ವಿದ್ಯಾರ್ಥಿಗಳಿಗೆ 50% ರಿಯಾಯಿತಿ !
ಹದಿನೆಂಟನೇ ಶತಮಾನದಲ್ಲಿ ಕಿತ್ತೂರು ರಾಣಿ ಚನ್ನಮ್ಮನ ಬಲಗೈ ಭಂಟನಾಗಿದ್ದ ವೀರಸೇನಾನಿ ಸಂಗೊಳ್ಳಿ ರಾಯಣ್ಣನ ಸಾಹಸ ಗಾಥೆಯನ್ನು ಬೆಳ್ಳಿತೆರೆಯ ಮೇಲೆ ಅನಾವರಣಗೊಳಿಸಲಾದ ಚಿತ್ರ 'ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' 2012ರಲ್ಲಿ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಂಡಿತ್ತು.
ಕಿಚ್ಚ ಸುದೀಪ್ ಅವರು ನಿರೂಪಣೆ ಮಾಡಿದ್ದ ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬ್ರಿಟೀಷರ ವಿರುದ್ದ ತೊಡೆತಟ್ಟಿ ನಿಂತ ಕೆಚ್ಚೆದೆಯ ವೀರ ಯೋಧ ಸಂಗೊಳ್ಳಿ ರಾಯಣ್ಣನಾಗಿ ಅಬ್ಬರಿಸಿದ್ದರು. ಹಿರಿಯನಟಿ ಜಯಪ್ರದ ಅವರು ಕಿತ್ತೂರು ರಾಣಿ ಚನ್ನಮ್ಮನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಉತ್ತರ ಕರ್ನಾಟಕದ ಆನಂದ್ ಬಿ.ಅಪ್ಪುಗೋಳ್ ಅವರು ಈ ಚಿತ್ರವನ್ನು ಬಿಗ್ ಬಜೆಟ್ ನಲ್ಲಿ ಅದ್ದೂರಿಯಾಗಿ ನಿರ್ಮಿಸಿದ್ದ ಈ ಚಿತ್ರಕ್ಕೆ ನಿರ್ದೇಶಕ ನಾಗಣ್ಣ ಅವರು ಆಕ್ಷನ್ ಕಟ್ ಹೇಳಿದ್ದರು. ಫಿಲಂ ಫೇರ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳನ್ನು ಸಹ ಈ ಚಿತ್ರ ತನ್ನದಾಗಿಸಿಕೊಂಡಿತ್ತು.
ಇದೀಗ ಅದೇ ಚಿತ್ರ ಆಧುನಿಕ ತಂತ್ರಜ್ಞಾನ ಸ್ಪರ್ಷದೊಂದಿಗೆ ನವೆಂಬರ್ 22 ರಂದು ಮರುಬಿಡುಗಡೆಯಾಗುತ್ತಿದೆ. ಇತಿಹಾಸ ನಿರ್ಮಿಸಿದ
ಇಂಥ ಎಪಿಕ್ ಸ್ಟೋರಿಯನ್ನು ಎಸ್.ಜಿ.ಕೆ. ಫಿಲಂಸ್ ಮೂಲಕ ಕೆ.ಬಸವರಾಜ್ ಅವರು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿದ್ದಾರೆ. ಸ್ವಾಭಿಮಾನದ ಕಿಚ್ಚು ಹೆಚ್ಚಿಸುವ ಈ ವೀರಸೇನಾನಿಯ ಕಥೆಯನ್ನು ಮಾಡ್ರನ್ ಟೆಕ್ನಾಲಜಿಯ ಸ್ಪರ್ಷದೊಂದಿಗೆ ದರ್ಶನ್ ಅಭಿಮಾನಿಗಳು ಕಣ್ತುಂಬಿಕೊಳ್ಳುವ ಅವಕಾಶ ಮತ್ತೊಮ್ಮೆ ಲಭಿಸಿದೆ. ವಿಶೇಷವಾಗಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಮಂದಿರದ ಪ್ರವೇಶ ದರದಲ್ಲಿ 50% ರಿಯಾಯಿತಿ ಇರುತ್ತದೆ.
ಬೆಡಗಿ ನಿಖಿತಾ ತುಕ್ರಾಲ್ ಈ ಚಿತ್ರದ ನಾಯಕಿಯಾಗಿ ನಟಿಸಿದ್ದು, ಶಶಿಕುಮಾರ್, ಮಾಳವಿಕ ಅವಿನಾಶ್, ರಮೇಶ್ ಭಟ್, ದೊಡ್ಡಣ್ಣ, ಶ್ರೀನಿವಾಸ ಮೂರ್ತಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಕೇಶವಾದಿತ್ಯ ಅವರ ಚಿತ್ರಕಥೆ ಹಾಗೂ ಸಂಭಾಷಣೆ, ರಮೇಶ್ ಬಾಬು ಅವರ ಛಾಯಾಗ್ರಹಣ, ಯಶೋವರ್ಧನ್, ಹರಿಕೃಷ್ಣ ಅವರ ಸಂಗೀತ ಸಂಯೋಜನೆ, ದೀಪು ಅವರ ಸಂಕಲನ, ರವಿವರ್ಮ, ಪಳನಿರಾಜ್ ಅವರ ಸಾಹಸ ಸಂಯೋಜನೆ ಈ ಚಿತ್ರಕ್ಕಿದೆ.