ಡಾ. ಜೆ ಎಸ್ ಪಾಟೀಲ.
’ಹರ ಬಾಲಾ ದೇವಿ ಕಿ ಪ್ರತಿಮಾ ಬಚ್ಚಾ ಬಚ್ಚಾ ರಾಮ್ ಹೈ ˌ
ಹರ ಶರೀರ ಮಂದಿರ ಸಾ ಪಾವನ ಹೈˌ
ಗಾಯ್ ಜಹಾಂ ಮಾಂ ಪ್ಯಾರಿ ಹೈ ˌ
ಇಸಕೆ ಸೈನಿಕ ಸಮರಭೂಮಿ ಪರ ಗಾಯಾ ಕರತೆ ಗೀತಾ ಥೇ.’ ಬೋಧಮಾಲಾ ೪ ರ ಈ ಸಾಲುಗಳು ಯುವ ಮನಸ್ಸುಗಳಲ್ಲಿ ಭಾರತವು ಹಿಂದೂ ರಾಷ್ಟ್ರವೆಂಬ ಚಿತ್ರಣವನ್ನು ನಿರ್ಮಿಸುತ್ತವೆ. ಹಿಂದೂ ಧರ್ಮದ ಧಾರ್ಮಿಕ ಚಿಹ್ನೆಗಳು ಮತ್ತು ಪರಿಕಲ್ಪನೆಗಳಾದ ದೇವಿ, ರಾಮ, ದೇವಾಲಯ, ಗೋವು ಮತ್ತು ಭಗವದ್ಗೀತೆ ಈ ಉಪಮೇಯಗಳು ಇಡೀ ರಾಷ್ಟ್ರವನ್ನು ವಿವರಿಸಲು ಬಳಸಲಾಗಿದೆ. ಅದರ ಮೊದಲ ನುಡಿಯಲ್ಲಿನ, ಈ ಸಾಲುಗಳು ಭಾರತವನ್ನು “ಪವಿತ್ರ ಪರ್ವತಗಳು, ಪವಿತ್ರ ನದಿಗಳು, ಅನೇಕ ತೀರ್ಥಕ್ಷೇತ್ರಗಳು, ದೇವಾಲಯಗಳು ಮತ್ತು ಗುರುದ್ವಾರಗಳನ್ನು ಕಾಲಕಾಲಕ್ಕೆ ಇಲ್ಲಿ ನಿರ್ಮಿಸಲಾಗಿದೆ, ಅದನ್ನು ನೋಡಿ ನಾವು ಇನ್ನೂ ಪವಿತ್ರವಾಗಿದ್ದೇವೆ ಹಾಗು ದೇವರ ಕೃಪೆಗೆ ಪಾತ್ರರಾಗಿದ್ದೇವೆ” ಎಂದು ಉಲ್ಲೇಖಿಸುತ್ತವೆ. ಬೋಧಮಾಲಾ ಸರಣಿಯ ಮಾದರಿಯಲ್ಲೆ, ಇತಿಹಾಸ್ ಗಾ ರಹಾ ಹೈ (IGRH) ಕೂಡ ವಿದ್ಯಾಭಾರತಿ ಶಾಲೆಗಳಲ್ಲಿ ಕಲಿಸುವ ಪೂರಕ ಪಠ್ಯಪುಸ್ತಕಗಳ ಸರಣಿಯಾಗಿದೆ ಎನ್ನುತ್ತದೆ ಸಿಎಬಿಇ ವರದಿ.
ಈ ಸಿಎಬಿಇ ಸಮಿತಿಯ ವರದಿಯು ಛತ್ತೀಸ್‌ಗಢದಲ್ಲಿ ಬೋಧಿಸಲಾದ IGRH ಸರಣಿಯ ಮೇಲೆ ಪ್ರಮುಖವಾದ ಅವಲೋಕನವನ್ನು ಮಾಡಿದೆ, “ಆರ್‌ಎಸ್‌ಎಸ್‌ನ ಕೇಂದ್ರ ವಿಚಾರಧಾರೆಗಳಲ್ಲಿ ಒಂದು ‘ಮಾತೃಭೂಮಿ’ಯೊಂದಿಗೆ ‘ಪವಿತ್ರಭೂಮಿ’ ಯನ್ನು ಸಮೀಕರಲಾಗಿದೆ. ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ತಮ್ಮ ಪವಿತ್ರಭೂಮಿಗಳನ್ನು ಈ ನೆಲದಿಂದ ಬೇರೆಡೆ ಹೊಂದಿರುವುದರಿಂದ, ಅವರು ಈ ದೇಶಕ್ಕೆ ಸಂಪೂರ್ಣ ನಿಷ್ಠರಾಗಿಲ್ಲವೆಂದು ಪ್ರತಿಪಾದಿಸುತ್ತದೆ. ಪಠ್ಯವು ಹಿಂದೂ ಮಕ್ಕಳು ಮತ್ತೊಮ್ಮೆ ಪರಕೀಯರ ಗುಲಾಮರಾಗದಂತೆ ನೆನಪಿಟ್ಟುಕೊಳ್ಳಲು ಪ್ರೋತ್ಸಾಹಿಸುತ್ತದೆ ಎಂದು ಸಿಎಬಿಇ ವರದಿಯು ಸವಿವರಗಳನ್ನು ನೀಡಿದೆ. ಈ ಪುಸ್ತಕಗಳು ಬಹಳ ಜಾಣತನದಿಂದ, ‘ಈ ದೇಶ ಯಾರದ್ದು? ಇದು ಯಾರ ಮಾತೃ, ಪಿತೃ ಮತ್ತು ಪವಿತ್ರಭೂಮಿ?ˌ ಈ ನೆಲದ ಕೃಷಿ ಲಯ ಮತ್ತು ಹವಾಮಾನಕ್ಕೆ ಅನುಗುಣವಾಗಿ ಯಾವ ಧರ್ಮದ ಹಬ್ಬಗಳನ್ನು ಇಲ್ಲಿ ಆಚರಿಸಲಾಗುತ್ತದೆ?ˌ ಯಾವ ಜನರು ಶಿವಾಜಿ, ರಾಣಾ ಪ್ರತಾಪ್, ಚಂದ್ರಗುಪ್ತ, ರಾಮ, ಕೃಷ್ಣ, ದಯಾನಂದರನ್ನು ತಮ್ಮ ಮಹಾನ್ ನಾಯಕರೆಂದು ಕರೆಯುತ್ತಾರೆ?’ ಎಂದು ಪ್ರಶ್ನಿಸುವ ಮೂಲಕ ಈದ್ ಮತ್ತು ಕ್ರಿಸ್‌ಮಸ್‌ನಂತಹ ಹಬ್ಬಗಳು ನಮ್ಮ ಹಬ್ಬಗಳಲ್ಲ ಎಂದು ಪರೋಕ್ಷವಾಗಿ ವಿದ್ಯಾರ್ಥಿಗಳನ್ನು ಎಚ್ಚರಿಸುತ್ತದೆ.

ಈ ಪುಸ್ತಕಗಳು ನಿರಂತರವಾಗಿ ‘ಭಾರತ ಮಾತೆ’ಯ ಗರ್ಭವನ್ನು ಉಲ್ಲೇಖಿಸುತ್ತಾ ಅದರಿಂದ ಅನೇಕ ವೀರ ಪುತ್ರರು ಜನಿಸಿದ್ದು, ಅವರು ಆಕೆಯನ್ನು ಪೂಜಿಸಿˌ ಆಕೆಯ ರಕ್ಷಣೆಗಾಗಿ ಮರಣಹೊಂದಿದ್ದಾರೆ, ಅವರ ಕೈಯಲ್ಲಿ ಗೀತೆ ಮತ್ತು ಅವರ ತುಟಿಗಳಲ್ಲಿ ವಂದೇ ಮಾತರಂ ಸದಾ ಇರುತ್ತಿತ್ತು” ಎಂದು ಬರೆಯಲಾಗಿದೆ. ಈ ಪುಸ್ತಕ ಸರಣಿಯಲ್ಲಿ ಹಿಂದೂ ಎಂದರೆ ಯಾರು ಎನ್ನುವ ಅನೇಕ ಬಗೆಯ ಸುಳ್ಳು ಪರಿಕಲ್ಪನೆಗಳನ್ನು ಹರಡಲಾಗಿದೆಯಂತೆ. ‘ಹಿಂದೂ ಎಂದರೆ ಯಾರು?’ ಎಂದು ಸ್ಪಷ್ಟವಾಗಿ ವ್ಯಾಖ್ಯಾನಿಸುವುದಷ್ಟೆ ಅಲ್ಲದೆ ಹಿಂದುತ್ವವು ಇಂದಿನ “ಆದರ್ಶ ಸಿದ್ಧಾಂತ” ಮತ್ತು “ಸಮಯದ ಅಗತ್ಯ” ಎಂದು ಸಾರುತ್ತವೆ. ೧೦ ನೇ ತರಗತಿಗೆ ಭೋಧಮಾಲಾ ಎಂಬ ಶೀರ್ಷಿಕೆಯು ಹಿಂದಿ ವಿಷಯದಲ್ಲಿ ‘ಹಿಂದೂ ಕೌನ್?’ ಎಂಬ ಶೀರ್ಷಿಕೆಯ ಪ್ರತ್ಯೇಕ ಪಾಠವನ್ನು ಹೊಂದಿದೆ. “ಹಿಂದುತ್ವವನ್ನು ವ್ಯಾಖ್ಯಾನಿಸುವಾಗ, ಡಾ ರಾಧಾಕೃಷ್ಣನ್ ಹಿಂದುತ್ವವು ಒಂದು ಜೀವನ ವಿಧಾನವಾಗಿದೆ, ಇದು ಸುಗಮ ಜೀವನ ಮತ್ತು ಸಮೃದ್ಧಿಗೆ ಕಾರಣವಾಗುವ ಹರಿವು ಮತ್ತು ಸಂಪ್ರದಾಯವಾಗಿದೆ ಎಂದು ಹೇಳಿದ್ದನ್ನು ಉಲ್ಲೇಖಿಸಲಾಗಿದೆಯಂತೆ. ಮನುಷ್ಯರಿಂದ ಹಿಡಿದು ಪ್ರಾಣಿ, ಪಕ್ಷಿಗಳು ಮತ್ತು ಈ ಪ್ರಕೃತಿಯ ಎಲ್ಲವುಗಳ ಕಲ್ಯಾಣದ ಕುರಿತು ಯೋಚಿಸುವ ಆದರ್ಶ ಹಿಂದು ಧರ್ಮದಲ್ಲಿ ಮಾತ್ರ ಕಾಣಸಿಗೂತ್ತದೆ ಎಂದು ಬರೆಯಲಾಗಿದೆಯಂತೆ.
“ಇಡೀ ಜಗತ್ತಿಗೆ ಶಾಂತಿ, ಮನುಕುಲಕ್ಕೆ ಸಂತೋಷ ಮತ್ತು ಸಮೃದ್ಧಿಯನ್ನು ತರಬಲ್ಲ ಏಕೈಕ ಶಕ್ತಿ ಹಿಂದುತ್ವ. ಇದು ಇಂದಿನ ಅಗತ್ಯವಾಗಿದೆ. ಇದು ಮನುಷ್ಯನಿಗೆ ಮನುಷ್ಯನಾಗಿ ಬದುಕಲು ಕಲಿಸುವ ಒಂದು ಅತ್ಯಂತ ಆದರ್ಶ ಜೀವನಶೈಲಿಯಾಗಿದೆ. ಹಿಂದೂ ಧರ್ಮವನ್ನು ಕೋಮುವಾದದ ಪದವೆಂದು ಪರಿಗಣಿಸುವುದು ಸರಿಯಲ್ಲ. [ಪಠ್ಯದಲ್ಲಿ ‘ಹಿಂದೂತ್ವ’ವನ್ನು ‘ಹಿಂದೂ ಧರ್ಮ’ ಎಂದು ಸೂಕ್ಷ್ಮವಾಗಿ ಬದಲಾಯಿಸಲಾಗಿದೆ]. “ಹಿಂದುತ್ವದ ಅಗತ್ಯತೆಗಳು” ಎಂಬ ಕರಪತ್ರದಲ್ಲಿ ಸಾವರಕರ್ ಅವರು ಪ್ರತಿಪಾದಿಸಿದ ಸಿದ್ಧಾಂತವನ್ನು “ಹಿಂದುತ್ವ: ಹಿಂದೂ ಯಾರು” ಎಂದು ಮರುನಾಮಕರಣ ಮಾಡಿˌ ೧೯೨೮ ರಲ್ಲಿನ ಸಂಗತಿಯನ್ನು ಮರುಮುದ್ರಣ ಮಾಡಿ ಪುಸ್ತಕದಲ್ಲಿ “ಈ ದೇಶದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನು ಈ ದೇಶಕ್ಕೆ ಗೌರವಿಸಿದರೆ ಮಾತ್ರ ಆತ ಹಿಂದೂˌ ಮತ್ತು ಈ ಭೂಮಿಯು ಆತನ ಮಾತೃಭೂಮಿ, ಪಿತೃಭೂಮಿ, ಪವಿತ್ರಭೂಮಿ ಎಂದು ಪರಿಗಣಿಸಿಬೇಕು ಎಂದು
ಬರೆಯಲಾಗಿದೆಯಂತೆ. ಮುಖರ್ಜಿ ಹಾಗು ಮಹಾಜನ್ ಅವರ ಸಂಶೋಧನೆಯ ಪ್ರಕಾರˌ ಪ್ರತಿಯೊಂದು ಭೋದಮಾಲಾ ಪುಸ್ತಕ ಸರಣಿಯಲ್ಲಿ ಪ್ರಶ್ನೋತ್ತರ ವಿಭಾಗವನ್ನು ಸೇರಿಸಲಾಗಿದೆಯಂತೆ. ಆ ಪ್ರಶ್ನೆಗಳ ಕೆಲವು ಸ್ಯಾಂಪಲ್ ಗಳನ್ನು ಇಲ್ಲಿ ನೀಡಲಾಗಿದೆ.

ಪ್ರಶ್ನೆ: ಅಯೋಧ್ಯೆಯಲ್ಲಿ ಶ್ರೀರಾಮನ ಜನ್ಮಸ್ಥಳದಲ್ಲಿ ನಿರ್ಮಿಸಿದ ಮೊದಲ ದೇವಾಲಯವನ್ನು ಯಾರು ಪತ್ತೆ ಹಚ್ಚಿದರು?
ಉತ್ತರ: ಶ್ರೀರಾಮನ ಮಗ ಮಹಾರಾಜ ಕುಶ.
ಪ್ರಶ್ನೆ: ಶ್ರೀರಾಮ ಮಂದಿರವನ್ನು ಧ್ವಂಸ ಮಾಡಿದ ಮೊದಲ ವಿದೇಶಿ ಆಕ್ರಮಣಕಾರ ಯಾರು?
ಉತ್ತರ: ಗ್ರೀಸ್‌ನ ಮೆನಾಂಡರ್ (೧೫೦ BC).
ಪ್ರಶ್ನೆ: ಪ್ರಸ್ತುತ ರಾಮ ಮಂದಿರವನ್ನು ನಿರ್ಮಿಸಿದವರು ಯಾರು?
ಉತ್ತರ: ಮಹಾರಾಜ ಚಂದ್ರಗುಪ್ತ ವಿಕ್ರಮಾದಿತ್ಯ (ಕ್ರಿ.ಶ. ೩೮೦–೪೧೩).
ಪ್ರಶ್ನೆ: ಕ್ರಿ.ಶ. ೧೦೩೩ ರಲ್ಲಿ ಅಯೋಧ್ಯೆಯಲ್ಲಿ ಯಾವ ಮುಸ್ಲಿಂ ಲೂಟಿಕೋರ ದೇವಾಲಯಗಳನ್ನು ಆಕ್ರಮಿಸಿದನು?
ಉತ್ತರ: ಮಹ್ಮದ್ ಘಜ್ನಿಯ ಸೋದರಳಿಯ ಸಲಾರ್ ಮಸೂದ್.
ಪ್ರಶ್ನೆ: ಕ್ರಿ.ಶ. ೧೫೨೮ ರಲ್ಲಿ ಯಾವ ಮೊಘಲ್ ಆಕ್ರಮಣಕಾರನು ರಾಮ ದೇವಾಲಯವನ್ನು ನಾಶಪಡಿಸಿದನು?
ಉತ್ತರ: ಬಾಬರ್
ಪ್ರಶ್ನೆ: ಬಾಬರಿ ಮಸೀದಿ ಏಕೆ ಮಸೀದಿ ಅಲ್ಲ?
ಉತ್ತರ. ಏಕೆಂದರೆ ಮುಸ್ಲಿಮರು ಇಂದಿಗೂ ಅಲ್ಲಿ ನಮಾಜ್ ಮಾಡಿರುವುದಿಲ್ಲ.
ಪ್ರಶ್ನೆ: ಕ್ರಿ.ಶ ೧೫೨೮ ರಿಂದ ೧೯೧೪ ರವರೆಗೆ ಎಷ್ಟು ರಾಮನ ಭಕ್ತರು ರಾಮ ಮಂದಿರ ವಿಮೋಚನೆಗೆ ತಮ್ಮ ಪ್ರಾಣವನ್ನು ಕಳೆದುಕೊಂಡರು?
ಉತ್ತರ: ಮೂರು ಲಕ್ಷದ ಐವತ್ತು ಸಾವಿರ.
ಪ್ರಶ್ನೆ: ಪರಕೀಯರು ಎಷ್ಟು ಬಾರಿ ಶ್ರೀ ರಾಮಜನ್ಮಭೂಮಿಯನ್ನು ಆಕ್ರಮಿಸಿದ್ದಾರೆ?
ಉತ್ತರ: ಎಪ್ಪತ್ತೇಳು ಬಾರಿ.
ಪ್ರಶ್ನೆ: ಶ್ರೀ ರಾಮ್ ಕರ ಸೇವಾ ಸಮಿತಿಯು ಕರಸೇವೆಯನ್ನು ಪ್ರಾರಂಭಿಸಲು ಯಾವ ದಿನವನ್ನು ನಿರ್ಧರಿಸಿತ್ತು?
ಉತ್ತರ: ಅಕ್ಟೋಬರ್ ೩೦, ೧೯೯೦.
ಪ್ರಶ್ನೆ: ಭಾರತದ ಇತಿಹಾಸದಲ್ಲಿ ೨ ನವೆಂಬರ್ ೧೯೯೦ ಅನ್ನು ಕಪ್ಪು ಅಕ್ಷರಗಳಲ್ಲಿ ಏಕೆ ಕೆತ್ತಲಾಗಿದೆ?
ಉತ್ತರ: ಏಕೆಂದರೆ ಅಂದು ಮುಖ್ಯಮಂತ್ರಿಗಳು ನಿಶ್ಶಸ್ತ್ರ ಕರಸೇವಕರನ್ನು ಗುಂಡಿಕ್ಕಿ ಕೊಲ್ಲಲು ಪೊಲೀಸರಿಗೆ ಆದೇಶ ನೀಡಿ ನೂರಾರು ಜನರನ್ನು ಕಗ್ಗೊಲೆ ಮಾಡಿದರು.
ಪ್ರಶ್ನೆ. ಶ್ರೀರಾಮ ಜನ್ಮಭೂಮಿಯಲ್ಲಿ ದೇವಾಲಯದ ಶಿಲಾನ್ಯಾಸಗಳನ್ನು ಯಾವಾಗ ಮಾಡಲಾಯಿತು?
ಉತ್ತರ: ೧ ನವೆಂಬರ್ ೧೯೮೯.
ಪ್ರಶ್ನೆ: ೩೦ ಅಕ್ಟೋಬರ್ ೧೯೯೦ ರಂದು ಪ್ರಾರಂಭವಾದ ರಾಮ ಜನ್ಮಭೂಮಿಯ ವಿಮೋಚನೆಗಾಗಿನ ಹೋರಾಟದ ಸಂಖ್ಯೆ ಎಷ್ಟು?
ಉತ್ತರ: ೭೮ ನೇ ಹೋರಾಟ.
ಇತರ ಇನ್ನೊಂದಷ್ಟು ಪ್ರಶ್ನೆಗಳು:
ಪ್ರಶ್ನೆ: ‘ರಾಮಭಕ್ತ ಕರ ಸೇವಕರು ಶ್ರೀ ರಾಮಜನ್ಮಭೂಮಿಯ ಮೇಲೆ ಕೇಸರಿ ಧ್ವಜವನ್ನು ಯಾವಾಗ ಹಾರಿಸಿದರು? ಕೇಸರಿ ಧ್ವಜವನ್ನು ಹಾರಿಸುವಾಗ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ ಯುವಕರ ಹೆಸರನ್ನು ಉಲ್ಲೇಖಿಸಿರಿ.
ಇವು ಆ ಭೋದಮಾಲಾ ಸರಣಿಯ ಪುಸ್ತಕದೊಳಗೆ ನೀಡಲಾದ ಕೆಲವು ಪ್ರಶ್ನೋತ್ತರಗಳ ಸ್ಯಾಂಪಲ್ ಗಳು.
ಮುಂದುವರೆಯುವುದು….