ಬೆಂಗಳೂರು: ನಗರದಲ್ಲಿ ನಡೆದಿದ್ದ 7 ಕೋಟಿ ರೂ. ರಾಬರಿ ಪ್ರಕರಣದಲ್ಲಿ ಇದುವರೆಗೆ ಮೂವರನ್ನ ಬಂಧಿಸಿದ್ದು, 5.76 ಕೋಟಿ ರೂ. ವಶಕ್ಕೆ ಪಡೆಯಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ನ.19ರಂದು ಡೈರಿ ಸರ್ಕಲ್ ಫ್ಲೈ ಓವರ್ ಮೇಲೆ ಸಿಎಂಎಸ್ ಸೆಕ್ಯೂರಿಟಿ ವಾಹನದಲ್ಲಿ 4 ಬಾಕ್ಸ್ ಗಳಲ್ಲಿ ಇದ್ದ 7.11 ಲಕ್ಷ ಹಣವನ್ನು ಬಾಕ್ಸ್ ಸಮೇತ 5-6 ಮಂದಿ ಆಗಂತುಕರ ತಂಡ ದರೋಡೆ ಮಾಡಿದ್ದರು. ಈ ಘಟನೆ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ತನಿಖೆಗಾಗಿ ಸುಮಾರು 200 ಮಂದಿ ಪೊಲೀಸರ 11 ತಂಡ ರಚಿಸಲಾಗಿತ್ತು. ಕರ್ನಾಟಕ ಸೇರಿದಂತೆ ಆಂಧ್ರ, ತೆಲಂಗಾಣ, ಗೋವಾದಲ್ಲಿ ಪೊಲೀಸರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದರು.

ತನಿಖೆ ವೇಳೆ ಸುಮಾರು 30 ಕ್ಕೂ ಹೆಚ್ಚು ಜನರನ್ನ ಪೊಲೀಸರ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಇವರಲ್ಲಿ ದರೋಡೆಯಲ್ಲಿ ಭಾಗಿಯಾಗಿದ್ದ ಸಿಎಂಎಸ್ ಕಂಪನಿಯ ಹಳೆಯ ನೌಕರ ಝೆವಿಯರ್, ಸಿಎಂಎಸ್ ಕಂಪನಿಯ ವಾಹನಗಳ ಇನ್ಚಾರ್ಜ್ ಗೋಪಿ, ಗೋವಿಂದಪುರ ಪೊಲೀಸ್ ಠಾಣೆ ಯ ಕಾನ್ಸಟೇಬಲ್ ಅಣ್ಣಪ್ಪ ನಾಯ್ಕ್ ಎಂಬುವರನ್ನ ಬಂಧಿಸಲಾಗಿದೆ.
ಸದ್ಯ ಉಳಿದ ಹಣ ಹಾಗೂ ಆರೋಪಿಗಳಿಗಾಗಿ ಪೊಲೀಸರ ಹುಡುಕಾಟ ಮುಂದುವರಿದಿದ್ದು, ತನಿಖೆಯಲ್ಲಿ ಭಾಗಿಯಾಗಿದ್ದ ಪೊಲೀಸರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ.









