ಬೆಳಗಾವಿ: ಕರ್ನಾಟಕ(Karnataka )–ಗೋವಾ(Goa) ಗಡಿಯಲ್ಲಿ ನಡೆದ 400 ಕೋಟಿ ರೂ. ದರೋಡೆ ಪ್ರಕರಣ ಮತ್ತೊಂದು ಮಹತ್ವದ ತಿರುವು ಪಡೆದುಕೊಂಡಿದೆ. ಹಣ ಸಾಗಿಸುತ್ತಿದ್ದ ಎರಡು ಕಂಟೇನರ್ ವಾಹನಗಳ ಚಾಲಕರನ್ನು ಮಹಾರಾಷ್ಟ್ರದ(Maharashtra) ಎಸ್ಐಟಿ ತಂಡ ಬಂಧಿಸಿದೆ ಎನ್ನುವ ಮಾಹಿತಿ ಎಲ್ಲೆಡೆ ಹರಿದಾಡುತ್ತಿದೆ. ಬಂಧಿತ ಚಾಲಕರನ್ನು ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದ್ದು, ಇಂದು ಸಂಜೆ ಬಂಧನ ಅಧಿಕೃತ ಘೋಷಣೆ ಮಾಡುವ ಸಾಧ್ಯತೆ ಇದೆ.

ಇದನ್ನೂ ಓದಿ: Yatnal: ಅಕ್ರಮ ಬಾಂಗ್ಲಾ ವಲಸಿಗರಿಂದ ಉಗ್ರ ಸಂಘಟನೆಗಳಿಗೆ ನೆರವು-ಅಮಿತ್ ಶಾಗೆ ಯತ್ನಾಳ್ ಪತ್ರ
ಪ್ರಕರಣದ ಹಿನ್ನೆಲೆ ಏನು?
ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರೂಪಾಯಿ ನಗದು ಹೊಂದಿದ್ದ ಎರಡು ಕಂಟೇನರ್ ವಾಹನಗಳು ಬೆಳಗಾವಿ–ಗೋವಾ ಗಡಿ ಪ್ರದೇಶದ ಚೋರ್ಲಾ ಘಾಟ್ ಬಳಿ ನಾಪತ್ತೆಯಾಗಿದ್ದವು. ಬಳಿಕ ಅವುಗಳನ್ನು ಹೈಜಾಕ್ ಮಾಡಲಾಗಿದೆ ಎಂಬುದು ಬೆಳಕಿಗೆ ಬಂದಿತ್ತು. ಮಹಾರಾಷ್ಟ್ರದ ಸಂದೀಪ್ ಪಾಟೀಲ್ ಎಂಬ ವ್ಯಕ್ತಿ ಈ ದರೋಡೆ ಪ್ರಕರಣವನ್ನು ಬಹಿರಂಗಪಡಿಸಿದ್ದು, ಹಣವು ಉದ್ಯಮಿ ಕಿಶೋರ್ ಸೇಠ್ ಅವರಿಗೆ ಸೇರಿದ್ದು, ಈ ಪ್ರಕರಣದಲ್ಲಿ ವಿರಾಟ್ ಗಾಂಧಿ ಎಂಬವರ ಪಾತ್ರವೂ ಇದೆ ಎಂದು ಹೇಳಿದ್ದರು.

ಅಕ್ಟೋಬರ್ 22ರಂದು ಸಂದೀಪ್ ಪಾಟೀಲ್ ಅವರನ್ನು ಕಿಶೋರ್ ಸೇಠ್ ಮತ್ತು ಅವರ ಸಹಚರರು ಅಪಹರಿಸಿ, ಹಣದ ಕುರಿತು ವಿಚಾರಣೆ ನಡೆಸಿದ್ದರು ಎಂಬ ಆರೋಪವೂ ಇದೆ. ಈ ನಡುವೆ ಕಿಶೋರ್ ಸೇಠ್ ಮತ್ತು ಅವರ ಸ್ನೇಹಿತ ಜಯೇಶ್ ನಡುವಿನ ವೈರಲ್ ಆಡಿಯೋ ಸಂಭಾಷಣೆಯಲ್ಲಿ, ಈ ಹಣವು ಗುಜರಾತಿನ ರಾಜಕಾರಣಿಯೊಬ್ಬರಿಗೆ ಸೇರಿದೆ ಎಂಬ ಸ್ಫೋಟಕ ಮಾಹಿತಿ ಹೊರಬಂದಿತ್ತು. ಇದೀಗ ಕಂಟೇನರ್ ಚಾಲಕರ ಬಂಧನದೊಂದಿಗೆ, 400 ಕೋಟಿ ರೂಪಾಯಿ ದರೋಡೆ ಪ್ರಕರಣದಲ್ಲಿ ಇನ್ನಷ್ಟು ಮಹತ್ವದ ಮಾಹಿತಿಗಳು ಹೊರಬರುವ ನಿರೀಕ್ಷೆ ಇದೆ.













