ಸಿಎಂ ಬಸವರಾಜ್ ಬೊಮ್ಮಾಯಿ ಸಂಪುಟ ರಚನೆ ಮಾಡಿದ್ದ ದಿನದಿಂದಲೂ ಇಂದಿನವರೆಗೂ ರಾಜ್ಯ ಬಿಜೆಪಿಯಲ್ಲಿ ಅಸಮಾಧಾನದ ಹೊಗೆಯಾಡುತ್ತಲೇ ಇದೆ. ಬಿಜೆಪಿ ಹಿರಿಯ ನಾಯಕ ಬಿ. ಶ್ರೀರಾಮುಲು, ಎಂ.ಟಿ.ಬಿ ನಾಗರಾಜ್, ಆನಂದ್ ಸಿಂಗ್, ಸಿ.ಪಿ ಯೋಗೇಶ್ವರ್ ಸೇರಿದಂತೆ ಹಲವರು ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಇನ್ನೊಂದೆಡೆ ಮೈಸೂರು ಶಾಸಕ ಎಸ್.ಎ ರಾಮದಾಸ್ ಕೂಡ ತನಗೆ ಮಂತ್ರಿ ಸ್ಥಾನ ನೀಡುವಂತೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ.
ಕುತೂಹಲಕಾರಿ ಬೆಳವಣಿಗೆಯಲ್ಲಿ ಬೆಂಗಳೂರಿನ ಆರ್.ಟಿ ನಗರದ ನಿವಾಸದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಅವರನ್ನು ಭೇಟಿ ಮಾಡಿದ ರಾಮದಾಸ್ ಮುಚ್ಚಿದ ಲಕೋಟೆಯಲ್ಲಿ ಪತ್ರವೊಂದನ್ನು ನೀಡಿದ್ದಾರೆ. ಆರಂಭದಿಂದಲೂ ಸಚಿವ ಸ್ಥಾನ ಕೈತಪ್ಪಿದ್ದಕ್ಕೆ ಬಹಿರಂಗವಾಗಿಯೇ ಬೇಸರ ವ್ಯಕ್ತಪಡಿಸುತ್ತಾ ಬಂದಿರುವ ರಾಮದಾಸ್, ಮುಚ್ಚಿದ ಲಕೋಟೆಯಲ್ಲಿ ನನ್ನ ಕೆಲಸದ ಅನುಭವಗಳ ಪಟ್ಟಿ ಇದೆ. ಸಮಯ ಇರುವಾಗ ಓದಿ ಎಂದು ಸಿಎಂಗೆ ಹೇಳಿ ಬಂದಿದ್ದಾರೆ. ಇದು ಇನ್ನಷ್ಟು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
ಒಂದೆಡೆ ಬಸವರಾಜ ಬೊಮ್ಮಾಯಿ ಆನಂದ್ ಸಿಂಗ್, ಎಂ.ಪಿ ಕುಮಾರಸ್ವಾಮಿ, ಪೂರ್ಣಿಮಾ ಶ್ರೀನಿವಾಸ್, ಆರ್. ಶಂಕರ್ ಮನವೊಲಿಸುತ್ತಾ ಬಂದಿದ್ದಾರೆ. ಈಗ ಸಿ.ಪಿ ಯೋಗೇಶ್ವರ್ ಜತೆಗೆ ಮಾತುಕತೆ ನಡೆಸಿದ್ದಾರೆ. ಅದೇ ರೀತಿ ರಾಮದಾಸ್ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡ್ತಿದ್ದಾರೆ. ಇದಕ್ಕೆ ಜಗ್ಗದ ರಾಮದಾಸ್ ಮುಚ್ಚಿದ ಲಕೋಟೆಯಲ್ಲಿ ಪತ್ರವೊಂದು ಕೊಟ್ಟು ಬಂದಿದ್ದಾರೆ. ರಾಜ್ಯ ಮತ್ತು ಪಕ್ಷದ ಹಿತದೃಷ್ಟಿಯಿಂದ ಕೆಲವು ವಿಚಾರಗಳನ್ನು ಬೊಮ್ಮಾಯಿ ಜತೆ ಚರ್ಚೆ ಮಾಡಿದ್ದಾರೆ ಎನ್ನಲಾಗಿದೆ.
ನಾನು ನಿಮ್ಮನ್ನು ಎರಡು ಬಾರಿ ಭೇಟಿ ಮಾಡಿದ್ದೇನೆ. ಆದರೆ, ಮಾಧ್ಯಮಗಳ ಮುಂದೆ ಯಾವ ವಿಚಾರಕ್ಕಾಗಿ ನಿಮ್ಮನ್ನು ಭೇಟಿ ಮಾಡಿದ್ದೇನೆ ಎಂದು ಹೇಳಿಕೆ ಕೊಟ್ಟಿಲ್ಲ. ನಾನೇನೂ ಸಚಿವ ಸ್ಥಾನಕ್ಕಾಗಿ ಲಾಬಿ ಮಾಡ್ತಿಲ್ಲ. ಯಾವುದೇ ಅಸಮಾಧಾನವೂ ಇಲ್ಲ. ಒಬ್ಬ ಕಾರ್ಯಕರ್ತನಾಗಿ ಬಿಜೆಪಿಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ಕ್ಷೇತ್ರದ ಜನರ ಆಸೆಯನ್ನು ಈಡೇರಿಸುವುದಕ್ಕಾದರೂ ನನ್ನನ್ನು ಮಂತ್ರಿ ಮಾಡಿ ಎಂದು ರಾಮದಾಸ್ ಬೊಮ್ಮಾಯಿಗೆ ಮನವಿ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ
ಬೊಮ್ಮಾಯಿ ಜೊತೆ ರಾಮದಾಸ್ ಚರ್ಚಿಸಿದ ಅಂಶಗಳೇನು?
- ಜಾತಿಯಾಧಾರಿತ ರಾಜಕಾರಣ ಮನಸ್ಸಿಗೆ ಘಾಸಿಯನ್ನುಂಟು ಮಾಡಿದೆ
- ಕೆಲವೊಂದು ವಿಚಾರವನ್ನ ಗಮನಕ್ಕೆ ತರಬೇಕೆಂಬ ಸದುದ್ದೇಶದಿಂದ ಪತ್ರ ಬರೆದಿದ್ದೇನೆ
- ಉತ್ತರ ಕರ್ನಾಟಕ ಭಾಗಕ್ಕೆ ಅಗತ್ಯ ಎಲ್ಲಾ ರೀತಿ ಪ್ರಾತಿನಿಧ್ಯತೆ ನೀಡಿದ್ದೀರಿ
- ಪ್ರಾತಿನಿಧ್ಯತೆ ನೀಡಿರೋ ಬಗ್ಗೆ ನನ್ನದು ಯಾವುದೇ ಆಕ್ಷೇಪಣೆಗಳು ಇಲ್ಲ
- 2018ರ ಚುನಾವಣೆಯಲ್ಲಿ, ಹಳೆ ಮೈಸೂರು ಭಾಗಕ್ಕೆ ಆಸಕ್ತಿ ನೀಡಿರಲಿಲ್ಲ
- ಬೆಂಗಳೂರು ನಗರ ಜಿಲ್ಲೆಯನ್ನು ಹೊರತುಪಡಿಸಿ ಬೇರೆಡೆ ಗಮನ ನೀಡಲಿಲ್ಲ
- ಗಮನ ನೀಡದಿದ್ದರ ಪರಿಣಾಮ ಏನಾಯ್ತು? ಎಂಬುದು ಈಗ ಇತಿಹಾಸ
- ಹಿಂದಿನ ಯಡವಟ್ಟು ಸರಿಪಡಿಸಿಕೊಳ್ಳುವ ವಾತಾವರಣ ನಿಮ್ಮ ಮುಂದಿದೆ
- ಹಳೆ ಮೈಸೂರು ಭಾಗದ ಜಿಲ್ಲೆಗಳಲ್ಲಿ, ಒಕ್ಕಲಿಗರ ಮತ ನಿರ್ಣಾಯಕ
- ಬಿಜೆಪಿಗೆ ವೀರಶೈವ-ಲಿಂಗಾಯತ ಸಮುದಾಯದ ಬೆಂಬಲ ನೀಡುತ್ತಿದೆ
- ಲಿಂಗಾಯತ ಸಮುದಾಯದಂತೆ ಬ್ರಾಹ್ಮಣ ಸಮಾಜ ಪಕ್ಷದ ಜೊತೆಗಿದೆ
- ಹೀಗಾಗಿ ಬ್ರಾಹ್ಮಣ ಸಮುದಾಯಕ್ಕೂ ಪ್ರಾತಿನಿಧ್ಯತೆಯ ಅವಶ್ಯಕತೆ ಇದೆ
- ನಾನು ಬ್ರಾಹ್ಮಣ ಸಮುದಾಯವನ್ನೇ ಪ್ರತಿನಿಧಿಸುವುದು ಎಂದು ಉಲ್ಲೇಖ
- ಮೈಸೂರು ಜಿಲ್ಲೆಗೆ ಅಂಟಿಕೊಂಡ ಯಾವ ಜಿಲ್ಲೆಗೂ ಸಂಪುಟ ಸ್ಥಾನ ಸಿಕ್ಕಿಲ್ಲ
- ಬ್ರಾಹ್ಮಣ ಸಮುದಾಯದ ಬಿ.ಸಿ. ನಾಗೇಶ್ಗೆ ಸ್ಥಾನ ಸಿಕ್ಕಿರೋದು ಸಂತಸ
- ತುಮಕೂರಿಗೆ 2 ಸ್ಥಾನದ ಬದಲು ಒಂದು ಮೈಸೂರಿಗೆ ನೀಡಬಹುದಿತ್ತು
- ಬ್ರಾಹ್ಮಣ ಸಮುದಾಯದಿಂದ ಮೈಸೂರು ಜಿಲ್ಲೆಗೆ ಪ್ರಾತಿನಿಧ್ಯತೆ ನೀಡಬಹುದಿತ್ತು
- ನಾನು ಸಂಘ ಪರಿವಾರದ ಹಿನ್ನೆಲೆಯುಳ್ಳವಾಗಿದ್ದೇನೆ ಎಂದು ಉಲ್ಲೇಖ
- ನನ್ನನ್ನ ಆಯ್ಕೆ ಮಾಡಿದ್ದರೇ, ಈ ಭಾಗದಲ್ಲಿ ಪಕ್ಷ ಸಂಘಟನೆಗೂ ನೆರವು
- ಈ ನಡೆಯಿಂದ ವಿವಿಧ ಸಮುದಾಯಕ್ಕೆ ತಪ್ಪು ಸಂದೇಶ ರವಾನೆ ಬೇಡ
- ಉಳಿದ 4 ಸ್ಥಾನಗಳಲ್ಲಿ ಹಳೆ ಮೈಸೂರು ಭಾಗಕ್ಕೆ ಪ್ರಾತಿನಿಧ್ಯತೆ ಸಿಗಲಿ
- 2018 ರಲ್ಲಿ ಮಾಡಿಕೊಂಡ ತಪ್ಪು ಮತ್ತೊಮ್ಮೆ ಮರುಕಳುಹಿಸದೇ ಇರಲಿ
- ನಾನು ಪಕ್ಷದ ಶಿಸ್ತಿನ ಸಿಪಾಯಿ. ಆರ್ಎಸ್ಎಸ್ನ ಕಟ್ಟಾ ಅನುಯಾಯಿ
- ನಿಮ್ಮನ್ನು ಮೀರಿ, ನಾನು ಹೈಕಮಾಂಡ್ ನಾಯಕರನ್ನು ಭೇಟಿಯಾಗಿಲ್ಲ
- ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ಭಾಗಿ ಕೆಲಸ ಮಾಡಿಲ್ಲ, ಮಾಡಲ್ಲ
- ಹೀಗಾಗಿ ಹಳೆ ಮೈಸೂರು ಭಾಗ ಕಡೆಗಣನೆಯಾಗುವುದು ಬೇಡ
- ಮತ್ತೆ ನಮ್ಮ ಪಕ್ಷ ಅಧಿಕಾರಕ್ಕೆ ಬರಬೇಕೆಂದರೆ, ಪ್ರಾತಿನಿಧ್ಯತೆ ಸಿಗಬೇಕು
- ಮೈಸೂರು ಭಾಗದ ಪ್ರಾತಿನಿಧ್ಯತೆ ಸಿಗಲೇಬೇಕೆಂದು ಪತ್ರದಲ್ಲಿ ಉಲ್ಲೇಖ
- ಸಂಪುಟ ವಿಸ್ತರಣೆ ವೇಳೆ ನಿಮ್ಮಿಂದ ಉತ್ತರ ಸಿಗುತ್ತೆಂದು ಭಾವಿಸುವೆ