ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿಸಿದ್ದಕ್ಕಿಂತಲೂ ಚಿಲ್ಲರೆ ದರ ಹಣದುಬ್ಬರ (ಸಿಪಿಐ) ಜಿಗಿದಿದ್ದು, ಏಪ್ರಿಲ್ ತಿಂಗಳಲ್ಲಿ ಶೇ.7.79ಕ್ಕೇರಿದೆ. ಆರ್ಬಿಐ ಸೇರಿದಂತೆ ಮಾರುಕಟ್ಟೆ ತಜ್ಞರೆಲ್ಲರೂ ಶೇ.7.5ರಷ್ಟಾಗಬಹುದು ಎಂದು ಅಂದಾಜಿಸಿದ್ದರು. ಎಲ್ಲಾ ಅಂದಾಜುಗಳನ್ನು ತಲಕೆಳಗು ಮಾಡಿ ಹಣದುಬ್ಬರ ಉಬ್ಬಿದೆ. ಇದು ಏಪ್ರಿಲ್ 2014ರಿಂದೀಚೆಗೆ ಅತಿ ಗರಿಷ್ಠ ಹಣದುಬ್ಬರ.
ದೇಶೀಯ ಮಾರುಕಟ್ಟೆಯಲ್ಲಿ ಇಂಧನ ದರ ತೀವ್ರವಾಗಿ ಏರಿರುವ ಕಾರಣ ಚಿಲ್ಲರೆದರ ಹಣದುಬ್ಬರವು ತೀವ್ರವಾಗಿ ಏರುತ್ತಿದೆ. ಖಾದ್ಯ ತೈಲ ಹಣದುಬ್ಬರ ಶೇ.17ರಷ್ಟು, ತರಕಾರಿಗಳ ಹಣದುಬ್ಬರ ಶೇ.15.41ರಷ್ಟು ಇಂಧನದ ಹಣದುಬ್ಬರ ಶೇ.10.80ರಷ್ಟು ಜಿಗಿದಿದೆ. ಬಟ್ಟೆ ಮತ್ತು ಪಾದರಕ್ಷೆಗಳ ಹಣದುಬ್ಬರ ಶೇ.9.88, ಆಹಾರ ಶೇ.8.38, ಇತರೆ ಸರಕುಗಳು ಶೇ.8.3ರಷ್ಟು ಜಿಗಿದಿವೆ.
ಏಪ್ರಿಲ್ ತಿಂಗಳಲ್ಲಿ 6.9ಕ್ಕೆ ಜಿಗಿದಿದ್ದ ಚಿಲ್ಲರೆದರ ಹಣದುಬ್ಬರವು ಆರ್ಬಿಐಗೆ ತಲೆನೋವಾಗಿ ಪರಿಣಮಿಸಿತ್ತು. ಹಣದುಬ್ಬರವನ್ನು ನಿಯಂತ್ರಿಸುವುದು ಆರ್ಬಿಐ ಜವಾಬ್ದಾರಿ. ಶೇ.6ರಷ್ಟು ಗರಿಷ್ಠ ಮಿತಿಯನ್ನು ಕಾಯ್ದುಕೊಳ್ಳಲೇಬೇಕು. ಆದರೆ, ಜನವರಿಯಿಂದ ಸತತವಾಗಿ ನಿಗದಿತ ಮಿತಿ ಮೀರಿ ಹಣದುಬ್ಬರ ಜಿಗಿದಿದೆ.
ಹಣದುಬ್ಬರ ತಗ್ಗಿಸುವ ಅಂತಿಮ ಪ್ರಯತ್ನವಾಗಿ ಆರ್ಬಿಐ ಮೇ 4ರಂದು ಬಡ್ಡಿದರವನ್ನು ಏರಿಸಿತ್ತು. ಮತ್ತಷ್ಟು ಬಡ್ಡಿದರ ಏರಿಸುವ ಮುನ್ಸೂಚನೆಯನ್ನೂ ನೀಡಿದೆ. ಜೂನ್ ಆರಂಭದಲ್ಲಿ ನಡೆಯುವ ಹಣಕಾಸು ನೀತಿ ಸಮಿತಿ ಸಭೆಯಲ್ಲಿ ಬಡ್ಡಿದರ ಪರಿಷ್ಕರಣೆ ಆಗಲಿದೆ.
ಹಣದುಬ್ಬರ ಏರಿಕೆಗೆ ಜಾಗತಿಕ ರಾಜಕೀಯ ಕ್ಷೋಭೆಯಿಂದಾಗಿ ಕಚ್ಚಾ ತೈಲ ಮಾರುಕಟ್ಟೆಯಲ್ಲಾಗಿರುವ ತೀವ್ರ ಏರಿಕೆ ಮತ್ತು ಅಸ್ಥಿರತೆ, ಜತೆಗೆ ದೇಶೀಯ ಮಾರುಕಟ್ಟೆಯಲ್ಲಾಗುತ್ತಿರುವ ದರ ಏರಿಕೆ ಕಾರಣವಾಗಿದೆ.

ಕೇಂದ್ರ ಸರ್ಕಾರವಂತೂ ಹಣದುಬ್ಬರ ನಿಯಂತ್ರಿಸುವ ಜವಾಬ್ದಾರಿ ಆರ್ಬಿಐನದು ಎಂದುಕೊಂಡು ವಿವಿಧ ಸರಕು ಮತ್ತು ಸೇವೆಗಳ ದರವನ್ನು ಏರಿಸುತ್ತಲೇ ಇದೆ. ಅಲ್ಲದೇ ಮುಕ್ತ ಮಾರುಕಟ್ಟೆಯಲ್ಲಿ ಖಾದ್ಯ ತೈಲ, ಆಹಾರಧಾನ್ಯ ಮತ್ತಿತರ ದರಗಳ ಏರಿಕೆ ನಿಯಂತ್ರಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.
ಹಣದುಬ್ಬರ ಏರಿಕೆ ನಿಯಂತ್ರಿಸದ ಮಟ್ಟಕ್ಕೆ ಬಂದಿದೆ ಎಂಬ ಕಾರಣಕ್ಕೆ ಆರ್ಬಿಐ ಬಡ್ಡಿದರ ಏರಿಸಿದ್ದರೆ, ಕೇಂದ್ರ ಸರ್ಕಾರ ಆ ಬಗ್ಗೆ ತಲೆ ಕೆಡಿಸಿಕೊಳ್ಳದೇ ಎಲ್ಪಿಜಿ ಸಿಲಿಂಡರ್ ದರವನ್ನು 50 ರೂಪಾಯಿಗಳಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಸಿಲಿಂಡರ್ ದರ ಈಗ 1000 ರೂಪಾಯಿ ಗಡಿ ದಾಟಿದೆ. 2020ರಿಂದೀಚೆಗೆ ಶೇ.75ರಷ್ಟು ಏರಿಕೆಯಾಗಿದೆ.
ಪರಿಸ್ಥಿತಿ ಹೀಗೆ ಮುಂದುವರೆದರೆ, ಜೂನ್ ತಿಂಗಳ ಹಣಕಾಸು ನೀತಿ ಸಮಿತಿ ಸಭೆಗೆ ಮುನ್ನವೇ ಬಡ್ಡಿದರ ಏರಿಕೆ ಮಾಡುವ ಸಾಧ್ಯತೆ ಇದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ಹಣದುಬ್ಬರದ ನಿಯಂತ್ರಣಕ್ಕೆ ಬಡ್ಡಿದರ ಏರಿಸಿದ ನಂತರ ರೂಪಾಯಿ ಡಾಲರ್ ವಿರುದ್ಧ ಕುಸಿಯುತ್ತಲೇ ಇದೆ. ಸಾರ್ವಕಾಲಿಕ ಕನಿಷ್ಟಮಟ್ಟವಾದ 77.60ಕ್ಕೆ ಕುಸಿದಿದೆ.
ರೂಪಾಯಿ ಮೌಲ್ಯ ಕುಸಿತದ ಜತೆಗೆ ಷೇರು ಮಾರುಕಟ್ಟೆಯಲ್ಲೂ ರಕ್ತದೋಕುಳಿ ನಡೆಯುತ್ತಿದ್ದು, ಬಡ್ಡಿದರ ಏರಿಕೆ ಮಾಡಿದ ಎಂಟು ದಿನಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಶೇ.8ರಷ್ಟು ಕುಸಿತ ದಾಖಲಿಸಿವೆ. ಬಹುತೇಕ ಷೇರುಗಳು ವರ್ಷದ ಕನಿಷ್ಠ ಮಟ್ಟ ಮುಟ್ಟಿವೆ. ಈ ನಡುವೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ತಮ್ಮ ಹೂಡಿಕೆ ಹಿಂಪಡೆಯುತ್ತಿದ್ದು ಷೇರುಪೇಟೆ ಮತ್ತಷ್ಟು ಕುಸಿತ ದಾಖಲಿಸಲಿದೆ.
ಬಡ್ಡಿ ಏರಿಕೆಯಿಂದಾಗಿ ಬೇಡಿಕೆ ಕುಸಿಯಲಿದ್ದು, ಒಟ್ಟಾರೆ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ.