ರಾಜ್ಯ ರಾಜಕಾರಣದಲ್ಲಿ ಇದೀಗ ಮಹಿಳಾ ಅಧಿಕಾರಿಗಳ ನಡುವಿನ ಜಗಳ ಬಿರುಗಾಳಿಯನ್ನೇ ಎಬ್ಬಿಸಿದೆ. IAS ಹಾಗು IPS ಮಹಿಳಾ ಅಧಿಕಾರಿಗಳು ವೈಯಕ್ತಿಕ ವಿಚಾರಗಳ ಬಗ್ಗೆ ಬೀದಿ ರಂಪಾಟ ಮಾಡುತ್ತಿರುವ ಸರ್ಕಾರದ ಹಿಡಿತ ಕೈ ತಪ್ಪಿರುವ ಬಗ್ಗೆ ಚರ್ಚೆಗಳು ಶುರುವಾಗಿದೆ. ಸರ್ಕಾರ ಬದುಕಿದ್ಯಾ..? ಸತ್ತಿದ್ಯಾ..? ಎಂದು ಮಾಜಿ ಸಿಎಂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಇದರ ನಡುವೆ ಹಿರಿಯ IPS ಅಧಿಕಾರಿ ರೂಪಾ ಅವರ ಆರೋಪಗಳಿಂದ ಬೇಸತ್ತಿರುವ IAS ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಆಂಧ್ರದಿಂದ ರಾಜಕೀಯ ಪ್ರವೇಶಕ್ಕೆ ಸಿಂಧೂರಿ ಸಿದ್ಧತೆ..!?
ರೋಹಿಣಿ ಸಿಂಧೂರಿ ಮೂಲತಃ ಆಂಧ್ರ ಪ್ರದೇಶದವರಾಗಿದ್ದು, ಕರ್ನಾಟಕದಲ್ಲೂ ಸಾಕಷ್ಟು ಆಸ್ತಿ ಪಾಸ್ತಿ ಹೊಂದಿದ್ದಾರೆ. ರೋಹಿಣಿ ಸಿಂಧೂರಿ ಆಪ್ತ ಮೂಲಗಳ ಪ್ರಕಾರ ರೋಹಿಣಿ ಸಿಂಧೂರಿ ಕೆಲವೇ ದಿನಗಳಲ್ಲಿ IAS ಹುದ್ದೆಗೆ ರಾಜೀನಾಮೆ ನೀಡಲಿದ್ದು, ಆಂಧ್ರ ಪ್ರದೇಶದಿಂದ ರಾಜಕೀಯ ಪ್ರವೇಶಕ್ಕೆ ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ. ಈಗಾಗಲೇ ಆಂಧ್ರ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಜೊತೆಗೂ ಒಂದು ಸುತ್ತಿನ ಮಾತುಕತೆ ನಡೆದಿದ್ದು, ಸ್ವಯಂ ನಿವೃತ್ತಿ ತೆಗೆದುಕೊಂಡು ಆಂಧ್ರ ರಾಜಕಾರಣಕ್ಕೆ ಧುಮುಕಲಿದ್ದಾರೆ ಎನ್ನಲಾಗ್ತಿದೆ.

ಸಾಮಾಜಿಕ ಜಾಲತಾಣದಲ್ಲಿ ರೋಹಿಣಿ ಟೀಂ ಕೆಲಸ..!
ರೋಹಿಣಿ ಸಿಂಧೂರಿ ರಾಜ್ಯ ರಾಜಕಾರಣಕ್ಕೆ ಎಂಟ್ರಿ ಕೊಡುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಅದೇ ಕಾರಣದಿಂದ ರೋಹಿಣಿ ಸಿಂಧೂರಿ ಆರ್ಗನೈಸೇಷನ್ ಅನ್ನೋ ಸಂಸ್ಥೆ ಕೆಲಸ ಮಾಡುತ್ತಿದೆ. ಕಳೆದ ಒಂದೆರಡು ವರ್ಷದಿಂದ ರೋಹಿಣಿ ಕೆಲಸ ಕಾರ್ಯಗಳ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಬ್ಬರದ ಪ್ರಚಾರ ನಡೆಸಲಾಗ್ತಿದೆ. ರೋಹಿಣಿ ಸಿಂಧೂರಿ ಅವರ ವಿರುದ್ಧ ಕೇಳಿ ಬರುವ ಯಾವುದೇ ಆರೋಪಗಳಿಗೂ ರೋಹಿಣಿ ಸಿಂಧೂರಿ ಆರ್ಗನೈಸೇಷನ್ ಉತ್ತರ ಕೊಡುತ್ತದೆ. ಅಷ್ಟು ಮಾತ್ರವಲ್ಲದೆ ಸರ್ಕಾರದ ಕಾರ್ಯಕ್ರಮಗಳನ್ನೂ ರೋಹಿಣಿ ಸಾಮಾಜಿಕ ಜಾಲತಾಣದಲ್ಲಿ ಅಬ್ಬರದ ಪ್ರಚಾರದ ಮೂಲಕ ಜನರನ್ನು ಸೆಳೆಯುವ ಕೆಲಸ ಮಾಡುತ್ತಿದ್ದಾರೆ.

ಕರ್ನಾಟಕ ವಿಧಾನಸಭೆಯೋ..? ಆಂಧ್ರವೋ..?
ಆಂಧ್ರ ಪ್ರದೇಶದ ವಿಧಾನಸಭಾ ಚುನಾವಣೆ 2024ಕ್ಕೆ ಎದುರಾಗಲಿದ್ದು, ಆ ವೇಳೆಗೆ ರಾಜೀನಾಮೆ ನೀಡಲಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಕರ್ನಾಟಕದಲ್ಲಿ ಐಪಿಎಸ್ ಅಧಿಕಾರಿ ರೂಪಾ ಅವರ ಆರೋಪದಿಂದ ಕಂಗೆಟ್ಟಿರುವ ರೋಹಿಣಿ ಸಿಂಧೂರಿ ಅತೀ ಶೀಘ್ರದಲ್ಲೇ IAS ಹುದ್ದೆಗೆ ರಾಜೀನಾಮೆ ನೀಡಿ, ಸಮಾಜ ಸೇವೆ ಹೆಸರಲ್ಲಿ ರಾಜಕೀಯ ಅಖಾಡಕ್ಕೆ ಧುಮುಕಲಿದ್ದಾರೆ ಎನ್ನಲಾಗ್ತಿದೆ. ಆಂಧ್ರದ ಕಡೆಗೆ ಮುಖ ಮಾಡುವ ಇರಾದೆ ಹೊಂದಿದ್ದರೂ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲೇ ಸ್ಪರ್ಧೆ ಮಾಡುವಂತೆ ಕೆಲವರು ಒತ್ತಡ ಹಾಕಿದ್ದಾರೆ ಎನ್ನುವ ಮಾಹಿತಿಯೂ ಇದೆ.











