ರಾಜ್ಯ ಸರ್ಕಾರ ಚುನಾವಣೆಯಲ್ಲಿ ಗೆದ್ದು ಮತ್ತೊಮ್ಮೆ ಅಧಿಕಾರಕ್ಕೆ ಬರುವ ಕನಸು ಕಾಣುತ್ತಿದೆ. ಆದರೆ ರಾಜ್ಯ ಸರ್ಕಾರದ ವಿರುದ್ಧ ಸೃಷ್ಟಿಯಾಗುತ್ತಿರುವ ವಿರೋಧದ ಅಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಸಾಗಿದೆ. ಇದೀಗ ಖಾಸಗಿ ವ್ಯಕ್ತಿಗಳು, ಸಂಘಟನೆಗಳು ಪ್ರತಿಭಟನೆ ಮಾಡಿದಾಗ ಸರ್ಕಾರ ಸಂಧಾನ ಮಾಡುವ ಜಾಣ್ಮೆಯನ್ನು ತೋರಿಸುತ್ತದೆ. ಆದರೆ ಇದೀಗ ಸರ್ಕಾರಕ್ಕೆ ತಲೆನೋವು ತಂದಿರುವುದು ಸರ್ಕಾರಿ ನೌಕರರು. ಫೆಬ್ರವರಿ 23 ಅಂದರೆ ಇಂದಿನಿಂದ ಫೆಬ್ರವರಿ 28ರ ತನಕ ಸರ್ಕಾರಕ್ಕೆ ಗಡುವು ನೀಡಿದ್ದು, ಒಂದು ವೇಳೆ ಸರ್ಕಾರಿ ನೌಕರರ ಬೇಡಿಕೆಗಳಿಗೆ ಸರ್ಕಾರ ಸ್ಪಂದನೆ ತೋರಿಸದಿದ್ದರೆ ಮಾರ್ಚ್ ಒಂದರಿಂದ ಕರ್ತವ್ಯಕ್ಕೆ ಗೈರು ಹಾಜರಾಗುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಸರ್ಕಾರಿ ಅಧಿಕಾರಿಗಳ ಸಂಘ ನಿರ್ಧಾರ ಮಾಡಿದೆ. ನಿನ್ನೆ ಸರ್ಕಾರಿ ನೌಕರರ ಸಂಘದ ತುರ್ತು ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ರಾಜ್ಯ ಸರ್ಕಾರಿ ನೌಕರರ ಪ್ರಮುಖ ಬೇಡಿಕೆ ಏನು..?
ರಾಜ್ಯ ಸರ್ಕಾರಿ ನೌಕರರು ಬಜೆಟ್ ಅಧಿವೇಶನಕ್ಕೂ ಮೊದಲೇ NPS ಜಾರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಮುಂದಿನ ಬಾರಿ NPS ಜಾರಿ ಮಾಡುವ ಸರ್ಕಾರಕ್ಕೆ ನಮ್ಮ ಮತ ಎಂದು ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಎನ್ಪಿಎಸ್ ಜಾರಿ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಘೋಷಣೆ ಮಾಡುವ ವಿಶ್ವಾಸದಕಲ್ಲಿ ರಾಜ್ಯ ಸರ್ಕಾರಿ ನೌಕರರು ಇದ್ದರು. ಆದರೆ ರಾಜ್ಯ ಬಿಜೆಪಿ ಸರ್ಕಾರ ಎನ್ಪಿಎಸ್ ಜಾರಿ ಬಗ್ಗೆ ಬಜೆಟ್ನಲ್ಲಿ ಚಕಾರ ಎತ್ತಿಲ್ಲ. ರಾಜ್ಯ ಬಿಜೆಪಿ ಸರ್ಕಾರದ ಮೇಲೆ ಒತ್ತಡ ತಂದು OPS ರದ್ದು ಮಾಡಿ NPS ಜಾರಿ ಮಾಡುವಂತೆ ಒತ್ತಡ ಹೇರಲಾಗಿತ್ತು. ಆದರೆ ಸರ್ಕಾರಿ ನೌಕರರ ಒತ್ತಡಕ್ಕೆ ರಾಜ್ಯ ಸರ್ಕಾರ ಸೊಪ್ಪು ಹಾಕಿಲ್ಲ. ಇದು ಸರ್ಕಾರಿ ನೌಕರರ ಕಣ್ಣು ಕೆಂಪಾಗುವಂತೆ ಮಾಡಿದೆ. ಇದೀಗ ಫೆಬ್ರವರಿ 28ರ ಒಳಗಾಗಿ ಸರ್ಕಾರ ಯಾವುದೇ ನಿರ್ಧಾರ ಮಾಡದೆ ಹೋದರೆ ಮಾರ್ಚ್ 1ರಿಂದ ಗೈರು ಹಾಜರು ಆಗುವ ಮೂಲಕ ಪ್ರತಿಭಟಿಸಲು ನಿರ್ಧಾರ ಮಾಡಿದ್ದಾರೆ.

7ನೇ ವೇತನ ಆಯೋಗದ ಬಗ್ಗೆಯೂ ಸರ್ಕಾರ ಸೈಲೆಂಟ್..!
ಕಳೆದ ವರ್ಷ ನವೆಂಬರ್ನಲ್ಲೇ ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡಿತ್ತು, ವಾಡಿಕೆಯಂತೆ 5 ವರ್ಷಕ್ಕೆ ಒಮ್ಮೆ ವೇತನ ಆಯೋಗ ರಚನೆ ಆಗುವ ಬದಲು 6 ತಿಂಗಳ ಮೊದಲೇ ವೇತನ ಆಯೋಗ ರಚನೆ ಆಗಿದ್ದರಿಂದ ಸರ್ಕಾರಿ ನೌಕರರು ಫುಲ್ ಖುಷ್ ಆಗಿದ್ದರು. ನಾಲ್ಕು ಏಳು ತಿಂಗಳಿಗೆ ವೇತನ ಆಯೋಗ ರಚನೆ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ ನಿರ್ಧಾರವನ್ನು ಸ್ವಾಗತ ಮಾಡಿದ್ದರು. ಸರ್ಕಾರ 11 ಲಕ್ಷ ಕುಟುಂಬಗಳ ಭವಿಷ್ಯ ಕಾಪಾಡುವ ಉದ್ದೇಶದಿಂದ ಉತ್ತಮ ನಿರ್ಧಾರ ತೆಗೆದುಕೊಂಡಿದೆ ಎಂದೆಲ್ಲಾ ಹೇಳಿಕೊಂಡಿದ್ರು. ಆದರೆ ಬಜೆಟ್ನಲ್ಲೇ 7ನೇ ವೇತನ ಆಯೋಗ ಜಾರಿ ಮಾಡುವ ಸಂಬಂಧ ಯಾವುದೇ ಉಲ್ಲೇಖ ಇಲ್ಲದೆ ಇರುವುದು ಸರ್ಕಾರಿ ನೌಕರರ ನಿದ್ರೆಗೆಡಿಸಿದೆ. ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡಿದ್ದು ಕೇವಲ ಕಣ್ಣೊರೆಸುವ ತಂತ್ರದ ಭಾಗ ಎನ್ನುವುದನ್ನು ಅರ್ಥ ಮಾಡಿಕೊಂಡಿದ್ದು, ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಈ ಹಿಂದೆ ಹೇಳಿಕೆ ನೀಡಿದ್ದರು. ಅದರಂತೆ ಇದೀಗ ಪ್ರತಿಭಟನೆಗೂ ಮುನ್ನ 7 ದಿನಗಳ ಕಾಲ ಗಡುವು ನೀಡಲಾಗಿದೆ.
ಸರ್ಕಾರಕ್ಕೆ ಪ್ರತಿಭಟನೆ ಜೊತೆಗೆ ಮತನಷ್ಟ ಭೀತಿ..!
NPS ಯೋಜನೆ ಜಾರಿಗಾಗಿ 5 ರಿಂದ 6 ಲಕ್ಷ ನೌಕರರು ಪ್ರತಿಭಟನೆಗೆ ಮುಂದಾಗಿದ್ದಾರೆ. ಈಗಾಗಲೇ OPS ರದ್ದು NPS ಜಾರಿಗಾಗಿ ಹೋರಾಟ ಮಾಡುತ್ತಿರುವ ಸರ್ಕಾರಿ ನೌಕರರು, ಎನ್ಪಿಎಸ್ ಜಾರಿ ಮಾಡುವ ಭರವಸೆ ಕೊಟ್ಟವರಿಗೆ ನಮ್ಮ ಮತ ಎಂದು ಘೋಷಣೆ ಮಾಡಿದ್ದಾರೆ. ಇನ್ನು ರಾಜ್ಯ ಸರ್ಕಾರ 7ನೇ ವೇತನ ಆಯೋಗ ರಚನೆ ಮಾಡಿ ಸುಮ್ಮನಾಗಿದ್ದು ಸರ್ಕಾರಿ ನೌಕರರ ಕೋಪ ಕೆಂಡವಾಗಲು ಸಾಕ್ಷಿಯಾಗಿದೆ. ಇದೀಗ ಸರ್ಕಾರಿ ನೌಕರರ ಸಭೆಯಲ್ಲಿ ಪ್ರತಿಭಟನೆಗೆ ನಿರ್ಧಾರ ಮಾಡಲಾಗಿದೆ. ಈ ನಡುವೆ ರಾಜ್ಯ ಸಕಾರಿ ನೌಕರರ ಸಂಘದಲ್ಲೇ ಬಿರುಕು ಮೂಡಿಸುವ ಪ್ರಯತ್ನ ನಡೆದಿದೆ ಎನ್ನಲಾಗ್ತಿದೆ. ಇದೇ ಕಾರಣಕ್ಕೆ ಸಭೆ ವೇಳೆ ಕೆಲವೊಂದು ಗೊಂದಲಕಾರಿ ಘಟನೆಗಳು ನಡೆದಿವೆ. ಬಹಿರಂಗ ಸಭೆಯಲ್ಲಿ ವಿವಿಧ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಸೇರಿದಂತೆ ಆರು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಿದ್ದು, ಮಾತನಾಡುವ ವಿಚಾರದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಮುಂದಿನ ವಾರದಲ್ಲಿ ಸರ್ಕಾರಿ ನೌಕರರ ಒಕ್ಕೂಟಕ್ಕೆ ಸರ್ಕಾರ ಮಣಿಯುತ್ತಾ..? ಅಥವಾ ಸರ್ಕಾರವೇ ನೌಕರರ ಒಗ್ಗಟ್ಟನ್ನು ಮುರಿದು ಹೋರಾಟದ ದಿಕ್ಕನ್ನೇ ಬದಲಿಸುತ್ತಾ ಅನ್ನೋದನ್ನು ಕಾದು ನೋಡ್ಬೇಕು.











