ಭಾರತ ತಂಡ 50 ರನ್ ಗಳಿಂದ ಇಂಗ್ಲೆಂಡ್ ತಂಡವನ್ನು ಮೊದಲ ಟಿ-20 ಪಂದ್ಯದಲ್ಲಿ ಮಣಿಸುತ್ತಿದ್ದಂತೆ ಹಲವಾರು ದಾಖಲೆಗಳನ್ನು ಬರೆದಿದೆ.
ಸೌಥ್ ಹ್ಯಾಂಪ್ಟನ್ ಮೈದಾನದಲ್ಲಿ ಗುರುವಾರ ತಡರಾತ್ರಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ೮ ವಿಕೆಟ್ ಕಳೆದುಕೊಂಡು 198 ರನ್ ಗಳಿಸಿದರೆ ಇಂಗ್ಲೆಂಡ್ 148 ರನ್ ಗೆ ಆಲೌಟಾಗಿತ್ತು.
ಗಾಯದಿಂದ ಚೇತರಿಸಿಕೊಂಡ ನಂತರ ನಾಯಕನಾಗಿ ಕಣಕ್ಕಿಳಿದ ರೋಹಿತ್ ಶರ್ಮ ಈ ಪಂದ್ಯದಲ್ಲಿ ಜಯ ಗಳಿಸುತ್ತಿದ್ದಂತೆ ಸತತ 13 ಪಂದ್ಯಗಳಲ್ಲಿ ತಂಡಕ್ಕೆ ಗೆಲುವು ತಂದುಕೊಟ್ಟ ಮೊದಲ ನಾಯಕ ಎಂಬ ದಾಖಲೆ ಬರೆದರು.

ಇದೇ ವೇಳೆ ಟಿ-20 ಕ್ರಿಕೆಟ್ ನಲ್ಲಿ ಅತ್ಯಂತ ವೇಗವಾಗಿ ನಾಯಕನಾಗಿ 1000 ರನ್ ಪೂರೈಸಿದ ದಾಖಲೆ ಬರೆದರು. ಈ ಪಂದ್ಯಕ್ಕೂ ಮುನ್ನ ಈ ಸಾಧನೆ ಮಾಡಲು 13 ರನ್ ಬೇಕಿತ್ತು. ರೋಹಿತ್ 24 ರನ್ ಗಳಿಸುವ ಮೂಲಕ ಈ ದಾಖಲೆ ಪೂರೈಸಿದರು.
ರೋಹಿತ್ ಶರ್ಮ 29 ಪಂದ್ಯಗಳಲ್ಲಿ ನಾಯಕನಾಗಿ 1000 ರನ್ ಪೂರೈಸಿದರೆ, ವಿರಾಟ್ ಕೊಹ್ಲಿ ಈ ಸಾಧನೆ ಮಾಡಲು 30 ಪಂದ್ಯಗಳನ್ನು ತೆಗೆದುಕೊಂಡಿದ್ದರು. ಆದರೆ ಇಂಗ್ಲೆಂಡ್ ನ ಡಾವಿಡ್ ಮಲನ್ 24 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ಬಾಬರ್ ಅಜಮ್ 26 ಪಂದ್ಯಗಳಲ್ಲಿ ಈ ಸಾಧನೆ ಮಾಡಿ ಎರಡನೇ ಸ್ಥಾನದಲ್ಲಿದ್ದಾರೆ.