ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಸತ್ಯ ಶೋಧನೆಗೆ ಮತ್ತು ಸಂತ್ರಸ್ತರಿಗೆ ನೆರವು ನೀಡಲು ಸಮಿತಿಯನ್ನು ರಚಿಸಬೇಕು ಎಂದು ಕೋರಲಾಗಿದೆ.

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದ (Chinnaswamy Stadium) ಮುಂಭಾಗದಲ್ಲಿ ಆರ್‌ಸಿಬಿ ವಿಜಯೋತ್ಸವಕ್ಕೂ (RCB Winnig Movement) ಮುನ್ನ ಈಚೆಗೆ ನಡೆದ ಕಾಲ್ತುಳಿತ ಪ್ರಕರಣವನ್ನು ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿ ನೇತೃತ್ವದ ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ವಕೀಲ ಹಾಗೂ ಸಾಮಾಜಿಕ ಕಾರ್ಯಕರ್ತ ಗಿರೀಶ್ ಭಾರದ್ವಾಜ್ (Girish Baradwaj) ಅವರು ಕರ್ನಾಟಕ ಹೈಕೋರ್ಟ್‌ನ ಹಂಗಾಮಿ ಮುಖ್ಯ ನ್ಯಾಯಮೂರ್ತಿ ವಿ ಕಾಮೇಶ್ವರ ರಾವ್ (V Kameshwar Rao) ಅವರಿಗೆ ಮನವಿ ಮಾಡಿದ್ದಾರೆ.
ಸಿದ್ಧತೆ ಇಲ್ಲದೇ ಇರುವುದರಿಂದ ಸೂಕ್ಷ್ಮ ಪ್ರದೇಶವಾದ ವಿಧಾನ ಸೌಧದ (Vidhanasouda) ಬಳಿ ಆರ್‌ಸಿಬಿ (RCB)ವಿಜಯೋತ್ಸವ ನಡೆಸುವುದು ಸೂಕ್ತವಲ್ಲ ಎಂದು ವಿಧಾನ ಸೌಧ ಭದ್ರತಾ ವಿಭಾಗದ ಡಿಸಿಪಿಯು ಜೂನ್ 4ರಂದು ನೀಡಿರುವ ವರದಿಯನ್ನು ಮನವಿಯಲ್ಲಿ ಉಲ್ಲಂಘಿಸಲಾಗಿದೆ. ಹೀಗಾಗಿ, ವಿಧಾನ ಸೌಧ ಮತ್ತು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಸಮಾರಂಭಕ್ಕೆ ಸಂಬಂಧಿಸಿದ ಎಲ್ಲಾ ಅಧಿಕೃತ ದಾಖಲೆಗಳು, ಸಂವಹನ, ಅನುಮತಿ ಮತ್ತು ವರದಿಗಳನ್ನು ಜಫ್ತಿ ಮಾಡಲು ಆದೇಶಿಸಬೇಕು. ಸ್ವತಂತ್ರ ಮತ್ತು ಕಾಲಮಿತಿಯಲ್ಲಿ ಹೈಕೋರ್ಟ್‌ನ ಹಾಲಿ ನ್ಯಾಯಮೂರ್ತಿಯೊಬ್ಬರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಗಿರೀಶ್ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನೇತೃತ್ವದಲ್ಲಿ ಸತ್ಯ ಶೋಧನೆಗೆ ಮತ್ತು ಸಂತ್ರಸ್ತರಿಗೆ ನೆರವು ನೀಡಲು ಸಮಿತಿಯನ್ನು ರಚಿಸಬೇಕು. ಪರ್ಯಾಯವಾಗಿ ಮ್ಯಾಜಿಸ್ಟೀರಿಯಲ್ ತನಿಖೆ ಮತ್ತು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ತನಿಖೆಗೆ ಆಯೋಗ ರಚಿಸಿರುವುದಕ್ಕೆ ತಡೆ ನೀಡಬೇಕು ಎಂದು ಕೋರಲಾಗಿದೆ
ಕಾಲ್ತುಳಿತ ಪ್ರಕರಣದಲ್ಲಿ ಸಂವಿಧಾನದ 21ನೇ ವಿಧಿಯಡಿ ದೊರತಿರುವ ಜೀವಿಸುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದ್ದು, ಜನರ ಜೀವ ಉಳಿಸುವ ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆಕ್ಷೇಪಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಚಾಮರಾಜನಗರದಲ್ಲಿ ಆಮ್ಲಜನಕದ ಕೊರತೆಯಿಂದ 24 ಅಮಾಯಕರು ಅಸುನೀಗಿದ್ದ ಪ್ರಕರಣದ ಮೇಲೆ ಹೈಕೋರ್ಟ್ ನಿಗಾ ಇಡುವ ಮೂಲಕ ಹೊಣೆಗಾರಿಕೆ ಬಹಿರಂಗವಾಗಿತ್ತು. ಈ ಪ್ರಕರಣದಲ್ಲೂ ಹೈಕೋರ್ಟ್ ಮೇಲ್ವಿಚಾರಣೆ ಅಗತ್ಯವಾಗಿದೆ ಎಂದು ವಾದಿಸಲಾಗಿದೆ.

ಕಾಲ್ತುಳಿದ ಪ್ರಕರಣದಲ್ಲಿ ಆಡಳಿತ ವೈಫಲ್ಯ, ರಾಜಕೀಯ ಮಧ್ಯಪ್ರವೇಶದಿಂದ ಅಮಾಯಕರು ಸಾವನ್ನಪ್ಪಿದ್ದು, ನ್ಯಾಯಾಂಗದ ಪರಿಶೀಲನೆ ಅತ್ಯಗತ್ಯವಾಗಿದೆ ಎಂದು ಆಗ್ರಹಿಸಲಾಗಿದೆ.
ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ಅವರಿಗೆ ಕೋವಿಡ್ ಹಗರಣದ ವಿಚಾರಣೆಯ ಜವಾಬ್ದಾರಿ ನೀಡಲಾಗಿದೆ. ಬೆಂಗಳೂರು ಪೊಲೀಸ್ ಆಯುಕ್ತರು ಸೇರಿ ಐವರು ಅಧಿಕಾರಿಗಳನ್ನು ಕಾನೂನಿಗೆ ವಿರುದ್ಧವಾಗಿ ಅಮಾನತುಗೊಳಿಸಲಾಗಿದೆ. ಸರ್ಕಾರ ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿದ್ದು, ರಾಜಕೀಯ ಒತ್ತಡ ಕಾಣುತ್ತಿದೆ. ಗುಪ್ತಚರ ದಳ ಸಂಪೂರ್ಣವಾಗಿ ವಿಫಲವಾಗಿದೆ. ಈ ಎಲ್ಲಾ ಕಾರಣಗಳಿಗಾಗಿ ಹೈಕೋರ್ಟ್ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆಗೆ ಆದೇಶಿಸಬೇಕು ಎಂದು ಕೋರಲಾಗಿದೆ.

ಕಾಲ್ತುಳಿತ ಘಟನೆ ಘಟಿಸಿದ ಮಾರನೇಯ ದಿನವೇ ಹೈಕೋರ್ಟ್ ಸ್ವಯಂಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿಕೊಂಡು, ವಸ್ತುಸ್ಥಿತಿ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಆದೇಶಿಸಿದ್ದು, ಆ ಅರ್ಜಿಯ ವಿಚಾರಣೆ ನಾಳೆಗೆ ನಿಗದಿಯಾಗಿದೆ.











