡಾಲರಿಗೆ 77.44ರಷ್ಟು ಕುಸಿದು ಸಾರ್ವಕಾಲಿಕ ದಾಖಲೆ ಮಾಡಿದೆ. ಈ ಹಿಂದಿನ ಕನಿಷ್ಟ ಮೌಲ್ಯವು ಮಾರ್ಚ್ 7 ರಂದು 77.08ರಷ್ಟಾಗಿತ್ತು.
ರಫ್ತಿಗಿಂತ ದುಪ್ಪಟ್ಟು ಆಮದು ಮಾಡಿಕೊಳ್ಳುವ ಭಾರತಕ್ಕೆ ಡಾಲರ್ ವಿರುದ್ಧ ರುಪಾಯಿ ಮೌಲ್ಯ ಕುಸಿದರೆ ಹೆಚ್ಚಿನ ಹೊರೆಯಾಗುತ್ತದೆ. ದೀರ್ಘಕಾಲದಲ್ಲಿ ಇದು ಜಿಡಿಪಿ ಕುಸಿತಕ್ಕೂ ಕಾರಣವಾಗುತ್ತದೆ. ಜನವರಿ 12ರಂದು ಪ್ರತಿ ಡಾಲರ್ ಗೆ 73.80 ಇದ್ದ ರೂಪಾಯಿ ಮೌಲ್ಯವು ನಾಲ್ಕೇ ತಿಂಗಳಲ್ಲಿ 3.64 ರಷ್ಟು ಕುಸಿತ ದಾಖಲಿಸಿದೆ. ಇತ್ತೀಚಿನ ವರ್ಷಗಳಲ್ಲಿ ತ್ವರಿತ ಕುಸಿತ ಇದಾಗಿದೆ.
ಹೆಚ್ಚುತ್ತಿರುವ ಹಣದುಬ್ಬರ, ತ್ವರಿತವಾಗಿ ಕುಸಿಯುತ್ತಿರುವ ವಿದೇಶಿ ನೇರ ಬಂಡವಾಳ ಹೂಡಿಕೆ, ಅದರಿಂದಾಗಬಹುದಾದ ವ್ಯತಿರಿಕ್ತ ಆರ್ಥಿಕ ಪರಿಣಾಮಗಳ ಹಿನ್ನೆಲೆಯಲ್ಲಿ ರೂಪಾಯಿ ಮೌಲ್ಯ ಕುಸಿಯುತ್ತಿದೆ.
ಉಕ್ರೇನ್- ರಷ್ಯಾ ಯುದ್ಧ ಆರಂಭವಾದ ನಂತರ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ತೀವ್ರವಾಗಿ ಏರಿದೆ. ಮತ್ತು ದರ ತೀವ್ರ ಅಸ್ಥಿರವಾಗಿದೆ. ಭಾರತ ಶೇ.90ರಷ್ಟು ಕಚ್ಚಾ ತೈಲ ಆಮದು ಮಾಡಿಕೊಳ್ಳುತ್ತದೆ. ಹೀಗಾಗಿ ರೂಪಾಯಿ ಮೌಲ್ಯ ಕುಸಿಯುತ್ತಿದೆ.
ಈ ನಡುವೆ ರೂಪಾಯಿ ಮೌಲ್ಯ ಕುಸಿಯುವುದನ್ನು ತಡೆಗಟ್ಟಲು ಭಾರತೀಯ ರಿಸರ್ವ್ ಬ್ಯಾಂಕ್ ತನ್ನ ವಿದೇಶಿ ವಿನಿಮಯ ನಿಧಿಯಿಂದ ಡಾಲರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.
ಅದರಿಂದಾಗಿ ರೂಪಾಯಿ ಮೌಲ್ಯ ಕುಸಿತ ತೀವ್ರವಾಗುವುದನ್ನು ತಾತ್ಕಾಲಿಕ ತಡೆಗಟ್ಟಲಾಯಿತು. ಆದರೆ, ಆರ್ಬಿಐ ಸದಾ ಕಾಲ ರೂಪಾಯಿ ಮೌಲ್ಯ ಕಾಪಾಡಲು ತನ್ನ ವಿದೇಶಿ ವಿನಿಮಯ ನಿಧಿ ಬಳಸಲು ಸಾಧ್ಯವಾಗುವುದಿಲ್ಲ. ಈಗಾಗಲೇ ವಿದೇಶಿ ವಿನಿಮಯ ನಿಧಿಯು 600 ಬಿಲಿಯನ್ ಡಾಲರ್ ಗಳಿಗಿಂತ ಕೆಳಮಟ್ಟಕ್ಕೆ ಇಳಿದಿದೆ. ಈ ಮೊತ್ತವು ನಮ್ಮ ಮುಂದಿನ ಒಂದು ವರ್ಷದ ಆಮದುಗಳ ಪಾವತಿಗೆ ಮಾತ್ರ ಸಾಕಾಗುತ್ತದೆ. ಈ ಹಿಂದೆ ವಿದೇಶಿ ವಿನಿಮಯ ನಿಧಿಯು 17 ತಿಂಗಳಿಗಾಗುವಷ್ಟು ಸಂಗ್ರಹವಿತ್ತು.
ವಿದೇಶಿ ವಿನಿಮಯ ನಿಧಿ ಸಂಗ್ರಹವು ತಗ್ಗುತ್ತಾ ಹೋದಷ್ಟು ಆರ್ಥಿಕ ಬಿಕ್ಕಟ್ಟು ಹಿಗ್ಗುತ್ತಾ ಹೋಗುತ್ತದೆ. ಪಾಕಿಸ್ತಾನ, ಶ್ರೀಲಂಕಾ ದೇಶಗಳ ದಿವಾಳಿಯತ್ತ ಸಾಗಿರುವುದೇ ವಿದೇಶಿ ವಿನಿಮಯ ಖಾಲಿ ಆಗಿರುವುದರಿಂದ.
ರೂಪಾಯಿ ಮೌಲ್ಯ ಕುಸಿತವು ಐಟಿ ಮತ್ತಿತರ ರಫ್ತು ಆಧಾರಿತ ಉದ್ಯಮಗಳಿಗೆ ವರದಾನವಾಗಲಿದೆ. ಪಾವತಿಯು ಡಾಲರ್ ರೂಪದಲ್ಲಿ ಆಗುವುದರಿಂದ ಹೆಚ್ಚಿನ ಲಾಭವಾಗುತ್ತದೆ. ಇದು ರಫ್ತು ಪ್ರಮಾಣವು ಆಮದು ಪ್ರಮಾಣಕ್ಕಿಂತ ಹೆಚ್ಚಿದ್ದಾಗ ಒಟ್ಟಾರೆ ದೇಶಕ್ಕೆ ಅನುಕೂಲ. ಆದರೆ, ಭಾರತವು ರಫ್ತಿಗಿಂತ ದುಪ್ಪಟ್ಟು ಆಮದು ಮಾಡಿಕೊಳ್ಳುತ್ತಿದೆ. ಹೀಗಾಗಿ ರೂಪಾಯಿ ಮೌಲ್ಯ ಕುಸಿತವು ಆರ್ಥಿಕವಾಗಿ ಭಾರಿ ಹೊರೆಯಾಗಲಿದೆ.
ಮೋದಿ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ 2014ರ ಮೇ ತಿಂಗಳಲ್ಲಿ ಡಾಲರ್ ವಿರುದ್ಧ ರುಪಾಯಿ ಮೌಲ್ಯ 58.58 ರಷ್ಟಿತ್ತು. ನಂತರ ದಿನಗಳಲ್ಲಿ ರುಪಾಯಿ ಮೌಲ್ಯ ಕುಸಿಯುತ್ತಾ ಬಂದು ಈಗ ಸಾರ್ವಕಾಲಿಕ ಕನಿಷ್ಠ ಮಟ್ಟವಾದ 77.44ಕ್ಕೆ ಕುಸಿದಿದೆ. ಕಳೆದ ಎಂಟು ವರ್ಷಗಳಲ್ಲಿ ರುಪಾಯಿ ಮೌಲ್ಯವು 18.86 ರುಪಾಯಿಗಳಷ್ಟು ಕುಸಿದಿದೆ. ಕುಸಿತದ ಪ್ರಮಾಣವು ಶೇ.38.19ರಷ್ಟಾಗಿದೆ. 2008ರ ಜಾಗತಿಕ ಆರ್ಥಿಕ ಕುಸಿತ ಹೊರತು ಪಡಿಸಿದರೆ, ರೂಪಾಯಿ ತ್ವರಿತವಾಗಿ ಕುಸಿದಿರುವುದು 2014ರಿಂದೀಚೆಗೆ.