‘ನಗರದ ಎಲ್ಲ ರಸ್ತೆಗಳಲ್ಲಿನ ಅತಿಕ್ರಮಣ ತೆರವು ಕಾರ್ಯಾಚರಣೆಯನ್ನು ಶೀಘ್ರದಲ್ಲಿ ಕೈಗೊಳ್ಳಲಾಗುತ್ತದೆ’ ಎಂದು ನಗರಸಭೆ ಆಯುಕ್ತ ರಾಜೀವ ಬಣಕಾರ್ (Municipal Commissioner Rajeeva Bankar)ತಿಳಿಸಿದ್ದಾರೆ.
ಅವರು ಭಾನುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
‘ತ್ರಿಪುರಾಂತದಿಂದ ಕೋಟೆಯವರೆಗಿನ ಮುಖ್ಯ ರಸ್ತೆ ಮತ್ತು ಡಾ.ಅಂಬೇಡ್ಕರ್ ವೃತ್ತದಿಂದ ಮುಖ್ಯ ಬಸ್ ನಿಲ್ದಾಣದವರೆಗೆ ಹೋಗುವ ರಸ್ತೆ ಹಾಗೂ ಇತರೆ ರಸ್ತೆಗಳಲ್ಲಿ ಅನೇಕರು ಅಂಗಡಿ ಮತ್ತು ಮನೆಗಳ ಎದುರಲ್ಲಿ ಕಟ್ಟೆಗಳನ್ನು ನಿರ್ಮಿಸಿದ್ದಾರೆ.
ಪಾದಚಾರಿ ಮಾರ್ಗ ಅತಿಕ್ರಮಿಸಿ ತಗಡಿನ ಶೆಡ್ ಹಾಕಿದ್ದಾರೆ. ಕುರ್ಚಿಗಳನ್ನು ಇಟ್ಟಿರುವುದು ಗಮನಕ್ಕೆ ಬಂದಿದೆ’ ಎಂದರು.
‘ಬೀದಿಬದಿ ವ್ಯಾಪಾರಿಗಳು ಹಾಗೂ ತಳ್ಳು ಗಾಡಿ ವ್ಯಾಪಾರಿಗಳಲ್ಲಿ ಕೆಲವರು ಅಲ್ಲಲ್ಲಿ ಕಾಯಂ ಶೆಡ್ ನಿರ್ಮಿಸಿದ್ದಾರೆ. ಇವುಗಳಿಂದ ನಡೆದುಕೊಂಡು ಹೋಗುವವರು ಕಷ್ಟ ಅನುಭವಿಸುತ್ತಿದ್ದಾರೆ. ವಾಹನ ಸಂಚಾರಕ್ಕೆ ತೊಂದರೆ ಆಗುತ್ತಿದೆ. ಅಪಘಾತಗಳು ಸಹ ಸಂಭವಿಸುತ್ತಿವೆ. ಆದ್ದರಿಂದ ಪಾದಚಾರಿ ಮಾರ್ಗದಲ್ಲಿನ ಮತ್ತು ಇತರೆಡೆಯ ಅತಿಕ್ರಮಣವನ್ನು ಶೀಘ್ರದಲ್ಲಿ ತೆರವುಗೊಳಿಸಿ ಅಲ್ಲಿನ ಸಾಮಾನುಗಳನ್ನು ಅವರವರು ತೆಗೆದುಕೊಂಡು ಹೋಗಬೇಕು ಎಂದು ಈಗಾಗಲೇ ಸೂಚಿಸಲಾಗಿದೆ’ ಎಂದರು.
ಒಂದುವೇಳೆ ಸ್ವಯಂ ತೆರವು ಕಾರ್ಯ ನಡೆಸದಿದ್ದರೆ ನಗರಸಭೆಯಿಂದ ಕಾರ್ಯಾಚರಣೆ ನಡೆಸಲಾಗುತ್ತದೆ. ಆಗ ಆಗುವ ಹಾನಿಗೆ ಸಂಬಂಧಿತ ವ್ಯಾಪಾರಿಗಳೇ ಹೊಣೆಗಾರ ಆಗಿರುತ್ತಾರೆ. ಈ ಕೆಲಸಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆ ಸಹ ದಾಖಲಿಸಲಾಗುತ್ತದೆ. ಈ ಕಾರಣ ತಕ್ಷಣವೇ ಕಾರ್ಯಪ್ರವೃತ್ತರಾಗಿ ಅತಿಕ್ರಮಣ ತೆರವುಗೊಳಿಸಬೇಕು’ ಎಂದು ಕೇಳಿಕೊಂಡಿದ್ದಾರೆ.