
—–ನಾ ದಿವಾಕರ—-
ಸ್ಥಳಗಳಿಗೆ ಹೊಸ ಹೆಸರಿಸುವ ಪರಂಪರೆಗೆ ಪ್ರಜಾತಂತ್ರದ ಸ್ಪರ್ಶ ಇರಬೇಕು
ಭಾರತದ ರಾಜಕಾರಣದಲ್ಲಿ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಊರುಗಳ, ನಗರಗಳ ಮತ್ತು ರಸ್ತೆ-ವೃತ್ತಗಳ ಹೆಸರುಗಳನ್ನು ಬದಲಾಯಿಸುವ ಒಂದು ಕೆಟ್ಟ ಪರಂಪರೆ ತೀವ್ರತೆ ಪಡೆದುಕೊಂಡಿದೆ. ಇತ್ತೀಚಿನ ದಿನಗಳಲ್ಲಿ, ವಿಶೇಷವಾಗಿ ಬಿಜೆಪಿ ಒಂದು ಪ್ರಧಾನ ರಾಜಕೀಯ ಪಕ್ಷವಾಗಿ, ತನ್ನ ಸೈದ್ಧಾಂತಿಕ ನಿಲುವುಗಳಿಗೆ ಅನುಗುಣವಾಗಿ ಸಾಂಸ್ಕೃತಿಕ ರಾಜಕಾರಣವನ್ನು ಅಧಿಕೃತಗೊಳಿಸಿದ ನಂತರದಲ್ಲಿ ಈ ಪ್ರವೃತ್ತಿಗೆ ಮತ್ತಷ್ಟು ಚಾಲನೆ ದೊರೆತಿದೆ. ಆದರೆ ಇದು ಹೊಸ ಬೆಳವಣಿಗೆಯೇನಲ್ಲ ಅಥವಾ ಬಿಜೆಪಿಗೆ ಸೀಮಿತವಾದ ವಿದ್ಯಮಾನವೂ ಅಲ್ಲ. ಪ್ರಜಾಪ್ರಭುತ್ವ ಸಮಾಜವಾದರೂ, ಅಧಿಕಾರದಲ್ಲಿರುವ ರಾಜಕೀಯ ಪಕ್ಷಗಳು ಜನಾಧಿಕಾರ ಅಥವಾ ಜನಾಭಿಪ್ರಾಯಕ್ಕೆ ಕಿಂಚಿತ್ತೂ ಮನ್ನಣೆ ನೀಡದೆ, ತಮ್ಮ ರಾಜಕೀಯ-ಸೈದ್ಧಾಂತಿಕ ಅನುಕೂಲಕ್ಕೆ ತಕ್ಕಂತೆ ಸ್ಥಳಗಳ, ಸ್ಥಾವರಗಳ ಹೆಸರನ್ನು ಬದಲಿಸುವುದು ಸ್ವತಂತ್ರ ಭಾರತದ ಒಂದು ಲಕ್ಷಣ. ಬಹುಶಃ ಯಾವ ರಾಜಕೀಯ ಪಕ್ಷವೂ ಇದಕ್ಕೆ ಹೊರತಾದುದಲ್ಲ.
ಈ ಪ್ರಕ್ರಿಯೆಯಲ್ಲಿ ಅಧಿಕಾರಾರೂಢ ಪಕ್ಷಗಳ ಸೈದ್ಧಾಂತಿಕ ನೆಲೆ, ತಾತ್ವಿಕ ಭೂಮಿಕೆ ಮತ್ತು ಈ ಪಕ್ಷಗಳು ಆರಾಧಿಸುವ ವ್ಯಕ್ತಿಗಳನ್ನು ಈ ಸ್ಥಾವರಗಳ ಮುಖಾಂತರವೇ ಚರಿತ್ರೆಯಲ್ಲಿ ಶಾಶ್ವತವಾಗಿ ದಾಖಲಿಸುವುದು ಒಂದು ಮಾದರಿಯಾದರೆ, ಮತ್ತೊಂದೆಡೆ ತಮ್ಮ ಸಿದ್ಧಾಂತಗಳಿಗೆ ಸಲ್ಲದ ವ್ಯಕ್ತಿಗಳ ಹೆಸರುಗಳನ್ನು ಅಳಿಸಿಹಾಕುವ ದುಷ್ಟ ಪರಂಪರೆ ಮತ್ತೊಂದು ಮಾದರಿ. ಪ್ರತಿಮಾ ರಾಜಕಾರಣದ ಒಂದು ಛಾಯೆಯ ನಡುವೆಯೇ, ಈ ಮರುನಾಮಕರಣದ ಸಂಸ್ಕೃತಿ ಸಣ್ಣ ಪುಟ್ಟ ಊರುಗಳಿಂದ ಬೃಹತ್ ನಗರದವರೆಗೂ, ಸಣ್ಣ ರಸ್ತೆ-ವೃತ್ತದಿಂದ ಹಿಡಿದು ಹೆದ್ದಾರಿ-ಬೃಹತ್ ಕ್ರೀಡಾಂಗಣದವರೆಗೂ ವಿಸ್ತರಿಸಿರುವುದು, ಚಾರಿತ್ರಿಕ ಮೌಲ್ಯ ಮತ್ತು ಮೂಲ ನೆಲ ಸಾಂಸ್ಕೃತಿಕ ನೈತಿಕ ಆಶಯಗಳ ನೆಲೆಯಲ್ಲಿ ಹಲವು ವೈರುಧ್ಯಗಳನ್ನು, ವಿರೋಧಾಭಾಸಗಳನ್ನು ಸೃಷ್ಟಿಸುತ್ತದೆ . ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಹಲವು ರಾಜ್ಯಗಳಲ್ಲಿ ತನ್ನ ಸೈದ್ಧಾಂತಿಕ ನಾಯಕರ ಹೆಸರುಗಳನ್ನು ಬಳಸಿಕೊಂಡು ಈ ಮರುನಾಮಕರಣ ಪ್ರಕ್ರಿಯೆಗೆ ಮತ್ತಷ್ಟು ತೀವ್ರತೆಯನ್ನು ನೀಡಲಾಗಿದೆ.
ಚರಿತ್ರೆಯ ಕುರುಹಳಾಗಿ ಸ್ಥಾವರಗಳು

ಯಾವುದೇ ಸಿದ್ಧಾಂತವಾದರೂ, ಚಾರಿತ್ರಿಕ ವ್ಯಕ್ತಿಗಳನ್ನು ಸ್ಮರಣಾರ್ಥವಾಗಿಸಲು, ಅಥವಾ ಚರಿತ್ರೆಯಲ್ಲಿ ಅವರ ಹೆಸರನ್ನು ಚಿರಸ್ಥಾಯಿಯಾಗಿ ನೆಲೆಸುವಂತೆ ಮಾಡಲು ಈ ರೀತಿ ಸ್ಮಾರಕ-ಸ್ಥಾವರಗಳನ್ನು ಅವರ ಹೆಸರಿನಿಂದ ಗುರುತಿಸುವುದು ತಪ್ಪೇನಲ್ಲ. ಭವಿಷ್ಯದ ತಲೆಮಾರಿಗೆ ಅದು ಗತ ಚರಿತೆಯನ್ನು ನೆನಪಿಸುವ ಸಂಕೇತಗಳಾಗಿ ಕಾಣುತ್ತವೆ. ಆದರೆ ಇದರ ಹಿಂದಿನ ರಾಜಕೀಯ ಉದ್ದೇಶಗಳು ಈ ಪ್ರವೃತ್ತಿಯ ಔದಾತ್ಯವನ್ನೇ ನಾಶಪಡಿಸುತ್ತವೆ. ಚರಿತ್ರೆಯಲ್ಲಿ ದಾಖಲಾಗಿರುವ, ಆಗಿ ಹೋಗಿರುವ, ದೇಶದ ಸ್ವಾತಂತ್ರ್ಯ ಮತ್ತು ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ಸಲ್ಲಿಸಿರುವ ಮಹನೀಯರನ್ನು ಗುರುತಿಸುವಾಗ, ವರ್ತಮಾನದ ರಾಜಕೀಯ ಭಿನ್ನ ಭೇದಗಳು, ಸೈದ್ಧಾಂತಿಕ ಅಂತರಗಳು ಅಡ್ಡಿ ಬರುವುದು, ಸಂವೇದನಾಶೀಲತೆಯನ್ನು ಭಂಗಗೊಳಿಸುತ್ತದೆ. ಇಲ್ಲಿ ಸೈದ್ಧಾಂತಿಕ ಶ್ರೇಷ್ಠತೆ ಮತ್ತು ಅನ್ಯ ಸಿದ್ಧಾಂತಗಳನ್ನು ಕೀಳರಿಮೆಯಿಂದ ನೋಡುವ ಒಂದು ತಾರತಮ್ಯದ ಮನಸ್ಥಿತಿಯನ್ನು ಗುರುತಿಸಬಹುದು.
ಸಾರ್ವಜನಿಕರು ಉಪಯೋಗಿಸುವ ರಸ್ತೆ, ಹೆದ್ದಾರಿ, ಸೇತುವೆಗಳು, ಊರೊಳಗಿನ ವೃತ್ತ-ಚೌಕಗಳು, ಉದ್ಯಾನಗಳು, ಜನೋಪಯೋಗಿ ಕಟ್ಟಡ-ಸ್ಥಾವರಗಳು, ಕ್ರೀಡಾಂಗಣಗಳು ಮತ್ತು ನಾಗರಿಕರು ಬಳಸುವ ಯಾವುದೇ ಪ್ರದೇಶವನ್ನು ಚಾರಿತ್ರಿಕ ವ್ಯಕ್ತಿಗಳ ಹೆಸರಿನ ಮೂಲಕ ಗುರುತಿಸುವುದು ಸಹಜ ಪ್ರಕ್ರಿಯೆಯಾಗಿಯೇ ಇತಿಹಾಸದಲ್ಲಿ ದಾಖಲಾಗಿದೆ. ಮಧ್ಯಕಾಲೀನ ಯುಗದ ರಾಜಪ್ರಭುತ್ವದಲ್ಲಿ ಈ ಒಂದು ಮಾದರಿಗೆ ಅಧಿಕೃತ ಮೊಹರು ದೊರೆತಿದ್ದನ್ನು ಎಲ್ಲ ದೇಶಗಳಲ್ಲೂ ಗುರುತಿಸಬಹುದು. ತಮ್ಮ ಅಧೀನದಲ್ಲಿರುವ ಸಂಸ್ಥಾನ ಅಥವಾ ರಾಜ್ಯಗಳಿಗೆ ಹಾಗೂ ಈ ವ್ಯಾಪ್ತಿಯಲ್ಲೇ ರಾಜಾಳ್ವಿಕೆಗೆ ಒಳಪಟ್ಟಿರುವ ಊರುಗಳು ಮತ್ತು ಸಾರ್ವಜನಿಕ ಸ್ಥಳಗಳನ್ನು, ತಮ್ಮ ವಂಶವಾಹಿನಿಯ ನೆನಪಿನಲ್ಲಿ ಹಿರಿಯ ವ್ಯಕ್ತಿಗಳ ಹೆಸರಿನಲ್ಲಿ ದಾಖಲಿಸುವ ಒಂದು ಪರಂಪರೆಯನ್ನು ಎಲ್ಲ ರಾಜಪ್ರಭುತ್ವಗಳಲ್ಲೂ ಗುರುತಿಸಬಹುದು. ಮುಘಲ್ ಆಳ್ವಿಕೆಯಲ್ಲಿ ಇದು ವ್ಯಾಪಕವಾಗಿ ಜಾರಿಯಾಗಿದ್ದನ್ನು ದಕ್ಷಿಣ ಭಾರತವನ್ನು ಹೊರತು ಪಡಿಸಿ ದೇಶದುದ್ದಕ್ಕೂ ಕಾಣಬಹುದು.

ಇದೇ ಪರಂಪರೆಯನ್ನು ಎಲ್ಲ ರಾಜಪ್ರಭುತ್ವಗಳೂ ಅನುಸರಿಸಿದಂತೆಯೇ, ಬ್ರಿಟೀಷ್ ವಸಾಹತು ಆಳ್ವಿಕೆಯಲ್ಲೂ ಅನುಸರಿಸಲಾಗಿದ್ದು, ಬ್ರಿಟೀಷರು ಹೆಸರಿಸಿದ ಅನೇಕ ರಸ್ತೆ-ಸ್ಥಾವರ-ಸ್ಮಾರಕಗಳು ಇಂದಿಗೂ ನಮ್ಮ ನಡುವೆ ಉಳಿದುಕೊಂಡಿವೆ. ಚರಿತ್ರೆಯನ್ನು ನೆನಪಿಸುವ ಈ ಹೆಸರುಗಳು ವರ್ತಮಾನದ ಸಾರ್ವಭೌಮತ್ವವನ್ನಾಗಲೀ ಅಥವಾ ಸ್ವಾಯತ್ತತೆಯನ್ನಾಗಲೀ ಯಾವುದೇ ರೀತಿಯಲ್ಲೂ ಅಳಿಸುವುದಿಲ್ಲ , ಬದಲಾಗಿ ನಮ್ಮ ಸಮಾಜ ನಡೆದುಬಂದ ಹಾದಿಯನ್ನು ನೆನಪಿಸುವ ಆಕರಗಳಾಗುತ್ತವೆ. ಈ ಸ್ಥಾವರಗಳನ್ನು ಗಮನಿಸಿಕೊಂಡೇ, ಅವುಗಳನ್ನು ಬಳಸಿಕೊಂಡೇ, ಅವುಗಳ ನಡುವೆಯೇ ಜೀವನ ನಡೆಸುವ ಒಂದು ತಲೆಮಾರಿನ ಜನತೆಗೆ ಇವು ಗುರುತಿನ ಚಿಹ್ನೆಗಳಾಗಿ ಪರಿಣಮಿಸುತ್ತವೆ. ಬೆಂಗಳೂರಿನ ಹಡ್ಸನ್ ಸರ್ಕಲ್, ಕೆಂಪೇಗೌಡ ರಸ್ತೆ ಮುಂತಾದುವನ್ನು ನಿದರ್ಶನವಾಗಿ ನೋಡಬಹುದು. ಇವುಗಳಲ್ಲಿ ಕೆಲವು ಸ್ಥಾವರಗಳನ್ನು ಸ್ವತಂತ್ರ ಭಾರತದಲ್ಲೂ ಸ್ಮಾರಕಗಳಾಗಿ ʼ ಪಾರಂಪರಿಕ ಕಟ್ಟಡ ʼ ಎಂದು ವರ್ಗೀಕರಿಸಿ ಕಾಪಾಡಿಕೊಂಡು ಬರಲಾಗಿದೆ.
ಚರಿತ್ರೆಯಿಂದ ವರ್ತಮಾನಕ್ಕೆ
ಈ ಚಾರಿತ್ರಿಕ ಹಿನ್ನೋಟವನ್ನು ಬದಿಗಿಟ್ಟು ನೋಡಿದಾಗ, ಸರ್ಕಾರಗಳು ಅಧಿಕಾರಕ್ಕೆ ಬಂದ ಕೂಡಲೇ ನೂರಾರು ವರ್ಷಗಳಿಂದ ಒಂದೇ ಹೆಸರಿನಡಿ ಗುರುತಿಸಲ್ಪಟ್ಟ ಊರುಗಳ/ರಸ್ತೆಗಳ, ಇತರ ಸ್ಥಳಗಳ ಹೆಸರುಗಳನ್ನು ಬದಲಿಸುವ ಒಂದು ಗೀಳಿಗೆ ಅಂಟಿಕೊಂಡಿರುವುದು ದುರದೃಷ್ಟಕರ. ವಿಶೇಷವಾಗಿ ಭಾರತೀಯ ಸಂಸ್ಕೃತಿಯಲ್ಲಿ ಸಣ್ಣ ಪುಟ್ಟ ಊರುಗಳನ್ನು ಗುರುತಿಸಲಾಗುವ ಪಾರಂಪರಿಕ ಹೆಸರುಗಳಿಗೆ ಜನಪದೀಯ ಸಂಸ್ಕೃತಿಯ, ಸ್ಥಳೀಯ ಐತಿಹ್ಯದ ಮಹತ್ವ ಇರುತ್ತದೆ. ಕೆಲವೊಮ್ಮೆ ಸ್ಥಳೀಯ ಜನಸಮುದಾಯಗಳು ಅನುಸರಿಸಿಕೊಂಡು ಬಂದಿರುವ ಸಾಂಸ್ಕೃತಿಕ ಪರಂಪರೆಯನ್ನು ಸೂಚಿಸುವಂತೆಯೂ ಇರುತ್ತದೆ. ಈ ಹೆಸರುಗಳನ್ನು ಸರ್ಕಾರದ ಮರ್ಜಿಯಂತೆ ಬದಲಿಸಿಬಿಟ್ಟರೆ, ಮುಂದಿನ ತಲೆಮಾರಿಗೆ, ಹಿರಿಯರು ಉಳಿಸಿಕೊಂಡು ಬಂದ ಆ ಪರಂಪರೆಯನ್ನೇ ಗುರುತಿಸಲಾಗುವುದಿಲ್ಲ. ನಗರೀಕಣ ಪ್ರಕ್ರಿಯೆಯಲ್ಲಿ ಸುತ್ತಲಿನ ಸಣ್ಣ ಪುಟ್ಟ ಗ್ರಾಮಗಳನ್ನು ನುಂಗಿಹಾಕಿ ಆಧುನಿಕ ಬಡಾವಣೆಗಳನ್ನಾಗಿ ಪರಿವರ್ತಿಸುವ ಆಧುನಿಕ ಪ್ರವೃತ್ತಿಯಿಂದಲೂ ಇದೇ ಅಪಾಯ ಸಂಭವಿಸುವುದನ್ನು ಎಲ್ಲ ನಗರಗಳಲ್ಲೂ ಗುರುತಿಸಬಹುದು.

ಈ ಬಡಾವಣೆ, ನಗರ ಅಥವಾ ಉಪನಗರದ ಹೆಸರುಗಳನ್ನು ಆಯ್ಕೆ ಮಾಡುವುದು ಯಾರು ? ಸಾಮಾನ್ಯವಾಗಿ ಅಭಿವೃದ್ಧಿಯ ಭಾಗಿದಾರರೋ, ಪಾಲುದಾರರೋ ಅಥವಾ ಬಂಡವಾಳ ಹೂಡಿಕೆದಾರರೋ ಆಗಿರುತ್ತಾರೆ. ಭಾರತದ ಜಾತಿ ವ್ಯವಸ್ಥೆಯ ಪರಿಣಾಮವಾಗಿ ಈ ವ್ಯಕ್ತಿ ಅಥವಾ ಸಂಸ್ಥೆಗಳು ಪ್ರತಿನಿಧಿಸುವ ಜಾತಿ, ಉಪಜಾತಿ ಅಥವಾ ಅವರ ನಂಬುಗೆಯ ದೇವರ ಹೆಸರುಗಳನ್ನು ನಾಮಕರಣ ಮಾಡಲಾಗುತ್ತದೆ. ಇಲ್ಲಿ ಗಮನಿಸಬೇಕಾಗಿರುವುದು, ಹಲವು ದಶಕಗಳಿಂದ ಒಂದು ಜನಸ್ತೋಮ ಬಾಳಿ ಬದುಕಿದ ಪ್ರದೇಶದ ಹೆಸರನ್ನು ಬದಲಿಸುವ ಮುನ್ನ, ಆ ಸ್ಥಳೀಯರ ಅಭಿಪ್ರಾಯವನ್ನು ಸಂಗ್ರಹಿಸುವ ಯಾವುದೇ ಪ್ರಯತ್ನಗಳು ನಡೆಯುವುದಿಲ್ಲ. ಜಾತಿ-ಅಧಿಕಾರ ಪ್ರಾಬಲ್ಯ, ಸಾಮಾಜಿಕ ಪಾರಮ್ಯ ಅಥವಾ ಈ ಬಲಾಢ್ಯರ ಸಾಂಸ್ಕೃತಿಕ-ಧಾರ್ಮಿಕ ನಂಬಿಕೆಗಳು ಇಲ್ಲಿ ಪ್ರಧಾನವಾಗಿಬಿಡುತ್ತದೆ. ʼ ಜನಾಭಿಪ್ರಾಯ ಸಂಗ್ರಹ ʼ ಎಂಬ ಉದಾತ್ತ ಪ್ರಜಾಸತ್ತಾತ್ಮಕ ಆಲೋಚನೆ ಭಾರತದ ಪ್ರಜಾಪ್ರಭುತ್ವದಲ್ಲಿ ಸ್ಥಾನ ಪಡೆಯದೆ ಇರುವುದರಿಂದ, ಉನ್ನತ ಅಧಿಕಾರ ಕೇಂದ್ರಗಳಿಂದ, ತಳಸ್ತರದ ಔದ್ಯಮಿಕ ಜಗತ್ತಿನವರೆಗೂ ಇದೇ ಧೋರಣೆ ಕಂಡುಬರುತ್ತದೆ.
ಬಿಜೆಪಿ ರಾಜಕೀಯವಾಗಿ ಪ್ರಾಬಲ್ಯ ಗಳಿಸಿ, ಹಲವು ರಾಜ್ಯಗಳಲ್ಲಿ ಅಧಿಕಾರಕ್ಕೆ ಬಂದ ನಂತರದಲ್ಲಿ ಎಲ್ಲ ರಾಜ್ಯಗಳಲ್ಲೂ ಈ ರೀತಿಯ ಮರುನಾಮಕರಣ ಒಂದು ಗೀಳಿನಂತೆ ಆವರಿಸಿದೆ. ಬಿಜೆಪಿ ಭಾರತದ ಇತಿಹಾಸದಲ್ಲಿ ಮುಸ್ಲಿಂ ದೊರೆಗಳ ಆಳ್ವಿಕೆಯ ಕುರುಹಗಳನ್ನು ಅಳಿಸಿಹಾಕುವ ಕಾರ್ಯಸೂಚಿಯೊಂದಿಗೆ ಈ ಮಾದರಿಯನ್ನು ಅನುಸಿರಿಸುವುದಾದರೂ, ಈ ಧೋರಣೆ ಬಿಜೆಪಿಗೆ ಮಾತ್ರ ಸೀಮಿತವಲ್ಲ. ಆದರೆ ಬಿಜೆಪಿ ನಾಯಕರೇ ಆರಾಧಿಸುವ ಸ್ವಾತಂತ್ರ್ಯ ಹೋರಾಟಗಾರ ಸರ್ದಾರ್ ವಲ್ಲಭಾಯಿ ಪಟೇಲ್ ಅವರ ಹೆಸರಿನಲ್ಲಿದ್ದ ಕ್ರೀಡಾಂಗಣವನ್ನೂ ಈಗ ನರೇಂದ್ರಮೋದಿ ಕ್ರೀಡಾಂಗಣ ಎಂದು ಬದಲಿಸಲಾಗಿದೆ. ಭಾರತದ ಗಣತಂತ್ರದಲ್ಲಿ ಯಾವ ಸರ್ಕಾರವೇ ಅಧಿಕಾರಕ್ಕೆ ಬಂದರೂ, ಆಯಾ ಪಕ್ಷಗಳ ಸೈದ್ಧಾಂತಿಕ-ತಾತ್ವಿಕ ಅಥವಾ ರಾಜಕೀಯ ನಿಲುವುಗಳಿಗನುಸಾರವಾಗಿ ಈ ಮರುನಾಮಕರಣಕ್ಕೆ ಚಾಲನೆ ನೀಡುತ್ತವೆ. ಎಲ್ಲಿಯೂ ಸಹ ʼ ಸ್ಥಳೀಯ ಜನಾಭಿಪ್ರಾಯ ʼ ಸಂಗ್ರಹಿಸುವ ಕ್ರಿಯೆ ಕಾಣಲಾಗುವುದಿಲ್ಲ. ಅಂದರೆ ಚುನಾಯಿತ ಸರ್ಕಾರಗಳು, ಸಾಮಾನ್ಯ ಜನರ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಊರಿನ-ರಸ್ತೆಯ ಹೆಸರುಗಳನ್ನು ಬದಲಿಸಲು, ಜನರ ಅಭಿಪ್ರಾಯವನ್ನೂ ಪಡೆಯಬೇಕು ಎಂಬ ವಿವೇಕವನ್ನೇ ಕಳೆದುಕೊಳ್ಳುತ್ತವೆ.

ಕಾಂಗ್ರೆಸ್ ಸರ್ಕಾರದ ಉಪಕ್ರಮಗಳ ಔಚಿತ್ಯ
ಈಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರವೂ ಇದೇ ಜಾಡನ್ನು ಅನುಸರಿಸಲು ಸಜ್ಜಾಗುತ್ತಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಎಂದು ಈಗಾಗಲೇ ಬದಲಿಸಲಾಗಿದೆ. ರಾಮನಗರ ಭಾರತದ ರೇಷ್ಮೆ ಕೃಷಿ ಮತ್ತು ಉತ್ಪಾದನಾ ಕ್ಷೇತ್ರಗಳಲ್ಲಿ ಒಂದು. ಇಲ್ಲಿ ಹಿಪ್ಪು ನೇರಳೆ ಬೆಳೆಯುವ, ರೇಷ್ಮೆ ಗೂಡು ಸಾಕಾಣಿಕೆ ಮಾಡುವ ಜನಸಮೂಹಗಳು ಬಹುತೇಕವಾಗಿ ಹಿಂದೂಗಳಾಗಿದ್ದರೆ, ರೇಷ್ಮೆ ನೂಲು ತಯಾರಿಸಿ, ಮಾರುಕಟ್ಟೆಗೆ ಸರಬರಾಜು ಮಾಡುವುದು ಮುಸ್ಲಿಂ ಸಮುದಾಯ. ಮುಸ್ಲಿಂ ಸಮುದಾಯದ ಸಂಖ್ಯೆ ಹೆಚ್ಚಾಗಿಯೇ ಇದೆ ಎನ್ನಬಹುದು. ಆದರೂ ಈ ಊರಿನ ಹೆಸರಿನಲ್ಲಿರುವ ʼ ರಾಮ ʼ ಅವರಿಗೆ ಸ್ವೀಕೃತವಾಗಿ ಅದನ್ನೇ ಉಸಿರಾಡುತ್ತಾ ಹಲವು ಪೀಳಿಗೆಗಳನ್ನು ಪ್ರತಿನಿಧಿಸಿರುತ್ತಾರೆ. ಇಲ್ಲಿ ರಾಮ ಪೌರಾಣಿಕ ಅಥವಾ ಇಂದಿನ ಅರ್ಥದಲ್ಲಿ ಧಾರ್ಮಿಕ ನಾಮಸೂಚಕವಾಗುವುದಕ್ಕಿಂತಲೂ, ಒಂದು ಭಾವನಾತ್ಮಕ ನಂಟನ್ನು ಜನಸಾಮಾನ್ಯರ ನಡುವೆ ಸೃಷ್ಟಿಸಿರುತ್ತದೆ. ಇದನ್ನು ಬೆಂಗಳೂರುದಕ್ಷಿಣ ಎಂಬ ಹೊಸ ಹೆಸರಿನಿಂದ ಕರೆಯುವ ಅವಶ್ಯಕತೆಯೇನಿದೆ ?
ಕ್ಷಿಪ್ರಗತಿಯ ನಗರಾಭಿವೃದ್ಧಿಯ ಪರಿಣಾಮವಾಗಿ, ಸ್ಥಾಪಿತ ನಗರಗಳ ಭೂ ವ್ಯಾಪ್ತಿ ವಿಸ್ತರಿಸುತ್ತಾ, ಸುತ್ತಲಿನ ಎಲ್ಲ ತಾಲ್ಲೂಕು, ಹೋಬಳಿಗಳನ್ನೂ ತಲುಪುವುದು ಸಹಜ. ಹಾಗೆಂದ ಮಾತ್ರಕ್ಕೆ ಎಲ್ಲ ನೆರೆ ಊರುಗಳನ್ನೂ ಬೆಂಗಳೂರಿನೊಡನೆ ಅಷ್ಟದಿಕ್ಕುಗಳನ್ನು ಜೋಡಿಸಿ, ಅಧಿಕೃತವಾಗಿ ಹೊಸ ಹೆಸರಿನಿಂದ ಗುರುತಿಸುವುದು ಊಳಿಗಮಾನ್ಯ ರಾಜಪ್ರಭುತ್ವದ ಲಕ್ಷಣವಾಗಿ ಕಾಣುವುದಿಲ್ಲವೇ ? ಇಲ್ಲಿ ರಾಮನಗರ ಎಂಬ ಹೆಸರಿನೊಡನೆ ಗುರುತಿಸಿಕೊಂಡಿರುವ ಲಕ್ಷಾಂತರ ಜನರ ಅಭಿಪ್ರಾಯಕ್ಕೆ ಮನ್ನಣೆಯೇ ಇಲ್ಲವೇ ? ಅಲ್ಲಿನ ಸಾಂಸ್ಕೃತಿಕ ಹೆಸರಿಗೆ ಬೆಲೆಯೇ ಇಲ್ಲವೇ ? ಈಗ ಸರ್ಕಾರದ ವಕ್ರದೃಷ್ಟಿ ತುಮಕೂರಿನ ಮೇಲೂ ಬಿದ್ದಿದೆ ಎನಿಸುತ್ತದೆ. ಈ ಮರುನಾಮಕರಣದ ವ್ಯಾಪ್ತಿ ಹೀಗೆಯೇ ವಿಸ್ತರಿಸುತ್ತಾ ಹೋದರೆ, 22ನೆ ಶತಮಾನದ ವೇಳೆಗೆ ದಕ್ಷಿಣ ಕರ್ನಾಟಕದ ಅರ್ಧಭಾಗ ʼ ಬೆಂಗಳೂರು ʼ ಆಗಿಬಿಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗುವುದಿಲ್ಲ.

ಸರ್ಕಾರದ ಮರುನಾಮಕರಣ ಸಿದ್ದಮಾದರಿಗೆ ಬಲಿಯಾಗಿರುವ ಮತ್ತೊಂದು ತಾಲ್ಲೂಕು ಆಂಧ್ರಪ್ರದೇಶಕ್ಕೆ ಹೊಂದಿಕೊಂಡಿರುವ ಗಡಿ ಊರು ಬಾಗೇಪಲ್ಲಿ. ಬಾಗೇಪಲ್ಲಿ, ಒಂದು ಬಹುಭಾಷಿಕ-ಬಹುಸಾಂಸ್ಕೃತಿಕ ಸ್ಥಳ (ನನ್ನ ತಾಯಿಯ ಸ್ವಂತ ಊರು ಸಹ). ಇಲ್ಲಿನ ಜನತೆಗೆ ಕನ್ನಡ, ತೆಲುಗು, ತಮಿಳು, ಧಕ್ಕನಿ ಉರ್ದು, ಮತ್ತು ಸ್ಥಳೀಯ ಭಾಷೆಗಳು ಸಂವಹನ ಮಾಧ್ಯಮವಾಗಿ ಶತಮಾನಗಳಿಂದ ಚಾಲ್ತಿಯಲ್ಲಿದೆ. ಇಲ್ಲಿನ ಕನ್ನಡಿಗರೂ ಸಹ ಸಾರ್ವಜನಿಕವಾಗಿ ಮಾತನಾಡುವಾಗ ತೆಲುಗಿನಲ್ಲೇ ಮಾತನಾಡುವುದು ಒಂದು ವೈಶಿಷ್ಟ್ಯ. ಹಾಗಾಗಿಯೇ ಮೂಲತಃ ಬಾಗೇನಹಳ್ಳಿ ಮತ್ತಿತರ ಹೆಸರುಗಳನ್ನು ಹೊಂದ್ದಿದ ಊರು ಬಾಗೇಪಲ್ಲಿ ಆಗಿದೆ. ಪಲ್ಲಿ ಎಂಬ ಪದದ ಮೂಲ ವ್ಯುತ್ಪತ್ತಿ ಕನ್ನಡವೋ ತೆಲುಗೋ ಎನ್ನುವುದು ಭಾಷಾ ವಿದ್ವಾಂಸರಿಗೆ ಬಿಟ್ಟ ವಿಚಾರ. ಆದರೆ ಈ ʼ ಪಲ್ಲಿ ʼ ಎಂಬ ಪದ ತೆಲುಗಿನಲ್ಲಿ ಹಳ್ಳಿಗಳ ಹೆಸರಿನೊಂದಿಗ ತಳುಕು ಹಾಕಿಕೊಳ್ಳುತ್ತದೆ. ಹಾಗಾಗಿ ಈ ಹೆಸರಿನ ಹಿಂದೆ ಭಾಷಾ ವೈವಿಧ್ಯತೆ ಮತ್ತು ಬಹುಸಾಂಸ್ಕೃತಿಕ ಆಯಾಮಗಳಿದ್ದು, ಇಲ್ಲಿನ ಜನತೆಗೆ ಅದು ಮುಖ್ಯ ಎನಿಸುವುದೇ ಇಲ್ಲ.
ಈಗ ಇದನ್ನು ʼಭಾಗ್ಯ ನಗರ ʼ ಎಂದು ಹೆಸರಿಸಲಾಗಿದೆ. ಒಂದು ದಶಕದ ಹಿಂದೆಯೂ ಸಹ ಈ ಊರಿನ ಜನತೆಗೆ ಕುಡಿಯುವ ನೀರಿನ ಭಾಗ್ಯವೂ ಇರಲಿಲ್ಲ ಎನ್ನುವುದನ್ನು ಸ್ಮರಿಸಬೇಕು. ಊರು ಬೆಳೆದಂತೆಲ್ಲಾ ಬಡಾವಣೆಗಳು ಹೆಚ್ಚಾಗಿ, ಜನಸಂದಣಿ ಹೆಚ್ಚಾದ ಕಾರಣ ನೀರು ಎನ್ನುವುದು ಇಲ್ಲಿನ ಜನತೆಗೆ ಅತ್ಯಂತ ಅಮೂಲ್ಯ ವಸ್ತುವಾಗಿತ್ತು. ಕಿಲೋಮೀಟರ್‌ಗಟ್ಟಲೆ ದೂರ ಸೈಕಲ್‌ಗಳಲ್ಲಿ ಹೋಗಿ ನೀರು ತಂದು ಬಳಸುತ್ತಿದ್ದ ದಿನಗಳನ್ನೂ ಹಾದು ಇದೀಗ ಈ ಊರಿನ ಜನತೆ ನೆಮ್ಮದಿಯ ಉಸಿರಾಡುತ್ತಿದ್ದಾರೆ. ಈಗಲೂ ಸಹ ಇಲ್ಲಿ ಸಕಲ ಮೂಲ ಸೌಕರ್ಯಗಳೂ ಇಲ್ಲ ಎನ್ನುವುದು ವಾಸ್ತವ. ಅದೇನೇ ಇರಲಿ, ಬಾಗೇಪಲ್ಲಿಯನ್ನು ಭಾಗ್ಯನಗರ ಎಂದು ಬದಲಿಸುವಾಗ, ಇಲ್ಲಿನ ಐತಿಹ್ಯ ಮತ್ತು ಸಂಸ್ಕೃತಿಗಳನ್ನು ಪ್ರತಿನಿಧಿಸುವ ಸ್ಥಳೀಯ ಜನರ ಅಭಿಪ್ರಾಯವನ್ನು ಒಮ್ಮೆಯಾದರೂ ಕೇಳಲಾಗಿದೆಯೇ ? ಅಧಿಕಾರಸ್ತರು ಅಥವಾ ಸಾಮಾಜಿಕ-ಆರ್ಥಿಕ ಪ್ರಾಬಲ್ಯ ಹೊಂದಿರುವ ವರ್ಗಗಳು ಇಡುವ ಹೊಸ ಹೆಸರನ್ನು ಈ ಜನರು ಪ್ರಶ್ನಿಸದೆ ಒಪ್ಪಿಕೊಳ್ಳಬೇಕೇ ? ಇಂತಹ ಉದಾಹರಣೆಗಳು ಹೇರಳವಾಗಿ ನಮ್ಮ ನಡುವೆ ನಿಂತಿವೆ.
ಸರ್ಕಾರದ ಗಮನ ಈ ಬಯಲುಸೀಮೆಯಿಂದ ಕರಾವಳಿಯವರೆಗೂ ವಿಸ್ತರಿಸಿ ʼ ದಕ್ಷಿಣ ಕನ್ನಡ ʼ ಜಿಲ್ಲೆಯನ್ನೂ ಬದಲಿಸಿ, ಮಂಗಳೂರು ಎಂಬ ಹೆಸರಿನಿಂದ ಕರೆಯುವ ಪ್ರಯತ್ನದಲ್ಲಿ ಸರ್ಕಾರ ಇದೆ. ದಕ್ಷಿಣ ಕನ್ನಡ ಜಿಲ್ಲೆಯೂ ಸಹ ಬಹುಭಾಷಿಕ-ಬಹುಧಾರ್ಮಿಕ-ಬಹುಸಾಂಸ್ಕೃತಿಕ ಪ್ರದೇಶವಾಗಿದ್ದು, ಇದು ಕರ್ನಾಟಕದ ಸಮನ್ವಯ ಪರಂಪರೆಗೆ ಸಾಕ್ಷೀಭೂತವಾಗಿ ಇಂದಿಗೂ ನಿಂತಿದೆ. ಇಲ್ಲಿನ ಸ್ಥಳೀಯ ಭಾಷೆಗಳಿಗೆ ಸರ್ಕಾರದ ಅಧಿಕೃತ ಮಾನ್ಯತೆ ಅಥವಾ ಅಸ್ಮಿತೆ ಇಲ್ಲದೆ ಹೋದರೂ, ಎಲ್ಲ ಜಾತಿ ಮತಗಳ ಜನರು ತಮ್ಮ ಅಸ್ಮಿತೆಯ ಗಡಿಗಳನ್ನು ದಾಟಿ ಈ ಪ್ರದೇಶವನ್ನು ʼ ದಕ್ಷಿಣ ಕನ್ನಡ ʼ ಎಂದೇ ಗುರುತಿಸುತ್ತಾರೆ. ಈಗ ಇದು ಮಂಗಳೂರು ಎಂದಾಗುವುದು, ಮತ್ತೊಮ್ಮೆ ʼಆವರಿಸಿಕೊಂಡು ನುಂಗಿಹಾಕುವʼ ( Engulf and Devour) ತತ್ವವನ್ನೇ ದೃಢೀಕರಿಸುತ್ತದೆ. ಔದ್ಯಮಿಕ ಜಗತ್ತಿನೊಂದಿಗೆ ಪ್ರಧಾನವಾಗಿ ಗುರುತಿಸಿಕೊಳ್ಳುವ ಮಂಗಳೂರು, ರಾಜಧಾನಿ ಬೆಂಗಳೂರಿನಂತೆಯೇ ಸರ್ವವ್ಯಾಪಿಯಾಗಿ ಹರಡುವ ದಿನಗಳು ದೂರವೇನಿಲ್ಲ ಎನಿಸುತ್ತದೆ.
ಪ್ರಜಾಪ್ರಭುತ್ವ ಮೌಲ್ಯಗಳ ದೃಷ್ಟಿಯಲ್ಲಿ
ಇಂತಹ ಹಲವು ನಿದರ್ಶನಗಳನ್ನು ದೇಶದುದ್ದಕ್ಕೂ ಕಾಣಬಹುದು. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಭೂ ಪ್ರದೇಶದ ಒಡೆಯರು, ರಾಜಪ್ರಭುತ್ವದಲ್ಲಿ ರಾಜಮಹಾರಾಜರು ಹೀಗೆ ತಮ್ಮ ಇಚ್ಛಾನುಸಾರ ಸ್ಥಳಗಳನ್ನು ನಿರ್ದಿಷ್ಟ ಹೆಸರುಗಳ ಮೂಲಕ ಗುರುತಿಸಿದ್ದರೂ, ಚರಿತ್ರೆಯ ಎಲ್ಲಾ ಕಾಲಘಟ್ಟದಲ್ಲೂ ಗುರುತಿಸಬಹುದಾದ ಒಂದು ಅಂಶ ಎಂದರೆ, ಸ್ಥಳೀಯ ಜನಸಮೂಹಗಳ, ತಳಸಮಾಜದ ನಂಬಿಕೆಗಳನ್ನು ಬಿಂಬಿಸುವ ಕೆಲವು ಹೆಸರುಗಳನ್ನಾದರೂ ಹಾಗೆಯೇ ಮುಂದುವರೆಸಿರುವುದನ್ನೂ ಗುರುತಿಸಬಹುದು. ಆದರೂ ಈ ಸ್ಥಳನಾಮಕರಣ ಎನ್ನುವುದೇ ಒಂದು ಯಜಮಾನಿಕೆ ಸಂಸ್ಕೃತಿಯ ಪಳೆಯುಳಿಕೆಯಾಗಿರುವುದು ಸತ್ಯ. ಹೊಸದಾಗಿ ನಿರ್ಮಾಣವಾಗುವ ನಗರಗಳ ಬಡಾವಣೆಗಳ ಹೆಸರುಗಳಲ್ಲೂ, ಅಲ್ಲಿ ಆರಂಭದಲ್ಲಿ ನೆಲೆಸುವ ಅಥವಾ ಬಡಾವಣೆಯನ್ನು ನಿರ್ಮಿಸುವ ಪ್ರಬಲ ಜಾತಿಗಳು ತಮ್ಮ ಇಚ್ಛಾನುಸಾರ ನಾಮಕರಣ ಮಾಡುವುದನ್ನು ಈಗಲೂ ಗಮನಿಸಬಹುದು.

ಆದರೆ ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಒಂದು ಸರ್ಕಾರಕ್ಕೆ ಈ ರೀತಿ ಏಕಾಏಕಿ ಮರುನಾಮಕರಣ ಮಾಡುವ ಮುನ್ನ ಅಲ್ಲಿನ ಜನಾಭಿಪ್ರಾಯಕ್ಕೆ ಮನ್ನಣೆ ನೀಡಬೇಕು ಎಂಬ ವಿವೇಕ- ವಿವೇಚನೆಯೂ ಇರಬೇಕಲ್ಲವೇ ? ಇದು ಔದಾರ್ಯದ ಪ್ರಶ್ನೆಯಲ್ಲ, ಬದಲಾಗಿ ಉದಾತ್ತತೆಯ ಪ್ರಶ್ನೆ. ತಳಸ್ತರದ ಸಮಾಜವನ್ನು, ಅಂದರೆ ಹೆಚ್ಚಿನ ಸಂಖ್ಯೆಯಲ್ಲಿ ರೈತಾಪಿ, ಸಣ್ಣ ಉದ್ದಿಮೆದಾರರು, ಶ್ರಮಿಕ ವರ್ಗಗಳು, ತಮ್ಮ ಊರಿನ ಗಡಿಯಿಂದಾಚೆಗೆ ಏನನ್ನೂ ಕಂಡಿರದ ಗ್ರಾಮೀಣ ಜನತೆ ಮತ್ತು ಈ ಜನಸಮೂಹಗಳು ಪ್ರತಿನಿಧಿಸುವ ಒಂದು ಸಾಂಸ್ಕೃತಿಕ ಚರಿತ್ರೆ-ಪಾರಂಪರಿಕ ಜೀವನ ವಿಧಾನಗಳನ್ನು ಪ್ರತಿನಿಧಿಸುವ, ಸಾರ್ವಜನಿಕ ಧ್ವನಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾನ್ಯತೆಯೇ ಇಲ್ಲವೇ ? ಎಲ್ಲ ರಾಜಕೀಯ ಪಕ್ಷಗಳೂ ಸಹ, ಒಂದು ರಸ್ತೆ ಅಥವಾ ವೃತ್ತದ ಹೆಸರನ್ನು ಬದಲಿಸುವ ಮುನ್ನವೂ, ಯೋಚಿಸಬೇಕಾದ ವಿಚಾರ ಇದು. ʼ ಹೆಸರಿನಲ್ಲೇನಿದೆ ʼ ಎಂಬ ಪದವನ್ನು ಇಲ್ಲಿ ಬಳಸಲಾಗುವುದಿಲ್ಲ. ಏಕೆಂದರೆ ಒಂದು ಪ್ರದೇಶದ ಹೆಸರಿನಲ್ಲಿ ಇತಿಹಾಸ, ಪುರಾಣ, ಭಾಷೆ, ಸಂಸ್ಕೃತಿ, ಜೀವನಶೈಲಿ, ದುಡಿಮೆಯ ಬೆವರು ಮತ್ತು ಜನಸಮುದಾಯಗಳ ಅಸ್ಮಿತೆಗಳು ಅಡಗಿರುತ್ತವೆ.

ಇದನ್ನು ಏಕಾಏಕಿ ಬದಲಿಸುವುದು ಪ್ರಜಾಪ್ರಭುತ್ವ ಮೌಲ್ಯಗಳನ್ನು ಶಿಥಿಲಗೊಳಿಸುತ್ತದೆ. ಜನರಿಂದಲೇ ಆಯ್ಕೆಯಾಗುವ ಸರ್ಕಾರಗಳು ಜನರ ಅಂತರ್ ಧ್ವನಿಯನ್ನೇ ಗುರುತಿಸದೆ, ತಮ್ಮಮ ಇಚ್ಛಾನುಸಾರ ಮರುನಾಮಕರಣಕ್ಕೆ ಮುಂದಾಗುವುದು, ಊಳಿಗಮಾನ್ಯ-ಯಜಮಾನಿಕೆಯ ಸಂಸ್ಕೃತಿಯನ್ನು ಪುನಃ ಸ್ಥಾಪಿಸಿದಂತೆಯೇ ಆಗುತ್ತದೆ. ಭಾರತದ ರಾಜಕಾರಣದಲ್ಲಿ ಪ್ರಜಾಪ್ರಭುತ್ವದ ಮೂಲ ತಾತ್ವಿಕ ಮೌಲ್ಯಗಳು ಶಿಥಿಲವಾಗುತ್ತಿರುವುದರಿಂದಲೇ ಈ ಮರುನಾಮಕರಣದ ಊಳಿಗಮಾನ್ಯ ಗೀಳು ವ್ಯಾಪಕವಾಗುತ್ತಿದೆ. ರಾಜಕೀಯ ಪಕ್ಷಗಳನ್ನು ಇದು ಬಾಧಿಸದೆ ಇರಬಹುದು, ಆದರೆ ಆ ಹೆಸರುಗಳೊಡನೆ ಗುರುತಿಸಿಕೊಂಡ ಸಾಮಾನ್ಯ ಜನತೆಯ ಪ್ರಜ್ಞೆಯನ್ನು ಖಂಡಿತವಾಗಿಯೂ ಕಾಡುತ್ತದೆ. ಜನಾಧಿಕಾರ ಮತ್ತು ಜನಾಭಿಪ್ರಾಯ ಎಂಬ ಉದಾತ್ತ ಚಿಂತನೆಗಳನ್ನು ಕಡೆಗಣಿಸುವುದು ಎಷ್ಟು ಸರಿ ? ಈ ಪ್ರಶ್ನೆಗೆ ಪ್ರಜ್ಞಾವಂತ ನಾಗರಿಕರೂ ಉತ್ತರ ಶೋಧಿಸಬೇಕಿದೆ.
-೦-೦-೦-೦-