ಇವತ್ತು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸೇರಿದಂತೆ ಸಾಕಷ್ಟು ಮಂದಿ ರಾಜೀನಾಮೆ ನೀಡಿ ಬೇರೆ ಪಕ್ಷಗಳಿಗೆ ವಲಸೆ ಹೋಗುತ್ತಿದ್ದಾರೆ. ಅದರಲ್ಲಿ ಸಿಎಂ ಸ್ವಂತ ಜಿಲ್ಲೆ ನೆಹರೂ ಓಲೆಕಾರ್ ಕೂಡ ಒಬ್ಬರು. ಇಂದು ಶಿರಸಿಗೆ ತೆರಳಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ರಾಜೀನಾಮೆ ಪತ್ರ ನೀಡಲಿದ್ದು, ಆ ಬಳಿಕ ಬೆಂಗಳೂರಿಗೆ ಬಂದು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೂ ರಾಜೀನಾಮೆ ಕೊಡಲು ನಿರ್ಧಾರ ಮಾಡಿದ್ದಾರೆ. ಆ ನಂತರ ಜೆಡಿಎಸ್ ಪಕ್ಷ ಸೇರಲಿರುವ ನೆಹರು ಓಲೇಕಾರ್, ಇಂದು ಸಂಜೆ ಜೆಡಿಎಸ್ ಕಚೇರಿಯಲ್ಲಿ ಪಕ್ಷ ಸೇರ್ಪಡೆ ಹಾಗು ಬಿ ಫಾರಂ ಪಡೆದುಕೊಂಡು ಸೋಮವಾರ ನಾಮಪತ್ರ ಸಲ್ಲಿಕೆ ಮಾಡಲು ತಯಾರಿ ಮಾಡಿಕೊಂಡಿದ್ದಾರೆ. ಬಿಜೆಪಿ ಪಕ್ಷದಲ್ಲಿ ಹಾಲಿ ಶಾಸಕರಾಗಿದ್ದವರೂ ಟಿಕೆಟ್ ಪಡೆದುಕೊಳ್ಳಲು ವಿಫಲ ಆಗಿದ್ದಾರೆ. ಆದರೆ ಸ್ಪರ್ಧೆ ಮಾಡಿದರೆ ಹಾಲಿ ಶಾಸಕರೇ ಗೆದ್ದು ಬರುವ ಸಂಭವ ಕೂಡ ಇದೆ. ಆದರೂ ಬಿಜೆಪಿ ನಾಯಕರು ಟಿಕೆಟ್ ಕೊಡದೆ ಇರಲು ಕಾರಣ ಏನು ಎನ್ನೋದು ಯಕ್ಷ ಪ್ರಶ್ನೆ ಆಗಿದೆ.
ಕೊಪ್ಪಳದಲ್ಲಿ ಸಂಸದ ಸ್ಥಾನಕ್ಕೂ ಕರಡಿ ಸಂಗಣ್ಣ ರಾಜೀನಾಮೆ..?

ಕೊಪ್ಪಳ ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿರುವ ಕೊಪ್ಪಳ ಬಿಜೆಪಿ ಸಂಸದ ಕರಡಿ ಸಂಗಣ್ಣ, ಟಿಕೆಟ್ ಸಿಗುವುದು ಅನುಮಾನ ಎನ್ನುವ ಕಾರಣಕ್ಕೆ ಇಂದು ಶಕ್ತಿ ಪ್ರದರ್ಶನ ಮಾಡಲು ಮುಂದಾಗಿದ್ದಾರೆ. ನಾಮಪತ್ರ ಸಲ್ಲಿಕೆ ಸಿನಾಂಕ ಮುಗಿಯುವ ಹಂತಕ್ಕೆ ಬರುತ್ತಿದ್ದರೂ ಬಿಜೆಪಿ ಹಾಗು ಕಾಂಗ್ರೆಸ್ ಟಿಕೆಟ್ ಘೋಷಣೆ ಮಾಡದೆ ಕೊನೇ ಕ್ಷಣದಲ್ಲಿ ಬದಲಾವಣೆ ಮಾಡಲು ಬಯಸಿದ್ದು, ಕೆಲವರು ಸ್ಪರ್ಧೆ ಮಾಡಲೇಬೇಕು ಅನ್ನೋ ಹಠಕ್ಕೆ ಬಂದಿದ್ದಾರೆ. ಇಂದು ಶಕ್ತಿ ಪ್ರದರ್ಶನದ ಬಳಿಕ ಸಂಸದ ಸಂಗಣ್ಣ ಕರಡಿ, ಲೋಕಸಭೆ ಸದಸ್ಯತ್ವಕ್ಕೆ ರಾಜಿನಾಮೆ ನೀಡುವ ನಿರ್ಧಾರ ಪ್ರಕಟ ಮಾಡಲಿದ್ದಾರೆ. ಇಂದು ಅಂತಿಮ ನಿರ್ಧಾರ ಮಾಡಿದ ಬಳಿಕ ಸಂಸತ್ ಸ್ಥಾನ ಹಾಗು ಭಾರತೀಯ ಜನತಾ ಪಾರ್ಟಿ ಸದಸ್ಯತ್ವಕ್ಕೂ ರಾಜೀನಾಮೆ ನೀಡಿ, ಜೆಡಿಎಸ್ನಿಂದ ಅಖಾಡಕ್ಕೆ ಇಳಿಯುವ ತಯಾರಿ ನಡೆಸಿದ್ದಾರೆ ಎನ್ನಲಾಗಿದೆ. ಇದೀಗ ರಾಜೀನಾಮೆ ಪರ್ವ ಮುಂದುವರಿದಿದ್ದಕ್ಕೆ ಕಾರಣ ಏನು ಎನ್ನುವುದು ರಾಜ್ಯ ರಾಜಕಾರಣದ ಮೇಲೆ ನಿಗಾ ಇಟ್ಟವರಿಗೆ ಆಶ್ಚರ್ಯ ತಂದಿಟ್ಟಿದೆ.
ಟಿಕೆಟ್ ಕೊಡದೆ ಇರುವ ನಿರ್ಧಾರ ಮಾಡಿದ್ಯಾಕೆ ಬಿಜೆಪಿ..!

ರಾಜ್ಯದಲ್ಲಿ ಬಿಜೆಪಿ ಪ್ರಮುಖವಾಗಿ ಲಿಂಗಾಯತ ನಾಯಕರ ಹಿಡಿತದಲ್ಲಿದೆ. ಆದರೆ ಬಿಜೆಪಿ ಹೈಕಮಾಂಡ್ ಬಿಜೆಪಿಯನ್ನು ಸಂಪೂರ್ಣವಾಗಿ ಹಿಡಿತಕ್ಕೆ ತೆಗೆದುಕೊಳ್ಳುವ ನಿರ್ಧಾರ ಮಾಡಿದ್ದು, ವ್ಯಕ್ತಿಗತವಾಗಿ ಪಕ್ಷ ಯಾವುದೇ ರಾಜ್ಯ ನಾಯಕರ ಹಿಡಿತದಲ್ಲಿ ಇರಕೂಡದು ಎನ್ನುವುದು ಹೈಕಮಾಂಡ್ ನಾಯಕರ ಈ ನಿರ್ಧಾರಕ್ಕೆ ಕಾರಣ. ಇನ್ನು ಆರ್ಎಸ್ಎಸ್ ಮೂಲದಿಂದ ಬಂದಿರುವ ಬಿ.ಎಲ್ ಸಂತೋಷ್ ಭಾರತೀಯ ಜನತಾ ಪಾರ್ಟಿ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಈ ಬಾರಿ ಬಿಜೆಪಿ ಸರ್ಕಾರ ಹೇಗಿದ್ದರೂ ಅಧಿಕಾರಕ್ಕೆ ಬರುವುದಿಲ್ಲ, ಮುಂದಿನ ದಿನಗಳಲ್ಲಿ ಪಕ್ಷವನ್ನು ಹೊಸ ಹುರುಪಿನೊಂದಿಗೆ ಕಟ್ಟೋಣ ಎನ್ನುವ ತೀರ್ಮಾನ ಮಾಡಿದ್ದಾರೆ ಎನ್ನಲಾಗ್ತಿದೆ. ಇದೇ ಸೂತ್ರವನ್ನು ನಳೀನ್ ಕುಮಾರ್ ಕಟೀಲ್ ಕೆಲವು ತಿಂಗಳ ಹಿಂದೆಯೇ ಬಹಿರಂಗ ಮಾಡಿದ್ದು, ಈಶ್ವರಪ್ಪ, ಶೆಟ್ಟರ್ ಸೇರಿದಂತೆ ಸಾಕಷ್ಟು ನಾಯಕರಿಗೆ ಮುಂದಿನ ಬಾರಿ ಟಿಕೆಟ್ ಇಲ್ಲ ಎನ್ನುವುದನ್ನು ಹೇಳಿದ್ದರು. ಇಡೀ ಪಕ್ಷವನ್ನು ಸಂತೋಷ್ ಕಂಟ್ರೋಲ್ಗೆ ತೆಗೆದುಕೊಳ್ಳಲಿದ್ದಾರೆ ಅನ್ನೋದನ್ನೂ ಹೇಳಿದ್ದರು. ಅಲ್ಲಿಗೆ ಈ ಮೇಲಿನ ಎಲ್ಲಾ ಮಾತುಗಳು ಸತ್ಯ ಎನ್ನಬಹುದು.
ಟಿಕೆಟ್ ಸಿಗದ ನಾಯಕರು ಪಕ್ಷಾಂತರ ಮಾಡುತ್ತಿರೋದು ಯಾಕೆ..?

ಭಾರತೀಯ ಜನತಾ ಪಾರ್ಟಿಯಲ್ಲಿ ಟಿಕೆಟ್ ಸಿಗದೆ ಪಕ್ಷಾಂತರ ಮಾಡುತ್ತಿರುವುದಕ್ಕೆ ಎರಡು ಕಾರಣಗಳಿವೆ. ಒಂದು, ಯಾವುದೇ ಓರ್ವ ವ್ಯಕ್ತಿ ಪಕ್ಷೇತರನಾಗಿ ಸ್ಪರ್ಧೆ ಮಾಡಿದಾಗ ಎಲ್ಲವನ್ನೂ ತಾನೊಬ್ಬನ್ನೇ ನೋಡಿಕೊಳ್ಳಬೇಕಾಗುತ್ತದೆ. ಬೂತ್ನಲ್ಲಿ ನಿಂತು ವೋಟ್ ಹಾಕಿಸುವುದಕ್ಕೂ ಯಾರೊಬ್ಬರೂ ಸಿಗುವುದಿಲ್ಲ. ಬೂತ್ನಲ್ಲಿ ಏಜೆಂಟ್ ಆಗುವುದಕ್ಕೂ ಯಾರು ಸಿಗುವುದಿಲ್ಲ. ಅಭಿಮಾನ ಇದ್ದರೆ ಮತ ಚಲಾವಣೆ ಮಾಡಬಹುದು. ಆದರೆ ಬೇರೆ ಎಲ್ಲಾ ಕೆಲಸಗಳಿಗೂ ಪಕ್ಷದಲ್ಲಿ ಇದ್ದರೆ ಕಾರ್ಯಕರ್ಯರ ಸೇನೆಯೇ ಬೆಂಬಲವಾಗಿ ನಿಲ್ಲುತ್ತದೆ. ಅದರ ಜೊತೆಗೆ ಈ ಬಾರಿ ಯಾವುದೇ ಪಕ್ಷಕ್ಕೂ ಬಹುಮತ ಸಿಗುವುದಿಲ್ಲ ಎನ್ನುವ ಲೆಕ್ಕಾಚಾರವಿದೆ. ಕಾಂಗ್ರೆಸ್ ಏನೇ ಬಿರುಗಾಳಿ ಎಬ್ಬಿಸಿದರೂ ನೂರರ ಗಡಿ ದಾಟುವುದಿಲ್ಲ ಎನ್ನುವುದು ರಾಜಕೀಯ ಪರಿಣಿತರ ಲೆಕ್ಕಾಚಾರ. ಬಿಜೆಪಿ 50-60 ರ ಆಸುಪಾಸಿನಲ್ಲಿದ್ದು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಖ್ಯಾತನಾಮರನ್ನು ಕರೆದುಕೊಂಡು ಬಂದು ಪ್ರಚಾರ ಮಾಡಿಸಿ 10 ರಿಂದ 15 ಸ್ಥಾನಗಳನ್ನು ಹೆಚ್ಚಿಸಿಕೊಳ್ಳುವ ಲೆಕ್ಕಾಚಾರದಲ್ಲಿದೆ. ಅಂದರೆ ಜೆಡಿಎಸ್ ಪಕ್ಷ ಅಧಿಕಾರ ಹಿಡಿಯಲಿದ್ದು, ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲಿಸುವುದು ಬಹುತೇಕ ನಿಚ್ಚಳ. ಪಕ್ಷಾಂತರಕ್ಕೆ ಇದೂ ಒಂದು ಕಾರಣವಾಗಿದೆ.
ಕೃಷ್ಣಮಣಿ