ಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ ಹಿಂದುಳಿದ ವರ್ಗಗಳು, ಮಹಿಳೆಯರು, ದಲಿತರಿಗೆ ಮೀಸಲಾತಿ ನೀಡುವ ಕಾನೂನು ಜಾರಿಗೊಳಿಸಿದಾಗ ಅದರ ವಿರುದ್ಧ ರಾಮಜೋಯ್ಸ್ ಅವರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಆರ್.ಎಸ್.ಎಸ್ ನಾಯಕರು ಯಾವತ್ತೂ ಮೀಸಲಾತಿ ಪರವಾಗಿರುವವರಲ್ಲ. ಸಾಮಾಜಿಕ ನ್ಯಾಯ, ಸರ್ವಧರ್ಮ ಸಮನ್ವಯ ಸಾರುವ ಸಂವಿಧಾನ ಬದಲಾವಣೆ ಮಾಡಬೇಕು ಎಂಬುದು ಅವರ ಗುಪ್ತ ಅಜೆಂಡಾ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.
“ಮುಂದುವರೆದ ಜಾತಿಗಳ ಬಡವರಿಗೆ ಶೇ. 10 ಮೀಸಲಾತಿ ಘೋಷಣೆ ಮಾಡಿದ ನಂತರದಿಂದ ಮೀಸಲಾತಿಯ ಬಗ್ಗೆ ಆರ್.ಎಸ್.ಎಸ್ ಧೋರಣೆ ಬದಲಾದಂತೆ ಕಾಣುತ್ತಿದೆ. ಈ ಕಾರಣಕ್ಕಾಗಿ ಬಿಜೆಪಿಯವರು ಮೀಸಲಾತಿ ವಿರುದ್ಧ ಮಾತನಾಡುತ್ತಿಲ್ಲ. “
“ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದೆ, ಅವರು ಜಾತಿಗಣತಿ ಏಕೆ ಮಾಡಬಾರದು? ಜಾತಿಗಣತಿ ಮಾಡಿದರೆ ಬಡತನ ರೇಖೆಗಳಿಗಿಂತ ಕೆಳಗಿರುವ, ಅಸ್ಪೃಶ್ಯರಿಗೆ ಸರ್ಕಾರಿ ಯೋಜನೆಗಳ ಮೂಲಕ ವಿಶೇಷ ಗಮನ ನೀಡಲು ಅನುಕೂಲವಾಗಲಿದೆ. ನ್ಯಾಯಾಲಯದಲ್ಲಿ ಮೀಸಲಾತಿ ವಿಚಾರ ಬಂದಾಗಲೆಲ್ಲಾ ಜಾತಿಗಣತಿಗೆ ಸಂಬಂಧಿಸಿದಂತೆ ನಿಮ್ಮ ಬಳಿಯಿರುವ ವಸ್ತುನಿಷ್ಠ, ನಂಬಿಕಾರ್ಹ ಮಾಹಿತಿ ಏನು ಎಂದು ನ್ಯಾಯಾಲಯ ಪ್ರಶ್ನಿಸುತ್ತದೆ. ಈ ಕಾರಣಕ್ಕಾಗಿ ನಾನು ಮುಖ್ಯಮಂತ್ರಿ ಆಗಿದ್ದಾಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಗಣತಿಗೆ ಆದೇಶ ಮಾಡಿದ್ದೆ. 1931 ರಲ್ಲಿ ದೇಶದಲ್ಲಿ ಕಡೇ ಬಾರಿಗೆ ಜಾತಿಗಣತಿ ನಡೆದದ್ದು.”
“ಈಗಿನ ಬಿಜೆಪಿ ಸರ್ಕಾರ ಸಂವಿಧಾನಕ್ಕೆ 127ನೇ ತಿದ್ದುಪಡಿ ಮಾಡಿ, ಹಿಂದುಳಿದ ಜಾತಿಗಳನ್ನು ಗುರುತಿಸುವ ಅಧಿಕಾರವನ್ನು ರಾಜ್ಯಗಳಿಗೆ ಮರಳಿ ಅಧಿಕಾರ ನೀಡಿದ್ದಾರೆ. ಆರ್ಥಿಕವಾಗಿ ಹಿಂದುಳಿದವರಿಗೆ ಶೇ.10 ಮೀಸಲಾತಿ ನೀಡಿರುವುದು ಸಂವಿಧಾನ ಬಾಹಿರವಾಗುತ್ತದೆ. 1992ರ ಇಂದಿರಾ ಸಹಾನಿ ಪ್ರಕರಣದಲ್ಲಿ ಮೀಸಲಾತಿ ಪ್ರಮಾಣ ಶೇ. 50 ಮೀರಬಾರದು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ. ಈಗ ಮೀಸಲಾತಿ ಶೇ. 60 ದಾಟಿದೆ.“
“ಕೆಲವು ವಿಶೇಷ ಸಂದರ್ಭಗಳಲ್ಲಿ ಮೀಸಲಾತಿ ಪ್ರಮಾಣದ ಮಿತಿಯನ್ನು ದಾಟಬಹುದು ಎಂದು ಸುಪ್ರೀಂ ಕೋರ್ಟ್ ಇದೇ ಸಂದರ್ಭದಲ್ಲಿ ಹೇಳಿದ್ದು, ಈ ವಿಶೇಷ ಸಂದರ್ಭಗಳು ಯಾವುದು ಎಂಬುದನ್ನು ರಾಜ್ಯಗಳು ನಿರ್ಧರಿಸಬೇಕು. ತಮಿಳುನಾಡಲ್ಲಿ ಶೇ. 70 ಮೀಸಲಾತಿ ಇದೆ, ಮಹಾರಾಷ್ಟ್ರದಲ್ಲೂ ಮೀಸಲಾತಿ ಪ್ರಮಾಣ ಹೆಚ್ಚಿದೆ. ಕೇಂದ್ರ ಸರ್ಕಾರಕ್ಕೆ ಮೀಸಲಾತಿ ವಿಚಾರದಲ್ಲಿ ಬದ್ಧತೆಯಿದ್ದರೆ ಜಾತಿಗಣತಿ ಮಾಡಲಿ. ಇದರಿಂದ ಸ್ಪಷ್ಟ ಚಿತ್ರಣ ದೊರೆಯಲಿದೆ.”
“ನಮ್ಮ ಸರ್ಕಾರದ ಅವಧಿಯಲ್ಲಿ ಆದೇಶಿಸಲಾಗಿದ್ದ ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆಯ ವರದಿ ಮೈತ್ರಿ ಸರ್ಕಾರದ ವೇಳೆ ಪೂರ್ಣಗೊಂಡಿತ್ತು. ಆಗ ಪುಟ್ಟರಂಗ ಶೆಟ್ಟಿಯವರು ಹಿಂದುಳಿದ ವರ್ಗಗಳು ಹಾಗೂ ಸಮಾಜ ಕಲ್ಯಾಣ ಇಲಾಖೆಯ ಸಚಿವರಾಗಿದ್ದರು. ಅವರಿಗೆ ವರದಿ ಸ್ವೀಕರಿಸದಂತೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ತಾಕೀತು ಮಾಡಿದ್ದರು. ಈಗ ಬಿಜೆಪಿ ಸರ್ಕಾರವಾದರೂ ವರದಿಯನ್ನು ಸ್ವೀಕರಿಸಿ, ವರದಿ ಬಗ್ಗೆ ಚರ್ಚೆ ಮಾಡಲಿ. ಮುಂದಿನ ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಕೂಡಲೇ ವರದಿ ಸ್ವೀಕರಿಸುತ್ತೇವೆ.”
“ರಾಜ್ಯ ಬಿಜೆಪಿ ಸರ್ಕಾರದ ಮಂತ್ರಿಮಂಡಲ ರಚನೆಗೆ ಸಂಬಂಧಿಸಿದಂತೆ ಹಲವು ಮಂದಿ ಶಾಸಕರಿಗೆ ಅಸಮಧಾನವಿದೆ. ಈ ಅಸಮಧಾನದ ಹೊಗೆ ಯಾವಾಗ ಬೇಕಾದರೂ ಸ್ಪೋಟಗೊಳ್ಳಬಹುದು. ಯಾರಿಗೆ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಗೌರವವಿರಲ್ಲ, ಅಂಥವರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡುತ್ತಾರೆ.”
ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಕುರಿತು ಪ್ರತಿಕ್ರಯಿಸಿದ ಅವರು, “ನಾವು ವಿದ್ಯುತ್ ಕ್ಷೇತ್ರವನ್ನು ಖಾಸಗೀಕರಣಗೊಳಿಸುವ ಕಾಯ್ದೆಯನ್ನು ಜಾರಿಗೆ ತರಲು ಹೊರಟಿಲ್ಲ ಎಂದು ಬಿಜೆಪಿಯವರು ಸಂಸತ್ತಿನಲ್ಲಿ ಹೇಳಲಿ, ಆಗ ನಾನು ವಿರೋಧ ಮಾಡಲ್ಲ. ಬಿಜೆಪಿಯವರು ಎಷ್ಟೋ ಕಾಯ್ದೆಗಳನ್ನು ಚರ್ಚೆಯೇ ಮಾಡದೆ ಜಾರಿ ಮಾಡಿದ್ದಾರೆ. ಇವರನ್ನು ಹೇಗೆ ನಂಬೋದು?” ಎಂದು ಪ್ರಶ್ನಿಸಿದ್ದಾರೆ.
“ಶಿಕ್ಷಣ ಮೊದಲು ರಾಜ್ಯಪಟ್ಟಿಯ ವಿಷಯವಾಗಿತ್ತು, ನಂತರ ಸಮವರ್ತಿ ಪಟ್ಟಿಗೆ ಸೇರಿತು. ಈಗಿನ ಬಿಜೆಪಿ ಸರ್ಕಾರ ರಾಜ್ಯಗಳನ್ನು ಕಡೆಗಣಿಸಿ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರಾಜ್ಯಗಳ ಮೇಲೆ ಒತ್ತಾಯಪೂರ್ವಕವಾಗಿ ಹೇರಲು ಹೊರಟಿರುವುದು ಎಷ್ಟು ಸರಿ? ಎಪಿಎಂಸಿ ಕಾಯ್ದೆ, ಕೃಷಿ ಕಾಯ್ದೆ ಇವುಗಳ ಬಗ್ಗೆ ಬಿಜೆಪಿ ಸರ್ಕಾರ ಚರ್ಚೆ ಮಾಡಿದೆಯೇ?”
“ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಜಾರಿಯಿಂದ ಮಾತೃಭಾಷಾ ಕಲಿಕೆಗೆ ತೊಡಕಾಗಲಿದೆ. ಮೂರು ವರ್ಷದ ಡಿಗ್ರಿ ಕೋರ್ಸನ್ನು ನಾಲ್ಕು ವರ್ಷಕ್ಕೆ ಹೆಚ್ಚಿಸಿ, ಕನ್ನಡ ಭಾಷಾ ಕಲಿಕೆಯನ್ನು ಎರಡು ವರ್ಷಗಳಿಂದ ಒಂದು ವರ್ಷಕ್ಕೆ ಇಳಿಸಲಾಗುತ್ತದೆ. ಎರಡು ಸೆಮಿಸ್ಟರ್ ಅವಧಿಯಲ್ಲಿ ಕನ್ನಡ ಭಾಷೆ ಕಲಿಯಲು ಸಾಧ್ಯವೇ? ಸದನದಲ್ಲೇ ಕೆಲಸವರಿಗೆ ಸಂಧಿ, ಸಮಾಸಗಳ ಬಗ್ಗೆ ಗೊತ್ತಿಲ್ಲ.”
“ರಾಷ್ಟ್ರೀಯ ಶಿಕ್ಷಣ ನೀತಿಯ ವಿರುದ್ಧ ಖಂಡಿತಾ ನ್ಯಾಯಾಲಯದ ಮೊರೆ ಹೋಗುತ್ತಾರೆ. ಕನ್ನಡ ಭಾಷಾ ವಿಷಯ ಕಲಿಕೆಯನ್ನು ಕನಿಷ್ಠ ಆರು ಸೆಮಿಸ್ಟರ್ ಅಂದರೆ ಮೂರು ವರ್ಷ ಕಲಿಯಲು ಅವಕಾಶ ನೀಡಬೇಕು ಎಂಬುದು ನನ್ನ ಅನಿಸಿಕೆ.” ಎಂದು ಅವರು ಹೇಳಿದ್ದಾರೆ.