ಎನ್.ಎಸ್.ಯು.ಐ ವಿದ್ಯಾರ್ಥಿ ಸಂಘಟನೆಯ ಮುಖಂಡರಾದ ಕೀರ್ತಿ ಗಣೇಶ್ ಅವರ ನಾಯಕತ್ವದಲ್ಲಿ 1ನೇ ತಾರೀಖಿನಂದು ಶಿಕ್ಷಣ ಸಚಿವ ನಾಗೇಶ್ ಅವರ ನಿವಾಸದ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಅನ್ಯಾಯ, ಅಕ್ರಮಗಳ ವಿರುದ್ಧ ಪ್ರತಿಭಟನೆ, ಚಳುವಳಿ ಮಾಡುವುದು ಸಂವಿಧಾನ ನೀಡಿರುವ ಹಕ್ಕು. ಇದಕ್ಕೆ ಕಾನೂನಿನ ರಕ್ಷಣೆ ಇದೆ. ಅದನ್ನೇ ವಿದ್ಯಾರ್ಥಿಗಳು ಮಾಡಿರುವುದು ಎಂದು ಕಿಡಿಕಾರಿದ್ದಾರೆ
ಚಿಂತನಾ ಶಿಬಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ, ಆರ್,ಎಸ್.ಎಸ್ ನವರು ಹಿಂದೆ ಚಡ್ಡಿ ಹಾಕುತ್ತಿದ್ದರು, ಈಗ ಪ್ಯಾಂಟ್ ಹಾಕುತ್ತಿದ್ದಾರೆ. ನಮ್ಮವರು ಪ್ರತಿಭಟನೆ ಸಂದರ್ಭದಲ್ಲಿ ಸಾಂಕೇತಿಕವಾಗಿ ಒಂದೇ ಒಂದು ಚಡ್ಡಿ ಸುಟ್ಟು ಹಾಕಿದ್ದಾರೆ. ಅದು ಪೊಲೀಸರಿಗೆ ಮತ್ತು ಸರ್ಕಾರಕ್ಕೆ ದೊಡ್ಡ ಅಪರಾಧವಾಗಿ ಕಂಡಿದೆ. ಇವರೇನು ಮನೆಗೆ ಬೆಂಕಿ ಹಚ್ಚುವ ಅಥವಾ ಬೆಂಕಿಯನ್ನು ಸಮಾಜ ವಿರೋಧಿ ಕೆಲಸಕ್ಕೆ ಬಳಸಿಲ್ಲ. ಇದು ಕಾನೂನು ವಿರೋಧಿ ಕೃತ್ಯ ಹೇಗಾಗುತ್ತದೆ? ಕಾನೂನು ಉಲ್ಲಂಘನೆಗಾಗಿ ಗುಂಪುಗೂಡಿರುವುದು ಹೇಗಾಗುತ್ತೆ? ಒಬ್ಬರೇ ಪ್ರತಿಭಟನೆ ಮಾಡೋಕಾಗುತ್ತಾ? ಇವರು ಕಾಂಪೌಂಡ್ ಗೇಟ್ ನ ಒಳಗಡೆ ಪ್ರವೇಶಿಸಿದ್ದಾರೆ, ಮನೆಗೆ ಪ್ರವೇಶ ಮಾಡಿಲ್ಲ. ಆಗ ಪೊಲೀಸರು ಏನು ಮಾಡುತ್ತಿದ್ದರು? ತಡೆಯಬೇಕಿತ್ತು ಅಲ್ವ? ಎಂದು ಪ್ರಶ್ನಿಸಿದ್ದಾರೆ.
ಈಶ್ವರಪ್ಪ 144 ಸೆಕ್ಷನ್ ಹಾಕಿದಾಗ ಮೆರವಣಿಗೆ ಮಾಡಿದ್ದು ಕಾನೂನು ಉಲ್ಲಂಘನೆ ಅಲ್ಲವೇ? ಜನರಲ್ಲಿ ದ್ವೇಷ ಭಾವನೆ ಹುಟ್ಟು ಹಾಕುವ ಕೆಲಸ ಮಾಡಿದ ಈಶ್ವರಪ್ಪ ಅವರ ಮೇಲೆ ಗೃಹ ಸಚಿವರು ಏನು ಕ್ರಮ ಕೈಗೊಂಡಿದ್ದಾರೆ? ಅವರೂ ಶಿವಮೊಗ್ಗ ಜಿಲ್ಲೆಯವರೇ ಅಲ್ವಾ? ಬೀದರ್ ನಲ್ಲಿ 144 ಸೆಕ್ಷನ್ ಇದ್ದಾಗ ಕೇಂದ್ರ ಸಚಿವ ಭಗವಂತ್ ಖೂಬಾ ಅವರು ಕಾನೂನು ಉಲ್ಲಂಘನೆ ಮಾಡಿದ್ರು, ಅವರ ಮೇಲೆ ಏನು ಕ್ರಮ ಕೈಗೊಂಡಿದ್ದಾರೆ? 25-30 ಜನ ಎನ್,ಎಸ್,ಯು,ಐ ಸಂಘಟನೆ ಸದಸ್ಯರು ಪ್ರತಿಭಟನೆ ಮಾಡಿದರೆ ಕಾನೂನು ಉಲ್ಲಂಘನೆ ಹೇಗಾಗುತ್ತೆ? ಎಂದು ಪ್ರಶ್ನಿಸಿದ್ದಾರೆ.
ರೋಹಿತ್ ಚಕ್ರತೀರ್ಥ ಅಧ್ಯಕ್ಷತೆಯಲ್ಲಿ ಪಠ್ಯ ಪರಿಷ್ಕರಣೆ ಸಮಿತಿ ಮಾಡಿ, ಪಠ್ಯವನ್ನು ಕೇಸರೀಕರಣ ಮಾಡುತ್ತಿದ್ದಾರೆ ಎಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಯುತ್ತಿದೆ. ಈ ಬಗ್ಗೆ 71 ಸಾಹಿತಿಗಳು ಪ್ರತಿಭಟನೆ ಮಾಡಿ, ಸರ್ಕಾರಕ್ಕೆ ಪತ್ರವನ್ನು ಬರೆದಿದ್ದಾರೆ, 10 ಮಂದಿ ಸಾಹಿತಿಗಳು ನಮ್ಮ ಸಾಹಿತ್ಯವನ್ನು ಪಠ್ಯದಿಂದ ತೆಗೆದುಹಾಕಿ ಎಂದು ಹೇಳಿದ್ದಾರೆ. ಪ್ರತಿಭಟನೆ ಮಾಡುವುದು ನಾಗರೀಕರ ಮೂಲಭೂತ ಹಕ್ಕು, ಅದನ್ನೇ ನಮ್ಮ ವಿದ್ಯಾರ್ಥಿ ಸಂಘಟನೆಗಳು ಮಾಡಿವೆ. ಅವರ ಮೇಲೆ ಕೇಸ್ ದಾಖಲು ಮಾಡಿರುವುದು ತಪ್ಪು ಎಂದು ಹೇಳಿದ್ದಾರೆ.
ಅದೇ ದಿನ ತುಮಕೂರಿನಲ್ಲಿ ಕೆಡಿಪಿ ಸಭೆ ಇತ್ತು, ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವರು. ಅವರು ಪೊಲೀಸರ ಮೇಲೆ ಒತ್ತಡ ಹಾಕಿ ವಿದ್ಯಾರ್ಥಿಗಳ ಮೇಲೆ ಕೇಸ್ ಹಾಕಿಸಿ, ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಪ್ರತಿಭಟನೆ ಮಾಡುವವರನ್ನು ಕರೆದುಕೊಂಡು ಹೋಗಿ ಒಂದು ಸಹಿ ಪಡೆದು ಬಿಟ್ಟು ಕಳುಹಿಸುವುದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಗೃಹ ಸಚಿವರು ಎಲ್ಲಿ ಕ್ರಮ ಕೈಗೊಳ್ಳಬೇಕು ಅಲ್ಲಿ ಕ್ರಮ ತಗೊಳಲ್ಲ. ಎಲ್ಲಿ ಕ್ರಮ ಕೈಗೊಳ್ಳುವ ಅಗತ್ಯ ಇಲ್ಲ ಅಲ್ಲಿ ಕ್ರಮ ತಗೊಳ್ತಾರೆ. ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳ ಮೇಲೆ ಆರೇಳು ಜನ ರೌಡಿ ಶೀಟರ್ ಗಳು ಹಲ್ಲೆ ಮಾಡಿದ್ದಾರೆ. ಅವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಕಾನೂನು ಎಲ್ಲರಿಗೂ ಒಂದೇ ಅಲ್ಲವೇ? ಎಂದು ಕೇಳಿದ್ದಾರೆ.
ರೋಹಿತ್ ಮತ್ತು ಮಂಜು ಎಂಬ ರೌಡಿ ಶೀಟರ್ ಗಳು ವಿದ್ಯಾರ್ಥಿಗಳಿಗೆ ಹಲ್ಲೆ ಮಾಡಿದ್ದಾರೆ? ಅವರ ಬಂಧನ ಆಗಿದೆಯಾ? ನಾವು ಇದನ್ನು ಸಹಿಸಿಕೊಂಡು ಸುಮ್ಮನಿರಲ್ಲ. ಪ್ರತಿಭಟನಾ ನಿರತರ ಮೇಲೆ ಹಲ್ಲೆ ಮಾಡಿದವರ ಮೇಲೆ ಕೂಡಲೇ ಕ್ರಮ ಕೈಗೊಳ್ಳಬೇಕು, ಕೇಸ್ ದಾಖಲಿಸಿ ಬಂಧನವಾಗಬೇಕು ಎಂದು ಪಕ್ಷದ ವತಿಯಿಂದ ಒತ್ತಾಯ ಮಾಡುತ್ತಿದ್ದೇವೆ. ಇದನ್ನು ಮಾಡದಿದ್ದರೆ ಸರ್ಕಾರ, ಗೃಹ ಸಚಿವರು, ಶಿಕ್ಷಣ ಸಚಿವ ನಾಗೇಶ್ ಅವರ ವಿರುದ್ಧ ಹೋರಾಟ ರೂಪಿಸುತ್ತೇವೆ.
ಕರ್ನಾಟಕ ಗೂಂಡಗಳ ರಾಜ್ಯವಾಗುತ್ತಿದೆ, ಸರ್ವಾಧಿಕಾರದ ರಾಜ್ಯವಾಗುತ್ತಿದೆ. ಪ್ರಜಾಪ್ರಭುತ್ವದಲ್ಲಿ ಈ ರೀತಿ ವರ್ತನೆ ಇರುತ್ತಾ? ನಾವು ಆಡಳಿತ ಮಾಡಿದ್ದೇವೆ, ನಮ್ಮ ಕಾಲದಲ್ಲೂ ಪ್ರತಿಭಟನೆ ನಡೆದಿವೆ, ನಾವು ಇವರಂತೆ ಜೈಲಿಗೆ ಕಳುಹಿಸುವ ಕೆಲಸ ಮಾಡಿಲ್ಲ. ಪ್ರಜಾಪ್ರಭುತ್ವ ಬಲಗೊಳ್ಳಬೇಕಾದರೆ ವಿರೋಧ ಪಕ್ಷಗಳು ಸರ್ಕಾರದ ತಪ್ಪುಗಳನ್ನು ಹೇಳಲು ಅವಕಾಶ ಇರಬೇಕು. ಇದನ್ನು ಸರ್ಕಾರ ಹತ್ತಿಕ್ಕುವ ಕೆಲಸ ಮಾಡಿದರೆ ಕಾನೂನು ಸುವ್ಯವಸ್ಥೆ ಇನ್ನಷ್ಟು ಹದಗೆಡುತ್ತದೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡುತ್ತಿದ್ದೇನೆ. ಇನ್ನೊಮ್ಮೆ ಈ ರೀತಿ ಸುಳ್ಳು ಕೇಸ್ ದಾಖಲಿಸಿದರೆ ಇಡೀ ಕಾಂಗ್ರೆಸ್ ಪಕ್ಷ ಬೀದಿಗಿಳಿದು ಹೋರಾಟ ಮಾಡಲಿದೆ.
ಈಗಾಗಲೇ ಸರ್ಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಸರ್ಕಾರಕ್ಕೆ ಜನ ಶಾಪ ಹಾಕುತ್ತಿದ್ದಾರೆ, ಈ ಸರ್ಕಾರ ತೊಲಗಿದ್ರೆ ಸಾಕು ಎಂದು ಕಾಯುತ್ತಿದ್ದಾರೆ. ಪ್ರಜಾಪ್ರಭುತ್ವ ಹಾಗೂ ಸಂವಿಧಾನ ನಾಶಮಾಡುವ ಕೆಲಸ ಮಾಡಬಾರದು. ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳಿಗೆ ಗೂಂಡಾಗಳ ಮೂಲಕ ಹಲ್ಲೆ ಮಾಡಿರುವುದನ್ನು ನಾನು ಖಂಡಿಸುತ್ತೇನೆ. ತಕ್ಷಣ ಅವರ ಬಂಧನವಾಗಬೇಕು ಎಂದು ಆಗ್ರಹಿಸುತ್ತೇನೆ.
ರಾಜ್ಯ ಸಭೆಯ ಎರಡನೇ ಅಭ್ಯರ್ಥಿ ನಾಮಪತ್ರ ನಾವು ವಾಪಾಸು ಯಾಕೆ ಪಡೆಯಬೇಕು? ನಾವು ಗೆಲ್ಲುವ ವಿಶ್ವಾಸದಿಂದಲೇ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿರುವುದು. ಎರಡನೇ ಆದ್ಯತೆಯ ಒಟು ನಮಗೂ 71 ಇವೆ, ಬೇರೆ ಮತಗಳು ನಮಗೆ ಬರುತ್ತವೆ. ಆತ್ಮಸಾಕ್ಷಿಗೆ ಅನುಗುಣವಾಗಿ ನಮಗೆ ಹಲವು ಜನ ಮತ ಹಾಕುತ್ತಾರೆ, ಇದರಿಂದ ನಾವು ಗೆಲ್ಲುತ್ತೇವೆ. ನಮಗೆ ಹೈಕಮಾಂಡ್ ನವರೇ ಮನ್ಸೂರ್ ಅಲಿ ಖಾನ್ ಅವರನ್ನು ಎರಡನೇ ಅಭ್ಯರ್ಥಿಯಾಗಿ ಇಳಿಸಿ ಎಂದು ಹೇಳಿರುವುದು.