
ಮೋದಿ ಅವರ ವಿಕಸಿತ ಭಾರತ ಸಂಕಲ್ಪ ಸಾಕಾರಕ್ಕೆ ಅವಿರತ ದುಡಿಮೆ; ಪ್ರಧಾನಿಗಳ ದೂರದೃಷ್ಟಿಯಿಂದಲೇ ಎಲ್ಲವೂ ಸಾಧ್ಯ. ₹9,513 ಕೋಟಿ ಮೊತ್ತದ ಇತರೆ ವಿಸ್ತರಣಾ ಯೋಜನೆ ಸೇರಿ ಒಟ್ಟು ₹18,513 ಕೋಟಿ ವೆಚ್ಚದಲ್ಲಿ ರೂರ್ಕೆಲಾ ಸ್ಥಾವರಕ್ಕೆ ಶಕ್ತಿ. ಒಡಿಶಾಗೆ ಹೆಚ್ಡಿಕೆ 3 ದಿನ ಭೇಟಿ; ನಾಳೆ ಆ ರಾಜ್ಯದ ಸಿಎಂ ಜತೆ ಭೇಟಿ, ಪುರಿ ಜಗನ್ನಾಥ ದರ್ಶನ, ನಾಡಿದ್ದು ಉಕ್ಕು ಕ್ಷೇತ್ರದ ಚಿಂತನ ಶಿಬಿರದಲ್ಲಿ ಭಾಗಿ.
ಕೇಂದ್ರ ಸರ್ಕಾರದ ಉಕ್ಕು ಸಚಿವಾಲಯದ ಅಧೀನದಲ್ಲಿ, ಭಾರತೀಯ ಉಕ್ಕು ಪ್ರಾಧಿಕಾರದ (SAIL) ಮೇಲ್ವಿಚಾರಣೆಯಲ್ಲಿ ಕಾರ್ಯನಿರ್ವಹಿಸುವ ಇಲ್ಲಿನ ರೂರ್ಕೆಲಾ ಉಕ್ಕು ಸ್ಥಾವರದಲ್ಲಿ ಸುಮಾರು ₹9,000 ಕೋಟಿ ವೆಚ್ಚದ ಬೃಹತ್ ಪ್ರಮಾಣದ ಆಧುನೀಕರಣ ಮತ್ತು ವಿಸ್ತರಣಾ ಕಾರ್ಯಕ್ರಮಗಳಿಗೆ ಕೇಂದ್ರದ ಉಕ್ಕು ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಚಾಲನೆ ನೀಡಿದರು.

ತಮ್ಮ ಮೂರು ದಿನಗಳ ಒಡಿಶಾ ಪ್ರವಾಸದ ಭಾಗವಾಗಿ ಮಂಗಳವಾರ ಇಡೀ ದಿನ ಉಕ್ಕು ಸಚಿವಾಲಯ ಹಾಗೂ ಉಕ್ಕು ಪ್ರಾಧಿಕಾರದ ಉನ್ನತ ಅಧಿಕಾರಿಗಳ ಜತೆಯಲ್ಲಿ ರೂರ್ಕೆಲಾ ಉಕ್ಕು ಸ್ಥಾವರಕ್ಕೆ ಭೇಟಿ ನೀಡಿದ ಸಚಿವರು; ತಾವು ಉಕ್ಕು ಸಂಚಾರದ ನಂತರ ಮಂಜೂರಾತಿ ನೀಡಿದ್ದ ಆಧುನೀಕರಣ ಯೋಜನೆಗಳನ್ನು ಲೋಕಾರ್ಪಣೆ ಮಾಡಿದರು. ವೈಜಾಗ್ ಉಕ್ಕು ಕಾರ್ಖಾನೆಗೆ ಕಾಯಕಲ್ಪ, ಬೋಕಾರೊ ಉಕ್ಕು ಸ್ಥಾವರದಲ್ಲಿ ₹20,000 ಕೋಟಿ ಮೊತ್ತದ ವಿಸ್ತರಣಾ ಯೋಜನೆ ನಂತರ ಇದೀಗ ರೂರ್ಕೆಲಾ ಉಕ್ಕು ಸ್ಥಾವರದಲ್ಲಿ ಬೃಹತ್ ಮೊತ್ತದ ಆಧುನೀಕರಣ ಯೋಜನೆಗಳನ್ನು ಉದ್ಘಾಟಿಸಿದರು.
ಕಾರ್ಖಾನೆಯ ಉತ್ಪಾದನಾ ಸಾಮರ್ಥ್ಯ ಗರಿಷ್ಠಗೊಳಿಸುವ ಮತ್ತು ಉತ್ಪಾದನಾ ಮೌಲ್ಯ ಸರಪಳಿಯನ್ನು ಬಲಪಡಿಸುವ ಕಾರ್ಯತಂತ್ರದ ಭಾಗವಾಗಿ ಈ ವಿಸ್ತರಣಾ ಯೋಜನೆಯನ್ನು ಕಾರ್ಯಗತಗೊಳಿಸಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರ ಸಂಕಲ್ಪದಂತೆ 2047ಕ್ಕೆ ವಿಕಸಿತ ಭಾರತ ಸಾಕಾರಕ್ಕೆ ಅಗತ್ಯವಿರುವ ಮಹತ್ವದ ಕಾಣಿಕೆಯನ್ನು ಭಾರತೀಯ ಉಕ್ಕು ಕ್ಷೇತ್ರ ನೀಡುತ್ತಿದೆ. ಅವರ ಕನಸಿನಂತೆ ಉಕ್ಕು ಕಾರ್ಖಾನೆಗಳಿಗೆ ಶಕ್ತಿ ತುಂಬಲಾಗುತ್ತಿದೆ ಎಂದು ಕಾರ್ಖಾನೆ ಭೇಟಿ ಸಂದರ್ಭದಲ್ಲಿ ಸಚಿವರಾದ ಕುಮಾರಸ್ವಾಮಿ ಅವರು ಹೇಳಿದರು.

₹9000 ಕೋಟಿ ಮೊತ್ತದ ವಿಸ್ತರಣಾ ಯೋಜನೆಗಳ ಹೊರತಾಗಿಯು ರೂರ್ಕೆಲಾ ಉಕ್ಕು ಸ್ಥಾವರದಲ್ಲಿ ₹9,513 ಕೋಟಿ ಮೊತ್ತದ ಇತರೆ ವಿಸ್ತರಣಾ ಮತ್ತು ಅಭಿವೃದ್ಧಿ ಯೋಜನೆಗಳು ಜಾರಿಯ ಹಂತದಲ್ಲಿವೆ. ಉಕ್ಕಿನ ಹೊಸ ಮೆಲ್ಟಿಂಗ್ ಶಾಪ್, ಹೊಸ ಕೋಲ್ಡ್ ರೋಲಿಂಗ್ ಗಿರಣಿ, ಉತ್ಪನ್ನ ಪರೀಕ್ಷೆ ಮತ್ತು ಪ್ರಮಾಣೀಕರಣ ಪ್ರಯೋಗಾಲಯ ಮತ್ತು ರಕ್ಷಣಾ ದರ್ಜೆಯ ಉಕ್ಕಿಗಾಗಿ ಕೋಲ್ಡ್ ಪ್ಲೇಟ್ ಲೆವೆಲರ್ ಗಳ ಅಭಿವೃದ್ಧಿ ವೇಗಗತಿಯಲ್ಲಿ ನಡೆದಿದೆ. ಇವೆಲ್ಲವೂ ಪ್ರಧಾನಿಗಳ ವಿಕಸಿತ ಭಾರತ ಕನಸು ನನಸು ಮಾಡುವ ಕೈಗಾರಿಕಾ ದೃಷ್ಟಿಕೋನದೊಂದಿಗೆ ಕಾರ್ಯಗತ ಆಗುತ್ತಿವೆ ಎಂದು ಸಚಿವರು ಹೇಳಿದರು.
ಮಂಗಳವಾರ ಬೆಳಗ್ಗೆ ರೂರ್ಕೆಲಾ ಉಕ್ಕು ಸ್ಥಾವರ ತಲುಪಿದ ಕೇಂದ್ರ ಸಚಿವರು; ಕಾರ್ಖಾನೆಯ ಸಾಮರ್ಥ್ಯ ವಿಸ್ತರಣೆ, ಆಧುನೀಕರಣದ ಪ್ರಗತಿ ಮತ್ತು ಕಾರ್ಯಕ್ಷಮತೆ, ಮೌಲ್ಯವರ್ಧಿತ ಉತ್ಪಾದನೆ ಮತ್ತು ದೀರ್ಘಕಾಲೀನ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿರುವ ತಂತ್ರಜ್ಞಾನ ಆಧರಿತ ನವೀಕರಣ ಇತ್ಯಾದಿ ಅಂಶಗಳ ನಿರ್ದಿಷ್ಟ ಮಾರ್ಗಸೂಚಿ ಇಟ್ಟುಕೊಂಡು ರೂರ್ಕೆಲಾ ಉಕ್ಕು ಸ್ಥಾವರ (RSP) ವನ್ನು ಪರಿಶೀಲಿಸಿದರು.

ಉಕ್ಕು ಸಚಿವರೊಂದಿಗೆ ಕೇಂದ್ರದ ಬುಡಕಟ್ಟು ವ್ಯವಹಾರಗಳ ಸಚಿವ ಜುವಾಲ್ ಓರಾಮ್, ಭಾರತೀಯ ಉಕ್ಕು ಪ್ರಾಧಿಕಾರದ ಅಧ್ಯಕ್ಷರು ಕೂಡ ಜತೆಯಲ್ಲಿ ಇದ್ದರು. ಭೇಟಿಯ ಸಮಯದಲ್ಲಿ ಸಚಿವರು; “ಭಾರತೀಯ ಉಕ್ಕು ಕ್ಷೇತ್ರದ ಅಧಾರ ಸ್ತಂಭಗಳಲ್ಲಿ ಒಂದಾದ ರೂರ್ಕೆಲಾ ಉಕ್ಕು ಸ್ಥಾವರವು ಪರಿವರ್ತನಾತ್ಮಕ ಹಂತವನ್ನು ಪ್ರವೇಶಿಸಿದೆ. ಉತ್ಪಾದನಾ ಸಾಮರ್ಥ್ಯದ ವಿಷಯದಲ್ಲಿ ಮಾತ್ರವಲ್ಲದೆ, ತಂತ್ರಜ್ಞಾನ, ದಕ್ಷತೆ, ಸುಸ್ಥಿರತೆ ಮತ್ತು ಉತ್ಪನ್ನ ಸಾಮರ್ಥ್ಯದಲ್ಲೂ ಸಹ ನಮ್ಮ ಗುರಿ ಸ್ಪಷ್ಟವಾಗಿದೆ. ಮುಂದಿನ ದಿನಗಳಲ್ಲಿ ಕೂಡ ಕಾರ್ಖಾನೆಯು ಆಧುನಿಕ, ಅತ್ಯುತ್ತಮ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸಬೇಕು ಮತ್ತು ಭವಿಷ್ಯಕ್ಕೆ ಸಿದ್ಧವಾದ ಉಕ್ಕಿನ ಉತ್ಪಾದನೆಯ ಕೇಂದ್ರಬಿಂದುವಾಗಿ ಹೊರಹೊಮ್ಮಬೇಕು” ಎಂದು ಪ್ರತಿಪಾದಿಸಿದರು.
₹9,000 ಕೋಟಿ ಮೌಲ್ಯದ ಆಧುನೀಕರಣ ಮತ್ತು ವಿಸ್ತರಣಾ ಕಾರ್ಯಕ್ರಮದ ಭಾಗವಾಗಿ ಈ ಕೆಳಕಂಡ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದು ಸಚಿವ ಕುಮಾರಸ್ವಾಮಿ ಅವರು ಮಾಹಿತಿ ನೀಡಿದರು.

ಕಚ್ಚಾ ಉಕ್ಕಿನ ಸಾಮರ್ಥ್ಯವನ್ನು ವಾರ್ಷಿಕ 3.8 ಮೆಟ್ರಿಕ್ ಟನ್ ನಿಂದ 4.2 ಮೆಟ್ರಿಕ್ ಟನ್ ಗೆ ಹೆಚ್ಚಿಸುವ ಗುರಿಯನ್ನು ಹೊಂದಲಾಗಿದೆ. ಪೆಲೆಟ್ ಪ್ಲಾಂಟ್ ನ ಹೊರೆ ಮತ್ತು ಗುಣಮಟ್ಟವನ್ನು ಸುಧಾರಿಸಲು, ಕೋಕ್ ದರವನ್ನು ಕಡಿಮೆ ಮಾಡಲು ಮತ್ತು ಊದು ಕುಲುಮೆ (ಬ್ಲಾಸ್ಟ್ ಫರ್ನೇಸ್) ಗಳ ಉತ್ಪಾದಕತೆಯನ್ನು ಹೆಚ್ಚಿಸಲು ಆಧುನಿಕ ತಂತ್ರಜ್ಞಾನವನ್ನು ಅಳವಡಿಸಲಾಗಿದೆ. ಸ್ವಚ್ಛ ಮತ್ತು ಇಂಧನದ ಕ್ಷಮತೆ ನೀಡಬಲ್ಲ ಕೋಕ್ ಉತ್ಪಾದನೆಗಾಗಿ ಉಪ ಉತ್ಪನ್ನ ನಿರ್ವಹಣಾ ವ್ಯವಸ್ಥೆಗಳೊಂದಿಗೆ ಸಂಯೋಜಿಸಲಾಗಿದೆ ಎಂದು ಸಚಿವರು ವಿವರಿಸಿದರು.

ತಾಂತ್ರಿಕ ನೈಪುಣ್ಯತೆ ಮತ್ತು ಕ್ಷಮತೆಯಲ್ಲಿ ರಾಜಿ ಇಲ್ಲ. ವೆಚ್ಚ ಸ್ಪರ್ಧಾತ್ಮಕತೆ, ದಕ್ಷತೆ ಮತ್ತು ಸುಸ್ಥಿರ ಉತ್ಪಾದನೆಯನ್ನು ಸುಧಾರಿಸಿದಾಗ ಮಾತ್ರ ಸಾಮರ್ಥ್ಯ ವಿಸ್ತರಣೆ ಪರಿಪೂರ್ಣವಾಗುತ್ತದೆ. ಕಾರ್ಖಾನೆಯು ಸಂಪೂರ್ಣ ಸ್ಪಷ್ಟತೆ ಮತ್ತು ನಿರ್ಧಿಷ್ಟ ಗುರಿಯೊಂದಿಗೆ ಅಧಿನೀಕರಣದತ್ತ ಸಾಗುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಟಿ ಮತ್ತು ಬೆಂಬಲದಿಂದ ಉಕ್ಕು ಕ್ಷೇತ್ರದಲ್ಲಿ ಇಷ್ಟೆಲ್ಲ ಅಭಿವೃದಿ, ಪರಿವರ್ತನೆ ಸಾಧ್ಯವಾಗಿದೆ. ಎಂದು ಸಚಿವರು ಹರ್ಷ ವ್ಯಕ್ತಪಡಿಸಿದರು.

ಮೂರು ದಿನಗಳ ಒಡಿಶಾ ರಾಜ್ಯದ ಭೇಟಿ ಸಂದರ್ಭದಲ್ಲಿ ಸಚಿವರು ಬುಧವಾರ ಆ ರಾಜ್ಯದ ಸಿಎಂ ಮೋಹನ್ ಚರಣ್ ಮಾಝಿ ಅವರನ್ನು ಭುವನೇಶ್ವರದಲ್ಲಿ ಭೇಟಿ ಮಾಡಲಿದ್ದಾರೆ. ನಂತರ ಪುರಿಗೆ ತೆರಳಿ ಶ್ರೀ ಜಗನ್ನಾಥ ದೇಗುಲದಲ್ಲಿ ಪೂಜೆ ಸಲ್ಲಿಸುವರು. ಗುರುವಾರ ಭುವನೇಶ್ವರದಲ್ಲಿ ನಡೆಯಲಿರುವ ಉಕ್ಕು ಕ್ಷೇತ್ರದ ಚಿಂತನ ಶಿಬಿರದಲ್ಲಿ ಭಾಗಿಯಾಗಲಿದ್ದಾರೆ.
