
ರೋಹಿಣಿ ಸಿಂಧೂರಿ ಮಾನನಷ್ಟ ಮೊಕದ್ದಮೆ ರದ್ದು ಮಾಡುವಂತೆ IPS ಅಧಿಕಾರಿ ಡಿ ರೂಪ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ನಲ್ಲಿ ಹಿಂಪಡೆದಿದ್ದಾರೆ ಡಿ.ರೂಪ. ಮಾನನಷ್ಟ ಮೊಕದ್ದಮೆ ರದ್ದುಗೊಳಿಸುವಂತೆ ಸಲ್ಲಿಸಿದ್ದ ಅರ್ಜಿ ವಾಪಸ್ ಪಡೆದಿದ್ದಾರೆ.

ರೋಹಿಣಿ ಸಿಂಧೂರಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಆರೋಪ ಮಾಡಿದ್ದ ಕಾರಣಕ್ಕೆ IPS ಅಧಿಕಾರಿ ಡಿ.ರೂಪ ವಿರುದ್ಧ ಮಾನನಷ್ಟ ಪ್ರಕರಣ ದಾಖಲಿಸಿದ್ದರು. ಪ್ರಕರಣ ಇತ್ಯರ್ಥಕ್ಕೆ ಮಧ್ಯವರ್ತಿಗಳ ನೇಮಕಕ್ಕೆ ಡಿ.ರೂಪ ಮನವಿ ಮಾಡಿದರು. ಆದರೆ ಮಧ್ಯಸ್ಥಿಗೆ ರೋಹಿಣಿ ಸಿಂಧೂರಿ ಒಪ್ಪದೆ, ಕೋರ್ಟ್ನಲ್ಲಿಯೇ ತೀರ್ಮಾನವಾಗಲಿ ಎಂದು ಪಟ್ಟು ಹಿಡಿದಿದ್ದಾರೆ.
ಉನ್ನತ ಅಧಿಕಾರಿಗಳು ಹೀಗೆ ಕಿತ್ತಾಡುವುದು ಆರೋಗ್ಯಕರವಲ್ಲ ಎಂದು ಸುಪ್ರೀಂಕೋರ್ಟ್ ಕೂಡ ಗರಂ ಆಗಿದ್ದು, ಮಧ್ಯಸ್ಥಿಕೆ ಒಪ್ಪದೆ ಇದ್ರೆ ನಾವು ಏನೂ ಮಾಡಲು ಸಾಧ್ಯವಿಲ್ಲ. ಪ್ರಕರಣದ ಅರ್ಹತೆ ಮೇಲೆ ನಾವು ನಿರ್ಧರಿಸಬೇಕಾಗುತ್ತೆ ಎಂದಿದೆ.
ಇಬ್ಬರೂ ನ್ಯಾಯಾಲಯದಲ್ಲಿದ್ದಾರೆ, ದಯವಿಟ್ಟು ಏನು ಮಾಡಬೇಕೆಂದು ಸೂಚನೆಗಳನ್ನು ತೆಗೆದುಕೊಳ್ಳಿ. ಅವರು ಪರಸ್ಪರ ಮುಖಾಮುಖಿಯಾಗಿ ಮಾತನಾಡಬಹುದೇ..? ಎಂದು ಇಬ್ಬರು ಅಧಿಕಾರಿಗಳ ವಕೀಲರನ್ನು ಕೇಳಿದ್ದಾರೆ ಸುಪ್ರೀಂಕೋರ್ಟ್ ನ್ಯಾಯಾಧೀಶರು.ಈ ವೇಳೆ ಮಾತನಾಡಲು ಒಪ್ಪಿದ ಐಪಿಎಸ್ ಡಿ.ರೂಪ.
ಈ ವೇಳೆ ಇಬ್ಬರಿಗೂ ಮಾತನಾಡಲು ಸಮಯ ನೀಡಿದ ಸುಪ್ರೀಂಕೋರ್ಟ್, ಕೆಲಕಾಲ ವಿಚಾರಣೆ ಮಂದೂಡಿತ್ತು, ಇಬ್ಬರು ಅಧಿಕಾರಿಗಳ ಮಾತುಕತೆ ಬಳಿಕ ಮತ್ತೆ ವಿಚಾರಣೆ ಆರಂಭಿಸಿದ ಕೋರ್ಟ್, ಮಾತುಕತೆ ವಿವರ ಕೇಳಿತು. ಈ ವೇಳೆ ಮಾತುಕತೆ ನಡೆಸಿದೆವು, ಆದರೆ ಮಾತುಕತೆ ವ್ಯರ್ಥವಾಯಿತು ಎಂದು ಡಿ ರೂಪ ಹೇಳಿದ್ದಾರೆ.
ಮಾತುಕತೆ ಯಾಕೆ ವ್ಯರ್ಥವಾಯಿತು ಏನು ಸಮಸ್ಯೆ ಎಂದು ನ್ಯಾಯಾಧೀಶರು ಕೇಳಿದಾಗ, ನಾನು ಬೇಷರತ್ ಕ್ಷಮೆಯಾಚಿಸಬೇಕು ಎಂದು ಸಿಂಧೂರಿ ಕೇಳುತ್ತಿದ್ದಾರೆ. ಹೌದು, ನಾವು ಬೇಷರತ್ ಕ್ಷಮೆ ಕೇಳುವಂತೆ ಹೇಳುತ್ತಿದ್ದೇವೆ ಎಂದು ರೋಹಿಣಿ ಸಿಂಧೂರಿ ಪರ ವಕೀಲರು ಕೋರ್ಟ್ಗೆ ತಿಳಿಸಿದ್ದಾರೆ. ಹಾಗಾದ್ರೆ ಕ್ಷಮೆ ಕೇಳಬಹುದಲ್ಲ, ಇದೆ ಸರಿಯಾದ ಮಾರ್ಗ ಎಂದಿದ್ದಾರೆ ನ್ಯಾಯಾಧೀಶರು.
ಆದರೆ ಬೇಷರತ್ ಕ್ಷಮೆಯಾಚನೆಗೆ ಒಪ್ಪದ ಡಿ.ರೂಪ, ಪರಸ್ಪರ ಕ್ಷಮೆ ಅಗತ್ಯವಿದೆ ಎಂದಿದ್ದಾರೆ. ಇಬ್ಬರು ಅಧಿಕಾರಿಗಳು ನ್ಯಾಯಾಧೀಶರ ಮನವಿಗೂ ಬಗ್ಗದೆ ಇದ್ದಾಗ ವಿಚಾರಣಾಧೀನ ನ್ಯಾಯಾಲಯದಲ್ಲಿಯೇ ಬಗೆಹರಿಸಿಕೊಳ್ಳಿ ಎಂದು ಸುಪ್ರೀಂಕೋರ್ಟ್ ತಿಳಿಸಿದ್ದು, ಅರ್ಜಿ ವಜಾಗೊಳ್ಳುವುದನ್ನು ತಪ್ಪಿಸಲು ಅರ್ಜಿ ಹಿಂಪಡೆದಿದ್ದಾರೆ ಡಿ ರೂಪ. ಒಟ್ಟಾರೆ ಸುಪ್ರೀಂಕೋರ್ಟ್ನಲ್ಲಿ ಐಪಿಎಸ್ ಅಧಿಕಾರಿ ಡಿ. ರೂಪಗೆ ಹಿನ್ನಡೆ ಆದಂತಾಗಿದೆ.