• Home
  • About Us
  • ಕರ್ನಾಟಕ
Thursday, July 10, 2025
  • Login
Pratidhvani
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ
No Result
View All Result
Pratidhvani
No Result
View All Result
Home ಅಂಕಣ ಅಭಿಮತ

ಹೆಮ್ಮೆಯಿಂದ ನೆನೆಯಬಹುದಾದ ಡಾ. ರಾಜ್

by
April 24, 2021
in ಅಭಿಮತ, ಕರ್ನಾಟಕ
0
ಹೆಮ್ಮೆಯಿಂದ ನೆನೆಯಬಹುದಾದ ಡಾ. ರಾಜ್
Share on WhatsAppShare on FacebookShare on Telegram

ಏಪ್ರಿಲ್ 24 ಡಾ ರಾಜ್ ಜನ್ಮದಿನ. ಇಂದಿನ ಯುಗದಲ್ಲಿ ಸಿನಿಮಾ ಹೀರೋಗಳ ಮಕ್ಕಳಿಗೆ ಒಳಲೆಯಲ್ಲಿ ಹಾಲು ಕುಡಿಸುವುದನ್ನೂ ಟಿವಿ ವಾಹಿನಿಗಳಲ್ಲಿ ರಂಜನೀಯವಾಗಿ ತೋರಿಸಲಾಗುತ್ತದೆ. ಪಾಪ ರಾಜಣ್ಣನಿಗೆ ಈ ಅದೃಷ್ಟ ಇರಲಿಲ್ಲ. ಒಂದು ರೀತಿಯಲ್ಲಿ ಒಳ್ಳೆಯದೇ ಆಯಿತು ಏಕೆಂದರೆ ಮನೆಮನೆಯಲ್ಲಿ ಟಿವಿ ಇಲ್ಲದ ಕಾಲದಲ್ಲೂ ಅವರು ಮನ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದರು. ಆ ನೆನಪುಗಳೇ ಇಂದು ಸಾಮಾಜಿಕ ಮಾಧ್ಯಮಗಳಲ್ಲಿ ರಾರಾಜಿಸುತ್ತಿವೆ. ಖ್ಯಾತ ನಿರ್ದೇಶಕ ಟಿ ಎನ್ ಸೀತಾರಾಂ ಅವರ ಜನಾರ್ಧನ ಹೋಟೆಲಿನ ದೋಸೆ ಸ್ಪರ್ಧೆ, ರಾಜಣ್ಣನ ಹತ್ತು ಅತ್ಯುತ್ತಮ ಚಿತ್ರಗಳ ಆಯ್ಕೆಯ ಒಂದು ಕಾರ್ಯಕ್ರಮ ಇಂದಿನ ವಿಶೇಷ ಎಂದರೂ ಅಡ್ಡಿಯಿಲ್ಲ. ಏಕೆಂದರೆ ಅಲ್ಲಿ ಆಡಂಭರ, ಅದ್ಧೂರಿ, ಶಬ್ದಾಡಂಭರ ಇರಲಿಲ್ಲ. ಆದ್ರ್ರತೆ, ಆತ್ಮೀಯತೆ ಮತ್ತು ನೆನಪಿನಾಳದ ಮಾತುಗಳು ಸ್ವಾಭಾವಿಕವಾಗಿ ಹೊರಹೊಮ್ಮಿತ್ತು.

ADVERTISEMENT

ಡಾ ರಾಜ್ ಅವರನ್ನು ಹೇಗೆ ನೆನಪು ಮಾಡಿಕೊಳ್ಳುವುದು ? ಅವರ ಪೋಷಾಕುಗಳು ಎಷ್ಟೇ ಜನಪ್ರಿಯವಾಗಿದ್ದರೂ, ಬಣ್ಣ ಬಣ್ಣದ ಬೆಲ್ ಬಾಟಂ ಪ್ಯಾಂಟು, ಪಟ್ಟಾಪಟ್ಟಿ, ಚೌಕಗಳ ಅಂಗಿ ಎಷ್ಟೇ ಜನಪ್ರಿಯತೆ ಪಡೆದರೂ, ರಾಜ್ ಎಂದರೆ ನೆನಪಾಗುವುದು 1960-70ರ ದಶಕದ ಕಪ್ಪು ಬಿಳುಪು ಚಿತ್ರಗಳ ಅವರ ನಗುಮೊಗ. ಅವರ ಮುಖದಲ್ಲಿ ಹೀರೋ ಎನ್ನುವ ಇಂದಿನ ಕಾಲಘಟ್ಟದ ಪುರುಷ ಅಹಮಿಕೆಯ ಲಕ್ಷಣಗಳಿಗಿಂತಲೂ, ನಮ್ಮದೇ ಕುಟುಂಬದ ಸದಸ್ಯ ಎನಿಸುವಂತಹ ಆತ್ಮೀಯ ನಗು ಮತ್ತು ಮಂದಹಾಸ ಕಾಣುತ್ತಿತ್ತು. ಬಣ್ಣದ ಚಿತ್ರಗಳ ಮುಂಚಿನ ಚಿತ್ರಸರಣಿಯನ್ನು ಒಮ್ಮೆ ನೆನಪಿಸಿಕೊಂಡರೆ ನೂರಾರು ಎದುರಾಗುತ್ತವೆ. ಸಂಧ್ಯಾರಾಗ, ನಮ್ಮ ಸಂಸಾರ, ನಂದಗೋಕುಲ, ಕುಲವಧು ಹೀಗೆ.

ರಾಜ್ ಏಕೆ ನೆನಪಾಗುತ್ತಾರೆ ? ನನ್ನ ಗ್ರಹಚಾರ ಕೆಟ್ಟು ಮುನಿರತ್ನಂ ಕುರುಕ್ಷೇತ್ರ ಚಿತ್ರ ನೋಡಲು ಹೋದಾಗ ಬಹಳವೇ ನೆನಪಾಗಿಬಿಟ್ಟರು. ಪ್ರತಿ ಹೆಜ್ಜೆಯಲ್ಲೂ, ಪ್ರತಿಯೊಂದು ಸಂಭಾಷಣೆಯಲ್ಲೂ ಸಹ. ತುಲನೆ ಮಾಡಿ ನೋಡದಿದ್ದರೂ ಅದೆಷ್ಟು ಅಂತರ ಎನಿಸಿಬಿಟ್ಟಿತು. ಇರಲಿ, ಪಾಪ ಇಂದಿನ ನಟರ ಇತಿಮಿತಿಗಳನ್ನೂ ನಾವು ಗಮನಿಸಬೇಕಲ್ಲವೇ ? ನಾಟಕದ ಸ್ಪರ್ಶವೇ ಇರುವುದಿಲ್ಲ. ಇದು ಬೇರೆ ಮಾತು. ರಾಜ್ ಅವರ ಸಿನಿಮಾಗಳ ವಿಚಾರಕ್ಕೆ ಬಂದರೆ ನಾವು ಗಮನಿಸಬೇಕಾದ್ದು ಎರಡು ಅಂಶಗಳನ್ನು. ಮೊದಲನೆಯದು ಅವರ ಚಿತ್ರಗಳ ಮೂಲಕ ಡಾ ರಾಜ್ ಆ ಕಾಲಘಟ್ಟದ ಸಾಮಾಜಿಕ ತಲ್ಲಣಗಳಿಗೆ ಸಮಸ್ಯೆಗಳಿಗೆ ಮತ್ತು ಎಲ್ಲಕ್ಕಿಂತಲೂ ಹೆಚ್ಚಾಗಿ ಮೌಲ್ಯಗಳಿಗೆ ಸ್ಪಂದಿಸಿದ್ದರು. ಪರದೆಯ ಮೇಲಿನ ಮೌಲ್ಯಗಳನ್ನು ನಿಜ ಜೀವನದಲ್ಲೂ ಅನುಸರಿಸಿದ್ದರು. ಅವರ ಚಿತ್ರಗಳಲ್ಲಿದ್ದ ಸಾಮಾಜಿಕ ಸಂದೇಶ, ಅಪ್ಪಟ ಭಾಷಾ ಉಚ್ಛಾರಣೆ ಮತ್ತು ಸಭ್ಯ, ಸಂಯಮ ನಡತೆ ಜನಸಾಮಾನ್ಯರಿಗೆ ಆದರ್ಶಪ್ರಾಯವಾಗಿ ಕಂಡಿತ್ತು.

ಎರಡನೆಯ ಅಂಶವೆಂದರೆ, ಪಾತ್ರ ನಿರ್ವಹಣೆ ಕಥಾವಸ್ತುವನ್ನೇ ಅವಲಂಬಿಸಿದ್ದರೂ ರಾಜ್ ತಮ್ಮ ಪಾತ್ರಗಳಿಗೆ ತಲ್ಲೀನತೆಯಿಂದ ಜೀವ ತುಂಬುತ್ತಿದ್ದ ರೀತಿ ಅವರ ಪಾತ್ರಗಳನ್ನು ವೀಕ್ಷಕರ ನಡುವೆ ತಂದು ನಿಲ್ಲಿಸಿಬಿಡುತ್ತಿತ್ತು. ಪರದೆಯ ಮೇಲಿನ ನಾಯಕ ನಮ್ಮ ನಡುವಿನ ಒಬ್ಬ ವ್ಯಕ್ತಿಯಾಗಿಬಿಡುತ್ತಿದ್ದ. ಅವನ ಅಭಿವ್ಯಕ್ತಿ ನಮ್ಮದೇ ಎನ್ನುವಂತಿರುತ್ತಿತ್ತು , ಅವನ ಮಾನವೀಯ ಸ್ಪಂದನೆ ನಮ್ಮ ನಡುವಿನ ತಲ್ಲಣಗಳಿಗೆ ಆತ್ಮೀಯತೆಯ ಸ್ಪರ್ಶ ನೀಡುತ್ತಿತ್ತು. ಅವರು ತಮ್ಮ ಪಾತ್ರಗಳಲ್ಲಿ ಪರಕಾಯ ಪ್ರವೇಶ ಮಾಡುತ್ತಿದ್ದ ರೀತಿ ನಿಜಕ್ಕೂ ಅದ್ಭುತ. ಬಹುಶಃ ದಿಲೀಪ್ ಕುಮಾರ್ ಇಂತಹ ತಲ್ಲೀನತೆಗೆ ಸ್ಪೂರ್ತಿಯಾಗಿರಲೂಬಹುದು. ರೊಮ್ಯಾಂಟಿಕ್ ಪಾತ್ರಗಳಲ್ಲಿ ಅವರಲ್ಲಿ ದೇವ್ ಆನಂದ್ ಛಾಯೆ ಕಾಣುತ್ತಿದ್ದುದೂ ಹೌದು. ಆದರೆ ಎಲ್ಲಿಯೂ ಅನುಕರಣೆ ಎನಿಸುತ್ತಿರಲಿಲ್ಲ. ಆ ಸ್ವಂತಿಕೆಯನ್ನು ಕೊನೆಯವರೆಗೂ ಕಾಪಾಡಿಕೊಂಡು ಬಂದಿದ್ದು ಅವರ ವೈಶಿಷ್ಟ್ಯ.

ಅಭಿನಯದ ಪ್ರಶ್ನೆ ಬಂದಾಗ ಅವರ ಯಾವ ಚಿತ್ರವನ್ನು ಹೆಸರಿಸುವುದು ? ಇದು ಯಕ್ಷ ಪ್ರಶ್ನೆಯೇ ಸರಿ. ರಾಜ್ ಅವರ ಅತ್ಯುತ್ತಮ ಚಿತ್ರ ಎಂದರೆ ಆ ಚಿತ್ರದ ಗಳಿಕೆ, ಯಶಸ್ಸು, ಸಾಮಾಜಿಕ ಸಂದೇಶ, ಜನಪ್ರಿಯತೆ ಹೀಗೆ ಹಲವು ಮಾನದಂಡಗಳು ಎದುರಾಗುತ್ತವೆ. ಅಭಿನಯದ ದೃಷ್ಟಿಯಿಂದ ಈ ಪ್ರಶ್ನೆ ಎದುರಾದರೆ ಬೆರಳೆಣಿಕೆಯಷ್ಟು ಚಿತ್ರಗಳು ಹೊರಗುಳಿಯುತ್ತವೆ. ಡಾ ರಾಜ್ ಇಂದಿಗೂ ಜನಮಾನಸದಲ್ಲಿ ನೆಲೆಸಿದ್ದರೆ ಅದಕ್ಕೆ ಕಾರಣ ಅವರು ತಮ್ಮ ಸುತ್ತಲಿನ ಸಮಾಜವನ್ನೇ ಬಿಂಬಿಸುವ ಕಥಾವಸ್ತುಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದುದು. ಶ್ರೀಯುತ ಟಿ ಎನ್ ಸೀತಾರಾಂ ಇಂದು ಹೇಳಿದಂತೆ ರಾಜ್ ಅವರ 60 ಚಿತ್ರಗಳು ಕಾದಂಬರಿ ಆಧಾರಿತವಾಗಿದ್ದವು. ಗಿರಿಕನ್ಯೆಯಂತಹ ಸಾಧಾರಣ ಪಾತ್ರದಲ್ಲೂ ಜೀವತುಂಬಿದ ರಾಜ್ ಅಷ್ಟೇ ತನ್ಮಯತೆಯಿಂದ ಸಂಧ್ಯಾರಾಗಕ್ಕೂ ಜೀವ ತುಂಬಿದ್ದನ್ನು ನೋಡಿದರೆ ಅವರೊಳಗಿದ್ದ ಕಲಾವಿದನ ಪರಿಚಯವಾಗುತ್ತದೆ.

ಡಾ ರಾಜ್ ಅವರ ಅತ್ಯುತ್ತಮ ಅಭಿನಯ ಎಂದರೆ ಮೊದಲು ನೆನಪಾಗುವುದು ಸಂತ ತುಕಾರಾಂ ಚಿತ್ರ. ಆ ಚಿತ್ರದಲ್ಲಿ ಅವರ ತನ್ಮಯತೆ, ತಲ್ಲೀನರಾಗಿ ನಟಿಸಿದ ಪರಿ, ಪರಕಾಯ ಪ್ರವೇಶದ ಪರಾಕಾಷ್ಠೆ ಬಹುಶಃ ಮತ್ತಾವ ಚಿತ್ರದಲ್ಲೂ ಕಾಣಲಾಗದು. ಬಹುಶಃ ಸಂತ ಸರಣಿಯ ಎಲ್ಲ ಚಿತ್ರಗಳಲ್ಲೂ ಇದನ್ನು ಗಮನಿಸಬಹುದು, ಕನಕದಾಸ, ಪುರಂದರದಾಸ, ಕುಂಬಾರ, ಸರ್ವಜ್ಞ, ಮಂತ್ರಾಲಯ ಮಹಾತ್ಮೆ ಹೀಗೆ. ಭಕ್ತ ಕುಂಬಾರದಲ್ಲಿ ವಿಠ್ಠಲ ತನ್ನ ಮನೆಯಲ್ಲೇ ಇದ್ದೂ ತನಗೆ ತಿಳಿಯದಾಯಿತೇ ಎಂದು ಪರಿತಪಿಸುವ ಅವರ ಅಭಿನಯದಲ್ಲಿನ ತಲ್ಲೀನತೆಯನ್ನೇ ಮಂತ್ರಾಲಯ ಮಹಾತ್ಮೆಯಲ್ಲಿ ಶ್ರೀನಿವಾಸ ತನ್ನ ಮಡದಿಯನ್ನು ಅಗಲಿ ಸನ್ಯಾಸತ್ವ ಸ್ವೀಕರಿಸಲು ಹೋಗುವಾಗಿನ ದೃಶ್ಯದಲ್ಲೂ ಕಾಣಬಹುದು. ಕನಕದಾಸ ಚಿತ್ರದಲ್ಲಿ ಕೃಷ್ಣನ ದರ್ಶನಕ್ಕಾಗಿ ಶಿಕ್ಷೆಗೊಳಗಾಗುವಾಗಲೂ ಅದೇ ತನ್ಮಯತೆಯನ್ನು ಕಾಣಬಹುದು. ಪಾತ್ರಗಳು ಭಿನ್ನ, ಪಾತ್ರಧಾರಿ ಒಬ್ಬರೇ ಆದರೂ ನಮ್ಮ ಮನದಲ್ಲಿ ನೆಲೆಸುವುದು ಪಾತ್ರವೇ ಹೊರತು ಪಾತ್ರಧಾರಿಯಲ್ಲ. ಇದು ರಾಜ್ ಅವರ ಹಿರಿಮೆ.

1950ರ ದಶಕದ ಪೌರಾಣಿಕ ಮತ್ತು ಭಕ್ತಿರಸ ಪಾತ್ರಗಳಿಂದ 60ರ ದಶಕದ ಸಾಮಾಜಿಕ ಪಾತ್ರಗಳಿಗೆ ರಾಜ್ ಒಂದೇ ಬಾರಿಗೆ ಮನ್ವಂತರ ಹೊಂದಿದ್ದು ಒಂದು ಪವಾಡ ಎಂದೇ ಹೇಳಬಹುದು. ಈ ಕಾಲಘಟ್ಟದಲ್ಲೇ ಅವರ ಕಾದಂಬರಿ ಆಧಾರಿತ ಚಿತ್ರಗಳ ಮಹಾಪೂರವೇ ಹರಿದುಬಂದಿತ್ತು. ವಾದಿರಾಜ್ ನಿರ್ಮಿಸಿದ ನಾಂದಿ ಮತ್ತು ನಂದಾದೀಪ , ಲಕ್ಷ್ಮಿನಾರಾಯಣ್ ನಿರ್ದೇಶನದ ಚದುರಂಗರ ಕಾದಂಬರಿ ಆಧಾರಿತ ಉಯ್ಯಾಲೆ, ತ್ರಿವೇಣಿ ಕಾದಂಬರಿ ಹಣ್ಣೆಲೆ ಚಿಗುರಿದಾಗ, ಅನಕೃ ಅವರ ಸಂಧ್ಯಾರಾಗ, ಕುಷ್ಠರೋಗದ ಕಥಾವಸ್ತುವುಳ್ಳ ಬಂಗಾರದ ಹೂವು, ಅಂಧ ವ್ಯಕ್ತಿಯ ಬದುಕಿನ ಸುತ್ತ ಕಟ್ಟಿದ ಕಣ್ತೆರೆದು ನೋಡು ಇಂತಹ ಅಮೋಘ ಚಿತ್ರಗಳು 1960ರ ದಶಕದಲ್ಲಿ ಡಾ ರಾಜ್ ಅವರನ್ನು ಮೇರು ನಟರನ್ನಾಗಿ ಮಾಡಿತ್ತು. ಸಂಧ್ಯಾರಾಗ ಅವರ ಶ್ರೇಷ್ಠ ಅಭಿನಯಗಳಲ್ಲೊಂದು ಎನ್ನಬಹುದು.

ಸತಿಶಕ್ತಿ, ಮಹಿಷಾಸುರ ಮರ್ಧಿನಿ, ದಶಾವತಾರ, ಭೂಕೈಲಾಸ ಮತ್ತು ಇತ್ತೀಚಿನ ಭಕ್ತ ಪ್ರಹ್ಲಾದ ಚಿತ್ರಗಳಲ್ಲಿ ಡಾ ರಾಜ್ ನಿರ್ವಹಿಸಿದ ಅಸುರ ಪಾತ್ರಗಳು ಸಾರ್ವಕಾಲಿಕ ಶ್ರೇಷ್ಠ ಅಭಿನಯ. ರಾಮ ಮತ್ತು ಕೃಷ್ಣನ ಪಾತ್ರಗಳಲ್ಲಿ ಅದ್ಭುತವಾಗಿ ನಟಿಸಿದ್ದರೂ, ತೆಲುಗಿನ ಎನ್ ಟಿ ರಾಮರಾವ್ ಅವರಿಗೆ ಹೋಲಿಸಿದಾಗ ಡಾ ರಾಜ್ ಅವರಲ್ಲಿ ಕೊರತೆ ಇದೆಯೇನೋ ಎನಿಸುತ್ತಿದ್ದುದು ಸಹಜ. ಬಹುಶಃ ತೆಲುಗು ಚಿತ್ರಗಳನ್ನು ನೋಡುತ್ತಿದ್ದ ನಮ್ಮಂಥವರಿಗೆ ಹೀಗೆನಿಸಿದ್ದಿರಬಹುದು. ಆದರೆ ಪೌರಾಣಿಕ ಮತ್ತು ಐತಿಹಾಸಿಕ ಚಿತ್ರಗಳಲ್ಲಿ ಅವರು ನಿರ್ವಹಿಸಿದ ಪಾತ್ರಗಳು ಅವಿಸ್ಮರಣೀಯ. ಇಮ್ಮಡಿ ಪುಲಿಕೇಶಿ, ಕೃಷ್ಣದೇವರಾಯ, ಮಯೂರ, ಭಬ್ರುವಾಹನ ಸಾರ್ವಕಾಲಿಕ ಶ್ರೇಷ್ಠ ಅಭಿನಯ. ಮಯೂರ ಚಿತ್ರದಲ್ಲಿ ಕೇóಶವಭಟ್ಟನ ಶಿಷ್ಯನಾಗಿ, ತನ್ನ ಕುಲದ ಮೂಲ ಅರಿಯದವನಾಗಿ ಮತ್ತು ನಂತರ ರಾಜಕುವರನಾಗಿ ಡಾ ರಾಜ್ ಅವರ ಅಭಿನಯ ಇಂದಿನ ಪ್ರತಿಯೊಬ್ಬ ನಟರಿಗೂ ಪಾಠಶಾಲೆಯಂತೆ ಕಾಣಬೇಕು.

ಇದೆ ಪಾತ್ರ ವೈವಿಧ್ಯತೆಯನ್ನು ಡಾ ರಾಜ್ ತ್ರಿಮೂರ್ತಿ ಮತ್ತು ಶಂಕರ್ ಗುರು ಚಿತ್ರದಲ್ಲೂ ಮೆರೆದಿದ್ದರು. ತಾವು ನಿರ್ವಹಿಸುವ ಪ್ರತಿಯೊಂದು ಪಾತ್ರಧಾರಿಯನ್ನೂ ಪರದೆಯಿಂದ ಹೊರತಂದು ವೀಕ್ಷಕರ ನಡುವೆ ನಿಲ್ಲಿಸುವ ಕಲೆ ಡಾ ರಾಜ್ ಅವರಿಗೆ ಸಿದ್ಧಿಸಿತ್ತು. ಅವರ ಬಂಗಾರದ ಪಂಜರ ಚಿತ್ರದ ಹಳ್ಳಿ ಹೈದನ ಅಭಿನಯವನ್ನು ಸರಿಗಟ್ಟುವ ಯಾವುದೇ ಚಿತ್ರ ಕನ್ನಡದಲ್ಲಿ ಬಂದಿಲ್ಲ. ಹಾಗೆಯೇ ಕಸ್ತೂರಿ ನಿವಾಸದ ರಾಜ್ ಪಾತ್ರ. ಈ ಚಿತ್ರದಲ್ಲಿ ನಾಯಕಿ ತನ್ನನ್ನು ವರಿಸುತ್ತಾಳೆ ಎಂಬ ಭ್ರಮೆಯಲ್ಲಿ ತೇಲುತ್ತಾ ಕನ್ನಡಿಯ ಮುಂದೆ ನಿಂತಾಗ ಒಂದೇ ಒಂದು ಬಿಳಿ ಕೂದಲು ಕಾಣುತ್ತದೆ.ಅದನ್ನು ಕಿತ್ತು ಹಾಕಿ ಆಕೆಯನ್ನು ಸಂಧಿಸಲು ಸಂಭ್ರಮದಿಂದ ಬರುವ ರಾಜ್ ನಿರಾಸೆಯಾಗಿ ಮೆಟ್ಟಿಲುಗಳನ್ನೇರುತ್ತಾ ಒಳಹೋಗುತ್ತಾನೆ. ಈ ಸನ್ನಿವೇಶದಲ್ಲಿನ ಅಭಿನಯ ಅವಿಸ್ಮರಣೀಯ.

ಇದೇ ತನ್ಮಯತೆ ಮತ್ತು ತಲ್ಲೀನತೆಯನ್ನು ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜ್ ತೋರುತ್ತಾರೆ. ತನ್ನ ಪ್ರಿಯತಮೆ ಲಕ್ಷ್ಮಿ ಇಲ್ಲವಾದಾಗ, ಅಕ್ಕನ ಮಕ್ಕಳು ವಿಶ್ವಾಸ ದ್ರೋಹ ಬಗೆದಾಗ ಯಾವುದೇ ಮಧ್ಯಮ ವರ್ಗದ ಕುಟುಂಬದಲ್ಲಿನ ಸಂಯಮಶೀಲ ವ್ಯಕ್ತಿಯಲ್ಲಿ ಕಾಣುವ ಭಾವನೆಗಳನ್ನು, ಸಂವೇದನೆಯನ್ನು ರಾಜೀವನಲ್ಲಿ ಕಾಣಬಹುದು. ಹಾಗಾಗಿಯೇ ರಾಜೀವ ನಮ್ಮ ಮನದಲ್ಲಿ ಇಂದಿಗೂ ಉಳಿದಿದ್ದಾನೆ. ಬಂಗಾರದ ಮನುಷ್ಯನ ಗಾಂಭೀರ್ಯ ಎಲ್ಲಿ ಬಂಗಾರದ ಪಂಜರದ ಚಾಂಚಲ್ಯ ಎಲ್ಲಿ ! ಎರಡೂ ಪಾತ್ರಗಳನ್ನು ಡಾ ರಾಜ್ ನಮ್ಮ ಮನಸಿನಲ್ಲಿ ಚಿರಸ್ಥಾಯಿಯಾಗಿ ಉಳಿಸಿಬಿಟ್ಟಿದ್ದಾರೆ. ಇದು ಅವರ ಹಿರಿಮೆ ಮತ್ತು ಗರಿಮೆ. ಅಷ್ಟೇ ನೆನಪಿನಲ್ಲುಳಿಯುವ ಪಾತ್ರ ಸಾಕ್ಷಾತ್ಕಾರ ಚಿತ್ರದ್ದು. ಸಾಮಾಜಿಕ ಪಲ್ಲಟಗಳ ಕಾಲದಲ್ಲಿ ಒಂದು ಆದರ್ಶದ ಭ್ರಮಾಲೋಕವನ್ನು ಸೃಷ್ಟಿಸುವ ಸಾಕ್ಷಾತ್ಕಾರ ಚಿತ್ರ ಆ ಕಾಲಘಟ್ಟಕ್ಕೆ ಅಪ್ರಬುದ್ಧ ಚಿತ್ರ ಎನ್ನಬಹುದಾದರೂ, ಆ ಚಿತ್ರದಲ್ಲಿನ ಡಾ ರಾಜ್ ನಟನೆ ಎಲ್ಲವನ್ನೂ ಮರೆಮಾಚುತ್ತದೆ. ಒಂದು ಚಿತ್ರವನ್ನು ತನ್ನ ಹೆಗಲ ಮೇಲೆ ಹೊತ್ತು ಯಶಸ್ವಿಗೊಳಿಸುವ ಕಲೆ ಕೆಲವರಿಗೇ ಸಿದ್ಧಿಸುತ್ತದೆ. ರಾಜ್ ಅಂಥವರಲ್ಲಿ ಅಪ್ರತಿಮರು.

ಕೆಲವು ವಿಭಿನ್ನ ಪಾತ್ರಗಳನ್ನೂ ನಿರ್ವಹಿಸಿ ಸೈ ಎನಿಸಿಕೊಂಡಿದ್ದ ಡಾ ರಾಜ್, ಸಿಪಾಯಿ ರಾಮು ಚಿತ್ರದ ಡಕಾಯಿತನ ಪಾತ್ರದಲ್ಲಿ ,ಒಂದು ಮುತ್ತಿನ ಕಥೆ ಚಿತ್ರದ ಮುತ್ತು ಪಾತ್ರದಲ್ಲಿ ಅಭಿನಯ ಎಂದರೇನು ಎನ್ನುವುದನ್ನು ನಿರೂಪಿಸುತ್ತಾರೆ. ದ್ವಿಪಾತ್ರಾಭಿನಯದ ಅವರ ಎಲ್ಲ ಚಿತ್ರಗಳೂ ಸ್ಮರಣೀಯ ಎನಿಸುತ್ತವೆ. ಕುಲಗೌರವ, ಶಂಕರ್‍ಗುರು ತ್ರಿಪಾತ್ರಾಭಿನಯದ ಅದ್ಭುತ ಚಿತ್ರಗಳಾದರೆ, ಭಲೇ ಹುಚ್ಚ, ದಾರಿ ತಪ್ಪಿದ ಮಗ, ನಾನೊಬ್ಬ ಕಳ್ಳ ದ್ವಿಪಾತ್ರಾಭಿನಯದ ಚಿತ್ರಗಳು. ತಾಯಿ ಮತ್ತು ಮಗನ ಸಂಬಂಧದಲ್ಲಿ ಅಡಗಿರುವ ಪ್ರೀತಿ, ವಾತ್ಸಲ್ಯ, ಮಮತೆ, ಮಮಕಾರ ಮತ್ತು ಉತ್ಕಟ ಸಂವೇದನೆಯನ್ನು ಬಹುಶಃ ಡಾ ರಾಜ್ ಅವರಷ್ಟು ಅದ್ಭುತವಾಗಿ ಮತ್ತಾರೂ ಕನ್ನಡದಲ್ಲಿ ತೋರಿಲ್ಲ ಎನ್ನಬಹುದು. ಬಿ ಆರ್ ಪಂತುಲು ಅವರ ಅಮ್ಮ ಚಿತ್ರ ಇಂತಹ ಒಂದು ಮೇರು ಚಿತ್ರ. ಇದು ತಾಯಿಗೆ ತಕ್ಕ ಮಗ, ಸಂಪತ್ತಿಗೆ ಸವಾಲ್, ಅನುರಾಗ ಅರಳಿತು ಚಿತ್ರದವರೆಗೂ ನಡೆದುಬಂದ ರಾಜ್ ಅವರ ವಿಶಿಷ್ಟ ಪರಂಪರೆ. ತಾಯಿಯಾಗಿ ಎಂ ವಿ ರಾಜಮ್ಮ ಅಥವಾ ಪಂಡರಿಭಾಯಿ, ಮಗನಾಗಿ ರಾಜ್, ತಂದೆಯಾಗಿ ಅಶ್ವಥ್, ಕುತಂತ್ರಿ ಮಾವನಾಗಿ ಬಾಲಣ್ಣ ಈ ಚಿತ್ರಣವನ್ನು ನೆನೆಯುವುದೇ ಒಂದು ಆನಂದ ಅಲ್ಲವೇ ?

ಡಾ ರಾಜ್ ಅಭಿನಯದಲ್ಲಿ ನ್ಯೂನತೆಗಳು ಇಲ್ಲವೇ ಇಲ್ಲ ಎಂದು ಹೇಳಲಾಗದು. ಯಾವ ನಟರೂ ಇದರಿಂದ ಹೊರತಲ್ಲ. ರೊಮ್ಯಾಂಟಿಕ್ ಪಾತ್ರಗಳಲ್ಲಿ ಅವರಲ್ಲಿ ಏಕತಾನತೆ ಹೆಚ್ಚಾಗಿ ಕಾಣುತ್ತಿತ್ತು. ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸುತ್ತಿದ್ದರೂ ಕೆಲವು ಸನ್ನಿವೇಶಗಳಲ್ಲಿ ಒಂದೇ ತೆರನಾದ ಅಭಿನಯ, ಸಂಭಾಷಣೆ, ಶೈಲಿ ಎದ್ದುಕಾಣುವಂತಿರುತ್ತಿತ್ತು. ಕೆಲವೊಮ್ಮೆ ನಿರೀಕ್ಷಿಸಬಹುದಿತ್ತು. ಲೀಲಾವತಿ, ಜಯಂತಿ, ಭಾರತಿ ಮತ್ತು ಕಲ್ಪನಾ ಈ ನಾಲ್ವರು ನಾಯಕಿಯರು ಡಾ ರಾಜ್ ಅವರೊಡನೆ ಅತಿಹೆಚ್ಚಿನ ಚಿತ್ರಗಳಲ್ಲಿ ನಟಿಸಿದವರು. ಜಯಂತಿ ಹೆಚ್ಚು ಚಿತ್ರಗಳು ಎನಿಸುತ್ತದೆ. ಆದರೆ ಕಲ್ಪನಾ ಇದ್ದ ಚಿತ್ರಗಳಲ್ಲಿ ಡಾ ರಾಜ್ ಸಪ್ಪೆಯಾಗಿ ಕಾಣುತ್ತಿದ್ದುದನ್ನು ಅಲ್ಲಗಳೆಯಲಾಗುವುದಿಲ್ಲ. ನಾಂದಿ, ಕರುಳಿನ ಕರೆ, ಬಂಗಾರದ ಹೂವು, ಹಣ್ಣೆಲೆ ಚಿಗುರಿದಾಗ, ಉಯ್ಯಾಲೆ, ಬಿಡುಗಡೆ, ಮಣ್ಣಿನ ಮಗ, ಗಾಂಧಿನಗರ, ಎರಡು ಕನಸು, ದಾರಿ ತಪ್ಪಿದ ಮಗ ಹೀಗೆ ಬಹುಪಾಲು ಚಿತ್ರಗಳಲ್ಲಿ ಕಲ್ಪನಾ ಮೇಲುಗೈ ಸಾಧಿಸುತ್ತಾರೆ. ಗಂಧದ ಗುಡಿಯಲ್ಲಿ ಕಲ್ಪನ ನಿರ್ವಹಿಸಿದ್ದ ಪಾತ್ರವನ್ನು ಯಾರು ಬೇಕಾದರೂ ಮಾಡಬಹುದಿತ್ತು.

ಇಷ್ಟು ಅದ್ಭುತ ಅಭಿನಯ ಚಾತುರ್ಯ, ವಾಕ್ ಪಾಂಡಿತ್ಯ ಮತ್ತು ಗಾಯನ ಸಾಮಥ್ರ್ಯ ಇದ್ದರೂ ತಮ್ಮ ಸಾರ್ವಜನಿಕ ಜೀವನದಲ್ಲಿ ಸರಳತೆಯನ್ನೇ ಮೈಗೂಡಿಸಿಕೊಂಡಿದ್ದ ರಾಜ್ ಈ ಕಾರಣಕ್ಕಾಗಿಯೇ ಆದರ್ಶಪ್ರಾಯವಾಗಿ ಕಾಣುತ್ತಾರೆ ಎನಿಸುತ್ತದೆ. ತಮ್ಮ ಕಾಲಘಟ್ಟದ ಸಾಮಾಜಿಕ ಸ್ಥಿತ್ಯಂತರಗಳಿಗೆ ಅನುಗುಣವಾಗಿ ಕಥಾವಸ್ತುಗಳನ್ನು ಆಯ್ಕೆ ಮಾಡುತ್ತಿದ್ದ ರಾಜ್ ಕೈಬಿಡಬಹುದಾಗಿತ್ತು ಎನ್ನುವ ಚಿತ್ರಗಳಲ್ಲಿ ಹಾವಿನ ಹೆಡೆ, ಗುರಿ, ಎರಡು ನಕ್ಷತ್ರಗಳು, ಯಾರಿವನು ಇಂತಹ ಇತ್ತೀಚಿನ ಚಿತ್ರಗಳೂ ಇವೆ. ಅವರು ಮಾಡಲೇ ಬೇಕಿದ್ದ ಚಿತ್ರಗಳು ಟಿಪ್ಪು ಸುಲ್ತಾನ್, ನೃಪತುಂಗ, ಕುರುಕ್ಷೇತ್ರ , ಎಚ್ಚಮ ನಾಯಕ ಮುಂತಾದವೂ ಇವೆ.

ಏನೇ ಆಗಲಿ ಡಾ ರಾಜ್ ಕನ್ನಡ ನಾಡು ಕಂಡ ಒಂದು ಮೇರು ವ್ಯಕ್ತಿತ್ವ. ಮತ್ತು ಕನ್ನಡ ಚಿತ್ರರಂಗದಲ್ಲಿ ಚಿರಸ್ಥಾಯಿಯಾಗಿ ನಿಲ್ಲುವ ಅದ್ವಿತೀಯ ನಟ. ಇಡೀ ಕುಟುಂಬ ಕೊನೆಯವರೆಗೂ ಕುಳಿತು, ಮುಜುಗರ ಇಲ್ಲದೆ ನೋಡುವಂತಹ ಚಿತ್ರಗಳನ್ನೇ ಕಡೆಯವರೆಗೂ ಕೊಟ್ಟ ಡಾ ರಾಜ್ ಈ ಕಾರಣಕ್ಕಾಗಿಯೇ ಜನಸಾಮಾನ್ಯರಿಗೆ ಹತ್ತಿರವಾಗುತ್ತಾರೆ. 1970ರ ದಶಕದ ನಂತರದಲ್ಲಿ ವಿಷ್ಣು, ಅಂಬರೀಶ್ ಕಾಲಘಟ್ಟದಲ್ಲಿ ನಾಯಕನ ಭಾಷೆ ಮತ್ತು ಪರಿಭಾಷೆಯಲ್ಲಿ ಬದಲಾವಣೆ ಕಂಡುಬಂದರೂ ಡಾ ರಾಜ್ ಶಬ್ಧವೇಧಿಯವರೆಗೂ ತಮ್ಮ ಸಭ್ಯ ಭಾಷೆಯ ಚೌಕಟ್ಟನ್ನು ಭಂಗಗೊಳಿಸಲಿಲ್ಲ ಎನ್ನುವುದೇ ಪ್ರಶಂಸಾರ್ಹ. ಹಾಗಾಗಿಯೇ ರಾಜ್ ಧೃವತಾರೆಯಾಗಿ ಕಂಗೊಳಿಸುತ್ತಾರೆ. ಬಂಗಾರದ ಮನುಷ್ಯನಂತೆ ಜನರ ನಡುವೆ ನಿಲ್ಲುತ್ತಾರೆ. ಮಯೂರ ವರ್ಮನಂತೆ ಕನ್ನಡಿಗರ ಹೃದಯ ಸಿಂಹಾಸನದಲ್ಲಿ ವಿರಾಜಮಾನರಾಗಿರುತ್ತಾರೆ.

Previous Post

Covid-19: ಸ್ವಂತ ಜಮೀನಿನಲ್ಲಿ ಅಂತ್ಯಸಂಸ್ಕಾರಕ್ಕೆ ಸರ್ಕಾರದಿಂದ ಅನುಮತಿ

Next Post

ಕೊಡಗಿನಲ್ಲಿ covid ಸಾಂಕ್ರಮಿಕದ ನಡುವೆಯೇ ಸದ್ದಿಲ್ಲದೆ ನಡೆಯುತ್ತಿದೆ ಬೆಟ್ಟ ಅಗೆಯುವ ಅವೈಜ್ಞಾನಿಕ ಕಾಮಗಾರಿ

Related Posts

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
0

ತರುಣ್‌ ಸುಧೀರ್‌ ನಿರ್ಮಾಣದ ಹೊಸ ಚಿತ್ರಕ್ಕೆ ಶಿವಣ್ಣ-ಪ್ರೇಮ್‌ ಸಾಥ್..ʼಏಳುಮಲೆʼ ಟೈಟಲ್‌ ಟೀಸರ್‌ನಲ್ಲಿ ಮಿಂಚಿದ ರಕ್ಷಿತಾ ಸಹೋದರ ರಾಣಾ. ತರುಣ್ ಕಿಶೋರ್ ಸುಧೀರ್ ನಿರ್ಮಾಣ ಮಾಡುತ್ತಿರುವ ಪುನೀತ್ ರಂಗಸ್ವಾಮಿ...

Read moreDetails

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

July 9, 2025

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

July 9, 2025

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

July 9, 2025
Next Post
ಕೊಡಗಿನಲ್ಲಿ covid ಸಾಂಕ್ರಮಿಕದ ನಡುವೆಯೇ ಸದ್ದಿಲ್ಲದೆ ನಡೆಯುತ್ತಿದೆ ಬೆಟ್ಟ ಅಗೆಯುವ ಅವೈಜ್ಞಾನಿಕ ಕಾಮಗಾರಿ

ಕೊಡಗಿನಲ್ಲಿ covid ಸಾಂಕ್ರಮಿಕದ ನಡುವೆಯೇ ಸದ್ದಿಲ್ಲದೆ ನಡೆಯುತ್ತಿದೆ ಬೆಟ್ಟ ಅಗೆಯುವ ಅವೈಜ್ಞಾನಿಕ ಕಾಮಗಾರಿ

Please login to join discussion

Recent News

Top Story

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

by ಪ್ರತಿಧ್ವನಿ
July 9, 2025
Top Story

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

by ಪ್ರತಿಧ್ವನಿ
July 9, 2025
Top Story

DCM DK Shivakumar: ರಾಜ್ಯದ ಆರು ನೀರಾವರಿ ಯೋಜನೆಗಳಿಗೆ ₹11,122.76 ಕೋಟಿ ಅನುದಾನಕ್ಕಾಗಿ ಮನವಿ.

by ಪ್ರತಿಧ್ವನಿ
July 9, 2025
Top Story

HD Kumarswamy: ಗ್ರೀನ್ ಸ್ಟೀಲ್ ವಲಯಕ್ಕೆ ಒತ್ತು; ಲೋಹ ತ್ಯಾಜ್ಯ ಮರುಬಳಕೆಗೆ ಆದ್ಯತೆ.

by ಪ್ರತಿಧ್ವನಿ
July 9, 2025
Top Story

ಕಾರ್ಯಕರ್ತರ ಸಭೆ ಹಾಗೂ ಸದಸ್ಯತ್ವ ನೊಂದಣಿ ಅಭಿಯಾನ ಗೌರಿಬಿದನೂರು

by ಪ್ರತಿಧ್ವನಿ
July 9, 2025
https://www.youtube.com/watch?v=1mlC4BzAl-w
Pratidhvai.com

We bring you the best Analytical News, Opinions, Investigative Stories and Videos in Kannada

Follow Us

Browse by Category

Recent News

Shivaraj Kumar: ʼಏಳುಮಲೆʼ ಟೈಟಲ್‌ ಟೀಸರ್‌ ರಿಲೀಸ್.. ತರುಣ್‌ ಸುಧೀರ್‌ ಸಿನಿಮಾಗೆ ಶಿವಣ್ಣ-ಪ್ರೇಮ್‌ ಸಾಥ್

July 9, 2025

Prajwal Revanna: ಜಾಮೀನು ವಿಚಾರವಾಗಿ ಮಹತ್ವದ ಸೂಚನೆ ನೀಡಿದ ಹೈಕೋರ್ಟ್..!!

July 9, 2025
  • About
  • Advertise
  • Privacy & Policy
  • Contact

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • Home
  • ಇದೀಗ
  • ಕರ್ನಾಟಕ
  • ದೇಶ-ವಿದೇಶ
    • ದೇಶ
    • ವಿದೇಶ
  • ರಾಜಕೀಯ
  • ಅಭಿಮತ
    • ಅಂಕಣ
  • ವಿಶೇಷ
  • ಸಿನಿಮಾ
  • ವಿಡಿಯೋ
  • ಶೋಧ
  • ಇತರೆ
    • ಸರ್ಕಾರಿ ಗೆಜೆಟ್
    • ವಾಣಿಜ್ಯ
    • ಸ್ಟೂಡೆಂಟ್‌ ಕಾರ್ನರ್
    • ಕ್ರೀಡೆ
  • ಸೌಂದರ್ಯ
  • ಜೀವನದ ಶೈಲಿ

© 2024 www.pratidhvani.com - Analytical News, Opinions, Investigative Stories and Videos in Kannada