ರಾಜ್ಯದಲ್ಲಿ ಪದವಿ ಕಾಲೇಜುಗಳ ಆರಂಭ ಸದ್ಯಕ್ಕಿಲ್ಲ, ಇದರ ಬಗ್ಗೆ ಯಾವುದೇ ತೀರ್ಮಾನವಾಗಿಲ್ಲ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅಶ್ವಥ್ ನಾರಾಯಣ್ ‘ಸದ್ಯಕ್ಕೆ ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ನೀಡುವುದು ಮಾತ್ರ ಸರ್ಕಾರದ ಆದ್ಯತೆಯಾಗಿದೆ. ಅದರ ಹೊರತಾಗಿ ಕಾಲೇಜುಗಳನ್ನು ಆರಂಭಿಸುವುದಲ್ಲ. ಕೊರೋನ ಇನ್ನೂ ಸಂಪೂರ್ಣವಾಗಿ ನಿವಾರಣೆ ಆಗದಿರುವ ಹಿನ್ನೆಲೆಯಲ್ಲಿ ಇದರ ಕುರಿತು ತೀರ್ಮಾನಿಸಿಲ್ಲʼ ಎಂದಿದ್ದಾರೆ.
‘ರಾಜ್ಯದ ಆರು ಶೈಕ್ಷಣಿಕ ವಲಯಗಳ ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಲ್ಲಿ 4.90 ಲಕ್ಷ ವಿದ್ಯಾರ್ಥಿಗಳು, 29,241 ಸಿಬ್ಬಂದಿಗಳು ಇದ್ದಾರೆ. ಈ ಪೈಕಿ ಈವರೆಗೆ 3.13 ಲಕ್ಷ ವಿದ್ಯಾರ್ಥಿಗಳು, 24,875 ಸಿಬ್ಬಂದಿ ವರ್ಗದವರು ಲಸಿಕೆ ಹಾಕಿಸಿಕೊಂಡಿದ್ದಾರೆ. ಈವರೆಗೆ ಶೇ 65.14ರಷ್ಟು ಗುರಿ ತಲುಪಲಾಗಿದೆʼ ಎಂದು ಮಾಹಿತಿ ನೀಡಿದ್ದಾರೆ.
ಹಾಗೆಯೇ ‘ವಿದ್ಯಾರ್ಥಿಗಳ ಲಸಿಕೀಕರಣವನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ. ಸರ್ಕಾರ ಈ ಬಗ್ಗೆ ವಿಶೇಷ ಒತ್ತು ನೀಡಿ ಆದ್ಯತಾ ಗುಂಪಿನ ಅಡಿಯಲ್ಲಿ ವಿದ್ಯಾರ್ಥಿಗಳು, ಬೋಧಕರು ಮತ್ತು ಬೋಧಕೇತರ ಸಿಬ್ಬಂದಿಗೆ ಲಸಿಕೆ ಕೊಡುತ್ತಿದೆ. ಕೆಲ ದಿನಗಳಲ್ಲೇ ಶೇ.100ರಷ್ಟು ಗುರಿ ಸಾಧಿಸಲಾಗುತ್ತದೆ. ಖಾಸಗಿ ಕಾಲೇಜುಗಳಲ್ಲಿ ಎಷ್ಟು ಪ್ರಮಾಣದಲ್ಲಿ ಲಸಿಕೆ ನೀಡಲಾಗಿದೆ ಎಂಬುದರ ಕುರಿತ ಅಂಕಿ-ಅಂಶ ಪಡೆದುಕೊಳ್ಳುತ್ತಿದ್ದೇವೆ. ಆ ಮಾಹಿತಿ ಸಿಕ್ಕ ಕೂಡಲೇ ಉಳಿದ ವಿದ್ಯಾರ್ಥಿಗಳಿಗೆ ಇನ್ನೆಷ್ಟು ದಿನಗಳಲ್ಲಿ ಲಸಿಕೆ ನೀಡಲಾಗುತ್ತದೆ ಎಂಬುದನ್ನು ನಿರ್ದಿಷ್ಟವಾಗಿ ತಿಳಿಸುತ್ತೇವೆʼ ಎಂದು ತಿಳಿಸಿದ್ದಾರೆ.
ಈ ಕುರಿತು ಟ್ವಿಟರಿನಲ್ಲಿಯೂ ಪ್ರತಿಕ್ರಿಯಿಸಿರುವ ಅವರು, ʼಪದವಿ ಕಾಲೇಜುಗಳ ಆರಂಭ ದಿನಾಂಕದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ. ಈ ಬಗ್ಗೆ ಗೊಂದಲ ಬೇಡ. ಎಲ್ಲಾ ಕಾಲೇಜು ವಿದ್ಯಾರ್ಥಿಗಳಿಗೆ ಲಸಿಕೆ ಒದಗಿಸುವುದು ನಮ್ಮ ಪ್ರಥಮ ಆದ್ಯತೆ. ಸರ್ಕಾರಿ, ಅನುದಾನಿತ ಕಾಲೇಜುಗಳಲ್ಲಿ ಈಗಾಗಲೇ 65% ಲಸಿಕಾಕರಣವಾಗಿದೆ. ಖಾಸಗಿ ಕಾಲೇಜುಗಳಲ್ಲೂ ತ್ವರಿತವಾಗಿ ಲಸಿಕಾಕರಣ ನಡೆಸಲು ಸೂಚಿಸಲಾಗಿದೆ. ಎಲ್ಲರ ಸುರಕ್ಷತೆ ಕಾಪಾಡೋಣ.ʼ ಎಂದು ಕರೆ ನೀಡಿದ್ದಾರೆ.