ಮೈಸೂರು:ಜಿಲ್ಲಾಡಳಿತದ ವತಿಯಿಂದ ಜನವರಿ 26 ರಂದು ಬೆಳಿಗ್ಗೆ 9 ಗಂಟೆಗೆ 74 ನೇ ಗಣರಾಜ್ಯೋತ್ಸವವನ್ನು ಬನ್ನಿಮಂಟಪ ಪಂಜಿನ ಕವಾಯತು ಮೈದಾನದಲ್ಲಿ ಅರ್ಧ ಪೂರ್ಣವಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಲೋಕನಾಥ್ ಅವರು ತಿಳಿಸಿದರು.
ಗಣರಾಜ್ಯೋತ್ಸವ ಆಚರಣೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಿದ್ದತೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಗಣರಾಜ್ಯೋತ್ಸವ ದಿನದಂದು ಸಚಿವರು ಧ್ವಜರೋಹಣ ನೆರವೇರಿಸಿ ಸಂದೇಶ ನೀಡುವರು. ಅಧಿಕಾರಿಗಳು ಗಣರಾಜ್ಯೋತ್ಸವ ದಿನಾಚರಣೆಯನ್ನು ಉತ್ತಮವಾಗಿ ಆಚರಿಸಲು ಬೇಕಾದ ಎಲ್ಲಾ ರೀತಿಯ ಪೂರಕ ವ್ಯವಸ್ಥೆ ಮಾಡಿಕೊಳ್ಳಿ ಎಂದರು.
ಹಾಜರಾತಿ ಕಡ್ಡಾಯ: ಜಿಲ್ಲಾ ಮಟ್ಟದ ಅಧಿಕಾರಿಗಳು ತಮ್ಮ ಕಚೇರಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಧ್ವಜಾರೋಹಣ ನೆರವೇರಿಸಿ 9 ಗಂಟೆಗೆ ಕವಾಯತ್ ಮೈದಾನದಲ್ಲಿ ನಡೆಯುವ ಧ್ವಜಾರೋಹಣ ಕಾರ್ಯಕ್ರಮಕ್ಕೆ ತಮ್ಮ ಸಿಬ್ಬಂದಿಗಳೊಂದಿಗೆ ಕಡ್ಡಾಯವಾಗಿ ಹಾಜರಾಗಬೇಕು ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಶಾಲೆಗಳ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು.ರಾಷ್ಟ್ರ ಗೀತೆ, ನಾಡಗೀತೆ ಹಾಗೂ ರೈತಗೀತೆಯನ್ನು ಹಾಡಿಸಲು ವ್ಯವಸ್ಥೆ ಮಾಡಿಕೊಳ್ಳಿ ಎಂದರು.
ಎನ್.ಎಸ್.ಎಸ್ ಹಾಗೂ ಎನ್.ಸಿ.ಸಿ , ಪೊಲೀಸ್ ಇಲಾಖೆ ಹಾಗೂ ಅಬಕಾರಿ ಇಲಾಖೆವತಿಯಿಂದ ಪಥ ಸಂಚಲನ ನಡೆಸಲು ಪೂರ್ವ ಅಭ್ಯಾಸ ನಡೆಸಲು ಸಂಬಂಧಿಸಿದ ಅಧಿಕಾರಿಗಳು ಸೂಕ್ತ ಕ್ರಮವಹಿಸಬೇಕು.
ಗಣರಾಜ್ಯೋತ್ಸವ ದಿನಾಚರಣೆಯನ್ನು ವ್ಯವಸ್ಥಿತ ನಿರ್ವಹಣೆಗಾಗಿ ತಮಗೆ ವಹಿಸಿರುವ ಜವಾಬ್ದಾರಿ ಯನ್ನು ಅಚ್ಚುಕಟ್ಟಾಗಿ ನಿರ್ವಹಿಸಲು ಅಧಿಕಾರಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಕಚೇರಿಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲು ಸಂಬಂಧಿಸಿದ ಕಚೇರಿಯ ಮುಖ್ಯಸ್ಧರು ಅಗತ್ಯ ಕ್ರಮ ವಹಿಸಬೇಕು.
ಕಾರ್ಯಕ್ರಮದ ಸ್ಧಳದಲ್ಲಿ ಸ್ವಚ್ಚತೆ ಬಗ್ಗೆ ಮಹಾನಗರ ಪಾಲಿಕೆ ಅಧಿಕಾರಿಗಳು ಕ್ರಮವಹಿಸಬೇಕು ಹಾಗೂ ಆರೋಗ್ಯ ಇಲಾಖೆಯಿಂದ ಆಂಬುಲೆನ್ಸ್ ವ್ಯವಸ್ಧೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಪ್ರೇಮ್ ಕುಮಾರ್ , ಅಪರ ಪೊಲೀಸ್ ವರಿಷ್ಠಾಧಿಕಾರಿ ಡಾ ನಂದಿನಿ ಬಿ.ಎಸ್ ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಜರಿದ್ದರು.