
ಧರ್ಮ ಕಣ ಮದ್ದೂರಿನಲ್ಲಿ ಬಲಿಪಶುವಾದ
ಬಡವರ ಮಕ್ಕಳ ಸಂಖ್ಯೆ ಎಷ್ಟೋ..
ತಿಳಿದು ಕೊಳ್ಳುವ ಹಂಬಲ ಹೆಚ್ಚಾಗಿದೆ…
ಭಯಗೊಂಡ ಅಮಾಯಕರ ಮನಸ್ಸು ಎಷ್ಟೋ..
ತಿಳಿದು ಕೊಳ್ಳುವ ಕುತೂಹಲ ಜಾಸ್ತಿಯಾಗಿದೆ..
ವ್ಯಾಪಾರವಿಲ್ಲದೆ ಮನೆಗೆ ಹೋದ ಬೀದಿ ಬದಿ ವ್ಯಾಪಾರಿಗಳೆಷ್ಟೋ…
ತಿಳಿದು ಕೊಳ್ಳುವ ಕನಿಕರ ಹೆಚ್ಚಾಗಿದೆ..
ಮೊದಲೇ ಮಂಡ್ಯ ಹೋರಾಟದ ತವರೂರು
ನಮ್ಮವರು, ನಮ್ಮವರು ಎನ್ನುವ ಅದಮ್ಯ ಪ್ರೀತಿ..
ಅಭಿಮಾನವ ಎದೆಯಲ್ಲಿರಿಸಿ, ಸ್ವಾಭಿಮಾನವ ತಲೆಮೇಲೆ ಕೂರಿಸಿ ಛಲದಿಂದ ಮೆರೆಯು ಜನ ; ನಮ್ಮ ಮಂಡ್ಯ ಜನ…
ನೇಗಿಲ ಮೇಲೆಯೇ ಧರ್ಮ ಎನ್ನುವ ತತ್ವ ಈ ನೆಲದ್ದು
ಅದೇಗೋ ಈಗ ಕೆಲವರ ಮೇಲೆಯೇ ನಿಂತಿದ್ದು..!

ದುಡಿಮೆಯೇ ದೇವರು, ಭೂ ತಾಯಿಯೇ ಆಲಯ
ಎಂಬ ಮಂತ್ರ ಎಲ್ಲಿ ಹೋಯಿತೋ..
ಕಾವೇರಿ ಹರಿವಳೋ ನಮ್ಮ ಮನೆಯ ಅಂಗಳದಲ್ಲಿ ಎನ್ನುವ ಪದ ಮರೆತು ರಕ್ತ ಹರಿಯಿತೋ..
ಕಬ್ಬು, ಭತ್ತ ಬೆಳಗಳು ಬೆಳೆಯದೆ ದ್ವೇಷ, ಅಧರ್ಮ ಬೆಳೆಯಿತೋ..!
ಇಲ್ಲ ಸಮಾಜ ಘಾತುಕರು ಬೆಳೆಸಿದರೋ..!

ಬನ್ನಿ ಮಣ್ಣಿನ ಮಕ್ಕಳೇ,, ನಮ್ಮ ಕಾಯಕ ಬೆಳೆಯ ಬೀಜ ಬಿತ್ತುವುದು… ಸಮಾಜ ಒಡೆಯುವ ವಿಷದ ಬೀಜವಲ್ಲ…
ಧರ್ಮದ ಉಳಿವಿಗಾಗಿ ಏನಾದರು ಒಳಿತು ಮಾಡೋಣ
ಆದರೇ, ಪಕ್ಷಕ್ಕಾಗಿ ಬೇಡ..ಘೋಷಿತ ನಾಯಕನಿಗಾಗಿ ಬೇಡ…

ನಿಮಗೆ ನೆನಪಿರಲಿ ಧರ್ಮವು ನನ್ನನು ಉಳಿಸಿ ಎಂದೂ… ಯಾರನ್ನೂ…ಬೇಡುವುದಿಲ್ಲ..
ಬೇಡುವ ಸಂಸ್ಕೃತಿ ಈ ನರನಿಗಷ್ಟೇ ಮೀಸಲು..
ಅದಕ್ಕೆ ಸಾಲು..ಸಾಲು ಘರ್ಷಣೆಗಳ ಮುಗಿಲು..
ಬನ್ನಿ ಎಲ್ಲರೂ ಶಾಂತಿಯಿಂದ ಬದುಕೋಣ..
ವೈರಿಗಳಿಂದ ನಮ್ಮ ನಾಡನ್ನು ರಕ್ಷಿಸೋಣ.. 🙏🙏
✍️ ಲೋಕೇಶ್ ಕಲ್ಕುಣಿ











