ಗುವಾಹಟಿ:ಮುಸ್ಲಿಂ ಜನರ ವಿವಾಹ ಮತ್ತು ವಿಚ್ಛೇದನದ ಕಡ್ಡಾಯ ಸರ್ಕಾರಿ ನೋಂದಣಿಗೆ ಅಸ್ಸಾಂ ಸರ್ಕಾರ ಮುಂಬರುವ ಶರತ್ಕಾಲದ ಅಧಿವೇಶನದಲ್ಲಿ ಮಸೂದೆಯನ್ನು ಮಂಡಿಸಲಿದೆ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.
ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಶರ್ಮಾ, ಗುರುವಾರ ಪ್ರಾರಂಭವಾಗಲಿರುವ ಮುಂಬರುವ ಅಧಿವೇಶನದಲ್ಲಿ ಸರ್ಕಾರವು ಅಸ್ಸಾಂ ಕಡ್ಡಾಯ ಮುಸ್ಲಿಂ ವಿವಾಹ ಮತ್ತು ವಿಚ್ಛೇದನ ಮಸೂದೆ, 2024 ಅನ್ನು ಮಂಡಿಸಲಿದೆ ಎಂದು ಹೇಳಿದರು.”ಹಿಂದೆ, ಮುಸ್ಲಿಂ ವಿವಾಹಗಳನ್ನು ಕಾಜಿಗಳು ನೋಂದಾಯಿಸುತ್ತಿದ್ದರು. ಆದರೆ, ಈ ಹೊಸ ಮಸೂದೆಯು ಎಲ್ಲಾ ಸಮುದಾಯದ ವಿವಾಹಗಳನ್ನು ಸರ್ಕಾರದಲ್ಲಿ ನೋಂದಾಯಿಸುವುದನ್ನು ಖಚಿತಪಡಿಸುತ್ತದೆ” ಎಂದು ಅವರು ಹೇಳಿದರು.
ಅಪ್ರಾಪ್ತ ವಯಸ್ಕರ ವಿವಾಹಗಳನ್ನು ಸಹ ಕಾಜಿಗಳು ಮೊದಲೇ ನೋಂದಾಯಿಸಿದ್ದರು, ಆದರೆ ಪ್ರಸ್ತಾವಿತ ಮಸೂದೆಯು ಅಂತಹ ಯಾವುದೇ ಕ್ರಮವನ್ನು ನಿಷೇಧಿಸುತ್ತದೆ ಎಂದು ಶರ್ಮಾ ಹೇಳಿದ್ದಾರೆ.ಈಗ ಅಪ್ರಾಪ್ತ ವಿವಾಹ ನೋಂದಣಿಯೇ ಆಗುವುದಿಲ್ಲ.ಬಾಲ್ಯವಿವಾಹದ ಪಿಡುಗನ್ನು ಕೊನೆಗಾಣಿಸಲು ನಾವು ಬಯಸುತ್ತೇವೆ.
ಹೀಗಾಗಿ ಸಬ್ ರಿಜಿಸ್ಟ್ರಾರ್ ಕಛೇರಿಯಲ್ಲಿ ವಿವಾಹಗಳನ್ನು ನೋಂದಣಿ ಮಾಡಲಾಗುವುದು ಎಂದು ಸಚಿವ ಸಂಪುಟದ ನಿರ್ಧಾರಗಳನ್ನು ಉಲ್ಲೇಖಿಸಿ ಅವರು ತಿಳಿಸಿದರು. ಮದುವೆ ಸಮಾರಂಭಗಳಲ್ಲಿ ಮುಸ್ಲಿಮರು ಅನುಸರಿಸುವ ಆಚರಣೆಗಳಿಗೆ ಯಾವುದೇ ನಿರ್ಬಂಧವಿಲ್ಲ, ಆದರೆ ಕಾಜಿಗಳ ನೋಂದಣಿಯನ್ನು ಮಾತ್ರ ನಿರ್ಬಂಧಿಸಲಾಗಿದೆ ಎಂದು ಶರ್ಮಾ ಹೇಳಿದರು.