೨೦೨೨ ರ ಆರಂಭದ ತಿಃಗಳಲ್ಲಿ ಇಡೀ ರಾಜ್ಯ ಹಿಜಾಬ್ ಮುಂತಾದ ಕೃತಕವಾಗಿ ಸೃಷ್ಟಿಸಲಾದ ಕೋಮು ದುೃವೀಕರಣದ ಗದ್ದಲದಲ್ಲಿ ಮುಳುಗಿತ್ತು. ಅದರ ಮುಂದುವರೆದ ಭಾಗವಾಗಿ ಶಿವಮೊಗ್ಗೆಯಲ್ಲಿ ಒಬ್ಬ ಧರ್ಮಾಂಧ ಯುವಕನ ಹತ್ಯೆ ನಡೆದುಹೋಗಿತ್ತು. ಮಾಮೂಲಿನಂತೆ ಹೆಣ ರಾಜಕೀಯದ ಹೇಸಿಗೆ ಪ್ರದರ್ಶನ ರಾಜ್ಯದ ರಸ್ತೆ ರಸ್ತೆಗಳಲ್ಲಿ ಮೆರೆದಾಡುತ್ತಿತ್ತು. ಇಂತಹ ಸಂದಿಗ್ಧ ಸಂದರ್ಭದಲ್ಲಿ ರಾಜ್ಯದ ಶಾಸಕರು ಸದ್ದಿಲ್ಲದೆˌ ಚರ್ಚೆಯಿಲ್ಲದೆ ವಿಧಾನ ಸಭೆಯಲ್ಲಿ ತಮ್ಮ ಸಂಬಳ/ಭತ್ಯೆಗಳನ್ನು ಹೆಚ್ಚಿಸಿಕೊಳ್ಳುವ ಮಸೂದೆಗೆ ಅಂಗೀಕಾರ ಪಡೆದರು. ಇದರರ್ಥ ಶಾಸಕರ ಸಂಬಳ/ಭತ್ಯೆ ಏರಿಕೆಯಾಗಲೆಬಾರದು ಅಂತಲ್ಲ. ಆದರೆ ದೇಶಕ್ಕೆ ಸ್ವಾತಂತ್ರ ಬಂದಾಗಿನಿಂದಲೂ ಪ್ರತಿಸಲ ಸಂಸತ್ತಿನಲ್ಲಾಗಲಿˌ ವಿಧಾನಸಭೆಗಳಲ್ಲಾಗಲಿ ಯಾವ ಚರ್ಚೆˌ ವಾಗ್ವಾದˌ ಅಪಸ್ವರˌ ವಿರೋಧಗಳಿಲ್ಲದೆ ವಿರೋಧ ಮತ್ತು ಆಡಳಿತ ಪಕ್ಷದ ಎಲ್ಲ ಸದಸ್ಯರ ಒಗ್ಗಟ್ಟಿನಿಂದ ಅಂಗೀಕಾರಗೊಳ್ಳುವ ಏಕೈಕ ಆಡಳಿತಾತ್ಮಕ ಮಸೂದೆ/ನಿರ್ಧಾರ ಎಂದರೆ ಶಾಸನ ಸಭೆಗಳ ಸದಸ್ಯರ ಸಂಬಳ/ ಭತ್ಯ ಹೆಚ್ಚಳದ ಪ್ರಕ್ರಿಯೆ.
ಸರಕಾರಿ ನೌಕರರುˌ ಸಾರಿಗೆ ಸಂಸ್ಥೆಯ ಕಾರ್ಮಿಕರುˌ ಅಂಗನವಾಡಿ ಕಾರ್ಯಕರ್ತೆಯರುˌ ಆಶಾ ಕಾರ್ಯಕರ್ತೆಯರುˌ ಪೌರ ಕಾರ್ಮಿಕರು ಮುಂತಾದ ಸಂಘಟಿತ ಮತ್ತು ಅಸಂಘಟಿತ ವಲಯದ ನೌಕರರು ತಮ್ಮ ಸಂಬಳ/ಭತ್ಯಗಳ ಹೆಚ್ಚಳಕ್ಕಾಗಿ ಮನವಿ/ಮುಸ್ಕರ ಮಾಡಿದಾಗ ಈ ಶಾಸಕ/ಮಂತ್ರಿಗಳು ಹೇಗೆಲ್ಲ ಪ್ರತಿಕ್ರಿಯಿಸುತ್ತಾರೆನ್ನುವುದು ನಾವು ಬಲ್ಲೆವು. ನಿಜವಾಗಿಯೂ ದುಡಿಯುವ ವರ್ಗ ತಮ್ಮ ಸಂವಿಧಾನ ಬದ್ಧ ಹಕ್ಕುಗಳ ಬೇಡಿಕೆಗಾಗಿ ಚಳುವಳಿ ಮಾಡಿದಾಗ ಆರ್ಥಿಕ ಶಿಸ್ತು ಮತ್ತು ಆರ್ಥಿಕ ಹೊರೆಗಳ ಬಗ್ಗೆ ಪುಂಖಾನುಪುಂಖಾಗಿ ಭಾಷಣ ಮಾಡುವ ಈ ಜನಪ್ರತಿನಿಧಿಗಳು ತಾವು ಸಾಕಷ್ಟು ಅನುಕೂಲಸ್ತರಾಗಿದ್ದರೂ ಕೂಡ ಸಮಯಾಸಮಯಕ್ಕೆ ಯಾವುದೇ ವಿಳಂಬ/ವಿರೋಧಗಳಿಲ್ಲದೆ ತಮ್ಮ ಸಂಬಳ/ಭತ್ಯಗಳನ್ನು ಹೆಚ್ಚಿಸಿಕೊಳ್ಳುವುದು ನಿಜವಾಗಿಯೂ ನಾಚಿಕೆಗೇಡಿನ ಸಂಗತಿ. ಸಂಬಳಕ್ಕಿಂತಲೂ ಈ ಜನಪ್ರತಿನಿಧಿಗಳು ಪಡೆಯುವ ಭತ್ಯೆ ಮತ್ತು ಇತರ ಸೌಲಭ್ಯಗಳು ನಿಜವಾಗಿಯೂ ಆತಂಕವನ್ನು ಹುಟ್ಟಿಸುತ್ತವೆ.
ಇವರಿಗೆ ತಮ್ಮ ತಮ್ಮ ಸ್ವಕ್ಷೇತ್ರಗಳಲ್ಲಿ ಪ್ರವಾಸ ಮಾಡಲು ಸರಕಾರದ ಖರ್ಚೇ ಆಗಬೇಕು. ಏಕೆಂದರೆ ಜನಪ್ರತಿನಿಧಿಗಳ ಸೌಲಭ್ಯಗಳ ಕಾಯ್ದೆಯೊಂದೇ ಸಂಪೂರ್ಣ ಪ್ರಮಾಣದಲ್ಲಿ ಈ ದೇಶದಲ್ಲಿ ಯಶಸ್ಸು ಕಂಡಿರುವುದು. ಈ ಜನಪ್ರತಿನಿಧಿಗಳಿಗೆ ಯಾವುದಾದರೂ ಖಾಸಗಿ ಕೆಲಸ ಇದ್ದಾಗ ಅಲ್ಲೊಂದು ಅಧಿಕೃತ ಕ್ಷೇತ್ರ ಪ್ರವಾಸ ಕಾರ್ಯಕ್ರಮ ತಕ್ಷಣಕ್ಕೆ ಹುಟ್ಟು ಪಡೆಯುತ್ತದೆ. ಸ್ವಾಮಿ ಕಾರ್ಯದ ಹೆಸರಿನಲ್ಲಿ ಸ್ವಕಾರ್ಯ ಯಶಸ್ವಿಯಾಗಿ ನೆರವೇರುತ್ತದೆ. ಇಂದಿನ ಟೆಲಿಕಾಮ್ ಸಂಸ್ಥೆಗಳ ಸ್ಪರ್ಧಾತ್ಮಕ ಯುಗದಲ್ಲಿ ಯಾರಾದರೂ ತಮ್ಮ ಮೋಬೈಲ್ ಫೋನ್ಗಳಿಗೆ ಗರಿಷ್ಟ ೩೦೦೦-೫೦೦೦ ರೂಪಾಯಿ ರಿಚಾರ್ಜ್ ಮಾಡಿಸಿದರೆ ಸಾಕುˌ ಒಂದು ವರ್ಷ ಅವಧಿಗೆ ಅನಿಯಮಿತ ಉಚಿತ ಕರೆ ಮತ್ತು ಅಂತರ್ಜಾಲ್ ಸಂಪರ್ಕ ಸೌಲಭ್ಯ ಪಡೆಯಲು ಸಾಧ್ಯವಿರುವ ಈ ಕಾಲಘಟ್ಟದಲ್ಲಿ ಒಬ್ಬ ಜನಪ್ರತಿನಿಧಿಗೆ ದೂರವಾಣಿ ವೆಚ್ಚಕ್ಕೆಂದು ತಿಂಗಳಿಗೆ ೨೦ ಸಾವಿರ ರೂಪಾಯಿ ಭತ್ಯೆ ನೀಡುವುದು ಸರಕಾರದ ಖಜಾನೆಯ ಹಗಲು ದರೋಡೆಯಲ್ಲದೆ ಮತ್ತೇನೂ ಅಲ್ಲ.
ನೌಕರರ ಸಂಬಳ ಹೆಚ್ಚಳಕ್ಕೆ ಅನೇಕ ಬಗೆಯ ಲೆಕ್ಕಾಚಾರಗಳನ್ನು ಪರಿಗಣಿಸುವ ಆರ್ಥಿಕ ತಜ್ಞರು ಶಾಸಕರ ಭತ್ಯೆಗಳ ಹೆಚ್ಚಳ ಆ ಎಲ್ಲ ಆರ್ಥಿಕ ಲೆಕ್ಕಾಚಾರದ ಪ್ರಕ್ರಿಯೆಯಿಂದ ಹೊರಗಿಡುವುದು ಸೋಜಿಗದ ಸಂಗತಿಯಾಗಿದೆ. ಈ ಸಂಬಳ/ಸೌಲಭ್ಯಗಳ ಹೊರತಾಗಿ ಜನಪ್ರತಿನಿಧಿಗಳಿಗೆ ಬೆಂಗಳೂರಿನಲ್ಲಿ ವಸತಿಗಾಗಿ ಶಾಸಕರ ಭವನದಲ್ಲಿ ಐಷಾರಾಮಿ ಮನೆಗಳಿವೆ. ಮಂತ್ರಿಗಳಿಗೆ ತಾವು ಇಚ್ಚಿಸಿದ ಸರಕಾರಿ ಬಂಗ್ಲೆಗಳು ಸಿಗುತ್ತವೆ. ಇಷ್ಟೇ ಸಾಲದಕ್ಕೆ ವಿಧಾನಸೌಧ ಮತ್ತು ವಸತಿಗೃಹಗಳಿಗೆ ಹೊಂದಿಕೊಂಡಿರುವ ಉಪಹಾರಗೃಹಗಳಲ್ಲಿ ಸಬ್ಸಿಡೈಜ್ಡ್ ದರದಲ್ಲಿ ಊಟ/ತಿಂಡಿಗಳ ಸೌಲಭ್ಯವಿದೆ. ಸಾಲದಕ್ಕೆ ಸದನಕ್ಕೆ ಹಾಜರಾದರೆˌ ಹಾಗು ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು ಸದನದಲ್ಲಿ ಕೇಳಿದರೆ ಪ್ರತ್ಯೇಕವಾಗಿ ಭತ್ಯೆಯನ್ನು ನೀಡಲಾಗುತ್ತದೆ. ಒಟ್ಟಾರೆ ಈ ಜನಪ್ರತಿನಿಧಿಗಳು ಹೊರಗೆ ಹೋಗಲಿˌ ಮನೆಯೊಳಗಿರಲಿˌ ತಮ್ಮ ಶರ್ಟಿಗೆ ಜೇಬುಗಳನ್ನು ಇಟ್ಟುಕೊಳ್ಳುವ ಅಗತ್ಯವೇ ಇಲ್ಲ ಎಂದು ಹೇಳಬೇಕು.
ಕಳೆದ ಎರಡು-ಮೂರು ವರ್ಷಗಳ ಹಿಂದೆ ರಾಜ್ಯದ ಹಳೆ ಮೈಸೂರು ಭಾಗದ ಸಂಸದನೊಬ್ಬ ತನಗೆ ಸಂಬಳ ಸಾಕಾಗಲ್ಲ ˌ ಅದನ್ನು ಹೆಚ್ಚಿಸಬೇಕೆಂದು ಸಾರ್ವಜನಿಕವಾಗಿ ಗೋಗರೆದಿದ್ದ. ಇದಕ್ಕೆ ಧ್ವನಿಗೂಡಿಸಿದ ಇನ್ನೊಬ್ಬ ಅದೇ ಪಕ್ಷದ ಯುವ ಸಂಸದ ತನಗೆ ಭೇಟಿಯಾಗಲು ಬರುವ ಕ್ಷೇತ್ರದ ಜನರಿಗೆ ಕೇವಲ ಚಹ ಕುಡಿಸಲು ದಿನಕ್ಕೆ ಸಾವಿರಾರು ರೂಪಾಯಿ ಚರ್ಚು ಬರುತ್ತದೆ ಎಂದು ಅವಲತ್ತುಕೊಂಡಿದ್ದ. ಬಹುಶಃ ಈ ಜನಪ್ರತಿನಿಧಿಗಳನ್ನು ಭೇಟಿಯಾಗಲು ಬರುವ ಮತದಾರರಿಗೆ ಚಹ-ಪಾಣಿ ಖರ್ಚು ಕೂಡ ಸರಕಾರವೇ ನೋಡಿಕೊಳ್ಳಬೇಕು ಎನ್ನುವುದು ಇವರಿಬ್ಬರ ಮನೋಭಿಲಾಶೆ ಇರಬೇಕು. ಸಾಲದಕ್ಕೆ ಇವರಿಬ್ಬರೂ ತಮ್ಮನ್ನು ತಾವು ದೇಶಭಕ್ತರುˌ ಸಂಸ್ಕೃತಿ ರಕ್ಷಕರು ಮತ್ತು ಧರ್ಮರಕ್ಷರರೆಂದು ಕರೆದುಕೊಳ್ಳುವ ಪಕ್ಷಕ್ಕೆ ಸೇರಿದವರಷ್ಟೇ ಅಲ್ಲದೆ ತಮ್ಮ ಭಾಷಣ ಮತ್ತು ಬರಹಗಳ ಮೂಲಕ ಒಂದಿಡೀ ಯುವ ಪೀಳಿಗೆಯ ಚಿಂತನಾ ಕ್ರಮವನ್ನು ಕೋಮು ದ್ವೇಷದ ನೆಲೆಗಟ್ಟಿನಲ್ಲಿ ರೂಪಿಸಿದವರು.
ಅಷ್ಟೇಯಲ್ಲದೆ ಈ ಜನಪ್ರತಿನಿಧಿಗಳಲ್ಲಿ ಬಹುತೇಕರು ಸ್ವಂತದ ಒಂದಕ್ಕಿಂತ ಹೆಚ್ಚು ಮನೆಗಳುˌ ಸೈಟುಗಳು ಹೊಂದಿದ್ದರೂ ಕೂಡ ಸರಕಾರದ ಸಬ್ಸಿಡಿ ದರದಲ್ಲಿ ಸೈಟುಗಳನ್ನು ಪಡೆದವರು. ಇನ್ನು ಕೆಲವರು ಹೆಂಡತಿಯನ್ನು ತಂಗಿ ಎಂದು ಸುಳ್ಳು ದಾಖಲೆ ಸೃಷ್ಟಿಸಿ ಸರಕಾರಕ್ಕೆ ವಂಚಿಸಿ ಸೈಟು ಪಡೆವರಿದ್ದಾರೆ ಎನ್ನುವ ಆರೋಪಗಳೂ ಕೇಳಿಬಂದಿವೆ. ಅವುಗಳ ಸತ್ಯಾಸತ್ಯತೆ ಹೊರಬರಬೇಕಷ್ಟೆ. ಹೀಗೆ ಒಬ್ಬ ವ್ಯಕ್ತಿ ಒಂದು ಸಲ ಶಾಸಕನೊ/ಸಂಸದನೊ ಆಗಿ ಆಯ್ಕೆಯಾದನೆಂದರೆ ಸಾಕು ಆತನ ಮುಂದಿನ ಮೂರು ತಲೆಮಾರು ಕೂತು ತಿನ್ನುವಷ್ಟು ಐಶ್ವರ್ಯ ಗುಡ್ಡೆ ಹಾಕುವುದನ್ನು ನಾವು ನೋಡಬಹುದಾಗಿದೆ. ಆದರೆ ಇವರನ್ನು ಆರಿಸಿ ಕಳಿಸಿದ ಜನರ ಸಮಸ್ಯೆಗಳು ಎಷ್ಟರಮಟ್ಟಿಗೆ ಬಗೆಹರಿದಿವೆ ಎನ್ನುವುದನ್ನು ನಾವು ತುಲನಾತ್ಮಕವಾಗಿ ವಿಶ್ಲೇಷಿಸಬೇಕಿದೆ. ಜನಪ್ರತಿನಿಧಿಗಳು ಹೋಗಲಿˌ ಇವರ ಬಾಲಂಗೋಚಿಗಳೇ ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿ ಮಾಡಿಕೊಂಡಿರುವ ದೃಷ್ಟಾಂತಗಳು ನಾವು ಸಾಕಷ್ಟು ನೋಡಬಹುದು. ಉತ್ತರ ಕರ್ನಾಟಕದ ಮಾಜಿ ಮಂತ್ರಿಯೊಬ್ಬರ ಚೇಲಾ ಅಂದಾಜು ೩೦೦-೪೦೦ ಕೋಟಿ ರೂಪಾಯಿ ಆಸ್ತಿ ಮಾಡಿಕೊಂಡಿದ್ದಾನೆಂದು ಜನ ಮಾತನಾಡಿಕೊಳ್ಳುತ್ತಾರೆ.
ನಮ್ಮ ೨೨೪ ಶಾಸಕರು ಹಾಗು ೭೫ ವಿಧಾನ ಪರಿಷತ್ ಸದಸ್ಯರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಸಾವಿರಾರು ಕೋಟಿ ಮೌಲ್ಯದ ಆಸ್ತಿಪಾಸ್ತಿ ಘೋಷಣೆ ಮಾಡಿಕೊಂಡಿದ್ದಾರೆ. ಇದರರ್ಥ ಜನಪ್ರತಿನಿಧಿಗಳು ಸಾವಿರಾರು ಕೋಟಿ ಆಸ್ತಿ ಹೊಂದಬಾರದೆಂದಲ್ಲ. ಅವರಿಗೆ ತಮ್ಮದೇಯಾದ ಅನೇಕ ಉದ್ಯಮ/ವ್ಯಾಪಾರ/ವ್ಯವಹಾರಗಳಿವೆ. ಅವುಗಳ ಶಾಸನಾತ್ಮಕ ಮತ್ತು ಅನ್ಯ ಬಗೆಯ ರಕ್ಷಣೆಗಾಗಿ ರಾಜಕೀಯ ಅವರಿಗೊಂದು ಉಪವೃತ್ತಿಯಷ್ಟೆ. ಘೋಷಿತ ಆಸ್ತಿಯೇ ಸಾವಿರಾರು ಕೋಟಿ ಮೌಲ್ಯದ್ದಾಗಿರುವಾಗ ಅಘೋಷಿತ ಹಾಗು ಬೇನಾಮಿ ಆಸ್ತಿ ಇನ್ನೆಷ್ಟೊ. ಕೆಲವರು ರಿಯಲ್ ಎಸ್ಟೇಟ್ˌ ಹೋಟೆಲ್ ದಂಧೆˌ ಮಣ್ಣು ಮತ್ತು ಕಲ್ಲು ಗಣಿಗಾರಿಕೆˌ ಬಾರು-ರೆಷ್ಟಾರೆಂಟುಗಳು ಹೊಂದಿದ್ದರೆ ಇನ್ನೂ ಕೆಲವರು ಶಿಕ್ಷಣೋದ್ಯಮಿಗಳು. ಮಾತೆತ್ತಿದರೆ ತಾವು ಜನಸೇವಕರೆಂದು ಹೇಳಿಕೊಳ್ಳುವ ಇವರು ಮಾಡುವ ಜನಸೇವೆಗೆ ಜನರ ತೆರಿಗೆ ಹಣದಲ್ಲಿ ಸಿಂಹಪಾಲು ವಿನಿಯೋಗವಾಗುತ್ತದೆ ಎನ್ನುವುದೆ ದುರಂತದ ಸಂಗತಿ.
ಶಾಸಕರು/ಸಂಸದರು ಹಾಗು ಇನ್ನಿತರ ಜನಪ್ರತಿನಿಧಿಗಳಿಗೆ ಸಂಬಳ/ಭತ್ಯೆಗಳು ಇರಲೇಬಾರದು ಎನ್ನುವುದು ಅಷ್ಟು ಸಮಂಜಸ ವಾದವಲ್ಲ. ಜನಪ್ರತಿನಿಧಿಗಳಾಗುವವರಲ್ಲಿ ಎಲ್ಲರೂ ಶ್ರೀಮಂತ ಹಿನ್ನೆಲೆಯವರಿರುವುದಿಲ್ಲ. ಅವರಿಗೆ ಸಂಬಳ/ಭತ್ಯೆ ನೀಡುವ ಉದ್ದೇಶ ಒಳ್ಳೆಯದೆ. ಶ್ರೀಮಂತ ಶಾಸಕರು ಈ ಸಂಬಳ/ಭತ್ಯ ಏರಿಕೆಯನ್ನು ವಿರೋಧಿಸಬೇಕಿತ್ತು ಎಂದು ಕೆವಲರು ವಾದಿಸುತ್ತಾರೆ. ಅದೊಂದು ಸಂಪೂರ್ಣವಾದ ತಪ್ಪು ನಿರೀಕ್ಷೆ. ಆದರೆ ದುರಂತದ ಸಂಗತಿ ಎಂದರೆ ಅಗರ್ಭ ಶ್ರೀಮಂತ ಹಿನ್ನೆಲೆಯುಳ್ಳ ಬಹುತೇಕ ಶಾಸಕರು ಸಂಬಳ/ಭತ್ಯೆ ಹೆಚ್ಚಳವನ್ನು ವಿರೋಧಿಸುವ ಬದಲಿಗೆ ತಾವಾದರೂ ಅವನ್ನು ವ್ಯಕ್ತಿಗತ ನೆಲೆಯಲ್ಲಿ ನಿರಾಕರಿಸುವ ಮೂಲಕ ಮೇಲ್ಪಂಕ್ತಿ ಹಾಕಬೇಕಿತ್ತೆಂದು ನಮ್ಮಂತವರು ನಿರೀಕ್ಷಿಸುತ್ತೇವೆ. ಹಿಂದೆ ರೋಣ ಶಾಸಕರಾಗಿದ್ದ ಲಿಂಗೈಕ್ಯ ನೀಲಗಂಗಯ್ಯ ಪೂಜಾರ್ ಅವರು ಶಾಸಕರ ಪಿಂಚಣಿಯನ್ನು ನಿರಾಕರಿಸಿ ದೊಡ್ಡತನ ಮೆರೆದಿದ್ದರು.
ನೀಲಗಂಗಯ್ಯ ಪೂಜಾರ್ ಮತ್ತು ಶಾಂತವೇರಿ ಗೋಪಾಲಗೌಡರಂತ ನೈಜ ಜನಪ್ರತಿನಿಧಗಳೊಂದಿಗೆ ರಾಜಕೀಯವನ್ನು ಉದ್ಯಮ ಅಥವಾ ತಮ್ಮ ಉದ್ಯಮ ರಕ್ಷಣೆಯ ಉಪ ಉದ್ಯಮ ಮಾಡಿಕೊಂಡಿರುವ ಇಂದಿನ ಜನಪ್ರತಿನಿಧಿಗಳನ್ನು ಹೋಲಿಸಲೇಬಾರದು. ಇದು ನಾವು ಆ ಮಹನೀಯರಿಗೆ ಮಾಡುವ ಅತ್ಯಂತ ಘೋರ ಅವಮಾನ ಎಂದು ನಾನಂತೂ ಭಾವಿಸುತ್ತೇನೆ. ಸಂಬಳ/ಭತ್ಯವನ್ನು ನಿರಾಕರಿಸಬೇಕೆಂದು ಬಂಡವಾಳಶಾಹಿ ಮತ್ತು ಪುರೋಹಿತಶಾಹಿ ಪೋಷಿತ ರಾಜಕೀಯ ಪಕ್ಷದ ಜನಪ್ರತಿಧಿಗಳಿಂದ ಖಂಡಿತ ನಿರಿಕ್ಷಿಸಲಾಗದು. ಆದರೆ ಇಂದಿನ ಉಳಿದ ಪಕ್ಷಗಳ ಜನಪ್ರತಿನಿಧಿಗಳಲ್ಲಿ ಬೆರಳೆಣಿಕೆಯಷ್ಟು ಜನರು ತಕ್ಕ ಮಟ್ಟಿಗೆ ಅನುಕೂಲಸ್ತರಾಗಿದ್ದು ತಾವು ಜಯಪ್ರಕಾಶ್ ನಾರಾಯಣ ಅನುಯಾಯಿಗಳೆಂದುˌ ಸಮಾಜವಾದಿಗಳೆಂದು ಹೇಳಿಕೊಳ್ಳುತ್ತಾರೆ. ಇನ್ನೂ ಕೆಲವರು ತಾವು ಬುದ್ಧ-ಬಸವಣ್ಣ-ಬಾಬಾಸಾಬೇಬರ ಅನುಯಾಯಿಗಳೆಂದು ಕರೆದುಕೊಳ್ಳುತ್ತಾರೆ. ಅಂತವರಲ್ಲಿ ಯಾರೂ ಕಡುಬಡವರಿಲ್ಲ ಹಾಗು ಅನೇಕರು ಅಗರ್ಭ ಶ್ರೀಮಂತರಾಗಿದ್ದಾರೆ. ಬಸವಣ್ಣನ ಭೂಮಿ ಕರ್ನಾಟಕದಲ್ಲಿ ಕನಿಷ್ಟ ಇಂತ ಒಂದಿಬ್ಬರಿಂದಲಾದರೂ ನಮಗೆ ಸರಕಾರದ ಸಂಬಳ/ಭತ್ಯೆಗಳು ಬೇಡ ಎನ್ನುವ ಮಾತು ಕೇಳಿಬರದಿರುವುದು ಸಮಕಾಲಿನ ದುರಂತವೆಂದೇ ಹೇಳಬೇಕಾಗಿದೆ.