ರಾಜ್ಯ ಸರ್ಕಾರದಲ್ಲಿ ಆಡಳಿತ ಕೆಲಸದಲ್ಲಿ ಪ್ರಮುಖ ಪಾತ್ರ ವಹಿಸೋದು ಅಧಿಕಾರಿ ವರ್ಗ ಎನ್ನಬಹುದು. ಇದೇ ಕಾರಣಕ್ಕೆ ಐಎಎಸ್ ಅಧಿಕಾರಿಗಳು ಹಾಗು ಕೆಎಎಸ್ ಅಧಿಕಾರಿಗಳು ಎಂದು ವರ್ಗೀಕರಿಸಲಾಗುತ್ತದೆ. ಕೇಂದ್ರ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗುವ ಅಧಿಕಾರಿಗಳು, ಭಾರತೀಯ ನಾಗರಿಕ ಸೇವೆಗೆ ಬರುತ್ತಾರೆ. ಕರ್ನಾಟಕ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗುವ ಅಧಿಕಾರಿಗಳು ಕರ್ನಾಟಕ ಸೇವೆಗೆ ಆಯ್ಕೆಯಾಗುತ್ತಾರೆ. ಭಾರತೀಯ ಲೋಕಸೇವಾ ಆಯೋಗದಲ್ಲಿ ಬರುವ ಅಧಿಕಾರಿಗಳು ಜಿಲ್ಲಾ ಮಟ್ಟದ ಅಧಿಕಾರಿಗಳು, ಪ್ರಮುಖ ಸಂಸ್ಥೆಗಳ ನಿರ್ದೇಶಕರು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಆಗುತ್ತಾರೆ. ಆದರೆ ಕರ್ನಾಟಕ ಸೇವೆಗೆ ಬರುವ ಅಧಿಕಾರಿಗಳು ತಾಲೂಕು ಹಾಗು ಜಿಲ್ಲಾ ಮಟ್ಟದಲ್ಲಿ IAS, IPS ಅಧಿಕಾರಿಗಳ ಕೈಕೆಳಗೆ ಕೆಲಸ ಮಾಡುತ್ತಾರೆ. ಇದು ನಿಯಮ. ಕೆಲವೊಮ್ಮೆ ರಾಜ್ಯ ಲೋಕಸೇವಾ ಆಯೋಗದ ಮೂಲಕ ಆಯ್ಕೆಯಾಗುವ ಅಧಿಕಾರಿಗಳಿಗೆ ಪ್ರಮೋಷನ್ ಮೂಲಕ IAS, IPS ಗ್ರೇಡ್ ಕೊಡುವ ಅವಕಾಶವಿದೆ. ಆದರೆ ಕರ್ನಾಟಕದಲ್ಲಿ ಪ್ರಮೋಷನ್ ಕೊಡದೆಯೂ IAS ಅಧಿಕಾರಿಗಳಿಗೆ ನೀಡುವ ಪೋಸ್ಟ್ ನೀಡಲಾಗಿದೆ.

ಚಿದಾನಂದ ಸದಾಶಿವಾ ವಟಾರೆಗೆ IAS ಸಮನಾದ ಹುದ್ದೆ..!
ಕಾಂಗ್ರೆಸ್ ಸರ್ಕಾರದಲ್ಲಿ ಜೂನ್ 30ರಂದು ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ. ಶಿವಮೊಗ್ಗದ ಸ್ಮಾರ್ಟ್ ಸಿಟಿ ಲಿಮಿಟೆಡ್ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಚಿದಾನಂದ ಸದಾಶಿವ ವಟಾರೆ ಅವರನ್ನು ವರ್ಗಾವಣೆ ಮಾಡಲಾಗಿದೆ. ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತಕ್ಕೆ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ವರ್ಗಾವಣೆ ಮಾಡಲಾಗಿದೆ. ಆದರೆ ಈ ಹಿಂದೆ ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತಕ್ಕೆ ವ್ಯವಸ್ಥಾಪಕ ನಿರ್ದೇಶಕರಾಗಿ ನಿಯೋಜನೆಗೊಂಡಿದ್ದು, ಕೇವಲ ಐಎಎಸ್ ಅಧಿಕಾರಿಗಳು. ಆದರೆ ಇದೀಗ ಕೆಎಎಸ್ ಅಧಿಕಾರಿ ಆಗಿರುವ ಚಿದಾನಂದ ಸದಾಶಿವ ವಟಾರೆ ಅವರನ್ನು ನೇಮಕ ಮಾಡಲಾಗಿದೆ. ಇದು ಯಾವ ಉದ್ದೇಶ ಅಥವಾ ಏನು ಕಾರಣ ಅನ್ನೋದು ಸ್ವತಃ ಅಧಿಕಾರಿಗಳ ವರ್ಗಕ್ಕೂ ತಿಳಿಯದ ನಿಗೂಢ ಆಗಿದೆ. ಕೆಎಎಸ್ ಅಧಿಕಾರಿಗಳನ್ನು ನೇಮಿಸುವುದಾಗಿದ್ದರೂ ಸಾಕಷ್ಟು ಅಧಿಕಾರಿಗಳು ಇದ್ದರೂ ಎನ್ನುವ ಮಾತು ಅಧಿಕಾರಿಗಳ ವರ್ಗದಲ್ಲಿ ಕೇಳಿ ಬರುತ್ತಿದೆ.

ಈ ಹಿಂದೆ ಯಾವೆಲ್ಲಾ ಅಧಿಕಾರಿಗಳು ನೇಮಕ ಆಗಿದ್ದರು..?
ಕರ್ನಾಟಕ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ನಿಯಮಿತ ವ್ಯವಸ್ಥಾಪಕ ನಿರ್ದೇಶಕರಾಗಿ ಈ ಹಿಂದೆ ಮಂಜುಶ್ರೀ IAS, ಲತಾ ಕುಮಾರಿ IAS, ನಾಗರಾಜ್ IAS, ಸೋಮಶೇಖರ್ IAS, ರಂಗಪ್ಪ IAS ಸೇರಿದಂತೆ ಸಾಕಷ್ಟು ಅಧಿಕಾರಿಗಳು ಕೆಲಸ ಮಾಡಿದ್ದಾರೆ. ಆದರೆ ಇದೀಗ ಕೆಎಎಸ್ ಅಧಿಕಾರಿ ಚಿದಾನಂದ ಸದಾಶಿವಾ ವಟಾರೆ ನೇಮಿಸಿದ ಉದ್ದೇಶ ಏನು ಎನ್ನುವ ಪ್ರಶ್ನೆ ಕೇಳಿ ಬರುತ್ತಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರದ ಅಸ್ತಿತ್ವಕ್ಕೆ ಬಂದ ಬಳಿಕ ವರ್ಗಾವಣೆ ವ್ಯವಹಾರ ನಡೆಯುತ್ತಿದೆ ಎನ್ನುವ ಆರೋಪ ಕೇಳಿ ಬರುತ್ತಿರುವ ಹೊತ್ತಿನಲ್ಲಿ ಉನ್ನತ ಮಟ್ಟದ ಹುದ್ದೆಗೆ ಐಎಎಸ್ ಅಧಿಕಾರಿ ನೇಮಿಸುವ ಬದಲು ಕೆಎಎಸ್ ಅಧಿಕಾರಿ ನೇಮಿಸಿದ್ದು, ಸಾಕಷ್ಟು ಅನುಮಾನಗಳಿಗೂ ಕಾರಣ ಆಗುತ್ತಿದೆ. ಇದಕ್ಕೆ ಕಾರಣ ಏನು ಅನ್ನೋದನ್ನು ಬಲ್ಲವರೇ ಹೇಳಬೇಕು. ಕೆಎಎಸ್ ಅಧಿಕಾರಿ ನೇಮಿಸುವುದಾದರೆ ಪ್ರಮೋಷನ್ ಆದರೂ ಕೊಡಬೇಕಿತ್ತು ಅಲ್ಲವೇ..?
ಕೃಷ್ಣಮಣಿ