
ಕೋಮು ಸಂಘರ್ಷಗಳು ಉನ್ಮತ್ತ ಭಾವನೆಗಳ ಕಾರ್ಖಾನೆಗಳಲ್ಲಿ ಸೃಷ್ಟಿಯಾಗುವ ವಿದ್ಯಮಾನ
ನಾ ದಿವಾಕರ
ಸ್ವತಂತ್ರ ಭಾರತದ ಕೋಮುವಾದಿ ಚರಿತ್ರೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ಕಾಣಬಹುದಾದ ಒಂದು ಸಮಾನ ಎಳೆ ಎಂದರೆ, ವಿವಿಧ ಕೋಮುಗಳ ನಡುವೆ ದ್ವೇಷಾಸೂಯೆಗಳನ್ನು ಹುಟ್ಟಿಸುವ ಮತ್ತು ಜನರಲ್ಲಿ ʼ ಅನ್ಯ ʼ ಮನಸ್ಥಿತಿಯನ್ನು ಪೋಷಿಸುವ ಸಾಂಸ್ಥಿಕ ಶಕ್ತಿಗಳು ಸದಾ ಕ್ರಿಯಾಶೀಲವಾಗಿ, ಜಾಗೃತವಾವಸ್ಥೆಯಲ್ಲಿರುವುದು. ಇದಕ್ಕೆ ಸಮಾನಾಂತರವಾಗಿ ಕಾಣುವ ಮತ್ತೊಂದು ಎಳೆ ಎಂದರೆ, ಈ ಸಾಂಸ್ಥಿಕ ಶಕ್ತಿಗಳು ಕಾಲಕಾಲಕ್ಕೆ ರೂಪಾಂತರಗೊಂಡು, ಸಾಮಾಜಿಕ-ಆರ್ಥಿಕ ಬದಲಾವಣೆಗೆ ಪೂರಕವಾಗಿ ತಮ್ಮ ಸಾಂಘಿಕ ಸ್ವರೂಪವನ್ನು ಪಡೆದುಕೊಳ್ಳುವುದು. ಈ ದೃಷ್ಟಿಯಿಂದ ನೋಡಿದಾಗ, ವಿಭಜನೆಯ ಪೂರ್ವದಿಂದ ಮದ್ದೂರಿನವರೆಗೂ ಕಾಣುವ ಒಂದು ಸಾಮಾನ್ಯ ಲಕ್ಷಣ ಎಂದರೆ, ಯುವ ಸಮೂಹದ ಒಂದು ವರ್ಗವನ್ನು ವಿಭಜಕ-ವಿಧ್ವಂಸಕ ಹಾಗೂ ಸಮಾಜಘಾತುಕ ಚಟುವಟಿಕೆಗಳಿಗೆ ವ್ಯವಸ್ಥಿತವಾಗಿ ತಯಾರು ಮಾಡುವ ʼ ಬೌದ್ಧಿಕ ಕಾರ್ಖಾನೆಗಳು ʼ ಕ್ರಿಯಾಶೀಲವಾಗಿರುವುದು.
ಆರಂಭದಲ್ಲಿ ನಗರ ಕೇಂದ್ರಿತವಾಗಿದ್ದ ಈ ಔದ್ಯಮಿಕ ರೂಪದ ಸಾಂಸ್ಥಿಕ ನೆಲೆಗಳು ಕ್ರಮೇಣ ಮೂಲೆಮೂಲೆಯ ಹಳ್ಳಿಗಳನ್ನೂ ಆವರಿಸಿರುವುದನ್ನು 1990ರ ದಶಕದ ನಂತರದಲ್ಲಿ ಗುರುತಿಸಬಹುದು. ಇದಕ್ಕೆ ವಿಶೇಷ ಕಾರಣ ಎಂದರೆ, ಈ ಸಾಂಸ್ಥಿಕ ವೇದಿಕೆಗಳನ್ನು ನಿರ್ವಹಿಸಲು-ತುಡುಗುಪಡೆಗಳನ್ನು (Fringe elements) ತಯಾರು ಮಾಡಲು ಹಾಗೂ ದುರ್ಬಲ ವರ್ಗಗಳ ನಡುವೆ ಅಭದ್ರತೆಯಲ್ಲೇ ಬದುಕುವ ಅಮಾಯಕ ಯುವ ಸಮೂಹದ ಮಿದುಳು ತೊಳೆಯಲು (Brain Wash) ಅಗತ್ಯವಾದ ಬಂಡವಾಳ, ಹಣಕಾಸು ಹರಿವು ಮತ್ತು ಸಾಂಘಿಕ ಸ್ಥಿರತೆಯನ್ನು ಒದಗಿಸಲು ಔದ್ಯಮಿಕ ಜಗತ್ತು ಸಶಕ್ತವಾಗಿ ಬೆಳೆದಿದ್ದು. ಜನಾಕ್ರೋಶದ ನೆಲೆಯಲ್ಲಿ ವ್ಯಕ್ತವಾಗುತ್ತಿದ್ದ ಪ್ರತಿರೋಧದ ದನಿಗಳನ್ನು, ಹಣ ಕೊಟ್ಟು ಕೊಂಡುಕೊಳ್ಳುವ ಪ್ರಕ್ರಿಯೆಗೆ ಚಾಲನೆ ಅಲ್ಲದಿದ್ದರೂ, ಉತ್ತೇಜನ ನೀಡಿದ್ದು ಈ ಹಣಕಾಸು ಹರಿವು ಮತ್ತು ವ್ಯಾಪ್ತಿ.
ಡಿಜಿಟಲ್ ಸಂವಹನದ ಹೊಸ ಆಯಾಮ
ಡಿಜಿಟಲ್ ಯುಗಕ್ಕೆ ಪ್ರವೇಶಿಸಿದ ಅನಂತರ ಈ ಪ್ರಕ್ರಿಯೆಗೆ ಮತ್ತಷ್ಟು ವ್ಯಾಪ್ತಿ ಪ್ರಾಪ್ತವಾಗಿತ್ತು. ಯುವ ಮನಸ್ಸುಗಳಲ್ಲಿ ಮತದ್ವೇಷ, ಕೋಮು ವೈರತ್ವ, ʼಅನ್ಯʼತೆಯ ಭಾವನೆ ಮತ್ತು ಧಾರ್ಮಿಕ-ಸಾಂಸ್ಕೃತಿಕ ಉನ್ಮಾದವನ್ನು ಸೃಷ್ಟಿಸಲು ಬಳಸಲಾಗುತ್ತಿದ್ದ ಸ್ಥಾವರ ರೂಪದ ಕಾರ್ಖಾನೆಗಳು, 2010ರ ಅನಂತರದ ಅವಧಿಯಲ್ಲಿ ಡಿಜಿಟಲ್ ಸ್ವರೂಪ ಪಡೆದುಕೊಂಡು, ವಾಟ್ಸಾಪ್, ಫೇಸ್‌ಬುಕ್ , ಇನ್ಸ್‌ಟಾಗ್ರಾಂ, ಎಕ್ಸ್ (ಟ್ವಿಟರ್) ಮೊದಲಾದ ಸಂವಹನ ವೇದಿಕೆಗಳಾಗಿ (Platforms) ರೂಪಾಂತರಗೊಂಡವು. ಈ ವೇದಿಕೆಗಳಲ್ಲಿ ಉತ್ಪಾದಿಸಲಾಗುವ ʼ ಅಭಿಪ್ರಾಯ-ಅನಿಸಿಕೆ-ಭಾವನೆ ʼಗಳನ್ನು ಉದ್ಧೀಪನಗೊಳಿಸಲು ಯು ಟ್ಯೂಬ್, ಪಾಡ್‌ಕಾಸ್ಟ್ ಮೊದಲಾದ ಸಂವಹನ ಸೇತುವೆಗಳು ನೆರವಾದವು. ಇದರಲ್ಲಿ ವಾಟ್ಸಾಪ್ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಸರಳ ಸತ್ಯಗಳನ್ನು ಮಿಥ್ಯೆಯಾಗಿಸಿ, ಅರ್ಧಸತ್ಯಗಳನ್ನು ಹರಡುವ ಮತ್ತು ಮಿಥ್ಯೆಗಳನ್ನೇ ವಾಸ್ತವದಂತೆ ಬಿಂಬಿಸುವ ಬೌದ್ಧಿಕ ಪ್ರಕ್ರಿಯೆಗಳು ವ್ಯವಸ್ಥಿತವಾಗಿ ಚಾಲ್ತಿಯಲ್ಲಿರುವುದು ಕಂಡುಬರುತ್ತದೆ.
ಡಿಜಿಟಲ್ ಯುಗದ ಕೋಮುವಾದ, ಮತದ್ವೇಷ ಮತ್ತು ಕೋಮು ಧೃವೀಕರಣ ಪ್ರಕ್ರಿಯೆಯ ಮುಖ್ಯ ಕಚೇರಿ (Head quarters) ವಾಟ್ಸಾಪ್ ವಿಶ್ವವಿದ್ಯಾಲಯವೇ ಆಗಿದ್ದು, ಇದರ ಶಾಖೆಗಳ ರೂಪದಲ್ಲಿ ಸಾಮಾಜಿಕ ಮಾಧ್ಯಮಗಳು (Social Media) ಕಾರ್ಯನಿರ್ವಹಿಸುತ್ತವೆ. ಈ ಕಾರ್ಯಕ್ಷೇತ್ರದ ಪ್ರಾತ್ಯಕ್ಷಿಕೆಗಳನ್ನು ರೂಪಿಸುವ ಜವಾಬ್ದಾರಿಯನ್ನು ಧಾರ್ಮಿಕ ಮೂಲಭೂತವಾದಿ ಸಂಘಟನೆಗಳು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಿರ್ವಹಿಸುತ್ತವೆ. ಸಾಮಾನ್ಯ ಪರಿಭಾಷೆಯ ʼ ಪ್ರಯೋಗಶಾಲೆ ʼ ಪದವನ್ನು ಬಿಡಿಸಿ ನೋಡಿದಾಗ, ಈ ಪ್ರಯೋಗಶಾಲೆಯ ಮೂಲ ಕಾಣಬೇಕಿರುವುದು ಮೂಲಭೂತವಾದ, ಅತಿರೇಕದ ಧರ್ಮಶ್ರದ್ಧೆ, ಗ್ರಾಂಥಿಕ ಧರ್ಮ ಸಂಹಿತೆಗಳ ಅಂಧಾನುಕರಣೆ ಮತ್ತು ಈ ಮೂರೂ ಸಾರ್ವಜನಿಕವಾಗಿ ಅಭಿವ್ಯಕ್ತಗೊಳ್ಳುವ ಭಾವಾತಿರೇಕದ ಅಥವಾ ಭಾವಾವೇಷದ ವರ್ತನೆಯಲ್ಲಿ.

ಈ ವರ್ತನೆ ಅಥವಾ ಮನಸ್ಥಿತಿಯನ್ನು ತಯಾರಿಸುವ ಕಾರ್ಖಾನೆಗಳನ್ನು, ಹಿಂದೂಗಳಲ್ಲಾಗಲೀ, ಮುಸ್ಲಿಮರಲ್ಲಾಗಲೀ, ಕೆಲವೊಮ್ಮೆ ಕ್ರೈಸ್ತರಲ್ಲೂ ಸಹ ಗುರುತಿಸದೆ ಹೋದರೆ ಕೋಮುವಾದ ಅಥವಾ ಕೋಮುದ್ವೇಷದ ಮೂಲ ಅರ್ಥವಾಗುವುದಿಲ್ಲ. ಮೌಖಿಕ ಘೋಷಣೆಗಳಿಂದ ಹಿಡಿದು ಭೌತಿಕ ಆಯುಧ ಬಳಕೆಯವರೆಗೂ ತರಬೇತಿ ನೀಡಲಾಗುವ ಈ ಕಾರ್ಖಾನೆಗಳಲ್ಲೇ ದುರ್ಬಲ ವರ್ಗದ ಯುವ ಸಮೂಹದ ಒಂದು ಗುಂಪು ಬಂಧಿಯಾಗಿರುತ್ತದೆ. ಉದ್ರೇಕಕಾರಿ, ಪ್ರಚೋದನಕಾರಿ ಘೋಷಣೆಗಳನ್ನು ಸಿದ್ಧಪಡಿಸುವುದಷ್ಟೇ ಅಲ್ಲದೆ, ಅವುಗಳನ್ನು ಬಳಸಬೇಕಾದ ಸಂದರ್ಭಗಳನ್ನು, ಗಳಿಗೆಗಳನ್ನು ಹಾಗೂ ನಿರ್ಬಂಧಿತ ಇತಿಮಿತಿಗಳನ್ನು ನಿರ್ಧರಿಸುವ ಮೂಲಭೂತವಾದಿಗಳ ಸಾಂಸ್ಥಿಕ ನೆಲೆಗಳೇ, ಮದ್ದೂರಿನಂತಹ ಹೊಸ ʼ ಪ್ರಯೋಗಶಾಲೆಗಳಲ್ಲಿ ʼ ಕರಾವಳಿಯಂತಹ ಸ್ಥಾಪಿತ ಶಾಲೆಗಳಲ್ಲಿ ವ್ಯವಸ್ಥಿತವಾಗಿ ನೆಲೆಯೂರುತ್ತವೆ.
ಜನಸಂಸ್ಕೃತಿ ಮತ್ತು ಸ್ಥಾಪಿತ ಹಿತಾಸಕ್ತಿಗಳು
ಈ ದೃಷ್ಟಿಯಿಂದಲೇ ಗಣೇಶೋತ್ಸವದ ಮೆರವಣಿಗೆಗಳಲ್ಲಿ ನಡೆಯುವ ದುಷ್ಟ ಕೃತ್ಯಗಳನ್ನು, ವ್ಯಕ್ತವಾಗುವ ದುರ್ಭಾವನೆಯ ಘೋಷಣೆಗಳನ್ನು ವಿಶ್ಲೇಷಣೆಗೆ ಒಳಪಡಿಸಬೇಕಿದೆ. ಇಲ್ಲಿ ಗಮನಿಸಲೇಬೇಕಾದ ಮತ್ತೊಂದು ಸೂಕ್ಷ್ಮವೂ ಇದೆ. ಸಾಮಾನ್ಯವಾಗಿ ಜನಸಂಸ್ಕೃತಿಯನ್ನು ಪ್ರತಿನಿಧಿಸುವ, ತಳ ಸಮಾಜದ ಜನತೆಯ ನಿತ್ಯ ಬದುಕಿನ ಒಂದು ಭಾಗವಾಗಿ, ಆಚರಿಸಲ್ಪಡುವ ಉತ್ಸವ, ರಥೋತ್ಸವ, ಜಾತ್ರೆ ಮತ್ತು ಮುಸಲ್ಮಾನರ ಉರುಸ್ ಸಂದರ್ಭಗಳಲ್ಲಿ , ಈ ಆಚರಣೆಗಳೂ ಸಾಂಸ್ಥಿಕ ಧರ್ಮದ ಚೌಕಟ್ಟುಗಳ ಒಳಗೇ ನಡೆದರೂ ಸಹ, ಕೋಮು ವಿಭಜಕ ಶಕ್ತಿಗಳು ತಮ್ಮ ಪ್ರಯೋಗ ಅಥವಾ ಪ್ರಾತ್ಯಕ್ಷಿಕವನ್ನು ಪ್ರಸ್ತುತಪಡಿಸುವುದಿಲ್ಲ. ಕರ್ನಾಟಕದಾದ್ಯಂತ ಬೀದರ್‌ನಿಂದ ಕೋಲಾರದ ಚಿಂತಾಮಣಿಯವರೆಗೂ ವಿಸ್ತರಿಸುವ ಈ ಸಾಂಸ್ಕೃತಿಕ ಜಗತ್ತಿನಲ್ಲಿ ಎಲ್ಲ ಧರ್ಮಗಳ ಜನರೂ ಶ್ರದ್ಧಾಭಕ್ತಿಗಳಿಂದ ಭಾಗವಹಿಸುತ್ತಾರೆ. ಎಲ್ಲಿಯೂ ಧಾರ್ಮಿಕ ಅಸ್ಮಿತೆಗಳು ಮುನ್ನಲೆಗಳು ಪ್ರಧಾನವಾಗುವುದಿಲ್ಲ. ಮೈಸೂರು ದಸರಾ ಸಹ ಅದರ ಒಂದು ಭಾಗ. ಈಗ ಅಲ್ಲೂ ಸಹ ಕೋಮುಧೃವೀಕರಣದ ಪ್ರಯತ್ನಗಳು ನಡೆಯುತ್ತಿವೆ.

ಜನಸಂಸ್ಕೃತಿಗೂ, ಸಾಂಸ್ಥಿಕವಾಗಿ ರೂಪುಗೊಳ್ಳುವ ಸಂಸ್ಕೃತಿಗಳಿಗೂ ಇರುವ ವ್ಯತ್ಯಾಸ ಇದು. ಹಾಗಾಗಿಯೇ ಧರ್ಮರಾಯಸ್ವಾಮಿ ಕರಗ, ಅಯ್ಯಪ್ಪ ಯಾತ್ರೆ, ತಮಿಳುನಾಡಿನ ಪಳನಿಯಲ್ಲಿ ನಡೆಯುವ ಕಾವಡಿ, ಮಹಾರಾಷ್ಟ್ರದ ಕೃಷ್ಣಜನ್ಮಾಷ್ಟಮಿಯ ದಹಿ ಹಂಡಿ ಒಡೆಯುವ ಉತ್ಸವ, ಹೋಳಿ ಹುಣ್ಣಿಮೆ, ರಾಜಸ್ಥಾನದ ಅಜ್ಮೇರ್ ದರ್ಗಾದ ಸೂಫಿ ಉತ್ಸವ ಇಂತಹ ಸಾಂಸ್ಕೃತಿಕ ಉತ್ಸವಗಳು ಜನೋತ್ಸವಗಳಾಗಿ ಸದ್ದಿಲ್ಲದೆ ನಡೆದು ಹೋಗುತ್ತವೆ. ಕರಾವಳಿಂತಹ ಶಾಶ್ವತ ಕೋಮು ಪ್ರಯೋಗಶಾಲೆಯಲ್ಲೂ ಸಹ ಭೂತ ದೈವಗಳ ಸುತ್ತ ಹರಡಿರುವ ಸಾಂಸ್ಕೃತಿಕ ಆಚರಣೆಗಳು ಇಂತಹ ಭಿನ್ನ ಭೇದಗಳಿಂದ ಮುಕ್ತವಾಗಿರುವುದನ್ನು ಈಗಲೂ ಗಮನಿಸಬಹುದು. ಇದಕ್ಕೆ ವ್ಯತಿರಿಕ್ತವಾಗಿ, ಆಧುನಿಕ ನಾಗರಿಕತೆಯಲ್ಲಿ ಸೃಷ್ಟಿಯಾಗಿರುವ ಗಣೇಶೊತ್ಸವದಂತಹ ಸಾರ್ವಜನಿಕ ಉತ್ಸವಗಳು ಕೋಮುವಾದಿಗಳಿಗೆ ಪ್ರಶಸ್ತ ಅವಕಾಶಗಳಾಗಿ ಕಾಣುತ್ತವೆ. ಏಕೆಂದರೆ ಇಲ್ಲಿ ಉತ್ಸವಗಳ ಆಚರಣೆಗೆ ಒದಗುವ ಭೌತಿಕ-ವ್ಯಾವಹಾರಿಕ ಸೌಲಭ್ಯಗಳ ಜೊತೆಗೇ, ಕೋಮು ಸಂಘರ್ಷಗಳಿಗೆ ಅಗತ್ಯವಾದ ತುಡುಗುಪಡೆಗಳ ಸದಸ್ಯರೂ ಸುಲಭವಾಗಿ ಲಭ್ಯವಾಗುತ್ತಾರೆ.
ನಿರುದ್ಯೋಗ, ಅರೆ ಅಕ್ಷರತೆ, ಅನಕ್ಷರತೆ, ಬಡತನ ಮತ್ತು ಅಭದ್ರತೆಯ ಬವಣೆಗಳ ನಡುವೆಯೇ ಬದುಕು ಸವೆಸುವ ಯುವ ಸಮೂಹಗಳು ಈ ಕತ್ತಲಿನ ಜಗತ್ತಿನಲ್ಲಿ ಸಕ್ರಿಯ ಕಾಲಾಳುಗಳಾಗಿ, ಕಾವಲುಪಡೆಗಳಾಗಿ ಕಾರ್ಯನಿರ್ವಹಿಸಲು ಸದಾ ಸಿದ್ಧವಾಗಿರುತ್ತವೆ. ತಮ್ಮ ಸ್ವ-ಗ್ರಾಮಗಳಲ್ಲಿ ಸೌಹಾರ್ದಯುತವಾದ ಜನಸಾಂಸ್ಕೃತಿಕ ಉತ್ಸವಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುವ ಯುವ ಮನಸ್ಸುಗಳನ್ನೇ, ಕೋಮು ದ್ವೇಷ ಮತ ದ್ವೇಷದ ಕಾರ್ಖಾನೆಗಳಲ್ಲಿ ಉತ್ಪಾದನೆಯಾಗುವ ʼಅನ್ಯʼ ಭಾವನೆ ಮತ್ತು ಅದರಿಂದ ಉದ್ಧಿಪನಗೊಳ್ಳುವ ದ್ವೇಷಾಸೂಯೆಗಳ ಆಕರಗಳನ್ನಾಗಿ ಮಾಡುವುದು, ಧಾರ್ಮಿಕ ಮೂಲಭೂತವಾದಿಗಳಿಗೆ ಸುಲಭವಾಗುತ್ತದೆ. ಈ ಉತ್ಪಾದಿತ ವಿಕೃತ ಮನಸ್ಸುಗಳು ಹಿಂದೂ ಧಾರ್ಮಿಕ ಉತ್ಸವಗಳ ಮೇಲೆ ಕಲ್ಲೆಸೆಯುವ, ಮಸೀದಿಗಳ ಮುಂದೆ ಹಂದಿ ತಲೆಯನ್ನು ಎಸೆಯುವ, ದೇವರ ಹೆಸರಿನಲ್ಲಿ ನಡೆಯುವ ಉತ್ಸವದ ಮೆರವಣಿಗೆಯಲ್ಲೂ ತಮ್ಮ ಬಗಲಲ್ಲಿ ತಲವಾರು, ಚಾಕು, ಚೂರಿ, ಕತ್ತಿ ಮುಂತಾದ ಹರಿತಾದ ಅಸ್ತ್ರಗಳನ್ನು ಇಟ್ಟುಕೊಂಡು ಓಡಾಡುವ ಶಿಸ್ತುಬದ್ಧ ತುಡುಗುಪಡೆಗಳಾಗಿ (Fringe elements) ರೂಪುಗೊಳ್ಳುತ್ತವೆ.

ಹಿಂತಿರುಗಿ ನೋಡಿದಾಗ,,,,
ನಾಲ್ಕೈದು ದಶಕಗಳಷ್ಟು ಹಿಂದಕ್ಕೆ ಹೋಗಿ ನೋಡೋಣ. ಆಗಲೂ ಗಣೇಶ ಬಹುಪಾಲು ಹಿಂದೂಗಳ ಇಷ್ಟ ದೈವವೇ ಆಗಿದ್ದ. ಇಷ್ಟಾರ್ಥ ಸಿದ್ಧಿಸಲು ಹರಸುವ ಗಣರಕ್ಷಕನಾಗಿದ್ದ. ಆದರೆ ಸಾರ್ವಜನಿಕವಾಗಿ ಗಣೇಶೋತ್ಸವ ಎನ್ನುವುದು ಸೀಮಿತ ವಲಯದಲ್ಲಿ, ಸಮಸ್ತ ಜನತೆಯ ಭಾಗವಹಿಸುವಿಕೆಯೊಂದಿಗೆ ನಡೆಯುತ್ತಿತ್ತು. ಶ್ರದ್ಧಾ ಭಕ್ತಿಗಳ ಮೂಲಕ ಗಣೇಶ ವಿಸರ್ಜನೆಯ ಕಾರ್ಯಕ್ರಮಗಳು ಜರುಗುತ್ತಿದ್ದವು. ಅದೇ ಸಮಾಜ, ಅದೇ ಜಗತ್ತು ರೂಪಾಂತರಗೊಂಡ ನಂತರದಲ್ಲಿ ಈಗ ಗಣೇಶೋತ್ಸವ, ವಿಸರ್ಜನೆಯ ಮೆರವಣಿಗೆ ಎಂದರೆ ಜನರಿಗಿಂತಲೂ ಪೊಲೀಸರೇ ಹೆಚ್ಚಿನ ಸಂಖ್ಯೆಯಲ್ಲಿರುತ್ತಾರೆ. ಭಕ್ತಿ ಭಾವಗಳ ಶೃಂಗಾರ ರಸಗಳು ಮಾಯವಾಗಿ, ಉನ್ಮಾದ-ಭಾವಾತಿರೇಕದ ಹಾಡು ಕುಣಿತದ ಆಡುಂಬೊಲವಾಗಿರುತ್ತವೆ. ಬೀದಿ ಬೀದಿಗಳಲ್ಲೂ ಕಾಣುವ ಗಣೇಶ ಪೆಂಡಾಲ್‌ಗಳಲ್ಲಿ ದಿನಪೂರ್ತಿ ಕೇಳಿಬರುವ ಅಬ್ಬರದ ಸಂಗೀತದಲ್ಲಿ ʼ ಗಣೇಶ ʼ ಬಿಟ್ಟು ಉಳಿದೆಲ್ಲವೂ ಇರುತ್ತದೆ.
ಒಂದು ಸಮಾಜದಲ್ಲಿ ಧಾರ್ಮಿಕತೆ ಮತ್ತು ಸಾಂಸ್ಕೃತಿಕ ಆಚರಣೆಗಳನ್ನು ವಾಣಿಜ್ಯೀಕರಣಗೊಳಿಸಿದಾಗ ಇಂತಹ ವ್ಯತ್ಯಯಗಳು ಸಂಭವಿಸುವುದು ಸಹಜ. ಇದನ್ನು ಉಪಯೋಗಿಸಿಕೊಳ್ಳಲೆಂದೇ ಹುಟ್ಟಿಕೊಳ್ಳುವ ಸಂಘಗಳು, ಈ ಸಂಘಗಳನ್ನು ಧೃವೀಕರಿಸುವ ರಾಜಕೀಯ ಹಿತಾಸಕ್ತಿಗಳು ಮತ್ತು ಧಾರ್ಮಿಕ ಮೂಲಭೂತವಾದಿಗಳು ಗಣೇಶ ವಿಸರ್ಜನೆಯ ಕಾರ್ಯಕ್ರಮವನ್ನು ನಿಯಂತ್ರಿಸಲೂ ಪ್ರಯತ್ನಿಸುತ್ತವೆ. ಆದರೆ ಇಂತಹ ಉತ್ಸವಗಳಲ್ಲಿ ಸಂಭವಿಸುವ ಕೆಲವು ಘಟನೆಗಳು ಪ್ರಜ್ಞಾವಂತ ಮನಸ್ಸುಗಳನ್ನು ವಿಚಲಿತಗೊಳಿಸುತ್ತವೆ. ಇತ್ತೀಚೆಗೆ ಮೈಸೂರಿನ ಬಡಾವಣೆಯೊಂದರಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆಯಲ್ಲಿ, ಕುಣಿದು ಕುಪ್ಪಳಿಸುತ್ತಿದ್ದ ಯುವಕರಲ್ಲಿ ಒಬ್ಬ ತನ್ನ ಮನೆಯ ಮುಂದೆ ಕುಣಿಯಲು ನಿರಾಕರಿಸಿದ್ದಾನೆ. ಅವನ ಸಹಚರರೇ ಆ ಹುಡುಗನಿಗೆ ಚಾಕುವಿನಿಂದ ಇರಿದು ಗಾಯಗೊಳಿಸಿದ್ದಾರೆ. ಇದು ಏನನ್ನು ಸೂಚಿಸುತ್ತದೆ ? ಯುವ ಸಮೂಹದಲ್ಲಿ ಸೃಷ್ಟಿಯಾಗುವ ಉನ್ಮಾದ ಅವರಲ್ಲಿ ಕ್ರೌರ್ಯ ಹಿಂಸೆ ಮತ್ತು ವಿಕೃತ ಮನಸ್ಥಿತಿಯನ್ನೂ ಉಂಟುಮಾಡುತ್ತದೆ ಎಂದಲ್ಲವೇ ? ಈ ಘಟನೆಯ ಬಗ್ಗೆ ಸಮಾಜದ ಮೌನ ಇನ್ನೂ ಹೆಚ್ಚು ಆತಂಕಕಾರಿಯಾಗಿ ಕಾಣುತ್ತದೆ.
ಕೋಮು ಸಂಘರ್ಷದ ನೆಲೆಗಳ ನಡುವೆ
ಕಳೆದ ವರ್ಷ ನಾಗಮಂಗಲದಲ್ಲಿ, ಈ ವರ್ಷ ಮದ್ದೂರಿನಲ್ಲಿ ಗಣೇಶೋತ್ಸವದ ಸಂದರ್ಭದಲ್ಲಿ ನಡೆದ ಅಹಿತಕರ ಘಟನೆಗಳನ್ನು ಈ ದೃಷ್ಟಿಯಿಂದ ನೋಡಿದಾಗ, ಉತ್ಸವದ ಮೇಲೆ ಕಲ್ಲೆಸೆದವರು ಯಾರು, ಕಲ್ಲು ಯಾವ ದಿಕ್ಕಿನಿಂದ, ಯಾವ ಕಟ್ಟಡದಿಂದ ತೂರಿಬಂದಿದೆ ಎಂದು ಯೋಚಿಸುವುದು ಸಂಕುಚಿತ ದೃಷ್ಟಿಯಾಗುತ್ತದೆ (Myopic View). ವಿಶಾಲ ನೆಲೆಯಲ್ಲಿ ಯೋಚಿಸಿದಾಗ, ಇಲ್ಲಿ ಕಲ್ಲೆಸೆಯುವ ಯುವಕರನ್ನು ಈ ದುಷ್ಟ ಕೃತ್ಯಗಳಿಗಾಗಿ ತಯಾರು ಮಾಡುವ ಕಾರ್ಖಾನೆಗಳತ್ತ ಗಮನಹರಿಸಬೇಕಾಗುತ್ತದೆ. ಶಿಲ್ಪಿಗಳು ಜೇಡಿ ಮಣ್ಣಿನಿಂದ ಅಥವಾ ಇತರ ವಸ್ತುಗಳಿಂದ ಗಣೇಶ ಮೂರ್ತಿಗಳನ್ನು ತಯಾರಿಸಲು ಹಲವು ತಿಂಗಳುಗಳ ಮುನ್ನವೇ ಕಾರ್ಯಾರಂಭ ಮಾಡುವ ಹಾಗೆ, ಕೋಮುದ್ವೇಷದ ಕಾರ್ಖಾನೆಗಳಲ್ಲಿ ಈ ಸಂದರ್ಭಗಳಿಗೆ ಭಂಗ ತರುವ , ಪ್ರಕ್ಷುಬ್ಧತೆ ಮೂಡಿಸುವ ಮನಸ್ಥಿತಿಗಳನ್ನೂ ಸಿದ್ಧಪಡಿಸುವ ಕ್ರಿಯೆಗಳು ನಡೆದಿರುತ್ತವೆ. ಹಾಗಾಗಿಯೇ ಇಲ್ಲಿ ಯುವಕರ ಬಗಲಲ್ಲಿ ತಲವಾರು, ಕತ್ತಿ, ಜಲ್ಲಿ ಕಲ್ಲುಗಳು ಎಲ್ಲವೂ ಕಂಡುಬರುತ್ತವೆ.
ಇದನ್ನು ಕೋಮುವಾದದ ಪ್ರಯೋಗಶಾಲೆ ಎಂಬ ಮಾಧ್ಯಮ ಪರಿಭಾಷೆಯ ಹೊರಗಿಟ್ಟು ನೋಡಿದಾಗ, ಈ ಶಾಲೆಯ ಪ್ರಾತ್ಯಕ್ಷಿಕೆಗಳಿಗೆ ಪ್ರತಿವರ್ಷವೂ ಹೊಸ ಜಾಗಗಳನ್ನು ಆಯ್ಕೆ ಮಾಡಿಕೊಳ್ಳುವ ಪ್ರಕ್ರಿಯೆಯನ್ನೂ ಗಮನಿಸಬೇಕಾಗುತ್ತದೆ. ಕೆಲವೇ ದಶಕಗಳ ಹಿಂದೆ ಅತಿ ಸೂಕ್ಷ್ಮ ಕೋಮು ಪ್ರದೇಶಗಳೆಂದೇ ಭಾವಿಸಲಾಗುತ್ತಿದ್ದ ಚಿಕ್ಕಮಗಳೂರು, ರಾಮನಗರ, ಕೋಲಾರ ಜಿಲ್ಲೆಯ ಕೆಲವು ತಾಲ್ಲೂಕುಗಳು ಇಂದು ಸೌಹಾರ್ದದ ನೆಲೆಗಳಾಗಿ ಕಾಣುತ್ತಿವೆ. ಚಿಕ್ಕಮಗಳೂರಿನಲ್ಲಿ ಹಿಂದೂ-ಮುಸ್ಲಿಂ ಸಮಾಜದ ಸದಸ್ಯರು ಒಂದಾಗಿ ಗಣೇಶೋತ್ಸವ ಆಚರಿಸಿರುವ ವರದಿಗಳು ಕೇಳಿಬರುತ್ತಿವೆ. ಇಲ್ಲಿನ ಸಮಾಜಗಳು ಸೌಹಾರ್ದತೆಯನ್ನು ಗಳಿಸಿವೆ ಎನ್ನುವುದಕ್ಕಿಂತಲೂ, ಅಲ್ಲಿನ ಜನಗಳಿಗೆ ಕೋಮುದ್ವೇಷಕ್ಕೆ ತೆರಬೇಕಾದ ದುಬಾರಿ ಬೆಲೆ ಅರ್ಥವಾಗಿದೆ ಎಂದು ಭಾವಿಸಬೇಕಿದೆ. ಆದರೆ ತಮ್ಮ ಕೋಮುವಾದಿ ಧೃವೀಕರಣದ ಮೂಲಕವೇ ರಾಜಕೀಯ ಅಸ್ತಿತ್ವವನ್ನು ಕಂಡುಕೊಳ್ಳುವ ಮೂಲಭೂತವಾದಿಗಳಿಗೆ ಹೊಸ ಪ್ರಯೋಗಶಾಲೆಗಳು ಬೇಕಾಗುತ್ತವೆ. ಪ್ರಸ್ತುತ ಮದ್ದೂರು ಅದನ್ನು ಒದಗಿಸಿದೆ.

ಒಂದು ಸಮಾಜವಾಗಿ ನಾವು ಯೋಚಿಸಬೇಕಿರುವುದು, ಕಲ್ಲೆಸೆದವರು ಯಾರು , ಯಾವ ಸಮುದಾಯಕ್ಕೆ ಸೇರಿದವರು ಎಂದಲ್ಲ. ಬದಲಾಗಿ ಈ ಘಟನೆಗಳು ಏಕೆ ಮರುಕಳಿಸುತ್ತಿವೆ ಎಂದು ಗಂಭೀರ ಅಲೋಚನೆ ಮಾಡಬೇಕಿದೆ. ಈ ರೀತಿಯ ಕಲ್ಲು ತೂರಾಟ ಏಕಾಏಕಿ, ಹಠಾತ್ತನೆ ಉಂಟಾಗುತ್ತದೆ ಎಂದು ಭಾವಿಸುವುದು ಒಂದು ರೀತಿಯಲ್ಲಿ ಕ್ಷೇಮ. ಆದರೆ ಇದು ವಾಸ್ತವ ಅಲ್ಲ. ಕಲ್ಲುಗಳನ್ನು ಸಂಗ್ರಹಿಸಿ, ಒಂದು ಜಾಗದಲ್ಲಿ ಕೂಡಿಟ್ಟು, ಸಮಯಕ್ಕೆ ಸರಿಯಾಗಿ ಎಸೆಯುವ ಒಂದು ಗುಂಪು ಮತ್ತು ಪ್ರತಿದಾಳಿಯಾಗಿ ಇತ್ತಲಿಂದ ಕಲ್ಲೆಸೆಯುವ ಗುಂಪು, ಎರಡೂ ಬಣಗಳಲ್ಲಿ ಸಕ್ರಿಯವಾಗುವ ಯುವಕರು, ಸಾಂಸ್ಥಿಕ ನಿರ್ದೇಶನಕ್ಕೊಳಪಟ್ಟಿರುವುದನ್ನು ಸೂಕ್ಷ್ಮವಾಗಿ ಗಮನಿಸಿದಾಗ ಅರ್ಥಮಾಡಿಕೊಳ್ಳಬಹುದು. ಹಿಂದೂ ಮತ್ತು ಮುಸ್ಲಿಂ ಯುವಕರ ಈ ದುಷ್ಟ ಪ್ರವೃತ್ತಿ ಧಾರ್ಮಿಕವಾಗಿ ಯಾವುದೇ ಪ್ರಯೋಜನ ಉಂಟುಮಾಡುವುದಿಲ್ಲ. ಈ ಹುಡುಗರ ಬದುಕು ಹಾಳಾಗುತ್ತದೆ. ಆದರೆ ಬಿಜೆಪಿಯ ನಾಯಕರಿಗೆ, ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ತಮ್ಮ ಸೆಕ್ಯುಲರ್ ನಿಲುವನ್ನು ಸಾರ್ವಜನಿಕ ಪ್ರದರ್ಶನಕ್ಕಿಡುವ ಒಂದು ಅವಕಾಶವನ್ನಂತೂ ಕಲ್ಪಿಸುತ್ತದೆ. ಹಿಂದೂ-ಮುಸ್ಲಿಂ ಮೂಲಭೂತವಾದಿ ಸಂಘಟನೆಗಳಿಗೆ ಘಟನೆಯ ನಂತರ ನಡೆಸಲಾಗುವ ಶಾಂತಿ ಸಭೆಗಳು ತಾತ್ಕಾಲಿಕ ನೆಮ್ಮದಿ ಕಲ್ಪಿಸುತ್ತವೆ.
ಕೋಮು ಧೃವೀಕರಣದ ಅಪಾಯಗಳು
ಈ ಧೃವೀಕರಣ ಪ್ರಕ್ರಿಯೆಯಲ್ಲಿ ಫಲಾನುಭವಿಗಳಾಗುವ ರಾಜಕೀಯ ಪಕ್ಷಗಳಿಗೆ ಈ ತುಡುಗು ಪಡೆಗಳೇ ಜೀವಾಳ. ಆದರೆ ಬಾಹ್ಯ ಸಮಾಜದಲ್ಲಿ ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಯುವ ಸಮೂಹವನ್ನು ಸಾಂಘಿಕ ನೆಲೆಯಲ್ಲಿ ಕ್ರೋಢೀಕರಿಸುವ ಸಂಸ್ಥೆಗಳು, ಸಂಘಗಳು ಇದನ್ನು ಇನ್ನೂ ಗಂಭೀರವಾಗಿ ಪರಿಗಣಿಸಬೇಕಿದೆ. ಗಣೇಶೋತ್ಸವದಂತಹ ಸಂದರ್ಭಗಳಲ್ಲಿ, ಸಮಾಜ ವಿಭಜಕ ಕೃತ್ಯಗಳಲ್ಲಿ, ಧಾರ್ಮಿಕ ಆಚರಣೆ-ಉತ್ಸವಗಳಿಗೆ ಭಂಗ ತರುವಂತಹ ವಿಧ್ವಂಸಕ-ಸಮಾಜಘಾತುಕ ಕೃತ್ಯಗಳಲ್ಲಿ ಪಾಲ್ಗೊಳ್ಳಲೆಂದೇ, ಸಾಂಸ್ಕೃತಿಕ ಕಾರ್ಖಾನೆಗಳಲ್ಲಿ ಮಾನಸಿಕವಾಗಿ ತಯಾರಾಗುವ, ಯುವ ಸಮೂಹಗಳನ್ನು ಅಲ್ಲಿಂದ ಹೊರತರುವುದು ಅತ್ಯಂತ ತುರ್ತು ಜವಾಬ್ದಾರಿಯಾಗಿ ಕಾಣಬೇಕಿದೆ. ಈ ಕೃತ್ಯಗಳಿಂದ ಧರ್ಮರಕ್ಷಣೆಯಂತೂ ಆಗುವುದಿಲ್ಲ, ಬದಲಾಗಿ ಸಮಾಜದಲ್ಲಿ ಇರುವ ಸಮನ್ವಯತೆ ಮತ್ತು ಸೌಹಾರ್ದಯುತ ಮಾನವ ಸಂಬಂಧಗಳೂ ಹಾಳಾಗುತ್ತವೆ.

ಇಂತಹ ಕಾರ್ಖಾನೆಗಳ ಭೌತಿಕ- ಬೌದ್ಧಿಕ ಉತ್ಪನ್ನಗಳು, ಅಂದರೆ ಯುವ ಸಮೂಹ ಮತ್ತು ವಿಕೃತ ದ್ವೇಷ ಮನಸ್ತಿತಿ, ಯುವಕರ ಬದುಕನ್ನು ಹಾಳುಮಾಡುವುದನ್ನು ನೋಡುತ್ತಲೇ ಇದ್ದೇವೆ. ಶಂಕಿತ ಅಪರಾಧಿಗಳು, ಬಂಧನ, ಎಫ್‌ಐಆರ್, ನ್ಯಾಯಾಂಗ ವಿಚಾರಣೆ ಈ ಪ್ರಕ್ರಿಯೆಗಳು ಯುವ ಸಮೂಹದ ಒಂದು ವರ್ಗವನ್ನು ಕಳಂಕಿತರನ್ನಾಗಿ ಮಾಡುತ್ತವೆ. ಈ ಕಳಂಕಿತ ಸಮಾಜ ಮೂಲಭೂತವಾದಿ-ಕೋಮುವಾದಿ ಸಂಘಟನೆಗಳಿಗೆ ರಾಜಕೀಯ ಬಂಡವಾಳವಾಗುತ್ತದೆ, ಆದರೆ ವಿಶಾಲ ಸಮಾಜಕ್ಕೆ ಇವರು ಹೊರೆಯಾಗುತ್ತಾರೆ. ಇವರನ್ನು ಮಾನವೀಯ ನೆಲೆಯಲ್ಲಿ ಸಹೃದಯ ಸಮಾಜದ ಸದಸ್ಯರನ್ನಾಗಿ ಮಾಡುವ ಕೆಲಸವನ್ನು, ಯಾವುದಾದರೂ ರಾಜಕೀಯ ಪಕ್ಷ, ಧಾರ್ಮಿಕ-ಸಾಂಸ್ಕೃತಿಕ ಸಂಘ-ಸಂಸ್ಥೆ ಮಾಡುತ್ತಿದೆಯೇ ? ಕೋಮುವಾದದ ಕಾರ್ಖಾನೆಗಳಲ್ಲಿ ತಯಾರಾಗುವ, ದ್ವೇಷಾಸೂಯೆಗಳ ಚಲಿಸುವ ವಾಹಕಗಳಾಗಿ ಬಳಕೆಯಾಗುವ, ಯುವ ಸಮೂಹವನ್ನು, ಅಲ್ಲಿಂದ ಹೊರತರುವ ಪ್ರಯತ್ನಗಳು ನಡೆಯುತ್ತಿದೆಯೇ ?
ಹೌದು ಎನ್ನಲು ಯಾವುದೇ ಪುರಾವೆಗಳಿಲ್ಲ. ಹಾಗಾದಲ್ಲಿ ಇದರ ಜವಾಬ್ದಾರಿ ಹೊರುವುದು ಯಾರು ? ಸಾಮಾಜಿಕ ಮಾಧ್ಯಮಗಳು, ಖಾಸಗಿ ಯು ಟ್ಯೂಬರ್‌ಗಳನ್ನೂ ಒಳಗೊಂಡಂತೆ, ವಿದ್ಯುನ್ಮಾನ, ಮುದ್ರಣ ಸಂವಹನ ಮಾಧ್ಯಮಗಳಿಗೆ ಇಂತಹ ಘಟನೆಗಳು ರೋಚಕ ವಿಷಯಗಳಾಗಿ ತಮ್ಮ ಪ್ರಸಾರ ಹೆಚ್ಚಿಸಿಕೊಳ್ಳುವ ಸಾಧನಗಳಾಗುತ್ತವೆ. ಆದರೆ ವಿಶಾಲ ಸಮಾಜಕ್ಕೆ ಇದು ಅಲ್ಲಿಗೇ ನಿಲ್ಲುವುದಲ್ಲ. ಆರೋಗ್ಯಕರ ಸಮಾಜವನ್ನು ಕಟ್ಟ ಬಯಸುವ ಎಲ್ಲ ಮನಸ್ಸುಗಳಿಗೂ ಇಂತಹ ಪ್ರತಿಯೊಂದು ಘಟನೆಯೂ, ಭವಿಷ್ಯ ಭಾರತವನ್ನು ಕರಾಳ ಕೂಪಕ್ಕೆ ನೂಕುವ ಪ್ರಸಂಗಗಳಾಗಿ ಕಾಣಬೇಕಿದೆ. ಈ ಕರಾಳ ಜಗತ್ತಿನ ಭಾಗವಾಗಿ ರೂಪುಗೊಳ್ಳುವ ಯುವ ಮನಸ್ಸುಗಳಲ್ಲಿ ಸದ್ಬಾವನೆ, ಸೌಹಾರ್ದ ಬದುಕಿನ ಚಿಂತನೆಗಳನ್ನು ಮೂಡಿಸುವ ಜವಾಬ್ದಾರಿ ನಾಗರಿಕ ಸಮಾಜದ (Civil Society) ಮೇಲಿದೆ. ಇದನ್ನು ನಿಭಾಯಿಸುವ ನೈತಿಕ ಹೊಣೆ ಎಡಪಕ್ಷಗಳು, ದಲಿತ ಸಂಘಟನೆಗಳು ಮತ್ತು ಪ್ರಗತಿಪರ ಎನಿಸಿಕೊಳ್ಳುವ ಎಲ್ಲ ಸಂಘಟನೆಗಳ ಮೇಲಿರುತ್ತದೆ.

-೦-೦-೦-೦-



