ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯ ಕಾಂಗ್ರೆಸ್ ಅನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ.
ನಿಗಮ, ಮಂಡಳಿ ಅಧ್ಯಕ್ಷರು ಗಳ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಸುಮಾರು 20 ಕ್ಕೂ ಹೆಚ್ಚು ಹಿರಿಯ ಶಾಸಕರಿಗೆ ನಿಗಮ ಮಂಡಳಿ ಭಾಗ್ಯ ಒಲಿಯಲಿದೆ ಎಂದು ಪಕ್ಷದ ಮೂಲಗಳು ತಿಳಿಸಿದೆ.
ಕಾಂಗ್ರೆಸ್ ಹೈಕಮಾಂಡ್ ಜೊತೆ ಅಂತಿಮ ಹಂತದ ಮಾತುಕತೆ ನಡೆದಿದ್ದು, ರಾಜ್ಯ ನಾಯಕರ ನಿರ್ಧಾರ ಕ್ಕೆ ದೆಹಲಿ ನಾಯಕರು ಅಸ್ತು ಎಂದಿದ್ದಾರೆ.
ಶುಕ್ರವಾರ ಸುಮಾರು ನಾಲ್ಕು ತಾಸುಗಳ ಕಾಲ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಚರ್ಚಿಸಿ ಒಮ್ಮತಕ್ಕೆ ಬಂದಿದ್ದು, ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಶಾಸಕರಿಗೆ ಆಯಕಟ್ಟಿನ ನಿಗಮ, ಮಂಡಳಿಗಳಲ್ಲಿ ನಾಮ ನಿರ್ದೇಶನ ಮಾಡಲು ನಿರ್ಧರಿಸಿದ್ದಾರೆ.
ಮೈಸೂರಿನ ಎಚ್ ಡಿ ಕೋಟೆ ಶಾಸಕ ಅನಿಲ್ ಚಿಕ್ಕ ಮಾದು ಅವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ ಎಂದು ಹೇಳಲಾಗಿದೆ. ಕೊಳ್ಳೆಗಾಲ ಶಾಸಕ ಎ ಆರ್ ಕೃಷ್ಣ ಮೂರ್ತಿ, ಮಳವಳ್ಳಿ ಶಾಸಕ ನರೇಂದ್ರ ಸ್ವಾಮಿಗೆ ಕೂಡಾ ಅಧ್ಯಕ್ಷ ಸ್ಥಾನ ಸಿಗಲಿದೆ ಎನ್ನಲಾಗಿದೆ.
ನವಲಗುಂದ ಶಾಸಕ ಕೋನರೆಡ್ಡಿ, ಜಗಳೂರು ಶಾಸಕ ದೇವೇಂದ್ರಪ್ಪ, ಶಿವಾನಂದ ಕೌಜಲಗಿ, ಅಪ್ಪಾಜಿ ನಾಡಗೌಡ, ಅಲ್ಲಮ ಪ್ರಭು ಪಾಟೀಲ್, ಪ್ರಿಯಕೃಷ್ಣ, ಬಸವನಗೌಡ ದದ್ದಲ್, ಚಳ್ಳಕೆರೆ ಶಾಸಕ ರಘುಮೂರ್ತಿ, ತಿಪಟೂರು ಶಾಸಕ ಕೆ. ಷಡಕ್ಷರಿ, ಶಿವಲಿಂಗೇಗೌಡ, ಅಶೋಕ್ ಪಟ್ಟಣ, ಬಸವರಾಜ್ ರಾಯರೆಡ್ಡಿ, ಯಶವಂತರಾಯಗೌಡ ಪಾಟೀಲ, ಭೀಮಣ್ಣ ನಾಯ್ಕ್, ನೆಲಮಂಗಲ ಶಾಸಕ ಶ್ರೀನಿವಾಸ, ತರೀಕೆರೆ ಶಾಸಕ ಶ್ರೀನಿವಾಸ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ಯು.ಬಿ. ಬಣಕಾರ್ ಹಾಗೂ ಕುಣಿಗಲ್ ಶಾಸಕ ಡಾ. ರಂಗನಾಥ್ ಸೇರಿದಂತೆ ಹಲವರಿಗೆ ಅವಕಾಶ ಸಿಗುವ ಸಾಧ್ಯತೆ ದಟ್ಟವಾಗಿದೆ.
ಲೋಕಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹೆಚ್ಚು ಅನುಕೂಲವಾಗುವಂತೆ ನಿಗಮ, ಮಂಡಳಿಗಳಲ್ಲಿ ಹೆಚ್ಚಿನ ಸ್ಥಾನಗಳನ್ನು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ನೀಡಬೇಕೆಂಬ ಬೇಡಿಕೆಯನ್ನು ಡಿಕೆಶಿ ಮುಂದಿಟ್ಟಿದ್ದರು. ಆದರೆ, ಚುನಾವಣೆ ಸಂದರ್ಭದಲ್ಲಿ ಶಾಸಕರು ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕದಂತೆ ತಡೆಯಲು ಅವರಿಗೆ ಸ್ಥಾನಮಾನ ನೀಡುವುದು ಉತ್ತಮ ಎಂದು ಸಿಎಂ ಸಿದ್ದರಾಮಯ್ಯ ಅವರು ಮನವೊಲಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಜತೆ ಡಿಕೆ ಶಿವಕುಮಾರ್ ಅವರು ನಿಗಮ, ಮಂಡಳಿ ನೇಮಕಾತಿ ಕುರಿತು ಚರ್ಚೆ ನಡೆಸಿದ್ದರು. ಸಿಎಂ ಸಿದ್ದರಾಮಯ್ಯ ಮತ್ತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಜತೆ ಚರ್ಚಿಸಿ ಅಂತಿಮ ತೀರ್ಮಾನಕ್ಕೆ ಬರುವಂತೆ ಖರ್ಗೆ ಮತ್ತು ವೇಣುಗೋಪಾಲ್ ಸೂಚಿಸಿದ್ದರು.
ಸದ್ಯ ಸುರ್ಜೇವಾಲಾ ಅವರು ಮಧ್ಯಪ್ರದೇಶ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿದ್ದಾರೆ. ಅವರ ಜತೆ ಚರ್ಚಿಸಿದ ಬಳಿಕ ನಿಗಮ, ಮಂಡಳಿಗಳ ನೇಮಕಾತಿ ಪಟ್ಟಿ ಪ್ರಕಟವಾಗುವ ಸಾಧ್ಯತೆ ಇದೆ.
ಪ್ರಾದೇಶವಾರು, ಜಾತಿವಾರು ಪ್ರಾತಿನಿಧ್ಯಗಳನ್ನು ನಿಗಮ, ಮಂಡಳಿಗಳ ನೇಮಕಾತಿಯಲ್ಲೂ ನೀಡಲು ನಿರ್ಧರಿಸಲಾಗಿದ್ದು, ಆ ಮೂಲಕ ಲೋಕಸಭಾ ಚುನಾವಣೆಗೆ ಮುನ್ನ ಪಕ್ಷದಲ್ಲಿ ಸಮನ್ವಯ ಸಾಧಿಸಲು ನಾಯಕರು ಮುಂದಾಗಿದ್ದಾರೆ.