ಬೆಂಗಳೂರು: ನಗರದಲ್ಲಿ ನಡೆದಿದ್ದ 7.11 ಕೋಟಿ ರೂ. ದರೋಡೆ ಪ್ರಕರಣ ಸಂಬಂಧ ಕಲ್ಯಾಣನಗರದ ಇಬ್ಬರನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎನ್ನಲಾಗುತ್ತಿದೆ. ಉಳಿದ ಆರೋಪಿಗಳ ಸುಳಿವು ಪೊಲೀಸರಿಗೆ ಸಿಕ್ಕಿದ್ದು, ತಿರುಪತಿಯಲ್ಲಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

ಆಂದ್ರಪ್ರದೇಶದ ಚಿತ್ತೂರಿನಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಕಾರ್ ಪತ್ತೆಯಾಗಿದೆ. ಹೀಗಾಗಿ ಆರೋಪಿಗಳು ತಿರುಪತಿ ಸುತ್ತ ಇರುವ ಶಂಕೆ ಇದ್ದು, ಬೆಂಗಳೂರಿನ ಪೊಲೀಸರಿಗೆ ತಿರುಪತಿ ಪೊಲೀಸರೂ ಸಾಥ್ ನೀಡಿದ್ದಾರೆ. ತಿರುಪತಿ ಬಳಿಯ ಹೋಟೆಲ್, ಲಾಡ್ಜ್ ಗಳಲ್ಲಿ ಮಫ್ತಿಯಲ್ಲಿ ಆರೋಪಿಗಳಿಗಾಗಿ ಹುಡುಕಾಟ ನಡೆಯುತ್ತಿದೆ.

ಇನ್ನು ಯುಪಿ ನೋಂದಣಿಯ ಕಾರಿನ ನಂಬರ್ ಪ್ಲೇಟ್ ಹಾಕಿಕೊಂಡು ಗ್ಯಾಂಗ್ ಎಸ್ಕೇಪ್ ಆಗಿದ್ದು, ದರೋಡೆ ವೇಳೆ ಕಾರಿನ ನೋಂದಣಿ ಕರ್ನಾಟಕದ್ದು ಇತ್ತು. ಕಲ್ಯಾಣನಗರದ ಸ್ವಿಫ್ಟ್ ಕಾರ್ ನಂಬರ್ನ ಆರೋಪಿಗಳು ಬಳಸಿದ್ದರು. ದರೋಡೆಕೋರರು ಹಿಂದಿ ಮಾತನಾಡಿ ದಾರಿ ತಪ್ಪಿಸುವ ಕೆಲಸ ಮಾಡಿದ್ದು, ಸಿಸಿಟಿವಿ ಮತ್ತು ಲೊಕೇಶನ್ ಡಂಪಿಂಗ್ ಆಧಾರದಲ್ಲಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಇತ್ತ ದರೋಡೆಗೆ ಬಳಸಿದ್ದ ಕಾರ್ ನ ನಂಬರ್ ಪ್ಲೇಟ್ ಇಂದಿರಾ ನಗರದ ಗಂಗಾಧರ್ ಎಂಬುವರಿಗೆ ಸೇರಿದ್ದು ಎಂದು ಗೊತ್ತಾಗಿದೆ. ಗಂಗಾಧರ್ ಅವರ KA 03 NC 8052 ಸ್ವಿಫ್ಟ್ ಕಾರಿನ ನಂಬರ್ ಬಳಕೆ ಮಾಡಿ ಆರೋಪಿಗಳು ದರೋಡೆ ಮಾಡಿದ್ದಾರೆ. ಈ ಘಟನೆಯಿಂದ ಕಾರಿನ ಮಾಲೀಕ ಗಂಗಾಧರ್ ಆತಂಕದಲ್ಲೇ ಇದ್ದಾರೆ. ಸ್ವಿಫ್ಟ್ ಕಾರನ್ನ 2018ರಲ್ಲಿ ಖರೀದಿ ಮಾಡಿದ್ದ ಗಂಗಾಧರ್ ಕಾರಿಗೆ ಸಿಂಗಲ್ ಓನರ್ ಆಗಿದ್ದಾರೆ. ಗಂಗಾಧರ್ ಬಿಟ್ಟು ಈ ಆ ಕಾರನ್ನು ಯಾರು ಬಳಸುವುದು ಇಲ್ಲ. ದರೋಡೆಯಾದ ನಿನ್ನೆ ಇಡೀ ದಿನ ಕಾರು ಮನೆಯಲ್ಲಿ ಇದ್ದಿದ್ದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.













