ಸ್ಯಾಂಡಲ್ವುಡ್ ಹಿರಿಯ ನಟ, ಕಲಿಯುಗ ಕರ್ಣ ಅಂಬರೀಶ್ 72ನೇ ಹುಟ್ಟುಹಬ್ಬವನ್ನು ಅಭಿಮಾನಿಗಳು ಮತ್ತು ಕುಟುಂಬ ಬೆಂಗಳೂರಿನ ಕಂಠೀರವ ಸ್ಟುಡಿಯೋದ ಅಂಬಿ ಸಮಾಧಿ ಬಳಿ ಆಚರಿಸಿದರು. ಅಂಬರೀಶ್ ಅವರ ಸಮಾಧಿಗೆ ಪೂಜೆ ಸಲ್ಲಿಸುವ ಮೂಲಕ ಹುಟ್ಟು ಹಬ್ಬವನ್ನು ಆಚರಿಸಲಾಯಿತು. ಅಂಬರೀಶ್ ಸಮಾಧಿ ಬಳಿ ಆಗಮಿಸಿದ ಸುಮಲತಾ ಅಂಬರೀಶ್, ಅಭಿಷೇಕ್ ಅಂಬರೀಶ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಮತ್ತು ಅಸಂಖ್ಯಾತ ಅಭಿಮಾನಿಗಳು ಸಮಾಧಿಗೆ ಪೂಜೆ ಸಲ್ಲಿಸಿದರು. ಪುಟ್ಟಣ್ಣ ಕಣಗಾಲರ ಶಿಷ್ಯ ಅಂಬರೀಶ್ ಮೊದಲು ನಾಗರಹಾವು ಚಿತ್ರದಲ್ಲಿ ನಟಿಸಿದ್ರು. ಜಲೀಲನ ಪಾತ್ರದ ಮೂಲಕ ಇಡೀ ನಾಡಿನ ಜನತೆಯ ಹೃದಯ ಗೆದ್ದರು.
1952 ಮೇ 29ರಂದು ಮಂಡ್ಯದ ದೊಡ್ಡರಸಿನಕೆರೆಯಲ್ಲಿ ಹುಟ್ಟಿದ ಅಮರ್ನಾಥ್ ಬಳಿಕ ಅಂಬರೀಶ್ ಆಗಿ ಚಿತ್ರರಂಗಕ್ಕೆ ಪರಿಚಿತರಾಗಿದ್ದರು. ಒಂದಷ್ಟು ಸಿನಿಮಾಗಳಲ್ಲಿ ನಟಿಸಿದರು ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಚಿತ್ರದ ಜಲೀಲನ ಪಾತ್ರ ಬ್ರೇಕ್ ಕೊಟ್ಟಿತ್ತು. ಮೊದಲಿಗೆ ಸಣ್ಣ ಪುಟ್ಟ ಪಾತ್ರಗಳಲ್ಲಿ ನೆಗೆಟಿವ್ ರೋಲ್ಗಳಲ್ಲಿ ನಟಿಸಿದ ಅಂಬಿ ಬಳಿಕ ಹೀರೊ ಆಗಿ ಎಂಟ್ರಿ ಕೊಟ್ಟರು. ರೆಬಲ್ ಪಾತ್ರಗಳ ಮೂಲಕ ಪ್ರೇಕ್ಷಕರನ್ನು ರಂಜಿಸಿದ್ದರು. ತೆರೆಮೇಲೆ ಮಾತ್ರವಲ್ಲದೇ ನಿಜ ಜೀವನದಲ್ಲೂ ತಮ್ಮ ರೆಬಲ್ ಗುಣದಿಂದ ಎಲ್ಲರಿಗೂ ಆಪ್ತರಾಗಿದ್ದರು. ‘ಅಂತ’, ‘ಚಕ್ರವ್ಯೂಹ’, ‘ಮಂಡ್ಯದ ಗಂಡು’, ‘ಒಡಹುಟ್ಟಿದವರು’ ರೀತಿಯ ಹಿಟ್ ಸಿನಿಮಾಗಳಲ್ಲಿ ನಟಿಸಿದರು.