~ಡಾ. ಜೆ ಎಸ್ ಪಾಟೀಲ.
ಸಂಘ ತಯ್ಯಾರಿಸಿರುವ ಬೋಧಮಾಲಾ ಪುಸ್ತಕ ಸರಣಿಯು ವೈದಿಕ ಧರ್ಮವನ್ನು ವೈಭವೀಕರಿಸುವ, ಅದು ಭಾರತದ ಏಕೈಕ ಧರ್ಮವೆಂದು ಬಿಂಬಿಸುವ ಮತ್ತು ಅದರ ಬಗ್ಗೆ ಹೆಮ್ಮೆ ಮೂಡಿಸುವ ಮೂಲಕ, ಹಿಂದುತ್ವದ ಸಿದ್ಧಾಂತವನ್ನು ಯುವ ಮನಸ್ಸಿನಲ್ಲಿ ಬಿತ್ತರಿಸುತ್ತವೆ. ಮುಖರ್ಜಿ ಮತ್ತು ಮಹಾಜನ್ ಅವರು ತಮ್ಮ ಪುಸ್ತಕದಲ್ಲಿ ಈ ಬೋಧಮಾಲಾ ಸರಣಿಯ ಕುರಿತು ಹೀಗೆ ಬರೆಯುತ್ತಾರೆ: “ವಿದ್ಯಾ ಭಾರತಿ ಸಂಸ್ಥೆಯು ನಮ್ಮ ಯುವ ಪೀಳಿಗೆಗೆ ಹಿಂದೂ ಧರ್ಮ, ಸಂಸ್ಕೃತಿ ಮತ್ತು ರಾಷ್ಟ್ರೀಯತೆಯ ಶಿಕ್ಷಣವನ್ನು ಒದಗಿಸುವಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳುತ್ತದೆ. ಈ ಪುಸ್ತಕಗಳಲ್ಲಿನ ಹೆಚ್ಚಿನ ವಿಷಯಗಳು ಸ್ಪಷ್ಟವಾಗಿ ಕೋಮುವಾದಿ ವಿಚಾರಗಳನ್ನು ಪ್ರಚಾರ ಮಾಡಲುˌ ಸಂಘದ ನೀತಿ ಮತ್ತು ಕಾರ್ಯಕ್ರಮಗಳನ್ನು ಜನಪ್ರಿಯಗೊಳಿಸಲು ವಿನ್ಯಾಸಗೊಳಿಸಲಾಗಿದೆಯಂತೆ. ಒಟ್ಟಾರೆˌ ದೇಶಭಕ್ತಿಯ ಹೆಸರಿನಲ್ಲಿ ಯುವ ಮನಸ್ಸುಗಳಿಗೆ ಕೋಮುವಾದ ಬಿತ್ತುವುದೇ ಈ ಶಾಲೆಗಳ ಉದ್ದೇಶವಾಗಿದೆ.
ಈ ಸರಣಿಯಲ್ಲಿ ರಾಷ್ಟ್ರೀಯ ಕೋಮುವಾದ ಮತ್ತು ಹಿಂದೂ ಪ್ರಾಬಲ್ಯದ ಪರಿಕಲ್ಪನೆಯನ್ನು ಕ್ರಮೇಣ ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಲಾಗುತ್ತಿದೆ. ಬೋಧಮಾಲಾ ಸರಣಿಯ ಪ್ರತಿ ಪಠ್ಯಪುಸ್ತಕವು ಭಾರತವು ಜಗತ್ತಿನ ಎಲ್ಲಾ ನಾಗರಿಕತೆಗಳ ಮೂಲವೆಂದು ಸಾರುವ ಉದ್ದೇಶವನ್ನು ಹೊಂದಿವೆ. ಇತರ ಧರ್ಮಗಳ ಅಸ್ತಿತ್ವವನ್ನು ನಿರಾಕರಿಸುವ ಅಥವಾ ಅವುಗಳನ್ನು ಸ್ವಾಧೀನಪಡಿಸಿಕೊಳ್ಳುವ ಮೂಲಕ ಹಿಂದೂ ಸನಾತನ ಧರ್ಮವನ್ನು ಭಾರತದ ಸರ್ವೋಚ್ಚ ಧರ್ಮವೆಂದು ಉಲ್ಲೇಖಿಸುವುದು. ಮತ್ತು ಇತರ ರಾಷ್ಟ್ರಗಳ ಸಂಸ್ಕೃತಿ ಮತ್ತು ಇತಿಹಾಸವನ್ನು ಕೀಳಾಗಿ ಕಾಣುವುದು ಮತ್ತು ಅಪಹಾಸ್ಯಮಾಡುವುದು. ಉದಾಹರಣೆಗೆ, ಬೋಧಮಾಲಾ ೮ ರಲ್ಲಿ, “ಹಿಂದೂ ಸಂಸ್ಕೃತಿಯು ಆಳವಾದ ಸಾಗರದಂತೆ ವಿಭಿನ್ನ ಆಲೋಚನೆಗಳು ಒಂದಾಗಿ ವಿಲೀನಗೊಳ್ಳುತ್ತವೆ. ಜಗತ್ತಿನಲ್ಲಿ ವಿಭಿನ್ನ ಸಂಸ್ಕೃತಿಗಳು ಮತ್ತು ನಾಗರಿಕತೆಗಳು ಹುಟ್ಟಿವೆ, ಆದರೆ ಇಂದು ಅವುಗಳಿಗೆ ಹೆಸರಿಲ್ಲ’ ಮತ್ತು ‘ಎಲ್ಲಾ ಮನುಷ್ಯರ ಉಗಮ ಭಾರತದಿಂದಲೆ ಆಗಿದೆ” ಎಂದು ಸಾರುವುದು.
ಬೋಧಮಾಲಾ ೯ ರಲ್ಲಿನ ಒಂದು ಕವಿತೆ ಹೀಗಿದೆ: “ಜಬ್ ಧರತಿ ಪರ ಘೋರ ಜಂಗಲಿ ಮಾನವ ಹೀ ಬಸತೇ ಥೇ,
ವಸ್ತ್ರ ಪಹನನಾ ನಹೀಂ ಜಾನತೇ, ಪಶುವತ ಹೀ ಫಿರತೇ ಥೇ,
ಭಾಷಾ ಹೀನ್ ವಿಚಾರಹೀನ ಹೋಕರ್ ಬಾತ್ ಸಂಕೇತೋ ಸೆ ಕರತೆ…
ಹಿಮಸಾಗರ ಕಿ ಪುಣ್ಯ ಭೂಮಿ ಪರ ಪ್ರಥಮ ಮನುಷ್ಯ ಪ್ರಕಟ ಹುವಾ…”
ಇದರ ಅರ್ಥ: ಕಾಡುಮನುಷ್ಯರು ಮಾತ್ರ ಭೂಮಿಯ ಮೇಲೆ ವಾಸಿಸುತ್ತಿದ್ದಾಗ, ಅವರಿಗೆ ಬಟ್ಟೆಗಳನ್ನು ಹೇಗೆ ಧರಿಸಬೇಕೆಂದು ತಿಳಿದಿರಲಿಲ್ಲ, ಪ್ರಾಣಿಗಳಂತೆ ತಿರುಗಾಡುತ್ತಿದ್ದರುˌ
ಯಾವುದೇ ಭಾಷೆಯಿಲ್ಲದೆ, ಯಾವುದೇ ಆಲೋಚನೆಗಳಿಲ್ಲದೆ, ಸಂಕೇತ ಭಾಷೆಯಲ್ಲಿ ಮಾತನಾಡುತ್ತಿದ್ದರು … ಭೂಮಿಯ ಮೇಲೆ ಮನುಷ್ಯ ಮೊದಲು ಕಾಣಿಸಿಕೊಂಡಿದ್ದು ಹಿಮಸಾಗರದ ಪವಿತ್ರ ಭೂಮಿಯಲ್ಲಿ.” ಹೀಗೆ ಈ ಪುಸ್ತಕಗಳುದ್ದಕ್ಕೂ ಮಾನವನ ಉಗಮ ಮತ್ತು ನೈಜ ಇತಿಹಾಸವನ್ನು ತಿರುಚಿ ಬರೆಯಲಾಗಿದೆ.
ಈ ಪುಸ್ತಕಗಳು ವಾಕ್ಚಾತುರ್ಯದಲ್ಲಿ ಮಾತನಾಡುತ್ತವೆ, ಉದ್ದಕ್ಕೂ ಸತ್ಯದ ತಳಹದಿ ಮತ್ತು ಆಧಾರಗಳಿಲ್ಲದ, ಮತ್ತು ತರ್ಕಬದ್ಧವಲ್ಲದ ವಾದಗಳನ್ನು ಮಾಡುತ್ತವೆ. ಬೋಧಮಾಲಾ ೯ ಹೀಗೆ ಹೇಳುತ್ತದೆ: “ಹಿಂದೂ ಸಂಸ್ಕೃತಿಯ ಸಂಕೇತಗಳನ್ನು ಗ್ರೀಕ್ ನಾಣ್ಯಗಳ ಮೇಲೆ ಕೆತ್ತಲಾಗಿದೆ. ಸ್ಯಾನ್ ಅಗಸ್ಟಿನ್, ಕೊಲಂಬಿಯಾದ ಪವಿತ್ರ ನಗರಕ್ಕೆ ರಿಷಿ ಅಗಸ್ತ್ಯರ ಹೆಸರನ್ನು ಇಡಲಾಗಿದೆ. ಕರ್ಣನ ದಂತಕಥೆಯು ಬ್ಯಾಬಿಲೋನ್ನಲ್ಲಿ ಜನಪ್ರಿಯವಾಗಿದೆ, ಕ್ಯಾಸ್ಪಿಯನ್ ಸಮುದ್ರವು ಕಶ್ಯಪ್ನ ಭೂಮಿಯಾಗಿದೆˌ ಮಲಯ ಮತ್ತು ಜಾವಾದ ಸಾಹಿತ್ಯ ಸಂಪ್ರದಾಯ ಮತ್ತು ಕಾವ್ಯದ ಮೇಲೆ ಭಾರತದ ಅಳಿಸಲಾಗದ ಪ್ರಭಾವವಿದೆ. ರಾಮಾಯಣವು ಶ್ಯಾಮ್ ದೇಶದ ರಾಷ್ಟ್ರೀಯ ಪುಸ್ತಕವಾಗಿತ್ತು. ಇರಾನ್ನ ಹಳೆಯ ಹೆಸರು ಆರ್ಯನ್. ಪಾರ್ಸಿಗಳ ಧರ್ಮಗ್ರಂಥಗಳು ಆರ್ಯರ ತ್ಯಾಗವನ್ನು ಕೊಂಡಾಡುತ್ತವೆˌ ಇತ್ಯಾದಿˌ ಇತ್ಫಾದಿ ಸುಳ್ಳುಗಳು ಈ ಪುಸ್ತಕದುದ್ದಕ್ಕೂ ವಿಜ್ರಂಭಿಸುತ್ತವೆ.
ಯಾವುದೇ ಪೋಷಕ ಹಾಗು ಸೂಕ್ತ ಪುರಾವೆಗಳಿಲ್ಲದೆ ಈ ಪುಸ್ತಕಗಳ ಉದ್ದಕ್ಕೂ ಸುಳ್ಳು ವಿಷಯಗಳೆ ತುಂಬಿದೆ. ಉದಾಹರಣೆಗೆ, ಬೋಧಮಾಲಾ ೬ ರಲ್ಲಿ ಹೀಗೆ ಬರೆಯಲಾಗಿದೆ: “ಈ ಬ್ರಹ್ಮಾಂಡವು ಅತ್ಯುನ್ನತ ಪ್ರಜ್ಞೆಯ ಅಂಶವಾದ ‘ಬ್ರಹ್ಮ’ ನಿಂದ ರಚಿಸಲ್ಪಟ್ಟಿದೆ. ಪ್ರಪಂಚದ ಅನೇಕ ಸಂಸ್ಕೃತಿಗಳು ಈ ಸುಂದರವಾದ ಭಾರತದಿಂದ ಹುಟ್ಟಿಕೊಂಡಿವೆ. ಇದು ಭೂಮಿಯಾದ್ಯಂತ ಮಾನವಕುಲಕ್ಕೆ ಸ್ಫೂರ್ತಿಯಾಗಿದೆ.” ಮುಖರ್ಜಿ ಮತ್ತು ಮಹಾಜನ್ ಅವರ ಸಂಶೋಧನೆಯು ‘ಭಾರತೀಯ ಋಷಿ ಮುನಿಗಳಿಂದ ಆರ್ಯತ್ವದ ಬೆಳಕು ಹರಡಿದೆ’ ಎಂದು ವಿವರಿಸಲು “ಚೀನಾ ದೇಶದ ಸಂಸ್ಕೃತಿಯಲ್ಲಿ ದೀಪವನ್ನು ಬೆಳಗುವುದು ಅದು ಪ್ರಾಚೀನ ಭಾರತೀಯರಿಂದ ಎರವಲು ಪಡೆದದ್ದು. ಭಾರತವು ಪ್ರಾಚೀನ ಚೀನಾದ ತಾಯಿಯಾಗಿದೆ. ಅವರ ಪೂರ್ವಜರು ಭಾರತೀಯ ಕ್ಷತ್ರಿಯರಾಗಿದ್ದರು. ಚೀನಾದಲ್ಲಿ ವಾಸಿಸಲು ಪ್ರಾರಂಭಿಸಿದ ಮೊದಲ ಜನರು ಭಾರತೀಯರು ಎಂದು ಪ್ರತಿಪಾದಿಸಲಾಗಿದೆಯಂತೆ.
ಇರಾನ್ನಲ್ಲಿ ನೆಲೆಸಿದ ಪ್ರಾಚೀನ ಜನರು ಭಾರತೀಯ ಮೂಲದ ಆರ್ಯನ್ನರಾಗಿದ್ದರು. ಆರ್ಯರ ಮಹಾನ್ ಕೃತಿ-ವಾಲ್ಮೀಕಿ ರಾಮಾಯಣದ ಜನಪ್ರಿಯತೆಯು ಯುನಾನ್ (ಗ್ರೀಸ್) ಮೇಲೆ ಘಾಡವಾದ ಪ್ರಭಾವ ಬೀರಿತು ಮತ್ತು ಅಲ್ಲಿನ ಮಹಾನ್ ಕವಿ ಹೋಮರ್ ರಾಮಾಯಣದ ಆವೃತ್ತಿಯನ್ನು ಗ್ರೀಕ್ ಭಾಷೆಯಲ್ಲಿ ರಚಿಸಿದನು. ಅಮೆರಿಕದ ಉತ್ತರ ಭಾಗದ ಸ್ಥಳೀಯ ಜನರ (ರೆಡ್ ಇಂಡಿಯನ್ಸ್) ಭಾಷೆಗಳು ಪ್ರಾಚೀನ ಭಾರತೀಯ ಭಾಷೆಗಳಿಂದ ಹುಟ್ಟಿಕೊಂಡಿವೆ. ಹೀಗೆ ಅನೇಕ ಬಗೆಯ ಕಪೋಲಕಲ್ಪಿತ ಕತೆಗಳು ಈ ಪುಸ್ತಕಗಳಲ್ಲಿ ಸಿಗುತ್ತವೆ. ೨೦೦೫ ರಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯದ ಶಿಕ್ಷಣದ ಕೇಂದ್ರ ಸಲಹಾ ಮಂಡಳಿ (CABE) ಅಡಿಯಲ್ಲಿ ಒಂದು ಸಮಿತಿಯನ್ನು ರಚಿಸಲಾಯಿತು. ಸರಕಾರಿ ಮತ್ತು ಸರಕಾರೇತರ ಶಾಲೆಗಳ ಪಠ್ಯಗಳನ್ನು ನಿಯಂತ್ರಿಸುವ ಸಂಘದ ಹುನ್ನಾರ ಮತ್ತು ಅದನ್ನು ಅಚ್ಚುಕಟ್ಟಾಗಿ ಜಾರಿಗೊಳಿಸಿದ ಅಂದಿನ ವಾಜಪೇಯಿ ಸರಕಾರದ ಕೃತ್ಯವನ್ನು ಅದ್ಯಯನ ಮಾಡಲು ಈ ಸಮಿತಿಯನ್ನು ರಚನೆ ಮಾಡಲಾಗಿತ್ತು.
ಪಠ್ಯಪುಸ್ತಕಗಳ ನಿಯಂತ್ರಣ ಕಾರ್ಯವಿಧಾನಗಳು ಮತ್ತು ಸರಕಾರೇತರ ಶಾಲೆಗಳಲ್ಲಿ ಕಲಿಸುವ ಸಮಾನಾಂತರ ಪಠ್ಯಪುಸ್ತಕಗಳುˌ ಸಿಬಿಎಸ್ಇ ಪಠ್ಯಕ್ರಮವನ್ನು ಅನುಸರಿಸದ ಸರಕಾರಿ ಶಾಲೆಗಳಲ್ಲಿ ಬಳಸಲಾಗುವ ಎರಡೂ ಪಠ್ಯಪುಸ್ತಕಗಳುˌ ಧಾರ್ಮಿಕ ಮತ್ತು ಸಾಮಾಜಿಕ ಸಂಸ್ಥೆಗಳು ಸೇರಿದಂತೆ ಸರಕಾರೇತರ ಶಾಲೆಗಳಲ್ಲಿ ಬಳಸುವ ಪುಸ್ತಕಗಳ ಬಗ್ಗೆ ಅಧ್ಯಯನ ಮಾಡಿ ವರದಿ ನೀಡುವಂತೆ ಈ ಸಮಿತಿಗೆ ಕೇಳಲಾಗಿತ್ತು. ವಿವಿಧ ರಾಜ್ಯಗಳ ಹಲವಾರು ತಜ್ಞರು, ವಿವಿಧ ಸರಕಾರಿ ಮತ್ತು ಸರಕಾರೇತರ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಭಾರತದಾದ್ಯಂತ ಸಂಬಂಧಿಸಿದ ನಾಗರಿಕರನ್ನು ಈ ಪ್ರಕ್ರಿಯೆಯಲ್ಲಿ ತೊಡಗಿಸಿ ಅವರ ಸಲಹೆಗಳನ್ನು ಪಡೆಯಲಾಯಿತು. ಹೀಗೆ ಇಡೀ ಭಾರತದಾದ್ಯಂತ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಹಿಂದುತ್ವದ ಸಿದ್ಧಾಂತ ಹೇರುವ ಸಂಚು ಸಂಘ ಮಾಡುತ್ತ ಬಂದ ಬಗ್ಗೆ ಈ ಸಮಿತಿ ಪರಿಪೂರ್ಣವಾದ ಅದ್ಯಯನವನ್ನು ನಡೆಸಿದೆ.
ಮುಂದುವರೆಯುವುದು….